ADVERTISEMENT

ಐ.ಎನ್‌.ಎ. ಅಧಃಪತನ

ನಿಗೂಢ ನೇತಾಜಿ-16

ಚೂಡಿ ಶಿವರಾಂ
Published 3 ಜನವರಿ 2016, 8:23 IST
Last Updated 3 ಜನವರಿ 2016, 8:23 IST
ಐ.ಎನ್‌.ಎ. ಅಧಃಪತನ
ಐ.ಎನ್‌.ಎ. ಅಧಃಪತನ   

ಇಂಡಿಯನ್‌ ನ್ಯಾಷನಲ್‌ ಆರ್ಮಿ ಯಶಸ್ವಿಯಾಗಿ ಭಾರತವನ್ನು ಪ್ರವೇಶಿಸಿದಾಗ ಹೃದಯಸ್ಪರ್ಶಿ ದೃಶ್ಯಗಳು ಕಂಡವು. ಸ್ವತಂತ್ರ ಭಾರತ ಪ್ರವೇಶಿಸಿದ ಯೋಧರು ಭೂಮಿ ಮೇಲೆ ಮಲಗಿ, ತಾಯ್ನೆಲಕ್ಕೆ ಮುತ್ತಿಕ್ಕಿದರು. ಕೆಲವರು ಹಣೆಗೆ ನೆಲ ಒತ್ತಿಕೊಂಡು ಕೃತಾರ್ಥರಾಗಿ, ಕಣ್ಣಲ್ಲಿ ನೀರು ತುಂಬಿಕೊಂಡರು. ಭಾರತದ ಒಳಗೆ ತಾವಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡಿದ್ದೇ ಅಲ್ಲದೆ ದೆಹಲಿ ಹೆಚ್ಚು ದೂರವೇನೂ ಇಲ್ಲ ಎಂದೆನಿಸಿತ್ತು.

ದುರದೃಷ್ಟವಶಾತ್‌ ಈ ಉತ್ಸಾಹ ಹೆಚ್ಚು ಕಾಲ ಉಳಿಯಲಿಲ್ಲ. ದಿಢೀರನೆ ಬಂದ ಜೋರು ಮಳೆಯಿಂದಾಗಿ ಪಡೆಗಳಿಗೆ ಆಹಾರ, ಶಸ್ತ್ರಾಸ್ತ್ರಗಳ ಕೊರತೆ ಉಂಟಾಯಿತು. 1944ರ ಜೂನ್‌ 4ರಂದು ಸ್ಥಳೀಯ ಕಮಾಂಡರ್‌ ಜನರಲ್‌ ಸ್ಯಾಟೊ ಕುಟೊಕು ಅವರು ಜನರಲ್‌ ಮುತಾಗುಚಿ ನೀಡಿದ್ದ ಆದೇಶವನ್ನು ಉಲ್ಲಂಘಿಸಿ, ಹಿಮ್ಮೆಟ್ಟುವಂತೆ ಯೋಧರಿಗೆ ಸೂಚಿಸಿದರು. ಇದರಿಂದ ಐ.ಎನ್‌.ಎ. ಯೋಧರಿಗೆ ಸುರಕ್ಷೆಯೇ ಇಲ್ಲದಂತಾಗಿ, ಬ್ರಿಟಿಷ್‌ ಯೋಧರ ಅನುಕಂಪಕ್ಕಾಗಿ ಎದುರುನೋಡುವ ಸ್ಥಿತಿ ಉದ್ಭವಿಸಿತು. ಜನರಲ್‌ ಸ್ಯಾಟೊ ಮಾಡಿದ ಉಲ್ಲಂಘನೆಯಿಂದಾಗಿ 200 ಕಿ.ಮೀ.ನಷ್ಟು ಸುದೀರ್ಘ ಹಾದಿಯಲ್ಲಿ ನಡೆಸಿದ್ದ ಹೋರಾಟ ಅಂತ್ಯಗೊಂಡಿತು. ಇಂಫಾಲ್‌ನಲ್ಲಿ ನಾಲ್ಕು ತಿಂಗಳು ನಡೆಸಿದ್ದ ಹೋರಾಟ ದುರಂತ ಸೋಲಿನೊಂದಿಗೆ ಮುಗಿಯಿತು. ಐ.ಎನ್‌.ಎ.ಯ ‘ದಿಲ್ಲಿ ಚಲೋ’ ಭರವಸೆ ಕುಸಿದುಹೋಯಿತು.

