ADVERTISEMENT

ರಸ್ತೆಹಬ್ಬದ ಖುಷಿ!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 19:30 IST
Last Updated 31 ಡಿಸೆಂಬರ್ 2017, 19:30 IST

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೊ, ಓಕ್ಲಂಡ್‌, ಬರ್ಕಲಿಗಳಲ್ಲಿ ರಸ್ತೆಹಬ್ಬಗಳನ್ನು (ಸ್ಟ್ರೀಟ್ ಫೆಸ್ಟಿವಲ್) ನೋಡಿದ ನಾನು, ಮೈಸೂರಿನಲ್ಲೂ ಮಾಗಿಹಬ್ಬದ ಅಂಗವಾಗಿ ರಸ್ತೆಹಬ್ಬ ಆಚರಿಸುವುದನ್ನು ನೋಡಲು ಖುಷಿಯಿಂದ ಕುಟುಂಬಸಹಿತವಾಗಿ ಹೋದೆ.

ನೂರಾರು ಸ್ತ್ರೀ-ಪುರುಷರು, ಮಕ್ಕಳು ಈ ರಸ್ತೆಹಬ್ಬದಲ್ಲಿ ಖುಷಿಪಟ್ಟದ್ದನ್ನು, ಕುಣಿದದ್ದನ್ನು ಕಂಡು ರೋಮಾಂಚಿತನಾದೆ. ಜನಪದೀಯ ತಳಸಂಸ್ಕೃತಿಯ ದೇವಾನುದೇವತೆಗಳ, ನಂದಿಯ, ದುರ್ಗೆಯ, ಯಕ್ಷಗಂಧರ್ವರ ಬೃಹತ್ ಮೂರ್ತಿಗಳೊಂದಿಗೆ ಜನರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಆದರೆ ರಸ್ತೆಯಲ್ಲೇ ಅದ್ಧೂರಿಯ ವೇದಿಕೆ ನಿರ್ಮಿಸಿ ಸಿನಿಮಾ ಹಾಡುಗಳನ್ನು ಹಾಕಿದ್ದು ಮಾತ್ರ ಹಬ್ಬದ ಮೂಲ ಆಶಯಕ್ಕೆ ಧಕ್ಕೆ ತರುವಂತಿತ್ತು.

ರಸ್ತೆ ಹಬ್ಬವೆಂದರೆ, ಸಿನಿಮಾ ಸಂಸ್ಕೃತಿ, ಮನೆ ಸಂಸ್ಕೃತಿ, ಮಾಲ್ ಸಂಸ್ಕೃತಿಗಳಿಂದ ಹೊರಬಿದ್ದು; ಎಲ್ಲರೊಂದಿಗೆ ಒಂದಾಗಿ ಸಾಂಸ್ಕೃತಿಕ ಕ್ರೀಡೋತ್ಸವಗಳಲ್ಲಿ ಪಾಲ್ಗೊಂಡು ಖುಷಿಪಡುವುದು. ಸಂಗೀತ- ನರ್ತನ- ನಾಟಕಗಳಿಗೆ ಹೆಸರುವಾಸಿಯಾದ ಮೈಸೂರಿನ ಅಸಂಖ್ಯಾತ ಕಲಾತಂಡಗಳು ಈ ರಸ್ತೆ ಹಬ್ಬದಿಂದ ದೂರ ಉಳಿದದ್ದು ಸರಿ ಕಾಣಲಿಲ್ಲ. ವಿದೇಶಗಳಲ್ಲಿ ಇಂಥ ತಂಡಗಳು ಸ್ಪರ್ಧೆಯಿಂದ ಪಾಲ್ಗೊಳ್ಳುತ್ತವೆ. ರಸ್ತೆಹಬ್ಬ ರೊಕ್ಕದ ಪ್ರದರ್ಶನವಲ್ಲ. ಉಚಿತವಾಗಿ ಸರ್ವರೂ ಒಂದಾಗಿ ಕೂಡುವ ಸಾಂಸ್ಕೃತಿಕ ಮನೋಲ್ಲಾಸ. ನಗರೀಕರಣದ ಮಧ್ಯೆ ತಳಸಂಸ್ಕೃತಿಯ ತಂಪು-ತಲ್ಲಣ! ಅಮೆರಿಕದ ರಸ್ತೆಹಬ್ಬದಲ್ಲಿ ಪುಣೆಯಪ್ರೀತಿ ಎಂಬ ಹುಡುಗಿ ಎಲ್ಲರಿಗೂ ಗಿರ್ಮಿಟ್ ತಿನ್ನಿಸಿದಳು. ಇಲ್ಲಿಯೂ ದೇಶಿ ತಿನಿಸುಗಳು ನಾಲಿಗೆಗೆ ಚುರುಕು ಕೊಟ್ಟವು.

ADVERTISEMENT

–ಪ್ರೊ. ಜಿ.ಎಚ್. ಹನ್ನೆರಡುಮಠ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.