ADVERTISEMENT

ಘಟನೆ, ಆತ್ಮಸಾಕ್ಷಿಗೆ ಸವಾಲೊಡ್ಡಿದಾಗ...

ಸಿ.ಎಚ್.ಹನುಮಂತರಾಯ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಸಿ.ಎಚ್‌.ಹನುಮಂತರಾಯ
ಸಿ.ಎಚ್‌.ಹನುಮಂತರಾಯ   

ವಕೀಲಿ ವೃತ್ತಿಗೆ ನೈತಿಕ ನೆಲೆಗಟ್ಟು ಬೇಕೇ? ಸಮಾಜ ಕಟ್ಟಿಕೊಡುವ ನೈತಿಕ ನೆಲೆಗಟ್ಟು ಕಾನೂನು ಒಪ್ಪುವ ನೈತಿಕ ನೆಲೆಗಟ್ಟಾಗುವುದೇ? ಸಮಾಜದ ನೈತಿಕ ಅಧಃಪತನಕ್ಕೆ ವಕೀಲರ ಕೊಡುಗೆ ಇದೆಯೇ? ಆರೋಪಿಯನ್ನು ಬಚಾವು ಮಾಡಲು ತಮ್ಮ ಬುದ್ಧಿಮತ್ತೆಯನ್ನೆಲ್ಲಾ ಪಂಥಕ್ಕೆ ಹೂಡುವ ಪ್ರವೃತ್ತಿ ಎಷ್ಟರ ಮಟ್ಟಿಗೆ ನೈತಿಕವಾದುದು? ಆತ್ಮಸಾಕ್ಷಿಗೆ ಸವಾಲೊಡ್ಡುವ ಮೊಕದ್ದಮೆಯಿಂದ ಹಿಂದೆ ಸರಿಯುವುದು ಸರಿಯೇ?  ಇವು ಆರೋಪಿ ಪರ ವಕೀಲರನ್ನು ನಿಕಷಕ್ಕೆ ಒಡ್ಡಿರುವ ಜ್ವಲಂತ ಪ್ರಶ್ನೆಗಳು.

ಇವನ್ನೆಲ್ಲಾ ಇಡಿಯಾಗಿ ಉತ್ತರಿಸುವುದು ಅಸಾಧ್ಯ. ಈ ಅಂಕಣದಲ್ಲಿ ಹಿಂದೆ ನಾನು ಬರೆದಿರುವ ಕತೆಗಳಲ್ಲಿನ ವಿಚಾರಣೆ, ವಾದ, ಪ್ರತಿವಾದ, ಸಾಕ್ಷಿ ಮುಂತಾದ ಪ್ರಕ್ರಿಯೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆದರೆ ಈ ಬಾರಿ ಹೇಳಹೊರಟಿರುವ ಈ ಪ್ರಕರಣ ಇದ್ಯಾವುದನ್ನೂ ಒಳಗೊಂಡಿಲ್ಲದಿದ್ದರೂ ಮೇಲಿನ ಪ್ರಶ್ನೆಗಳ ಹಿನ್ನೆಲೆಯಲ್ಲಿ ಒಂದು ರೀತಿಯ ದ್ವಂದ್ವ ತಂದೊಡ್ಡಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸುತ್ತಿದೆ.

1980ರ ದಶಕದಲ್ಲಿ ರಾಮಯ್ಯನವರು ದೇವನಹಳ್ಳಿಯ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ರೂಪೇನ ಅಗ್ರಹಾರದ ಗೋಪಾಲರೆಡ್ಡಿಯವರ ಆತ್ಮೀಯರಾಗಿದ್ದರು. ಈ ಇಬ್ಬರು ಸಕ್ರಿಯ ರಾಜಕಾರಣದಲ್ಲಿ ಇದ್ದವರು. ಅನೇಕ ಕೊಲೆ ಮೊಕದ್ದಮೆಗಳಲ್ಲಿ ನಾನು ಆರೋಪಿಗಳ ಪರ ವಕೀಲನಾಗಲು ಅವರು ಕಾರಣರಾಗಿದ್ದರು.