ಇಂಫಾಲ್‌ನಲ್ಲಿ ಹಿನ್ನಡೆ ಉಂಟಾದದ್ದು ಎರಡನೇ ವಿಶ್ವಯುದ್ಧದ ಅತಿ ದೊಡ್ಡ ದುರಂತ. ಹಸಿವು, ಸಾವು, ದುಃಸ್ವಪ್ನಗಳ ಗಾಥೆ ಅದು. ಜಪಾನ್‌ನಲ್ಲಿ ಬೇಹುಗಾರಿಕಾ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್‌ ಜನರಲ್‌ ಇವಾಯ್ಚಿ ಫುಜಿವರ ಆ ಸಂದರ್ಭದ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ: ‘ಆಗ ಐ.ಎನ್‌.ಎ. ಅಧಿಕಾರಿಗಳು ಹಾಗೂ ಯೋಧರಿಗೆ ಕಷ್ಟಕರವಾದ ಹಾದಿಯಲ್ಲಿ ಹೆಜ್ಜೆಹಾಕುವುದು ನೋವಿನ ಸಂಗತಿಯಾಗಿತ್ತು. ಅವರು ಕನಸು ಕಂಡಿದ್ದ ಅಸ್ಸಾಂ ಇನ್ನೇನು ಕೂಗಳತೆ ದೂರದಲ್ಲಿ ಇದ್ದಾಗ ಸೋಲು ಕಂಡಿದ್ದು ಎಲ್ಲರಿಗೂ ಆಘಾತ. ಆ ಅಪಜಯಕ್ಕೆ ಜಪಾನೀಯರೇ ಹೊಣೆಗಾರರು. ಐ.ಎನ್‌.ಎ. ಪಾಲಿಗೆ ಇದು ಗಂಭೀರವಾದ ನಂಬಿಕೆದ್ರೋಹವೇ ಹೌದಾಗಿತ್ತು’. ಭಾರವಾದ ಹೃದಯ ಹೊತ್ತು ನೇತಾಜಿ ವಿಧಿಯಿಲ್ಲದೆ ಯುದ್ಧದಿಂದ ಹಿನ್ನಡೆಯುವಂತೆ ಯೋಧರಿಗೆ 1944ರ ಜೂನ್‌ 25ರಂದು ಸೂಚಿಸಿದರು. ಹೋರಾಡುವುದನ್ನು ಮಾತ್ರ ನಿಲ್ಲಿಸಬೇಡಿ ಎಂದೂ ಅವರು ಕರೆಕೊಟ್ಟರು.

ಯಾವುದೇ ರಕ್ಷಣೆ ಇಲ್ಲದೆ ಐ.ಎನ್‌.ಎ. ಹೋರಾಡಿ ಸಾರ ಸತ್ವವನ್ನೆಲ್ಲಾ ಬಸಿದುಕೊಟ್ಟಿತು. ಅದರಲ್ಲಿ ಕಸುವೇ ಇಲ್ಲದಂತಾಯಿತು. ಐ.ಎನ್‌.ಎ.ಯಲ್ಲಿ ಕರ್ನಲ್‌ ಆಗಿದ್ದ ಮುಲ್ಕರ್‌ ಆ ಸಂದರ್ಭವನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: ‘ಕೊಹಿಮಾದ ಹಳ್ಳಿಯೊಂದನ್ನು ನಾವು ಹಾದು ಹೋಗುತ್ತಿದ್ದಾಗ ಅಲ್ಲಿನ ಜನ ಬ್ರಿಟಿಷರಿಗೆ ನಾವು ಅಲ್ಲಿರುವ ವಿಚಾರ ಮುಟ್ಟಿಸಿದರು. ಸಾಕಷ್ಟು ಹೋರಾಡಿ ಅವರು ಹಿಮ್ಮೆಟ್ಟುವಂತೆ ಮಾಡಿದೆವು. ಆದರೆ ಮತ್ತೆ ಬ್ರಿಟಿಷ್‌ ತುಕಡಿಗಳು ಟ್ಯಾಂಕ್‌ಗಳು ಹಾಗೂ ಸುಧಾರಿತ ಯುದ್ಧ ಪರಿಕರಗಳೊಂದಿಗೆ ದಾಳಿಇಟ್ಟವು’.

