ADVERTISEMENT

ಒತ್ತಾಯಕ್ಕೆ ಬಂದ ಸಭಿಕರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ಒತ್ತಾಯಕ್ಕೆ ಬಂದ ಸಭಿಕರು

ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರಿಗೆ ಕನ್ನಡ ಒಕ್ಕೂಟದ ವತಿಯಿಂದ ನಗರದ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಇತ್ತೀಚೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ 30 ಸಭಿಕರು ಹಾಗೂ ವೇದಿಕೆ ಮೇಲೆ 15 ಅತಿಥಿಗಳು ಇದ್ದರು. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಒಂದು ತಾಸು ತಡವಾಗಿ, ಮೊಬೈಲ್‌ನಲ್ಲಿ ನಾಡಗೀತೆ ಮೊಳಗಿಸುವ ಮೂಲಕ ಶುರುವಾಯಿತು. ವಾಟಾಳ್‌ ನಾಗರಾಜ್‌ ಹಾಗೂ ಸಾರಾ ಗೋವಿಂದು ಅವರು ಚಂಪಾ ಅವರ ಗುಣಗಾನ ಮಾಡುತ್ತಾ ಅವರನ್ನು ಉಪ್ಪರಿಗೆ ಮೇಲೆ ಕೂರಿಸಿದರು.

ADVERTISEMENT

ಮಾತಿನುದ್ದಕ್ಕೂ ಸಮ್ಮೇಳನವನ್ನು ಮೂರು ದಿನದ ಜಾತ್ರೆ, ಅಲ್ಲಿ ಗಂಭೀರ ಚರ್ಚೆಗಳು ನಡೆಯಲ್ಲ ಎಂಬ ಟೀಕೆಯ ಮಾತುಗಳನ್ನು ಆಡಿದ ವಾಟಾಳ್‌ ನಾಗರಾಜ್‌, ‘ಚಂಪಾ ಅವರು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ, ಅವರನ್ನು ಸನ್ಮಾನಿಸುತ್ತಿರುವ ಈ ದಿನ ಐತಿಹಾಸಿಕ ದಿನ’ ಎಂದು ಹೇಳುವುದನ್ನು ಮರೆಯಲಿಲ್ಲ.

‘ಕನ್ನಡ, ಕನ್ನಡ, ಬನ್ನಿ ನಮ್ಮ ಸಂಗಡ ಎಂಬ ಮಾತಿಗೆ ಓಗೊಟ್ಟು ನೀವೆಲ್ಲಾ ಬಂದಿರೋದು ಸಂತಸದ ವಿಚಾರ’ ಎಂದರು. ಆಗ ನಾನು ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಮಾತಿಗೆಳೆದು ‘ಸನ್ಮಾನ ಸ್ವೀಕರಿಸುತ್ತಿರುವ ವ್ಯಕ್ತಿ ಯಾರು ಅಂತ ಗೊತ್ತೇನ್ರಿ’ ಎಂದೆ.

ಆತ, ‘ನಮ್‌ ತಾಯಾಣೆಗೂ ಗೊತ್ತಿಲ್ಲ. ನಾವು ರೋಡ್‌ಸೈಡಲ್ಲಿ ಪಾನಿಪೂರಿ, ಐಸ್‌ಕ್ರೀಮ್‌, ಗೋಬಿಮಂಚೂರಿ ಮಾರಿ ಬದುಕೋರು. ಇಂಥ ಕಾರ್ಯಕ್ರಮಗಳಿದ್ದಾಗ ಬರ್ಲೇಬೇಕು ಎಂದು ವಾಟಾಳ್‌ ಬೆಂಬಲಿಗರು ಒತ್ತಾಯಿಸುತ್ತಾರೆ. ಬರದಿದ್ದರೆ ತೊಂದ್ರೆ ಆಗುತ್ತೆ ಎಂಬ ಭಯಕ್ಕೆ, ಇವ್ರು ಅರೆಂಜ್‌ ಮಾಡೊ ಪ್ರತಿಭಟನೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ’ ಎಂದ.

ಹೆಂಗಿದ್ದೆ... ಹೆಂಗಾಗವೀನಿ ನೋಡ್ರೀ..!

ವಿಜಯಪುರ: ‘ಶಾಸಕನಾಗಿ ಆಯ್ಕೆಯಾಗುವ ಮುನ್ನ, ಆಯ್ಕೆಯಾದ ಬಳಿಕ ಹೆಂಗಿದ್ದೆ. ಅಧಿಕಾರ ಅವಧಿಯ ಕೊನೆ ಕಾಲಘಟ್ಟದಲ್ಲಿ ಹೆಂಗಾಗ್ವೀನಿ ಎಂಬುದನ್ನು ನೀವೇ ನೋಡ್ರೀ...’

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಿಜಯಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಲಘು ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದ ಪರಿಯಿದು.

‘ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬುದು ಇಂಡಿ, ಸಿಂದಗಿ ತಾಲ್ಲೂಕಿನ ಕಬ್ಬು ಬೆಳೆಗಾರರ ದಶಕಗಳ ಬೇಡಿಕೆ. ಕಾರ್ಖಾನೆ ಹೆಸರಲ್ಲೇ ಇಲ್ಲಿವರೆಗೂ ಚುನಾವಣೆ ನಡೆದವು.