ಈ ಸಲುಗೆ ಮತ್ತು ವಿಶ್ವಾಸದ ಹಿನ್ನೆಲೆಯಲ್ಲಿ ಒಂದು ದಿನ ಅವರಿಬ್ಬರು ಹಲವರ ಜೊತೆ ನನ್ನ ಕಚೇರಿಗೆ ದೌಡಾಯಿಸಿ ಬಂದರು. ತಮ್ಮ ರಕ್ತಸಂಬಂಧಿಗಳಾದ ಬಾಣರೆಡ್ಡಿ, ದಂಡಪ್ಪರೆಡ್ಡಿ ಮತ್ತು ಬುಕ್ಕೇಗೌಡ ಎಂಬುವವರು ಪ್ರಕರಣವೊಂದರಲ್ಲಿ ಆ ದಿನವೇ ಬಂಧಿತರಾಗಿರುವ  ವಿಷಯವನ್ನು ಒಂದೇ ಉಸಿರಿನಲ್ಲಿ ಹೇಳಿದರು. 

ಈ ಮೂವರೂ ಪಾಲುದಾರಿಕೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಹೆಜ್ಜೇನುಗುಡ್ಡದಲ್ಲಿ ಬಂಡೆ ಒಡೆದು ಜಲ್ಲಿ ತಯಾರು ಮಾಡಲು ಸರ್ಕಾರದಿಂದ ಪರವಾನಗಿ ಪಡೆದುಕೊಂಡ ಮಾಲೀಕರಾಗಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು, ಸಾಕಷ್ಟು ಹಣವನ್ನು ನನ್ನ ಮೇಜಿನ ಮೇಲಿರಿಸಿ ಈ ಮಾಲೀಕರ ಪರ ವಕಾಲತ್ತು ವಹಿಸಲು ತಿಳಿಸಿ ಹೋದರು. ಅವರು ಹೋದ ಮೇಲೆ ದಾಖಲೆಗಳ ಮೇಲೆ ಕಣ್ಣಾಡಿಸಿದೆ. ನನ್ನ ಅಂತಃಸಾಕ್ಷಿಗೊಂದು ಸವಾಲು ಎನಿಸುವಂಥ ವಿಷಯಗಳು ಅದರಲ್ಲಿದ್ದವು.

ತಗಡಪ್ಪ ಎಂಬ ದಲ್ಲಾಳಿಯ ಮೂಲಕ ಈ ಮೂವರು ಮಾಲೀಕರು ಹತ್ತು ಸಂಸಾರಗಳನ್ನು ಜಲ್ಲಿಕಲ್ಲು ಒಡೆಯಲು ನಿಯೋಜಿಸಿಕೊಂಡಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಪೊಲೀಸರು ಅಲ್ಲಿಗೆ ಬಂದು ಕೆಲ ಕಾರ್ಮಿಕರನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಪೊಲೀಸರು ಯಾಕೆ ಹೀಗೆ ವಿಚಾರಣೆ ಮಾಡುತ್ತಿದ್ದಾರೆ ಎಂದು ಇವರು ಕೇಳಿದಾಗ ಅವರಿಗೆ ಗೊತ್ತಾದ ವಿಚಾರ ಇಷ್ಟು: ಕಾರ್ಮಿಕರು ಈ ಹಿಂದೆ ಬೇರೊಂದು ಕಡೆ ಜಲ್ಲಿ ತಯಾರಿಸುವ ಕೆಲಸವನ್ನು ಒಪ್ಪಿಕೊಂಡು ಆ ಮಾಲೀಕನಿಂದ ತಲಾ 50 ಸಾವಿರ ರೂಪಾಯಿಯಂತೆ ಮುಂಗಡ ಹಣವನ್ನು ಪಡೆದಿದ್ದರು.