ಮಳೆಯಿಂದ ತೋಯ್ದ ಯೋಧರು ಜ್ವರದಿಂದ ಬಳಲಿದರು. ಅಪೌಷ್ಟಿಕತೆಯ ಸಮಸ್ಯೆಯೂ ಇತ್ತು. ನೋಡನೋಡುತ್ತಲೇ ಹಾದಿಯುದ್ದಕ್ಕೂ ಹೆಣಗಳು ಬೀಳತೊಡಗಿದವು. ಹಾಗೆ ಸತ್ತವರನ್ನು ಮಣ್ಣುಮಾಡುವಷ್ಟು ವ್ಯವಧಾನವೂ ಇಲ್ಲದ ಸಮಯ ಅದು. ‘ನದಿತಟದ ಹಾದಿಯಲ್ಲಿ ಮೃತಪಟ್ಟ ಐ.ಎನ್‌.ಎ. ಯೋಧರ ಶವಗಳನ್ನು ನದಿಗೆ ಹಾಗೆಯೇ ಉರುಳಿಸುತ್ತಿದ್ದುದನ್ನು ನೋಡುವುದು ಹೃದಯವಿದ್ರಾವಕವಾಗಿತ್ತು’ ಎಂದು ಫುಜಿವರ ನೆನಪಿಸಿಕೊಂಡಿದ್ದರು. ಬ್ರಿಟಿಷರಿಗೆ ಶರಣಾಗುವುದಕ್ಕಿಂತ ಸಾಯುವುದೇ ಲೇಸು ಎಂದು ಐ.ಎನ್‌.ಎ. ಯೋಧರು ನಂಬಿದ್ದರು. ಇಂಫಾಲ್‌ನಲ್ಲಿ ಹೋರಾಡುತ್ತಿದ್ದ 8,000 ಯೋಧರಲ್ಲಿ ಅರ್ಧದಷ್ಟು ಮಂದಿ ಮೃತಪಟ್ಟರು. ಈಶಾನ್ಯ ಭಾರತ ಹಾಗೂ ಬರ್ಮದ ಹೋರಾಟದಲ್ಲಿ ಐ.ಎನ್‌.ಎ.ಯ 60,000ಕ್ಕೂ ಹೆಚ್ಚು ಯೋಧರಲ್ಲಿ 26,000 ಮಂದಿ ಪ್ರಾಣತ್ಯಾಗ ಮಾಡಿದರು.

ಯುದ್ಧ ವಿಮುಖರಾಗುವಂತೆ ಆದೇಶ ಬಂದದ್ದನ್ನು ಕೇಳಿಸಿಕೊಂಡ ನಂತರ ಜನರಲ್‌ ಕವಾಬೆ ಅವರನ್ನು ಕುರಿತು ನೇತಾಜಿ ಹೀಗೆ ಹೇಳಿದ್ದರು: ‘ಜಪಾನೀಯರ ಸೇನೆಯು ಯುದ್ಧ ಕಾರ್ಯಾಚರಣೆ ನಿಲ್ಲಿಸಿದ್ದರೂ ನಾವು ಮುಂದುವರಿಸುತ್ತೇವೆ. ಅಗತ್ಯ ಸಾಮಗ್ರಿಗಳ ಪೂರೈಕೆ ಸ್ಥಗಿತಗೊಂಡು, ಅನ್ನಕ್ಷಾಮ ಶುರುವಾಯಿತೆಂದು ನಾವು ಇಟ್ಟ ದಾಪುಗಾಲನ್ನು ಹಿಂದಕ್ಕೆ ತೆಗೆಯುವ ಪ್ರಶ್ನೆಯೇ ಇಲ್ಲ. ತಾಯ್ನೆಲದತ್ತ ಪಯಣವನ್ನು ನಾವು ಮುಂದುವರಿಸುತ್ತೇವೆ’. ನೇತಾಜಿ ನಿಲುವು ಅಷ್ಟು ದೃಢವಾಗಿತ್ತು. ವಿಮಾನಗಳಿಂದ ಬಾಂಬ್‌ ದಾಳಿ ಶುರುವಾದಾಗಲೂ ಸುರಕ್ಷಿತ ಸ್ಥಳಕ್ಕೆ ಧಾವಿಸಲು ಅವರು ಒಪ್ಪಿರಲಿಲ್ಲ. ‘ನನ್ನನ್ನು ಕೊಲ್ಲುವಂಥ ಬಾಂಬ್‌ ಇನ್ನೂ ತಯಾರಾಗಿಲ್ಲ’ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದರು. ಯುದ್ಧದಿಂದ ವ್ಯವಸ್ಥಿತ ರೀತಿಯಲ್ಲಿ ಹಿನ್ನಡೆಯುವುದು ಐ.ಎನ್‌.ಎ. ಉದ್ದೇಶವಾಗಿತ್ತು. ಏನನ್ನೂ ಲೂಟಿ ಮಾಡದೆ, ಯಾವುದೇ ಅಪರಾಧ ಎಸಗದೆ ಇರಬೇಕೆಂದು ಎಲ್ಲರೂ ನಿರ್ಧರಿಸಿದ್ದರು.

