ADVERTISEMENT

ನನ್ನ ಹಣೆಬರಹ ಗೌಡರ ಕೈಯಲ್ಲಿ ಇಲ್ಲ

ವಾರದ ಸಂದರ್ಶನ : ಜಮೀರ್‌ ಅಹಮದ್‌ ಖಾನ್‌ ಜೆಡಿಎಸ್‌ ಶಾಸಕ

ಬಿ.ಎನ್.ಶ್ರೀಧರ
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಚಿತ್ರಗಳು: ಎಂ.ಎಸ್.ಮಂಜುನಾಥ್
ಚಿತ್ರಗಳು: ಎಂ.ಎಸ್.ಮಂಜುನಾಥ್   

ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮಾತ್ರವಲ್ಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ವಿರುದ್ಧವೂ ಈಗ ಸೆಟೆದು ನಿಂತಿದ್ದಾರೆ.

ವರಿಷ್ಠರಿಂದ ಅವರಿಗೆ ಮೀರ್‌ ಸಾದಿಕ್‌ ‘ಪಟ್ಟ’ ಕೂಡ ಸಿಕ್ಕಿದೆ. ಇದರಿಂದ ಬೇಸತ್ತಿರುವ ಅವರು ‘ನಾನು ಡೋಂಟ್‌ ಕೇರ್‌ ಮಾಸ್ಟರ್‌. ಇವತ್ತೇ ರಾಜಕಾರಣಕ್ಕೂ ಗುಡ್‌ ಬೈ ಹೇಳುವ ವ್ಯಕ್ತಿತ್ವ ನನ್ನದು. ಅಲ್ಲಾ ಬಿಟ್ಟರೆ ದೇವೇಗೌಡರಿಗಾಗಲಿ, ಕುಮಾರಸ್ವಾಮಿ ಅವರಿಗಾಗಲಿ ನನ್ನ ಹಣೆಬರಹ ಬರೆಯಲು ಆಗಲ್ಲ’ ಎಂದೂ ಗುಡುಗಿದ್ದಾರೆ. ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಪೂರ್ಣ ಪಾಠ ಈ ರೀತಿ ಇದೆ:

* ಪಕ್ಷದಲ್ಲಿ  ಪದೇ ಪದೇ ಗೊಂದಲ ಏಕೆ?
ಗೊಂದಲ ನನ್ನಿಂದ ಅಂತೂ ಆಗಿಲ್ಲ. ಪಕ್ಷದ ನಾಯಕರೇ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪರಿಷತ್‌ ಚುನಾವಣೆ, ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ನಂತರ ಹೆಬ್ಬಾಳ ಟಿಕೆಟ್‌ ವಿಚಾರದಲ್ಲೂ ಗೊಂದಲ ಆಯಿತು. ಅದರ ನಂತರ ನಾನು ಪ್ರಚಾರಕ್ಕೆ ಹೋಗಲಿಲ್ಲ. ಅದು ವರಿಷ್ಠರಿಗೆ ಇಷ್ಟ ಆಗಲಿಲ್ಲ.

* ಪಕ್ಷದ ಶಾಸಕರಾದ ನೀವು ಪ್ರಚಾರಕ್ಕೆ ಏಕೆ ಹೋಗಲಿಲ್ಲ?
ಹೆಬ್ಬಾಳಕ್ಕೆ ಹೋಗಿ ನಾನು ಜೆಡಿಎಸ್‌ ಪರ ಪ್ರಚಾರ ಮಾಡಿದರೆ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಕಾರಣಕ್ಕೇ ನಾನು ಅತ್ತ ತಲೆಹಾಕಲಿಲ್ಲ.

* ನೀವು ಏಕೆ ಆ ರೀತಿ ಭಾವಿಸುತ್ತೀರಿ?
2013ರ ಚುನಾವಣೆಯಲ್ಲಿ ಆಗಿದ್ದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ನಾನು ಹೇಳುತ್ತಿರುವುದು ಸತ್ಯ. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರಿಂದಲೇ ಬಿಜೆಪಿ ಗೆದ್ದಿದ್ದು. ಈಗಲೂ ಆ ರೀತಿ ಆಗುವುದು ಬೇಡ ಎನ್ನುವ ಕಾರಣಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ.

* ನೀವು ಹೋಗಿ ನಿಮ್ಮ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಬಹುದಿತ್ತಲ್ಲವೇ?
ಅದು ಸಾಧ್ಯ ಇಲ್ಲದ ಮಾತು. ಜಾಫರ್‌ ಷರೀಫ್‌ ಅವರಿಗೆ ಸಂಧ್ಯಾ ಕಾಲದಲ್ಲಿ ತಮ್ಮ ಮೊಮ್ಮಗನನ್ನು ವಿಧಾನಸಭೆಗೆ ಕಳುಹಿಸಬೇಕು ಎನ್ನುವ ಆಸೆ ಬಂದಿದೆ. ಅದಕ್ಕೆ ತೊಡಕಾಗುವುದು ಬೇಡ ಎಂದು ಸಮಾಜದವರು ಹೇಳಿದರು. ಹೀಗಾಗಿ ಪ್ರಚಾರದಿಂದ ದೂರ ಉಳಿದೆ.