ಅದನ್ನು ತೀರಿಸದೇ ತಗಡಪ್ಪನ ಸಂಪರ್ಕಕ್ಕೆ ಬಂದು ರಾತ್ರೋರಾತ್ರಿ ಹೆಜ್ಜೇನುಗುಡ್ಡಕ್ಕೆ ಎತ್ತಂಗಡಿಯಾಗಿಬಿಟ್ಟಿದ್ದರು. ಇದರಿಂದಾಗಿ  ಹಳೆಯ ಮಾಲೀಕ, ಹೆಜ್ಜೇನುಗುಡ್ಡದ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದ.

ಇದರ ಬಗ್ಗೆ ಅರಿವೇ ಇಲ್ಲದಿದ್ದ ಈ ಮಾಲೀಕರು ಪೀಕಲಾಟಕ್ಕೆ ಸಿಕ್ಕಿಕೊಂಡರು. ಕಾರ್ಮಿಕರಿಗೆ ಈಗಾಗಲೇ ಲಕ್ಷಾಂತರ ರೂಪಾಯಿ ಕೊಟ್ಟಿದ್ದ ಕಾರಣ ಅವರನ್ನು ವಾಪಸ್‌ ಕಳಿಸುವಂತಿರಲಿಲ್ಲ. ಜೊತೆಗೆ ಕಾರ್ಮಿಕರ ಕೊರತೆ ಬೇರೆ. ಆದ್ದರಿಂದ ಹಳೆಯ ಮಾಲೀಕನಿಗೆ ಆದ ನಷ್ಟವನ್ನು ತುಂಬಿಸಿಕೊಟ್ಟು ಅಂತೂ ಈ ಕಾರ್ಮಿಕರನ್ನು ತಮ್ಮಲ್ಲಿಯೇ ಉಳಿಸಿಕೊಂಡರು.

ದಿನಗಳೆದಂತೆ ಈ ಮಾಲೀಕರಿಗೆ ಈ ಕಾರ್ಮಿಕರ ಪೈಕಿ ಪುರುಷರು ದೊಡ್ಡ ತಲೆನೋವಾಗಿ ಕಾಡತೊಡಗಿದರು. ಕಾರಣ ಏನೆಂದರೆ ಇವರೆಲ್ಲಾ ಗುಡ್ಡದ ಆಚೆ ಹೋಗಿ ಊರು ಕೇರಿಗಳಲ್ಲೆಲ್ಲ ಅಡ್ಡಾಡುತ್ತಾ, ಕುಡಿದು ತೂರಾಡುತ್ತ ಗಲಾಟೆ ಮಾಡುತ್ತಿದ್ದರು. ಇವರ ಉಪಟಳ ಹೆಚ್ಚಾಗಿದ್ದರಿಂದ ಊರವರು ಮಾಲೀಕರಿಗೆ ದೂರು ಹೇಳತೊಡಗಿದರು. ಈ ವಿಷಯವನ್ನು ಮಾಲೀಕರು ತಗಡಪ್ಪನಲ್ಲಿ ಹೇಳಿದಾಗ ಅವನು ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ.

ತಗಡಪ್ಪನ ಈ ವರ್ತನೆ ಕಂಡ ಮಾಲೀಕರು ಅವನನ್ನೇ ಅನುಮಾನಿಸಲು ಶುರುಮಾಡಿದರು. ಮಾಲೀಕರು ತನ್ನನ್ನು ಅನುಮಾನಿಸುತ್ತಿದ್ದಾರೆ ಎಂಬ ಸುಳಿವು ತಗಡಪ್ಪನಿಗೆ ಸಿಕ್ಕ ತಕ್ಷಣ ಕಾರ್ಮಿಕರನ್ನು ತಹಬದಿಗೆ ತರಲು ಉಪಾಯವೊಂದನ್ನು ಸೂಚಿಸಿದ.

