ADVERTISEMENT

ಕಾರ್ಮಿಕರ ಅಪಮಾನ!

ಜಿ.ವಿ.ಆನಂದ್‌ ಬಾಗೇಪಲ್ಲಿ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

‘ಪಕೋಡ ಮಾರುವುದೂ ಒಂದು ಉದ್ಯೋಗವೇ’ ಎಂದು ರಾಜಕೀಯ ಮುಖಂಡರು ಹಂಗಿಸುತ್ತಿರುವುದು ಈ ದೇಶದ ಪಕೋಡ ಮಾಡುವ, ದಿನಗೂಲಿ ಮಾಡುವ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ, ಹೋಟೆಲ್‌ಗಳಲ್ಲಿ ಮಾಣಿ ಕೆಲಸ ಮಾಡುವ, ಆಟೊ ಓಡಿಸುವ ಕೋಟ್ಯಂತರ ಕಾರ್ಮಿಕರಿಗೆ ಮಾಡಿದ ಅಪಮಾನವಾಗಿದೆ. ಈ ಕಾರ್ಮಿಕರು ತಮ್ಮ ಬೆವರು ಬಸಿದು ಪ್ರಾಮಾಣಿಕವಾಗಿ ಸಂಪಾದಿಸಿದ ಉಪ್ಪನ್ನು ಉಣ್ಣುತ್ತಿದ್ದು ಈ ದೇಶದ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ‘ರಾಜಕಾರಣಿಯಾಗು’ ಎಂದು ಸಲಹೆ ಮಾಡಿದರೆ ನಾಚಿಕೆ ಪಡಬೇಕೇ ಹೊರತು, ‘ಪಕೋಡ ಮಾರು’ ಎಂದರೆ ಏಕೆ ಸಂಕೋಚಪಡಬೇಕು?

ಈಚೆಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಪ್ರವಾಸ ಬಂದಾಗ ತಮ್ಮ ಮೊದಲ ಸಂವಾದ ನಡೆಸಿದ್ದು ಪಕೋಡಅಂಗಡಿಯಲ್ಲೇ. ಆ ಮಹಿಳೆ ಇವರಿಂದ ಹಣ ತೆಗೆದುಕೊಳ್ಳಲು ನಿರಾಕರಿಸಿದಳು ಎಂದ ಮೇಲೆ ಆ ಪಕೋಡ ಮಹಿಳೆಯ ಹೃದಯ ಶ್ರೀಮಂತಿಕೆ ಎಷ್ಟಿರಬೇಕು.

ಬೊಫೋರ್ಸ್, ಕಾಮನ್‌ವೆಲ್ತ್, 2ಜಿ, ಕಲ್ಲಿದ್ದಲು, ಡಿನೋಟಿಫಿಕೇಷನ್ ಮುಂತಾದ ಹಗರಣಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ತಮ್ಮ ತಿಜೋರಿಗಳಲ್ಲಿ ತುಂಬಿಕೊಂಡಿರುವ ರಾಜಕೀಯ ನಾಯಕರಿಗೆ, ಪಕೋಡ ಮಾರುವುದರಿಂದ ಕೂಡ ಹಣ ಸಂಪಾದಿಸಬಹುದು, ತಲೆ ಎತ್ತಿ ಬದುಕಬಹುದು ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುವುದು ದುರ್ದೈವ.

ADVERTISEMENT

ಜಿ.ವಿ. ಆನಂದ್, ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.