ವ್ಯತಿರಿಕ್ತ ಪರಿಸ್ಥಿತಿಯಲ್ಲಿಯೂ ಬರ್ಮ ಮೂಲಕ ಭಾರತದತ್ತ ಪಯಣ ಮಾಡುವ ತಂತ್ರಕ್ಕೆ ನೇತಾಜಿ ಬದ್ಧರಾಗಿದ್ದರು. ಆದರೆ 1945ರ ಮಾರ್ಚ್‌ನಲ್ಲಿ ಆಂಗ್‌ ಸಾನ್‌ (ಆಂಗ್‌ ಸಾನ್‌ ಸೂಕಿ ಅವರ ತಂದೆ) ನೇತೃತ್ವದ ಬರ್ಮ ಸೇನೆ ಬ್ರಿಟಿಷರಿಗೆ ಬದ್ಧ ಆಗುವುದಾಗಿ ನಿಲುವು ಬದಲಿಸಿಕೊಂಡಿತು. ಆದ್ದರಿಂದ ಬರ್ಮ ಮೂಲಕ ಭಾರತದ ಪ್ರವೇಶ ಅಸಾಧ್ಯವಾಯಿತು. ಅದೇ ವರ್ಷದ ಆಗಸ್ಟ್‌ ನಡುಘಟ್ಟದ ಹೊತ್ತಿಗೆ ನೇತಾಜಿ ಸಿಂಗಾಪುರಕ್ಕೆ ಹೋಗಿ, ಅದಾಗಲೇ ಅಸ್ತವ್ಯಸ್ತವಾಗಿದ್ದ ಐ.ಎನ್‌.ಎ.ಗೆ ಹೊಸ ರೂಪು ನೀಡುವ ಕನಸು ಕಾಣುತ್ತಿದ್ದರು. ವಿರೋಧಿ ಬಣಗಳ ವಶಕ್ಕೆ ಸಿಲುಕಿ, ಐ.ಎನ್‌.ಎ.ಯ ಯೋಧರು ಅಲ್ಲಿ ಬಂಧನಕ್ಕೊಳಗಾದವರ ಶಿಬಿರಗಳನ್ನು ಸೇರಬೇಕಾಯಿತು.

ಹಿರೋಶಿಮ ಹಾಗೂ ನಾಗಸಾಕಿ ಮೇಲೆ ನಡೆದ ಅಣು ಬಾಂಬ್‌ ದಾಳಿ ಮನುಕುಲದ ಇತಿಹಾಸವನ್ನೇ ಬದಲಿಸಿತು. ಜಪಾನ್‌ ಶರಣಾಯಿತು. 1945ರ ಆಗಸ್ಟ್‌ 14ರಂದು ನೇತಾಜಿ ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಹೀಗೆ ಮಾತನಾಡಿದರು: ‘ಜಪಾನ್‌ನ ಶರಣಾಗತಿಯು ಭಾರತದ ಶರಣಾಗತಿ ಅಲ್ಲ. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಭಾರತದ ದಾರಿಗಳು ಹಲವು ಇವೆ’. ಸಮುದ್ರ ಮಾರ್ಗಗಳನ್ನು ವಿರೋಧಿ ಪಡೆಗಳವರು ಬಂದ್‌ ಮಾಡಿದ್ದರಿಂದ ಸಿಂಗಾಪುರದಿಂದ ನೇತಾಜಿ ಅವರಿಗೆ ಸೈಗೊನ್‌ ಹಾಗೂ ತೈವಾನ್‌ ಮೂಲಕ ಹೋಗುವ ದಾರಿಯೊಂದೇ ಆಗ ಇದ್ದುದು. ಅವರು ರಷ್ಯಾಗೆ ಹೋಗಿ, ಅಲ್ಲಿ ಸೇನೆಯನ್ನು ಬಲಪಡಿಸಿ, ಕಾಬೂಲ್‌ ಮೂಲಕ ಬ್ರಿಟಿಷ್‌ ಸೇನೆಯ ಮೇಲೆ ದಾಳಿ ಇಡಲು ನಿರ್ಧರಿಸಿದರು.

ಐ.ಎನ್‌.ಎ. ಯೋಧರ ಸ್ಥಿತಿಗತಿ: ಜಪಾನೀಯರು ಸೋತ ನಂತರ ಐ.ಎನ್‌.ಎ. ಯೋಧರು ಶರಣಾಗಲು ನಿರಾಕರಿಸಿದರು. ಶರಣಾಗುವಂತೆ ಹೇಳಲು ಯಾರೇ ಬಂದರೂ ಅವರನ್ನು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಸಿದರು. ವಿದೇಶಿ ನೆಲದಲ್ಲಿ ಏಕಾಂಗಿಗಳಾಗಿ ಸಾಯುವುದಕ್ಕಿಂತ ಭಾರತದ ಜೈಲುಗಳಲ್ಲಿ ಇದ್ದುಕೊಂಡೇ ಸ್ವಾತಂತ್ರ್ಯ ಹೋರಾಟ ಮುಂದುವರಿಸುವುದು ಒಳ್ಳೆಯದು ಎನಿಸಿದ ಮೇಲೆ ಅಷ್ಟೆ ಯುದ್ಧದಿಂದ ಯೋಧರು ಹಿನ್ನಡೆದದ್ದು. ಯಾವ ಬ್ರಿಟಿಷ್‌ ಅಧಿಕಾರಿಯೂ ತಮ್ಮ ಶಿಬಿರಕ್ಕೆ ಬರಕೂಡದು ಎಂಬ ಷರತ್ತನ್ನು ಹಾಕಿಯೇ ಐ.ಎನ್‌.ಎ. ಯೋಧರು ಶರಣಾದದ್ದು.