ಅದೊಂದು ಕಾನೂನುಬಾಹಿರ ಮತ್ತು ಭಯಾನಕ ಸೂತ್ರ. ಅದೇನೆಂದರೆ ಕಾರ್ಮಿಕರ ಕಾಲುಗಳಿಗೆ ಕಬ್ಬಿಣದ ಕೋಳ ಹಾಕುವುದು! ‘ಎಲ್ಲ ಗಂಡಾಳುಗಳ ಕಾಲಿಗೆ ಭಾರವಾಗಿರುವ ಕಬ್ಬಿಣದ ಕೋಳ ತೊಡಿಸೋಣ. ಅವರು ರಾತ್ರೋರಾತ್ರಿ ಓಡಿ ಹೋಗಲು ಆಗುವುದಿಲ್ಲ. ಇದರಿಂದ ಗ್ರಾಮಸ್ಥರಿಗೂ ಉಪಟಳ ತಪ್ಪುತ್ತದೆ’ ಎಂದ. ಈ ಕಾರ್ಮಿಕರ ವಿರುದ್ಧ ದೂರು ಕೇಳಿ ಕೇಳಿ ಬೇಸತ್ತಿದ್ದ ಮಾಲೀಕರಿಗೆ ತಗಡಪ್ಪನ ಸೂತ್ರ ದೇವರೇ ನೀಡಿದ ವರದಂತಿತ್ತು. ಕೂಡಲೇ ಒಪ್ಪಿದರು.

ಮಾರನೆಯ ದಿನವೇ ಪಕ್ಕದ ಹಳ್ಳಿಯ ಕಮ್ಮಾರನಿಂದ ಪ್ರತಿಯೊಬ್ಬರ ಬಲಗಾಲಿಗೆ ಎರಡು ಕೆ.ಜಿ. ತೂಕದಷ್ಟು ಕಬ್ಬಿಣದ ಕೋಳ ತೊಡಿಸಿ ಕರೆತಂದರು. ಇದರ ಪರಿಣಾಮವಾಗಿ ರಾತ್ರಿಯ ದುಂಡಾವರ್ತನೆ ನಿಂತಿತು. ಹಗಲು ರಾತ್ರಿ ಯಾವಾಗ ಬೇಕಾದರೂ ಮಾಲೀಕರ ಧ್ವನಿಗೆ ಓಗೊಡುತ್ತಿದ್ದರು. ಇನ್ನು ತಮ್ಮ ದುಡ್ಡಿಗೆ ಸಂಚಕಾರ ಇಲ್ಲ ಎಂದು ಕಣ್ಣ ತುಂಬ ನಿದ್ದೆ ಮಾಡತೊಡಗಿದರು ಮಾಲೀಕರು.

ಆದರೆ ಈ ನೆಮ್ಮದಿ ಹೆಚ್ಚು ದಿನ ಉಳಿಯಲಿಲ್ಲ. ಕಾಲಿಗೆ ಕೋಳ ತೊಡಿಸಿದ್ದು ಅಲ್ಲಿ ಕುರಿ ಕಾಯಲು ಬರುತ್ತಿದ್ದ ಹುಡುಗರ ಕಣ್ಣಿಗೆ ಬಿದ್ದು ಪಕ್ಕದ ಊರಿನ ಪ್ರಮುಖರ ಕಿವಿಗೂ ಬಿತ್ತು. ಈ ಹುಡುಗರು ಕೊಟ್ಟ ಮಾಹಿತಿಯನ್ನು ಖಚಿತಪಡಿಸಿಕೊಂಡ ಊರ ಪ್ರಮುಖರು ಮಾಲೀಕರ ಬಳಿ ಬಂದರು. ತಮ್ಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ಹಣ ಕೊಡಬೇಕು, ಇಲ್ಲವಾದರೆ ಪೊಲೀಸರಿಗೆ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದರು. ಮಾಲೀಕರು ಅವರಿಗೆ ಒಂದಷ್ಟು ದುಡ್ಡು ಕೊಟ್ಟು ಕೈತೊಳೆದುಕೊಂಡರು.

