ADVERTISEMENT

ಎಚ್ಚರಿಕೆಗೆ ಅಟ್ಟಹಾಸದ ಸವಾಲು!

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ದಾವಣಗೆರೆ: ಅದು ಸರ್ಕಾರದ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಕಾರ್ಯಕ್ರಮ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು, ಜಾಗೃತಿ ಸಮಿತಿ ಸದಸ್ಯರು ಸೇರಿದ್ದ ದೊಡ್ಡ ಸಮಾರಂಭ.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್, ‘ಅನ್ನಭಾಗ್ಯದ ಅಕ್ಕಿ ಮಧ್ಯವರ್ತಿಗಳ ಪಾಲಾಗದಂತೆ ನೋಡಿಕೊಳ್ಳಿ’ ಎಂದು ತಾಕೀತು ಮಾಡಿದರು.
 
ನಂತರ ಮಾತನಾಡಿದ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ‘ಅಕ್ಕಿ ಸಿಗದಿದ್ದರೆ ನನಗೆ ನೇರವಾಗಿ ಕರೆ ಮಾಡಿ. ಅಕ್ರಮ ಎಸಗಿದವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ಈ ಅಕ್ರಮದಲ್ಲಿ ಯಾರೇ ಭಾಗಿಯಾದರೂ ಅವರನ್ನು ನಾನು ರಕ್ಷಿಸೋಲ್ಲ’ ಎಂದು ಹೇಳುತ್ತಿದ್ದರು.
 
ಇದೇ ವೇಳೆ ಜಿಲ್ಲಾಧಿಕಾರಿ ಮೊಬೈಲ್‌ಗೆ ಕರೆ ಬಂತು. ‘ಅನ್ನಭಾಗ್ಯದ ಅಕ್ಕಿಯನ್ನು ಅಕ್ಕಿ ಗಿರಣಿಯೊಂದರಲ್ಲಿ ಅಕ್ರಮ ದಾಸ್ತಾನು ಮಾಡಿದ್ದು, ಅದರ ವಿಲೇವಾರಿ ನಡೆಯುತ್ತಿದೆ. ಧೈರ್ಯ ಇದ್ದರೆ ಹಿಡಿಯಿರಿ’ ಎಂದು ವಿಳಾಸ ಸಮೇತ ಹೇಳಿ ಆ ಕರೆ ಅಂತ್ಯಗೊಂಡಿತು.
 
ಜಿಲ್ಲಾಧಿಕಾರಿ ತಕ್ಷಣವೇ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಇಬ್ಬರನ್ನೂ ಸ್ಥಳಕ್ಕೆ ತೆರಳಲು ಸೂಚಿಸಿದರು. ಅಲ್ಲಿ ಕೃತ್ಯದಲ್ಲಿ ತೊಡಗಿದವರು ಈ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಕ್ಕಿ ತುಂಬಿದ್ದ ಲಾರಿಯನ್ನು ಇವರ ಮೇಲೆಯೇ ಹರಿಸಲು ಮುಂದಾದರು.
 
ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಿಸಿದ್ದ ದಿನವೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಸಚಿವರ ಎಚ್ಚರಿಕೆಯ ಮಾತಿಗೆ ಪ್ರತಿ ಸವಾಲೇ ಎಂದು ಪ್ರಶ್ನೆಯಾಗಿ ಜನರನ್ನು ಕಾಡಿತು.
***
ಗೆಟ್‌ಔಟ್ ಅಂದಿರಂತೆ...  ಯಾಕೆ?
ಯಾದಗಿರಿ:
‘ನನ್ನ ಗಂಡನಿಗೆ ಗೆಟ್‌ಔಟ್‌ ಅಂದಿರಂತಲ್ಲ ಯಾಕೆ?’– ತುಂಬಿದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ ಸಿಇಒಗೆ ಹೀಗೆ ಪ್ರಶ್ನೆ ಎಸೆದರು. ಆಗ ಅದುವರೆಗೂ ಗದ್ದಲದಲ್ಲಿ ಮುಳುಗಿದ್ದ ಸಭೆ ತಟ್ಟನೆ ನಿಶ್ಶಬ್ದಗೊಂಡಿತು.
ಏಕಾಏಕಿ ತೂರಿ ಬಂದ ಪ್ರಶ್ನೆಗೆ ಏನುತ್ತರಿಸಬೇಕು ಎಂದು ತೋಚದೆ ಸಿಇಒ ಹರಕಲು ಕನ್ನಡದಲ್ಲಿ, ‘ನಿಮ್ ಗಂಡ ಯಾರಮ್ಮ’ ಎಂದು ಪ್ರಶ್ನಿಸಿದರು.

ಅದುವರೆಗೂ ಅಧ್ಯಕ್ಷೆಯ ಪಕ್ಕದಲ್ಲೇ ನಿಂತಿದ್ದ ಪತಿರಾಯ ಪತ್ರಿಕಾ ಛಾಯಾಗ್ರಾಹಕರನ್ನು ಕಂಡ ಕೂಡಲೇ ಕಣ್ಮರೆಯಾಗಿದ್ದರು. ಸಭೆಯಲ್ಲಿ ಗಂಡನಿಗಾಗಿ ಹುಡುಕಾಟ ನಡೆಯಿತು. ಕೊನೆಗೆ ಸಿಇಒ ಆಪ್ತ ಸಹಾಯಕರು ಆತನನ್ನು ಹುಡುಕಿ ಕರೆತಂದರು.