ನಾಲ್ಕೈದು ದಶಕ ನಡೆದ ಕಾರ್ಖಾನೆಯ ರಾಜಕಾರಣಕ್ಕೆ 50 ವರ್ಷದ ನಾನು ಇತಿಶ್ರೀ ಹಾಕಿದ್ದೇನೆ. ಕಾರ್ಖಾನೆ ಸ್ಥಾಪಿಸಲೇಬೇಕು ಎಂದು ಶಾಸಕನಾಗುತ್ತಿದ್ದಂತೆ ಬೆನ್ನತ್ತಿ, ಬಡಿದಾಡಿದ್ದರಿಂದ ನಾ ಹಿಂಗಾಗಿದ್ದೇನೆ’ ಎಂದು ತಮ್ಮ ಸಪೂರ ಮೈಕಟ್ಟನ್ನೊಮ್ಮೆ ನೋಡಿಕೊಂಡ ಯಶವಂತರಾಯಗೌಡ, ಪತ್ರಕರ್ತರತ್ತ ದೃಷ್ಟಿ ಬೀರುತ್ತಿದ್ದಂತೆ ಗೋಷ್ಠಿಯಲ್ಲಿ ನಗೆ ಬುಗ್ಗೆ ಚಿಮ್ಮಿತು.

‘ಇದೊಂದೇ ಯೋಜನೆಯಲ್ಲ. ವಿಜಯಪುರ–ಕಲಬುರ್ಗಿ ಜಿಲ್ಲೆ ನಡುವೆ ಸಂಪರ್ಕ ಕಲ್ಪಿಸುವ ಭೀಮಾ ನದಿಗೆ ಸೇತುವೆ ನಿರ್ಮಾಣ ಯೋಜನೆ ಸೇರಿದಂತೆ ಕ್ಷೇತ್ರದಲ್ಲಿನ ‘ನನ್ನ ವಯಸ್ಸಿನ’ ಎಲ್ಲ ಹಳೆಯ ಯೋಜನೆಗಳನ್ನು, ಪೂರ್ಣಗೊಳಿಸಿದ ತೃಪ್ತಿ ನನ್ನದು. ಇನ್ನೇನಿದ್ದರೂ ಹೊಸ ಯೋಜನೆಗಳ ಕಾಲ’ ಎನ್ನುತ್ತಿದ್ದಂತೆ ಮತ್ತೊಮ್ಮೆ ಗೋಷ್ಠಿ ನಗೆಗಡಲಲ್ಲಿ ತೇಲಿತು.

‘ನಾನ್ ಹೋಮ್ ಮಿನಿಸ್ಟರ್ ದಾರಿ ಬಿಡಿ’

ಬೆಂಗಳೂರು: ದೇವೇಗೌಡರ ಮಗ, ಎಚ್.ಡಿ. ರೇವಣ್ಣ ಅವರ ಪುತ್ರನ ಮದುವೆ ನಿಶ್ಚಿತಾರ್ಥ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಎಲ್ಲ ರಾಜಕಾರಣಿಗಳು ಪಕ್ಷ ಮರೆತು ಅಲ್ಲಿ ಸೇರಿದ್ದರು.

ಈಚೆಗೆ ಜೆಡಿಎಸ್ ಸೇರಿರುವ ಎಲ್.ಆರ್. ಶಿವರಾಮೇಗೌಡ ದೊಡ್ಡ ಗುಂಪು ಕಟ್ಟಿಕೊಂಡು ಸಭಾಂಗಣಕ್ಕೆ ಬಂದರು.

‘ಅಣ್ಣ ಬಂದರು ದಾರಿ ಬಿಡಿ’ ಎಂದು ಅವರ ಹಿಂಬಾಲಕರು ಹುಯಿಲೆಬ್ಬಿಸಿದರು. ಅಭಿಮಾನಿಗಳ ಕೇಕೆ ನೋಡಿದ ಕೂಡಲೇ ಗೌಡರಲ್ಲೂ ಉತ್ಸಾಹ ಇಮ್ಮಡಿಸಿತು. ಚಿತ್ರನಟ ಅಂಬರೀಷ್ ಥರ ಪೋಸು ಕೊಡುತ್ತಾ ಎಲ್ಲರನ್ನೂ ಹುರಿದುಂಬಿಸಿದರು. ಸುತ್ತಮುತ್ತ ಗೊಂದಲ ಉಂಟಾಯಿತು.

ಗನ್ ಮ್ಯಾನ್, ಸಹಾಯಕರು, ವಂದಿಮಾಗಧರನ್ನು ಜತೆಗೆ ಇಟ್ಟುಕೊಳ್ಳದೆ ಓಡಾಡುವ ಗೃಹ ಸಚಿವ ರಾಮಲಿಂಗಾರೆಡ್ಡಿ ಅದೇ ಸಮಯಕ್ಕೆ ಅಲ್ಲಿಗೆ ಬಂದರು. ಗೌಡರ ಗುಂಪಿನ ಗದ್ದಲ ಕಂಡು ಕೆಲಹೊತ್ತು ಸುಮ್ಮನೆ ನಿಂತರು. ಗೌಜು ತಣ್ಣಗಾಗದೇ ಇದ್ದಾಗ, ‘ನಾನು ಹೋಮ್ ಮಿನಿಸ್ಟ್ರು ಬಂದಿದೀನ್ರಪಾ, ದಾರಿ ಬಿಡಿ’ ಎಂದರು.

ಕೊನೆಗೆ ಶಿವರಾಮೇಗೌಡರೇ, ಕೈಹಿಡಿದು ಅವರನ್ನು ಒಳಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.