ADVERTISEMENT

ಹೊಸ ರೈಲಿಗೆ ನಾಮಕರಣ: ‘ಕುಡ್ಲ ಎಕ್ಸ್‌ಪ್ರೆಸ್’ ಇರಲಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಹೊಸ ರೈಲಿಗೆ ನಾಮಕರಣ: ‘ಕುಡ್ಲ ಎಕ್ಸ್‌ಪ್ರೆಸ್’ ಇರಲಿ
ಹೊಸ ರೈಲಿಗೆ ನಾಮಕರಣ: ‘ಕುಡ್ಲ ಎಕ್ಸ್‌ಪ್ರೆಸ್’ ಇರಲಿ   

‘ಬೆಂಗಳೂರು- ಮಂಗಳೂರು ಹೊಸ ರೈಲು ಸಂಚಾರ ಶೀಘ್ರವೇ ಆರಂಭವಾಗಲಿದ್ದು, ಅದು ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚರಿಸಲಿದೆ. ಈ ರೈಲಿಗೆ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗುವುದು. ಯಶವಂತಪುರ- ಹಾಸನ ಇಂಟರ್‌ಸಿಟಿ ರೈಲಿಗೆ ‘ಹಾಸನಾಂಬ ಎಕ್ಸ್‌ಪ್ರೆಸ್’ ಎಂಬ ಹೆಸರಿಡಲು ಯೋಚಿಸಲಾಗಿದೆ’ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 27).

ಸಾರ್ವಜನಿಕ ವಲಯದಲ್ಲಿ ನಡೆಯುವ ಯಾವುದೇ ನಾಮಕರಣದ ಸಂದರ್ಭದಲ್ಲಿ ಪುರಾಣ, ಇತಿಹಾಸ ಪ್ರಸಿದ್ಧರಾದ ವ್ಯಕ್ತಿಗಳ ಹೆಸರಿಡುವುದು ಸಂಪ್ರದಾಯ. ನಮ್ಮ ರೈಲುಗಳ ನಾಮಕರಣವೂ ಈ ಸಂಪ್ರದಾಯಕ್ಕೆ ಹೊರತಲ್ಲ. ಮುಂಬೈ- ಬೆಂಗಳೂರು ನಡುವೆ ಸಂಚರಿಸುವ ‘ಉದ್ಯಾನ್ ಎಕ್ಸ್‌ಪ್ರೆಸ್’, ಹುಬ್ಬಳ್ಳಿ- ವಿಜಯಪುರ ನಡುವೆ ಸಂಚರಿಸುವ ‘ಗೋಲ್‌ಗುಂಬಜ್ ಎಕ್ಸ್‌ಪ್ರೆಸ್’, ಬೆಂಗಳೂರು- ಮೈಸೂರು ನಡುವಿನ ‘ಚಾಮುಂಡಿ ಎಕ್ಸ್‌ಪ್ರೆಸ್’, ಸಿಕಂದರಾಬಾದ್- ನವದೆಹಲಿ ನಡುವೆ ಸಂಚರಿಸುವ ‘ನಿಜಾಮುದ್ದೀನ್ ಎಕ್ಸ್‌ಪ್ರೆಸ್’, ನವದೆಹಲಿ- ಸಿಕಂದರಾಬಾದ್ ನಡುವೆ ಸಂಚರಿಸುವ ‘ಡೆಕ್ಕನ್ ಎಕ್ಸ್‌ಪ್ರೆಸ್’ ಹೀಗೆ... ಈ ನಿಟ್ಟಿನಲ್ಲಿ, ಈಗಿನ ಯಶವಂತಪುರ- ಹಾಸನ ಇಂಟರ್‌ಸಿಟಿ ರೈಲಿಗೆ ಇಡಲು ಬಯಸಿರುವ ‘ಹಾಸನಾಂಬ ಎಕ್ಸ್‌ಪ್ರೆಸ್’ ಹೆಸರು ಸಮಂಜಸವಾಗಿದೆ.

ಆದರೆ, ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಸಂಚರಿಸುವ ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಮಂಗಳೂರಿಗಾಗಲೀ ಬೆಂಗಳೂರಿಗಾಗಲೀ ಎಳ್ಳಷ್ಟೂ ಸಂಬಂಧವಿಲ್ಲದ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ ಎಂದು ಹೆಸರಿಡುವುದು ಉಚಿತವಲ್ಲ.

ADVERTISEMENT

ಮಂಗಳೂರು ಎಂಬ ಕಡಲ ತಡಿಯ ಊರಿಗೆ ಪುರಾತನ ಕಾಲದಿಂದಲೂ ‘ಕುಡ್ಲ’ ಎಂಬ ಹೆಸರಿದೆ. ಅಲ್ಲದೆ, ಮಂಗಳೂರನ್ನು ಸ್ಥಳೀಯರು ‘ಕುಡ್ಲ’ ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಹೀಗೆ, ಮಂಗಳೂರಿಗರ ಸ್ವಾಭಿಮಾನದ ಸಂಕೇತವಾದ ‘ಕುಡ್ಲ’ ಎಂಬ ಹೆಸರನ್ನು ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲಿಗೆ ಅನ್ವಯಿಸಿ ‘ಕುಡ್ಲ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡಬೇಕು.

-ಉಡುಪಿ ಅನಂತೇಶ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.