‘ನೋಡ್ರಿ, ಅವ್ರು ಮಹಿಳಾ ವಾರ್ಡಿಗೆ ಬರಬಾರದಿತ್ತು. ಅಲ್ಲಿ ಅಸ್ವಸ್ಥರಾಗಿದ್ದ ಹಾಸ್ಟೆಲ್‌ ಹುಡುಗಿಯರಿಗೆ ಟ್ರೀಟ್‌ಮೆಂಟ್‌ ನಡೀತಿತ್ತು. ಅಲ್ಲಿಗೆ ಗಂಡಸರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೂ ಇವ್ರು ಅಲ್ಲಿಗೆ ಬಂದಿದ್ದರು’ ಎಂದು ಸಿಇಒ ಸಮಜಾಯಿಷಿ ನೀಡಿದರು.

ಅದುವರೆಗೂ ಕಟಕಟೆಯಲ್ಲಿ ನಿಲ್ಲುವ ಆರೋಪಿಯಂತೆ ನಿಂತಿದ್ದ ಪತಿರಾಯ,‘ನೀವೂ ಗಂಡಸಲ್ವ... ನೀವೇಕೆ ಹೋಗಿದ್ದಿರಿ’ ಎಂದು ಮರುಪ್ರಶ್ನೆ ಎಸೆದಾಗ ಸಭೆ ನಗೆಗಡಲಲ್ಲಿ ತೇಲಿತು. ಈ ಮಾತು ಸರಿಯಾಗಿ ಅರ್ಥವಾಗದವರಂತೆ ಸಿಇಒ ಪೆಚ್ಚು ಮೋರೆ ಹಾಕಿಕೊಂಡು ಕುಳಿತರು.  
***
ಕತ್ತೆಗಳೇ ಇಲ್ಲವಲ್ಲಪ್ಪ...
ಹಾಸನ
: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಸ್ವಾರಸ್ಯಕರ ಸಂಗತಿಗೆ ಸಾಕ್ಷಿಯಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕುಡಿಯುವ ನೀರಿನ ವಿಷಯ ಪ್ರಸ್ತಾಪಿಸಿದ ಶಾಸಕ ಎಚ್‌.ಡಿ.ರೇವಣ್ಣ, ‘ಜಿಲ್ಲೆಯಲ್ಲಿ ಬರದಿಂದಾಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನೀವು ಐದು ತಿಂಗಳ ಹಿಂದೆ ಬಂದು ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಯಾವ ಶಾಸಕರನ್ನೂ ಕರೆದು ಸಭೆ ನಡೆಸಿಲ್ಲ.
 
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕತ್ತೆ ಕಾಯುತ್ತಿದ್ದಾರೆ. ನೀರಿನ ಸಮಸ್ಯೆ ಯಾವ ಹಳ್ಳಿಯಲ್ಲಿದೆ ಎಂಬ ಮಾಹಿತಿಯನ್ನು ಪಿಡಿಒ ಅವರಿಂದ ತರಿಸಿಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯದಲ್ಲಿ ಕತ್ತೆಗಳೇ ಇಲ್ಲವಲ್ಲಪ್ಪ. ಎಲ್ಲಿಂದ ತರುತ್ತೀಯಾ’ ಎಂದರು.
 
ಅದಕ್ಕೆ ರೇವಣ್ಣ, ‘ಎಷ್ಟು ಬೇಕು ಹೇಳಿ ಕತ್ತೆಗಳನ್ನ ಕಳಿಸಿಕೊಡುತ್ತೇನೆ’ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದವರು ಮುಸಿಮುಸಿ ನಕ್ಕರು. ಚರ್ಚೆ ಬೇರೆ ದಿಕ್ಕಿನತ್ತ ಸಾಗುತ್ತಿದ್ದುದನ್ನು ಗಮನಿಸಿದ ಸಚಿವರು, ‘ಹೇಳೋವರ್ಗೂ ಕೇಳೋ ಮಾರಾಯ, ನಿನ್ನದೇ ಟೈಪ್‌ರೈಟಿಂಗ್‌ ಎಂಬಂತೆ ಕುಟ್ಟುತ್ತಿದೆಯಲ್ಲ. ನಿನ್ನ ಕ್ಷೇತ್ರಕ್ಕೆ ಎಷ್ಟು ಟ್ಯಾಂಕರ್ ಬೇಕು, ಎಷ್ಟು ಕೊಳವೆಬಾವಿ ಕೊರೆಸಬೇಕು ಎಂಬುದನ್ನಷ್ಟೇ ಹೇಳು’ ಎಂದು ತಾಕೀತು ಮಾಡಿದರು.
‘ಅಯ್ಯೋ ಕೇಳಿದ್ದೂ ಆಯ್ತು ಎಲ್ಲಾ ಆಯ್ತು’ ಎಂದು ರೇವಣ್ಣ ಉದ್ಗಾರ ತೆಗೆದರು.
ಪ್ರಕಾಶ ಕುಗ್ವೆ, ಮಲ್ಲೇಶ್ ನಾಯಕನಹಟ್ಟಿ, ಕೆ.ಎಸ್‌.ಸುನಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.