ADVERTISEMENT

ಹುಲುಕಡ್ಡಿಯ ಆಸರೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
‘ದಾಖಲಾತಿ ಹೆಚ್ಚಳಕ್ಕೆ ಇಂಗ್ಲಿಷ್ ಮಾಧ್ಯಮ ಪೂರಕವಾಗದು’ ಸಂಪಾದಕೀಯ (ಪ್ರ.ವಾ., ಮೇ 19), ಶಾಲೆಗಳಲ್ಲಿನ ಭಾಷಾ ಮಾಧ್ಯಮದ ಇಕ್ಕಟ್ಟನ್ನು ಮತ್ತೆ ಮುನ್ನೆಲೆಗೆ ತಂದಿದೆ.
 
ಸರ್ಕಾರಿ ಶಾಲೆಗಳ ಉಳಿವು ಅಳಿವನ್ನು ಸಂಪಾದಕೀಯದ ಈ ವಿಶ್ಲೇಷಣೆ ಸೂಚ್ಯವಾಗಿ ಹಿಡಿದಿಟ್ಟಿದೆ. ಆದರೆ ಇಂಗ್ಲಿಷ್ ಮಾಧ್ಯಮ ಪೂರಕವಾಗದು ಎಂಬ ನಿಲುವನ್ನು ಒಪ್ಪುವುದು ಕಷ್ಟ. ವಿಶೇಷವಾಗಿ ಸರ್ಕಾರಿ ಶಾಲೆಗಳ ಉಳಿವಿನ ದೃಷ್ಟಿಯಿಂದ.
 
ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಮುಳುಗುತ್ತಿರುವ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಅವಶ್ಯಕತೆ ಅನಿವಾರ್ಯವಾಗಿ ಬಂದೊದಗಿದೆ ಎನ್ನಬಹುದು. 
 
ಯಾಕೆಂದರೆ ಬಡ ಕೂಲಿ ಕಾರ್ಮಿಕ ಕೂಡ ಇಂದು ತನ್ನ ಮಗುವಿನ ಶಿಕ್ಷಣಕ್ಕೆ ಸಮೀಪದಲ್ಲಿ ಇಂಗ್ಲಿಷ್ ಶಾಲೆ ಎಲ್ಲಿದೆ ಎಂದು ಹುಡುಕುತ್ತಿದ್ದಾನೆ. ಹತ್ತು ಸಾವಿರವಲ್ಲ, ಇಪ್ಪತ್ತು ಸಾವಿರವಲ್ಲ,  ಐವತ್ತು ಸಾವಿರ ರೂಪಾಯಿ ಶುಲ್ಕವಾದರೂ ಸರಿ ಆತ ಭರಿಸಲು ಸಿದ್ಧನಿದ್ದಾನೆ.
 
ಜನಸಂಖ್ಯಾ ನಿಯಂತ್ರಣದ ಸದ್ಯದ ವ್ಯವಸ್ಥೆಯಲ್ಲಿ ಹುಟ್ಟುವ ಒಂದೋ ಎರಡೋ ಮಗುವಿಗೆ–ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ, ತನ್ನ ಮಕ್ಕಳೂ ಕೂಡ ಬೇರೆ ಮಕ್ಕಳ ಹಾಗೆ (ಇದರ ಮೇಲೆ ಟಿ.ವಿ, ಫೇಸ್‌ಬುಕ್‌ನಂತಹ ಸಮೂಹ ಮಾಧ್ಯಮಗಳ ಪ್ರಭಾವ ಇರಬಹುದು) ಮುದ್ದುಮುದ್ದಾಗಿ ಎ ಬಿ ಸಿ ಡಿ  ಹೇಳಲಿ, ಅಂದಚಂದದ ಉಡುಗೆ ತೊಟ್ಟು ಕುಣಿಯಲಿ, ಖುಷಿಯಾಗಿರಲಿ ಎಂಬ ಸಹಜ ಆಸೆ ಇದಕ್ಕೆ ಪ್ರಮುಖ ಕಾರಣವಾಗಿದೆ.
 
ಇಂತಹ ಮಾನವ ಸಹಜ ಆಸೆಗೆ ಮಾತೃಭಾಷೆ, ಸೃಜನಾತ್ಮಕ ಕಲಿಕೆ, ನಾಡಿನ ಸಂಸ್ಕೃತಿ, ಮೌಲ್ಯ ವ್ಯವಸ್ಥೆ ಪರಿಚಯ... ಹೀಗೆ ಪಾಠ ಹೇಳುವುದು ಎಷ್ಟು ಸೂಕ್ತ? ಇಂಥ ಪೋಷಕರ ಸಹಜ ಆಸೆಯನ್ನು ಸರ್ಕಾರಿ ವ್ಯವಸ್ಥೆಯಲ್ಲೇ ಪೂರೈಕೆ ಮಾಡಿದರೆ? ಖಂಡಿತ, ಸರ್ಕಾರಿ ಶಾಲೆಗಳು ಸದ್ಯ ಕಳೆದುಕೊಳ್ಳುತ್ತಿರುವ ಉಸಿರನ್ನು ತಕ್ಕಮಟ್ಟಿಗಾದರೂ ಉಳಿಸಿಕೊಳ್ಳುತ್ತವೆ.
 
ಈ ಹಿನ್ನೆಲೆಯಲ್ಲಿ ‘ಶಾಲಾಭಿವೃದ್ಧಿ ಸಮಿತಿಗಳು ಬೇಡಿಕೆ ಸಲ್ಲಿಸಿದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯಲು ಅನುಮತಿ ನೀಡಲಾಗುವುದು’ ಎಂಬ ಶಿಕ್ಷಣ ಸಚಿವ ತನ್ವೀರ್ ಸೇಠ್‌ರ ಹೇಳಿಕೆ ಸಂದರ್ಭೋಚಿತವಾದುದು ಮತ್ತು ಕಾರ್ಯರೂಪಕ್ಕೆ ಬಂದರೆ ಈ ಪ್ರಕ್ರಿಯೆ ಮುಳುಗುವವನಿಗೆ (ಸರ್ಕಾರಿ ಶಾಲೆಗಳು) ಇಂಗ್ಲಿಷ್ ಹುಲುಕಡ್ಡಿಯ ಆಸರೆ ಎಂದು ನಿಸ್ಸಂಶಯವಾಗಿ ಹೇಳಬಹುದು.    
ರಘೋತ್ತಮ ಹೊ.ಬ., ಮೈಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.