ಜಪಾನ್‌ ಶರಣಾದಾಗ ಬ್ರಿಟಿಷರು ದಂಡದ ರೂಪದಲ್ಲಿ ಐ.ಎನ್‌.ಎ.ಯ 20,000 ಯೋಧರನ್ನು ಕೇಳಿದರು. ಸೆರೆಸಿಕ್ಕ ಐ.ಎನ್‌.ಎ. ಯೋಧರು ಶಿಬಿರದಲ್ಲಿ ಚಿತ್ರಹಿಂಸೆ ಅನುಭವಿಸಿದರು. ಪಂಜರಗಳಲ್ಲಿ ಅನೇಕರನ್ನು ಅಲುಗಾಡದಂತೆ ಬಂಧಿಸಿಟ್ಟಿದ್ದರು. ಆಹಾರವನ್ನೇ ಕೊಡುತ್ತಿರಲಿಲ್ಲ. ರೋಗಗಳು ಹರಡುವ ಭೀತಿ ಎಲ್ಲರಲ್ಲೂ ಆವರಿಸಿತ್ತು. ವಾಚ್‌ಗಳು, ಉಂಗುರಗಳು ಹಾಗೂ ಪರ್ಸ್‌ಗಳನ್ನು ಬ್ರಿಟಿಷ್‌ ಗಾರ್ಡ್‌ಗಳು ಕಿತ್ತುಕೊಂಡರು. ಯಾವುದೇ ವಿಚಾರಣೆ ನಡೆಸದೆ ಐ.ಎನ್‌.ಎ.ಯ ನೂರಾರು ಯೋಧರಿಗೆ ಚಿತ್ರಹಿಂಸೆ ಕೊಟ್ಟರು. ಇಷ್ಟೆಲ್ಲಾ ಅಮಾನವೀಯ ವಾತಾವರಣದಲ್ಲೂ ಐ.ಎನ್‌.ಎ. ಯೋಧರು ಸ್ಥೈರ್ಯ ಕಳೆದುಕೊಳ್ಳಲಿಲ್ಲ. ಅವರ ದೇಶಭಕ್ತಿ ಎಷ್ಟಿತ್ತೆಂದರೆ ಬ್ರಿಟಿಷ್‌ ವಿರೋಧಿ ಘೋಷಣೆಗಳ ಕೂಗುವುದನ್ನು ಮುಂದುವರಿಸಿದರು ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು. ಸರ್ಕಾರವು ಜೈಲುವಾಸಿಗಳಿಗೆ ತಿಂಗಳಿಗೆ 5 ರೂಪಾಯಿ ಕೊಡುವುದಾಗಿ ಪ್ರಕಟಿಸಿತಾದರೂ, ಅದನ್ನು ಎಲ್ಲರೂ ನಿರಾಕರಿಸಿದರು.

ಐ.ಎನ್‌.ಎ. ಯೋಧರನ್ನು ಸೆರೆಯಲ್ಲಿ ಇರಿಸಿದ ವಿಷಯವನ್ನು ಗುಟ್ಟಾಗಿ ಇಡಲಾಗಿತ್ತು. ಒಂದೆಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗಲೂ ಯಾರಿಗೂ ಬಂಧಿತರು ಭಾರತೀಯರೆಂದು ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದರು. ಸೇನೆಯ ಲಾರಿಗಳಲ್ಲಿ ಅವರನ್ನು ಸಾಗಿಸುವಾಗ ಕ್ಯಾನ್‌ವಾಸ್‌ನಿಂದಲೋ, ವೈರ್‌ ಹೆಣಿಗೆಯ ಪರದೆಗಳಿಂದಲೋ ಮುಚ್ಚಲಾಗುತ್ತಿತ್ತು.

