ADVERTISEMENT

ಅಬ್ಬಾ ಸತ್ಯವತಿ... ಇವಳಲ್ಲ, ಅವಳು!

ಮಲ್ಲೇಶ್ ನಾಯಕನಹಟ್ಟಿ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST

ದಾವಣಗೆರೆ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ‘ಕಾವ್ಯ ಸಂಭ್ರಮ’ ಹೆಸರಿನ ಕವಿಗೋಷ್ಠಿ ಅದು. ಕವಿಗೋಷ್ಠಿ ಉದ್ಘಾಟಿಸಬೇಕಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅವರು ಬಾರದೇ ಇದ್ದದ್ದರಿಂದ  ಉದ್ಘಾಟನೆಯ ಭಾಗ್ಯ ಕವಿ ಶ್ರೀಕಂಠ ಕೂಡಿಗೆ ಅವರ ಕೊರಳಿಗೆ ಬಿತ್ತು. ದೀಪ ಹಚ್ಚಿದ ಅವರು ಕಾವ್ಯ ವಿಮರ್ಶೆಯಲ್ಲಿ ತೇಲಿದರು. ಇದ್ದಕ್ಕಿದ್ದಂತೆ ಅವರ ಮಾತು ಹಳೆಗನ್ನಡದತ್ತ ಹೊರಳಿತು.

ರಾಘವಾಂಕ, ರನ್ನ–ಪಂಪರ ಕಾವ್ಯಗಳನ್ನು ಈಗಿನ ಪೀಳಿಗೆ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದ ಅವರು, ಪಂಪನ ‘ಶಂತನು–ಸತ್ಯವತಿ’ ವೃತ್ತಾಂತ ಹೇಳುವ ಹಳೆಗನ್ನಡದ ಪದ್ಯ ಓದತೊಡಗಿದರು.

ಮೈಮರೆತು ಹಳೆಗನ್ನಡ ವಾಕ್ಯಗಳನ್ನು ವೇದಿಕೆಯಲ್ಲೇ ಅರ್ಥೈಸತೊಡಗಿದರು. ಸತ್ಯವತಿಯ ಸೌಂದರ್ಯ ವರ್ಣಿಸಿದ ಅವರು, ‘ಬಿಳಿ ಸೀರೆ ತೊಟ್ಟ ಸತ್ಯವತಿ ಶಂತನುವಿನ ಕಣ್ಣಿಗೆ ಮರಿಜಿಂಕೆಯ ಕಣ್ಣಿನಂತೆ ಹೊಳೆಯುತ್ತಿದ್ದಳು. ಮಲ್ಲಿಗೆಯಂತೆ ಘಮಘಮಿಸುತ್ತಿದ್ದ ಆಕೆ ಸಂತನ ಉಸಿರಾಟದ ಮೂಲಕ ಪುಪ್ಪಸಗಳಲ್ಲಿ ಬಂದಿಯಾಗುತ್ತಿದ್ದಳು’ ಎನ್ನತೊಡಗಿದರು.

ಅದುವರೆಗೂ ಬಿಳಿಸೀರೆ ಉಟ್ಟು ಗ್ರಂಥಾಲಯ ಸಪ್ತಾಹದ ಜಾಗೃತಿ ಜಾಥಾ ಮುಗಿಸಿ ಬಂದಿದ್ದ ಗ್ರಂಥಾಲಯ ಇಲಾಖೆ ಮಹಿಳಾ ಸಿಬ್ಬಂದಿ ಕಥಾನಕ ಕೇಳುತ್ತಾ ಲಜ್ಜೆಗೆ ಜಾರಿದ್ದರು! ಎಚ್ಚೆತ್ತ ಕೂಡಿಗೆ ‘ಇದು ಪಂಪನ ಕಾಲದ ವರ್ಣನೆ, ಈಗಿನ ಕಾಲದ್ದಲ್ಲ’ ಎಂದಾಗ ಸಭೆಯಲ್ಲಿ ಗೊಳ್‌ ಎಂಬ ನಗೆ ತೇಲಿಬಂತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.