ಆದರೆ ಪ್ರಯೋಜನವಾಗಲಿಲ್ಲ. ಆ ಪ್ರಮುಖರೆಲ್ಲಾ ಇವರು ಕೊಟ್ಟ ದುಡ್ಡನ್ನು ತಿಂದು ತೇಗಿದರು. ಈ ಬಗ್ಗೆ ಗ್ರಾಮದ ಸಾಮಾಜಿಕ ಕಾರ್ಯಕರ್ತರಿಗೆ ಸಂದೇಹ ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು. ಈ ಕಾರ್ಯಕರ್ತರು ಒಂದು ದಿನ ಗುಡ್ಡಕ್ಕೆ ದಾಳಿ ಇಟ್ಟರು. ಮೂವರು ಮಾಲೀಕರನ್ನು ‘ಜೀತ ಕಾರ್ಮಿಕ ಪದ್ಧತಿ ನಿರ್ಮೂಲನ ಕಾಯ್ದೆ’ ಅಡಿ ಬಂಧಿಸಲಾಯಿತು. ತಗಡಪ್ಪ ಮಾತ್ರ ಪೊಲೀಸರಿಗೆ ಸಿಗದೆ ನಾಪತ್ತೆಯಾದ.

***
ಇಷ್ಟು ವಿಷಯ ತಿಳಿದುಕೊಂಡ ನಾನು ಆರೋಪಿಗಳ ಪರ ವಕಾಲತ್ತು ವಹಿಸಿದೆ. ಒಂದು ದಿನ ಕೋರ್ಟ್‌ನಿಂದ ಹೊರಗೆ ಬಂದಾಗ ಹಿರಿಯರೊಬ್ಬರು ನನ್ನ ಕೈಯಲ್ಲಿ ಒಂದು ಚೀಟಿಯನ್ನಿರಿಸಿ ‘ಸಾವಧಾನವಾಗಿ ಗಮನಿಸಿಕೊಳ್ಳಿ’ ಎಂದು ಹೇಳಿ ಹೊರಟರು. ಆ ಚೀಟಿಯನ್ನು ಬಿಡಿಸಿ ನೋಡಿದೆ. ‘ಸ್ಥಳಕ್ಕೆ ಭೇಟಿ ಕೊಟ್ಟರೆ ಸತ್ಯಾಂಶ ಮನದಟ್ಟಾಗುತ್ತದೆ’ ಎಂದು ಮಾತ್ರ ಅದರಲ್ಲಿ ಬರೆದಿತ್ತು.

ಮಾರನೆಯ ದಿನ ಇಬ್ಬರು ಸಹೋದ್ಯೋಗಿ ವಕೀಲರುಗಳನ್ನು ಕರೆದುಕೊಂಡು ಹೆಜ್ಜೇನುಗುಡ್ಡಕ್ಕೆ ಹೊರಟೇಬಿಟ್ಟೆ. ಅಲ್ಲಿ ಕಾರ್ಮಿಕರಿಗಾಗಿ ತಾತ್ಕಾಲಿಕ ವಸತಿ ಪ್ರದೇಶವೊಂದು ನಿರ್ಮಾಣವಾಗಿತ್ತು. ಗಂಡಾಳುಗಳು ಬಂಡೆಯ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತಿದ್ದರು. ಅವರ ಕಾಲುಗಳನ್ನು ಗಮನಿಸಿದೆ, ಕಾಲುಕೋಳ ಇರಲಿಲ್ಲ.

ನಾನು ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ ಅವರ ಹೆಂಡಂದಿರು ನನ್ನನ್ನು ಸುತ್ತುವರಿದು ಮಾತನಾಡಿಸಲು ಬಂದರು. ನಾನು ತಬ್ಬಿಬ್ಬಾದೆ. ಏಕೆಂದರೆ, ಈ ಎಲ್ಲಾ ಕಾರ್ಮಿಕರು ಪ್ರಕರಣದಲ್ಲಿ ಪೊಲೀಸ್ ಸಾಕ್ಷಿದಾರರು. ಆರೋಪಿಗಳಾದ ಮಾಲೀಕರ ಪರ ವಕೀಲನಾಗಿದ್ದ ನಾನು ಕಾನೂನಿನ ಪ್ರಕಾರ ಸಾಕ್ಷಿದಾರರೊಂದಿಗೆ ಮಾತುಕತೆ ಮಾಡುವಂತಿರಲಿಲ್ಲ.