ಸೆರೆಯಾಳುಗಳು ‘ವೈರ್‌–ನೆಟ್‌’ ಇದ್ದ ಸಣ್ಣ ಕಿಟಕಿಗಳಿಂದ ತೆವಳಿಕೊಂಡೇ ಲಾರಿಯನ್ನು ಹತ್ತಬೇಕಿತ್ತು. ‘ಯುದ್ಧ ಮುಗಿದ ನಂತರವೂ ಭಾರತದ ಜನತೆಗೆ ನಮ್ಮನ್ನು ತೋರುವುದು ಬ್ರಿಟಿಷರಿಗೆ ಆತಂಕದ ಸಂಗತಿಯಾಗಿತ್ತು. ರೈಲುಗಳನ್ನು ಸಾಗಿಸುವಾಗ ಮರದ ಡಬ್ಬಗಳಲ್ಲಿ ನಮ್ಮನ್ನು ಮುಚ್ಚಿಡುತ್ತಿದ್ದರು. ನಾವು ಭಾರತದ ಯೋಧರು ಎನ್ನುವುದು ಯಾರಿಗೂ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದರು’ ಎಂದು ಐ.ಎನ್‌.ಎ.ಯಲ್ಲಿ ಹೋರಾಡಿದ್ದ ಹರಿ ರಾಮ್‌ ನೆನಪಿಸಿಕೊಳ್ಳುತ್ತಾರೆ.

ನೇತಾಜಿ ಹಾಗೂ ಐ.ಎನ್‌.ಎ.ಯ ಸಾಮರ್ಥ್ಯ ಹಾಗೂ ಬದ್ಧತೆಯ ಕುರಿತು ಭಾರತದಲ್ಲಿ ಬ್ರಿಟಿಷರಿಗೆ ಭಯವಿತ್ತು. ಮೊದಲು ಐ.ಎನ್‌.ಎ.ಯನ್ನು ಅವರು ಲಘುವಾಗಿ ಪರಿಗಣಿಸಿದ್ದರು. ಬಹುಬೇಗ ಅವರಿಗೆ ಈ ಯೋಧರೆಲ್ಲಾ ಸೂಕ್ತ ರೀತಿಯಲ್ಲಿ ತರಬೇತಿ ಪಡೆದಿದ್ದು, ಭಾರತೀಯರನ್ನು ಹುರಿದುಂಬಿಸಬಲ್ಲರು ಎಂದು ಅರಿವಾಯಿತು. ಐ.ಎನ್‌.ಎ. ಕುರಿತ ಸುದ್ದಿಯು ಜನರನ್ನು ತಲುಪಿದರೆ, ಎಲ್ಲರೂ ಬ್ರಿಟಿಷ್‌ ಇಂಡಿಯನ್‌ ಸೇನೆಯ ವಿರುದ್ಧ ಬಂಡೇಳುವ ಸಾಧ್ಯತೆ ಇದೆ ಎಂಬ ಆತಂಕ ಬ್ರಿಟಿಷರಿಗೆ ಇತ್ತು. ಆದ್ದರಿಂದಲೇ ಐ.ಎನ್‌.ಎ.ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಗುಟ್ಟಾಗಿಯೇ ಇಟ್ಟಿತು.

ಐ.ಎನ್‌.ಎ. ತನ್ನ ಪ್ರಚಾರಕ್ಕೆ ಹೂಡಿದ ಯತ್ನಗಳೆಲ್ಲಾ ವಿಫಲವಾದವು. ಐ.ಎನ್‌.ಎ. ಬಗೆಗೆ ಭಾರತೀಯರಿಗೆ ಗೊತ್ತಾಗಬೇಕು, ಭಾರತದಲ್ಲೂ ಅದಕ್ಕೆ ಅಪಾರ ಬೆಂಬಲ ಸಿಗಬೇಕು ಎನ್ನುವುದು ನೇತಾಜಿ ಹೆಬ್ಬಯಕೆಯಾಗಿತ್ತು. ಜಪಾನೀಯರು ವಿಶಾಖಪಟ್ಟಣದ ಮೇಲೆ ಬಾಂಬ್‌ ದಾಳಿ ಮಾಡಿ ಆಗಿತ್ತು. ಕೋಲ್ಕತ್ತ ಮೇಲೆಯೂ ದಾಳಿಯ ಯೋಜನೆ ರೂಪಿಸಿತ್ತು. ಅದನ್ನು ನೇತಾಜಿ ತಡೆಗಟ್ಟಿದರು. ಅದಕ್ಕೆ ಬದಲಾಗಿ ಐ.ಎನ್‌.ಎ. ಹಾಗೂ ಅದರ ಸ್ವಾತಂತ್ರ್ಯ ಹೋರಾಟದ ಪ್ರಚಾರ ಪತ್ರಗಳನ್ನು ವಿಮಾನದಿಂದ ನೆಲದತ್ತ ಹಾರಿಬಿಡಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಈ ಹೋರಾಟದ ಕುರಿತು ಅರಿವಾದೊಡನೆ ಬಂಗಾಳದ ಜನ ತಮ್ಮೂರಿನ ಮಗನನ್ನು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ಅವರಿಗೆ ಇತ್ತು.

