ADVERTISEMENT

ಹಾಡು, ಕುಣಿತವೇ ಪ್ರತಿಭೆಯಲ್ಲ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಡಾ. ರಾಜಪ್ಪ ದಳವಾಯಿ ಅವರು ರಂಗಭೂಮಿಯ ಮಹತ್ವದ ಬಗ್ಗೆ ಬರೆಯುತ್ತಾ ‘ಜೀ ಟಿ.ವಿ.ಯ ಡ್ರಾಮಾ ಜ್ಯೂನಿಯರ್ಸ್‌ ಇಡೀ ರಾಜ್ಯದಲ್ಲಿ ಮಕ್ಕಳ ಪ್ರತಿಭೆಯನ್ನು ಮನೆಮಾತು ಮಾಡಿತು. ನಮ್ಮ ಮಕ್ಕಳು ಹೀಗೇ ಆಗಬೇಕೆಂಬ ಪೋಷಕರ ಒತ್ತಾಯಕ್ಕೆ ಪ್ರೇರಕವಾಯಿತು. ಇದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಉತ್ತಮ ನಡೆ’ ಎಂದಿದ್ದಾರೆ (ವಾ.ವಾ., ಮೇ 19).
 
ಹೆಚ್ಚಿನ ವಾಹಿನಿಗಳು ಪ್ರತಿಭೆಯೆಂದರೆ ‘ಹಾಡುವುದು, ಕುಣಿಯುವುದು, ನಟಿಸುವುದು’ ಇಷ್ಟೇ ಎಂದು ಮಕ್ಕಳ ಹಾಗೂ ಪೋಷಕರ ಮನೋ ಪಟಲದಲ್ಲಿ ಬಿತ್ತುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ರಂಗಭೂಮಿಯ ಮೂಲಸಾಮಗ್ರಿಗೆ ಅತಿರಂಜಕತೆಯನ್ನು ಲೇಪಿಸಿ ವಾಣಿಜ್ಯದ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ.
 
ಸಾಹಿತ್ಯ, ಕ್ರೀಡೆ, ವಿಜ್ಞಾನ, ಸಾಹಸ, ಚಿತ್ರಕಲೆ, ಶಿಲ್ಪಕಲೆಯಂಥ  ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ಮಕ್ಕಳ ಯಶೋಗಾಥೆಗಳ ಬಗ್ಗೆ ಕಾರ್ಯಕ್ರಮ ಬಿತ್ತರಿಸಿ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಪ್ರತಿಭೆಯ ಆಳ ಅಗಲದ ಬಗ್ಗೆ ತಿಳಿಸಿಕೊಡಲು ಏಕೆ ಸಾಧ್ಯವಾಗುತ್ತಿಲ್ಲವೊ ಗೊತ್ತಾಗುತ್ತಿಲ್ಲ. 
 
ಕಲಿಕೆಗೆ ರಂಗಭೂಮಿ ಒಂದು ಉತ್ತಮ ಮಾಧ್ಯಮ ನಿಜ. ಆದರೆ  ದಿಢೀರ್ ಖ್ಯಾತಿಯ ಬೆನ್ನುಹತ್ತಿ  ಅದು ದಕ್ಕದಿದ್ದಾಗ ಭ್ರಮನಿರಸನಕ್ಕೆ ಒಳಗಾಗುವಷ್ಟರ ಮಟ್ಟಿಗೆ ಅತಿರೇಕಕ್ಕೆ ಯಾವುದೇ ಕಲೆಯನ್ನು ಕೊಂಡೊಯ್ಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇಷ್ಟಕ್ಕೂ ‘ಜೀವನವೆಂಬ ರಂಗಭೂಮಿ’ ಕಲಿಸುವ ಪಾಠಗಳನ್ನು ಇನ್ನೆಲ್ಲಿ ಕಲಿಯಲು ಸಾಧ್ಯ? ಇನ್ನುಳಿದುದೆಲ್ಲ ಅದರ ಅನುಕರಣೆ, ಅನುಸರಣೆಯಷ್ಟೆ!
ಸಿ.ಎಚ್. ಮಧುಕುಮಾರ, ಚಾಮನಹಳ್ಳಿ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.