ADVERTISEMENT

ಕಾಲಕ್ಕೆ ತಕ್ಕಂತೆ ಹೊಂದ್ಕೊಬೇಕ್ರೀ!

ಡಿ.ಬಿ, ನಾಗರಾಜ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST

ವಿಜಯಪುರ: ‘ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಎಲ್ರೂ ಸಮಯಕ್ಕ ತಕ್ಕಂತೆ ಹೊಂದ್ಕೊಂಡು ಹೋಗಬೇಕ್ರೀ. ರಾಜಕಾರಣದ ಸೂತ್ರಾನೇ ಇದೇರೀ...!’

ರಾಜ್ಯ ರಾಜಕಾರಣದಲ್ಲಿ ತಮ್ಮ ಖಡಕ್‌ ನುಡಿಗಳಿಂದಲೇ ಖ್ಯಾತನಾಮರಾಗಿರುವ ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳರ ನೂತನ ವರಸೆಯಿದು.

‘2018ರಲ್ಲಿ ನಮ್ಮದೇ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ’ ಎಂದು ಇತ್ತೀಚೆಗೆ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ ಹೇಳುತ್ತಿದ್ದಂತೆ, ‘ಯಾವ ಪಕ್ಷದ ಸರ್ಕಾರ’ ಎಂದು ಪತ್ರಕರ್ತರು ಪ್ರಶ್ನಿಸಿದರು.

ADVERTISEMENT

‘ಅಧಿಕಾರಕ್ಕೆ ಬರೋದೇ ನಮ್ಮ ಸರ್ಕಾರ’ ಎಂಬುದು ಗೌಡರ ಪ್ರತ್ಯುತ್ತರ.

‘ಬಿಜೆಪಿ ಅಥವಾ ಜೆಡಿಎಸ್‌ ನೇತೃತ್ವದ ಸರ್ಕಾರವೋ, ಇಲ್ಲ ದೋಸ್ತಿ ಸರ್ಕಾರ ರಚನೆಯಾಗುತ್ತಾ’ ಎಂಬ ಪತ್ರಕರ್ತರ ಮರು ಪ್ರಶ್ನೆಗೆ, ‘ನಾನಂತೂ ಸದ್ಯ ಪಕ್ಷೇತರನಿದ್ದೇನೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ಯತ್ನಾಳ ಭವಿಷ್ಯ ನುಡಿದರು.

ಆಗ ಪತ್ರಕರ್ತರೊಬ್ಬರು ‘ಇದಕ್ಕೇನಾ ಈಚೆಗೆ ಬಿಜೆಪಿ ಮಂದಿಗೆ ಬೈಯೋದ್‌ ಕಡಿಮೆ ಮಾಡಿದ್ದು ನೀವು’ ಎಂದು ಕಾಲೆಳೆಯುತ್ತಿದ್ದಂತೆ, ‘ಯಾರ ಹೆಸರನ್ನೂ ಹಿಡಿದು ಟೀಕಿಸಬೇಡಿ ಎಂದು ನನ್ನ ಅಭಿಮಾನಿಗಳು ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿರುವೆ’ ಎಂದು ಯತ್ನಾಳ ಮಗುಮ್ಮಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.