ಪ್ರಚಾರದ ಪತ್ರಗಳನ್ನು ಗಾಳಿಯಲ್ಲಿ ಹಾರಿಬಿಡಲು ಜಪಾನೀಯರು ಒಪ್ಪಲಿಲ್ಲ. ಜಲಾಂತರ್ಗಾಮಿಯಿಂದ ದಕ್ಷಿಣ ಭಾರತ ತಲುಪಿದ ಐ.ಎನ್‌.ಎ.ಯ ಗುಪ್ತ ಏಜೆಂಟರನ್ನು ಕೊನಾರ್ಕ್‌ನಲ್ಲಿ ಬಂಧಿಸಲಾಯಿತು. ಹಾಗಾಗಿ ಐ.ಎನ್‌.ಎ. ಬಗೆಗೆ ದೇಶದಲ್ಲಿ ಪ್ರಚಾರ ಮಾಡುವುದು ಅವರಿಗೂ ಸಾಧ್ಯವಾಗಲಿಲ್ಲ. ಭಾರತದ ಜನರಿಗೆ ಐ.ಎನ್‌.ಎ. ಹಾಗೂ ನೇತಾಜಿ ಕುರಿತು ಯಾವ ಸುಳಿವೂ ಸಿಗಲಿಲ್ಲ.

ಬ್ರಿಟಿಷರು ಐ.ಎನ್‌.ಎ. ವಿರೋಧಿ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಿದರು. ಬ್ರಿಟಿಷ್‌ ಬೇಹುಗಾರಿಕಾ ವಿಭಾಗವು ಇಡಿಯಾಗಿ ಇದೇ ಕೆಲಸದಲ್ಲಿ ತೊಡಗಿಕೊಂಡಿತು. ಐ.ಎನ್‌.ಎ. ಚಟುವಟಿಕೆಗಳ ಯಾವ ಸುದ್ದಿಯೂ ಜನರಿಗೆ ತಲುಪಲಿಲ್ಲ. ‘ಮೋಸದ ಸೇನೆ’ ಎಂದು ಐ.ಎನ್‌.ಎ.ಯನ್ನು ಬ್ರಿಟಿಷರು ಬಣ್ಣಿಸಿದರು. ಇಲ್ಲಿನ ಮಾಧ್ಯಮಗಳಿಗೂ ಬ್ರಿಟಿಷರ ಸೆನ್ಸಾರ್‌ಷಿಪ್‌ ಇದ್ದುದರಿಂದ ಜಪಾನೀಯರೇ ಭಾರತದ ಮೇಲೆ ಯುದ್ಧ ಹೊರಟಿದ್ದಾರೆ ಎಂದು ಇಲ್ಲಿನವರು ತಪ್ಪು ಭಾವಿಸಿದರು. ಐ.ಎನ್.ಎ.ಯ ನಿಜವಾದ ಹೋರಾಟ ಬ್ರಿಟಿಷರ ವಿರುದ್ಧ ಎನ್ನುವುದೇ ಗೊತ್ತಾಗಲಿಲ್ಲ.

ನೇತಾಜಿ ಅವರ ರೇಡಿಯೊ ಕಾರ್ಯಕ್ರಮಗಳ ಹೊರತಾಗಿಯೂ ಐ.ಎನ್‌.ಎ.ಗೆ ಭಾರತೀಯರು ಬೆಂಬಲ ಕೊಡಲಿಲ್ಲ. ಅದು ಜಪಾನೀಯರ ತಂತ್ರ ಎಂದು ಭಾವಿಸಿದವರೇ ಹೆಚ್ಚು. ಇದು ಜಪಾನೀಯರ ತಂತ್ರ ಎಂದು ಮಣಿಪುರದ ಜನರನ್ನು ಬ್ರಿಟಿಷರು ನಂಬಿಸಿದರು. ಇದರಿಂದಾಗಿಯೇ ಐ.ಎನ್‌.ಎ. ವಿರುದ್ಧ ಬ್ರಿಟಿಷರ ಕಾರ್ಯಾಚರಣೆಗೆ ಅವರೆಲ್ಲಾ ಬೆಂಬಲ ನೀಡಿದರು. ರೇಡಿಯೊ ಕಾರ್ಯಕ್ರಮಗಳು ಕೂಡ ಹೆಚ್ಚು ಜನರನ್ನು ತಲುಪದಂತೆ ಬ್ರಿಟಿಷರು ನೋಡಿಕೊಂಡರು. ‘ನೇತಾಜಿ ಹಾಗೂ ಐ.ಎನ್‌.ಎ. ಬಗೆಗೆ ಬ್ರಿಟಿಷರು ಇಲ್ಲ ಸಲ್ಲದ್ದನ್ನ ಹಬ್ಬಿಸಿದರು. ಐ.ಎನ್‌.ಎ. ಎನ್ನುವುದೇ ಇಲ್ಲ. ಜಪಾನೀಯರು ಕೆಲವು ಬಾಡಿಗೆ ದರೋಡೆಕೋರರನ್ನು ಇಟ್ಟುಕೊಂಡಿದ್ದಾರೆ ಎಂದೆಲ್ಲಾ ಸುದ್ದಿ ತೇಲಿಬಿಟ್ಟರು’ ಎಂದು ಹರಿ ರಾಮ್‌ ನೆನಪಿಸಿಕೊಳ್ಳುತ್ತಾರೆ.