ನನ್ನೊಳಗೆ ತಳಮಳ ನಡೆಯುತ್ತಿರುವಾಗಲೇ ನನ್ನನ್ನು ಸುತ್ತುವರೆದ ಮಹಿಳೆಯರು, ಮಾಲೀಕರನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಿಕೊಂಡು ಬರುವಂತೆ ದುಂಬಾಲು ಬಿದ್ದರು. ಗಂಡಂದಿರ ಕಾಲಿಗೆ ಕೋಳ ಹಾಕಿದ ಮಾಲೀಕರ ಪರವಾಗಿಯೇ ಹೆಂಡತಿಯರು ಮಾತನಾಡುತ್ತಿರುವುದು ಕೇಳಿ ನನಗೆ ಅಚ್ಚರಿಯಾಯಿತು.

‘ಸ್ವಾಮಿ, (ಬಂಡೆ ಮೇಲೆ ಕೂತಿದ್ದ ಗಂಡಸರನ್ನು ತೋರಿಸುತ್ತಾ) ಪ್ರತಿ ಸಂಜೆ ಅವರೆಲ್ಲಾ ಮೂರು ಕಿಲೊ ಮೀಟರ್ ದೂರದಲ್ಲಿರುವ ಹೆಂಡದ ಅಂಗಡಿಗೆ ಹೋಗಿ ಕಂಠಪೂರ್ತಿ ಕುಡಿದು ಮಧ್ಯರಾತ್ರಿಗೆ ವಾಪಸಾಗುತ್ತಿದ್ದರು. ಅವ್ರು ಬರೋ ತನಕ ನಾವು ಕಾಯ್‌ಬೇಕು. ಬಂದಾಗ ಅಡುಗೆ ಬೇಯಿಸ್‌ಬೇಕು. ಕುಡಿದ ಅಮಲ್‌ನಾಗೆ ಕೈಗೆ ಸಿಕ್ಕಿದ್ರಲ್ಲಿ ಬಡೀತಿದ್ರು. ನಮ್ ಕೂಗಾಟ, ಚೀರಾಟ ಕೇಳಿ ಮಕ್ಳು ಕಿರುಚಿಕೊಂಡು ಎದ್ದುಬಿಡ್ತಿದ್ವು.

ADVERTISEMENT

ದಿನಾ ರಾತ್ರಿ, ಅವು ನಿದ್ದೆಗೆ ಬೀಳೋ ತನಕ ಈ ಜಾಗ ನರಕ ಆಗೋಗ್ತಿತ್ತು ಸ್ವಾಮಿ. ಮಾರನೆ ದಿನ ಇವರ ಜೊತೆನೇ ಕೆಲ್ಸ ಮಾಡ್ಬೇಕಾಗಿತ್ತು. ಬರೀ ಇಷ್ಟೇ ಅಲ್ಲ ಸ್ವಾಮೀ... ಹೆಂಡದ ಅಂಗಡಿಯಿಂದ ವಾಪಸಾಗುವಾಗ ಆಚೀಚೆ ಕೊಂಪೆಯಿಂದ ಕೋಳಿಗಳನ್ನು ಕವಚಾಕ್ಕೊಂಡು ಬಂದ್ಬಿಡೋರು. ಅದೆಷ್ಟೋ ಸಾರಿ ಆ ಕೊಂಪೆಯವರು ಕೋಳಿ ಹುಡುಕ್ಕೊಂಡು ಹೊತ್ತುಟ್ಟುವ ಮುಂಚೆಯೇ ಇಲ್ಲಿಗೆ ಬಂದು ನಮ್ಮ ಮನೆಗಳನ್ನೆಲ್ಲಾ ತಡಕಾಡೋರು. ಇದರಿಂದ ಹೇಗಾದ್ರೂ ತಪ್ಪಿಸಿಕೋಬೇಕು ಅಂತ ನಾವೇ ತಗಡಪ್ಪನವರಿಗೆ ದುಂಬಾಲು ಬಿದ್ದಿದ್ದೆವು.

