ADVERTISEMENT

ಹೇಳುವುದು ಒಂದು

ಸಹನಾ ಕಾಂತಬೈಲು
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST

ಇತ್ತೀಚೆಗೆ ನಮ್ಮ ಊರಿನ ಸಮೀಪದ ಹೆಣ್ಣು ಮಕ್ಕಳ ಕಾಲೇಜೊಂದರಲ್ಲಿ ಸಾಹಿತ್ಯ ಕಾರ್ಯಕ್ರಮವಿತ್ತು. ಕವಿಗೋಷ್ಠಿಗೆ ನನ್ನನ್ನು ಆಮಂತ್ರಿಸಿದ್ದರು. ಪ್ರಧಾನ ಭಾಷಣ ಮಾಡಿದ ಮುಖ್ಯ ಅತಿಥಿ ತಮ್ಮ ಭಾಷಣದ ಕೊನೆಗೆ ‘ಯುವಜನರು ಕೃಷಿಯಿಂದ ದೂರವಾಗುತ್ತಿದ್ದಾರೆ. ನೀವು ಯಾವ ಉದ್ಯೋಗ ಮಾಡಿದರೂ ತೊಂದರೆ ಇಲ್ಲ. ಆದರೆ ರೈತ ಯುವಕನನ್ನು ಮದುವೆಯಾಗುವ ಮೂಲಕ ಕೃಷಿಯ ಜೊತೆಗಿನ ನಂಟನ್ನು ಬಲಪಡಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿನಿಯರಿಗೆ ಕರೆ ಕೊಟ್ಟರು. ಆಗ ದೊಡ್ಡ ಮಟ್ಟದ ಚಪ್ಪಾಳೆ ಅವರಿಗೆ ಲಭಿಸಿತು.

ಊಟ ಮಾಡುವಾಗ ನಾನು ಅವರ ಹತ್ತಿರವೇ ಕುಳಿತಿದ್ದೆ. ತಮ್ಮ ಕೌಟುಂಬಿಕ ಪರಿಚಯ ಹೇಳುತ್ತಾ ಅವರು ತಮಗೆ ಒಬ್ಬಳೇ ಮಗಳೆಂದೂ, ಈಗಷ್ಟೇ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದಾಳೆಂದೂ, ಗೊತ್ತಿರುವ ಎಂಜಿನಿಯರ್ ವರ ಇದ್ದರೆ ತಿಳಿಸಬೇಕೆಂದೂ ಹೇಳಿದರು. ನಾನು ತೊದಲುತ್ತ ‘ಸರ್, ನೀವು ಆಗ ಭಾಷಣದಲ್ಲಿ ಯಾವ ಉದ್ಯೋಗದಲ್ಲಿದ್ದರೂ ರೈತನನ್ನೇ ಮದುವೆಯಾಗಲು ವಿದ್ಯಾರ್ಥಿನಿಯರಿಗೆ ವಿನಂತಿಸಿದಿರಲ್ಲ’ ಎಂದೆ. ‘ಓಹ್‌, ಅದಾ, ನನಗೇನೋ ಇಷ್ಟ ಇದೆ. ಆದರೆ ನನ್ನ ಹೆಂಡತಿ, ಮಗಳು ಒಪ್ಪಬೇಕಲ್ಲ’ ಎಂದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.