ದೇಶವನ್ನು ಉದ್ದೇಶಿಸಿ ನೇತಾಜಿ ರೇಡಿಯೊ ಮೂಲಕ ಮಾತನಾಡಿದರು. ‘ದೇಶದ ಬಾಂಧವರೆ, ನಾನು ಇಲ್ಲಿ ಆರಾಮ ಕುರ್ಚಿಯ ರಾಜಕಾರಣಿಯಂತೆ ಕುಳಿತಿಲ್ಲ. ಪ್ರತಿ ಕ್ಷಣವೂ ನಾನು, ನನ್ನ ಯೋಧರು ಜೀವನ್ಮರಣದ ಹೋರಾಟ ನಡೆಸಿದ್ದೇವೆ. ಬರ್ಮದಲ್ಲಿ ಅನೇಕರು ಜೀವತೆತ್ತಿದ್ದು, ಬಾಂಬ್‌ ಹಾಗೂ ಮಷಿನ್‌ಗನ್‌ಗಳ ದಾಳಿಯಿಂದ ಅನೇಕರು ಸಾಯುವುದನ್ನು, ಗಾಯಗೊಳ್ಳುವುದನ್ನು ನೋಡುತ್ತಿದ್ದೇವೆ. ಆಜಾದ್‌ ಹಿಂದ್‌ ಫೌಜ್‌ಗೆ ಸೇರಿದ್ದ ಇಡೀ ಆಸ್ಪತ್ರೆ ಮೇಲೆ ಶೆಲ್‌ಗಳ ದಾಳಿ ನಡೆಸಿದಾಗ ಅಲ್ಲಿದ್ದ ಎಲ್ಲಾ ರೋಗಿಗಳೂ ಮೃತಪಟ್ಟಿದ್ದನ್ನು ನಾನು ಕಂಡು ಮರುಗಿದೆ’ ಎಂದು ರೇಡಿಯೊ ಮೂಲಕ ನೇತಾಜಿ ಹೇಳಿದ್ದರು.

ಬ್ರಿಟಿಷ್‌ ಪ್ರತಿಷ್ಠೆಯ ಎದುರೂ ಐ.ಎನ್‌.ಎ. ಪಡೆಗಳು ಶರಣಾಗಲೇ ಇಲ್ಲ. ಜಪಾನ್‌ ಸರ್ಕಾರದ ಯುದ್ಧಾ ನಂತರದ ವರದಿಯಲ್ಲಿ ಐ.ಎನ್‌.ಎ.ಯ ಧೈರ್ಯ ಹಾಗೂ ದೇಶಭಕ್ತಿ ಕುರಿತು ಹೊಗಳಿಕೆಯ ಸಾಲುಗಳು ತುಂಬಿದ್ದವು: ‘ಬೋಸ್‌ ನೇತೃತ್ವದ ಐ.ಎನ್‌.ಎ. ಇಂಫಾಲ್‌ ಕಾರ್ಯಾಚರಣೆ ಮುಗಿದ ನಂತರವೂ ಹೋರಾಡಿತು. ವ್ಯತಿರಿಕ್ತ ಪರಿಸ್ಥಿತಿಯಲ್ಲಿಯೂ ಅದು ತೋರಿದ ಛಲವನ್ನು ಶ್ಲಾಘಿಸಲೇಬೇಕು’. ‘ಬರ್ಮದ ಐ.ಎನ್‌.ಎ. ಘಟಕದ ಧೈರ್ಯವನ್ನು ಅಲ್ಲಗಳೆಯಲಾಗದು. ಬ್ರಿಟಿಷರ ಟ್ಯಾಂಕ್‌ಗಳು, ಗನ್‌ಗಳು, ವಿಮಾನಗಳನ್ನು  ಎತ್ತಿನ ಗಾಡಿಗಳ ಮೇಲೆ ಓಡಾಡುತ್ತ ಖಾಲಿ ಹೊಟ್ಟೆಗಳಲ್ಲಿ ಇದ್ದ ಯೋಧರು ಎದುರಿಸಿದ್ದು ಮೆಚ್ಚತಕ್ಕ ಸಂಗತಿ’ ಎಂಧು ಬ್ರಿಟಿಷ್‌ ಬೇಹುಗಾರಿಕಾ ವರದಿ ಕೂಡ ಶ್ಲಾಘಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.