ಇವ್ರೆಲ್ಲಾ ರಾತ್ರಿ ಹೊತ್ತು ಎಲ್ಲೂ ಹೋಗದಂಗೆ ಉಪಾಯ ಮಾಡಿ ಅಂತ ಕೋರಿಕೊಂಡಿದ್ದೆವು. ಅದರ ಸಲುವಾಗಿಯೇ ಎಲ್ಲರ ಕಾಲಿಗೆ ಕೋಳ ಹಾಕಿಸಿದ್ದು. ಅವತ್ತಿಂದ ನಾವೆಲ್ಲಾ ನೆಮ್ಮದಿಯಾಗಿದ್ದೀವಿ. ಕಣ್ತುಂಬ ನಿದ್ದೆ ಮಾಡ್ತಿದ್ದೀವಿ. ಕೂಲಿ ಹಣವಷ್ಟೂ ಉಳಿತಾಯ ಮಾಡ್ತಿದ್ವಿ. ಕೊನೆಗೂ ಈಶ್ವರಾ, ಕಣ್ಣುಬಿಟ್ಯಲ್ಲಪ್ಪ ಅಂಥ ಸುಖ ಅನುಭವಿಸೋ ಕಾಲಕ್ಕೆ ಹೀಗಾಗೋಯ್ತು ಸ್ವಾಮಿ.

ನಮ್ಮ ಮಾಲೀಕರನ್ನು ಕಾಪಾಡಿ...’ ಎನ್ನುತ್ತಾ ನನ್ನ ಕಾಲಿಗೆ ಬಿದ್ದರು. ನನ್ನ ಬೇರಾವುದೇ ಮಾತುಗಳನ್ನು ಅವರು ಕೇಳುವುದಕ್ಕೆ ಸಿದ್ಧರಿರಲಿಲ್ಲ. ಮೌಢ್ಯವನ್ನೇ ಜಪವೆಂದು ಭಾವಿಸುವ ಭಕ್ತರಂತೆ ಅವರು ವರ್ತಿಸುತ್ತಿರುವಂತೆ ನನಗೆ ಕಂಡಿತು. ವಿಚಾರಕ್ಕೆಡೆಗೊಡದ ನಂಬಿಕೆ ಅವರನ್ನಾಳುತ್ತಿತ್ತು.

ಅಷ್ಟೊತ್ತಿಗೆ ನಾನು ದಿಕ್ಕು ತೋಚದಂತಾಗಿಬಿಟ್ಟಿದ್ದೆ. ಸಾವರಿಸಿಕೊಂಡು, ಕೂಡಲೇ ಹಿಂತಿರುಗುವುದು ಸರಿ ಎಂದು ಭಾವಿಸಿ ಹಿಂದೆ ತಿರುಗಿಯೂ ನೋಡದೆ ಹೊರಟುಬಿಟ್ಟೆ. ನಾನು ವಾಪಸಾಗುತ್ತಿದ್ದಾಗಲೂ ಅಲ್ಲಿದ್ದ ಮಹಿಳೆಯರು ನನ್ನ ಬೆನ್ನ ಹಿಂದೆ ಕೈ ಮುಗಿದುಕೊಂಡೇ ನಿಂತಿದ್ದರಂತೆ! ಸಹ ವಕೀಲರು ಹೇಳಿದರು.
ಕಚೇರಿಗೆ ವಾಪಸಾದಾಗ ಸಂಪೂರ್ಣ ಗೊಂದಲದ ಗೂಡಾಗಿತ್ತು ಮನಸ್ಸು.

ಒಂದೆಡೆ ಮಹಿಳೆಯರ ಮಾತು, ಇನ್ನೊಂದೆಡೆ ಆರೋಪಿಗಳು ದುರ್ಬಲ ವರ್ಗದ ಕಾರ್ಮಿಕರ ಆರ್ಥಿಕ ಮತ್ತು ದೈಹಿಕ ಶೋಷಣೆಯಲ್ಲಿ ತೊಡಗಿರುವುದು... ಎರಡೂ ನನ್ನ ಕಣ್ಣ ಮುಂದೆ ಬಂದವು. ಆದರೆ ಆ ಮಹಿಳೆಯರ ಮಾತಿಗಿಂತ ಕಾಲುಕೋಳ ತೊಡಿಸಿರುವುದೇ ಘೋರ ದುಷ್ಕೃತ್ಯದಂತೆ ನನಗೆ ಭಾಸವಾಯಿತು.

ನನಗೆ ವೃತ್ತಿ ಬಗ್ಗೆ ಬುದ್ಧಿಗಿಂತ ಭ್ರಮೆಯೇ ಹೆಚ್ಚು ಇದ್ದ ಕಾಲವದು. ಆರೋಪಿಗಳ ಪರ ವಾದಿಸಿದರೆ ‘ಜೀತಗಾರಿಕೆ ತಪ್ಪಲ್ಲ’ ಎಂದು ಹೇಳಿದಂತಾಗುತ್ತದೆ. ಇದು ಅಕ್ಷಮ್ಯ ಎಂದು ಎನಿಸಿ ಗೊಂದಲಕ್ಕೆ ಸಿಕ್ಕಿಹಾಕಿಕೊಂಡೆ. ಈ ಗೊಂದಲ ನನ್ನೊಳಗೆ ದೊಡ್ಡದಾಗಿ ಬೆಳೆದು ಇದರಿಂದ ಹೊರಬರುವ ಬಗೆಯನ್ನು ಮನಸ್ಸು ತರ್ಕಿಸುತ್ತಿತ್ತು.

ಕೊನೆಗೂ ಹೊರಬರುವ ದಾರಿ ಕಂಡುಕೊಂಡೆ. ನನಗೆ ಬಲವಾದ ಕಾರಣ ಒದಗಿಬಂತು. ಮನಸ್ಸು ನಿರಾಳ ಎನಿಸಿತು.  ನನಗೆ ಸಿಕ್ಕ ದಾರಿ ಎಂದರೆ ಪೊಲೀಸ್ ಸಾಕ್ಷಿದಾರರಾಗಿದ್ದ ಕಾರ್ಮಿಕ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ್ದು. ಮೊದಲೇ ಹೇಳಿದ ಹಾಗೆ ಆರೋಪಿಗಳ ಪರ ವಕೀಲನಾಗಿ ನಾನು ಹೀಗೆ ಮಾಡುವಂತೆ ಇರಲಿಲ್ಲ.  ಇಷ್ಟು ಕಾರಣ ಸಾಕಾಗಿತ್ತು ನನ್ನ ಅಂತಃಸಾಕ್ಷಿಯನ್ನು ತಣಿಸಲು.

ಇದೇ ಕಾರಣ ಕೊಟ್ಟು ಆರೋಪಿಗಳ ಪರವಾಗಿದ್ದ ವಕಾಲತ್ತು ಹಿಂಪಡೆದೆ. ನಗರಸಭೆ ಅಧ್ಯಕ್ಷ ರಾಮಯ್ಯನವರು ಕೊಟ್ಟ ಹಣ ಹಿಂತಿರುಗಿಸುವ ಏರ್ಪಾಟು ಮಾಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದೆ.

ಈ ಸಂದರ್ಭದಲ್ಲಿ ನನಗೆ ನೆನಪಾದ ವಾಕ್ಯ ಎಂದರೆ, ರಾಮಯ್ಯನವರು ನನಗೆ ಪ್ರಕರಣ ವಹಿಸಲು ಬಂದಾಗ ಅವರು ‘ಮಾಲೀಕರೇನೂ ಅಪರಾಧ ಮಾಡಿಲ್ಲ, ಅದು ಘಟಿಸಿದೆ ಅಷ್ಟೇ...’ ಎಂದಿದ್ದು. ಇದು ನೆನಪಿಗೆ ಬಂದು ಒಳಗೊಳಗೇ ನಕ್ಕೆ...
ಲೇಖಕ ಹೈಕೋರ್ಟ್‌ ವಕೀಲ (ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.