* ಈ ರೀತಿಯ ನಿಲುವು ನಿಮ್ಮ ಪಕ್ಷದ ಬೆಳವಣಿಗೆಗೆ ಅಡ್ಡಿ ಆಗುವುದಿಲ್ಲವೇ?
ನೋಡಿ, ನನಗೆ ಮೊದಲು ನನ್ನ ಸಮಾಜ (ಮುಸ್ಲಿಂ). ಆ ನಂತರವೇ ಪಕ್ಷ. ನನ್ನನ್ನು ಇವತ್ತು ಈ ಮಟ್ಟಕ್ಕೆ ಬೆಳೆಸಿದ್ದು ಸಮಾಜದ ಜನ. ಅವರ ಇಚ್ಛೆಯಂತೆ ನಡೆಯಬೇಕಾಗುತ್ತದೆ. ನನ್ನ ಹಿಂದೆ ಸಮಾಜ ಇಲ್ಲ ಅಂದಿದ್ದರೆ ನೀವು (ಪ್ರಜಾವಾಣಿ) ಕೂಡ ಸಂದರ್ಶನ ಮಾಡುತ್ತಿರಲಿಲ್ಲ.

* ಕಾಂಗ್ರೆಸ್‌ಗಿಂತ ಮೊದಲೇ ನಿಮ್ಮ ಪಕ್ಷ ಮುಸ್ಲಿಂ ಅಭ್ಯರ್ಥಿಯ ಹೆಸರನ್ನು ಘೋಷಿಸಿತ್ತಲ್ಲವೇ?
ಹೌದು, ಒಪ್ಪುತ್ತೇನೆ. ಈ ವಿಷಯದಲ್ಲಿ ಜೆಡಿಎಸ್‌ನಿಂದ ತಪ್ಪಾಗಿಲ್ಲ. ಕಾಂಗ್ರೆಸ್‌ನಲ್ಲಿ ಕೊನೆವರೆಗೂ ಬೈರತಿ ಸುರೇಶ್‌ ಅವರಿಗೇ ಟಿಕೆಟ್‌ ಅನ್ನುವ ಅಭಿಪ್ರಾಯ ಇತ್ತು. ಕೊನೆ ಕ್ಷಣದಲ್ಲಿ ಅವರು ಷರೀಫ್‌ ಮೊಮ್ಮಗನಿಗೆ ಟಿಕೆಟ್‌ ಕೊಟ್ಟರು. ಅದರ ನಂತರವಾದರೂ ಗೌಡರು ತಮ್ಮ ಅಭ್ಯರ್ಥಿಯನ್ನು ಷರೀಫ್‌ ಸಲುವಾಗಿ ಕಣಕ್ಕೆ ಇಳಿಸಬಾರದಿತ್ತು. ಹಾಗೆ ಮಾಡಿದ್ದರೆ ನಿಜಕ್ಕೂ ಅವರು ದೊಡ್ಡ ಮನುಷ್ಯ ಆಗುತ್ತಿದ್ದರು.

* ಒಂದು ರಾಜಕೀಯ ಪಕ್ಷವಾಗಿ ಆ ರೀತಿ ಮಾಡಿದರೆ ಕಾರ್ಯಕರ್ತರ ಗತಿ ಏನು?
ಏನೂ ಆಗುತ್ತಿರಲಿಲ್ಲ. ಪಕ್ಷಕ್ಕೆ ಇನ್ನೂ ಒಳ್ಳೆಯದಾಗುತ್ತಿತ್ತು. ಅವರು ತೀರ್ಮಾನ ಮಾಡಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ.

* ಈಗಿನ ಹಾಗೆ ಅಂತಹ ತೀರ್ಮಾನ ಮಾಡಿದ್ದಾಗಲೂ ನೀವು ಪ್ರಶ್ನಿಸುತ್ತಿರಲಿಲ್ಲವೇ?
ಖಂಡಿತ ಇಲ್ಲ. ಎಲ್ಲರನ್ನೂ ಕರೆದು ಚರ್ಚಿಸಿ, ತೀರ್ಮಾನ ಮಾಡಬಹುದಿತ್ತು. ಇಡೀ ಸಮಾಜ ಅವರ ಜತೆ ಇರುತ್ತಿತ್ತು. ಒಂದು ವೇಳೆ ಮುಸ್ಲಿಂ ಅಭ್ಯರ್ಥಿಯನ್ನು ಹಾಕುವುದಿದ್ದರೂ ಒಂದು ವಾರದ ಮೊದಲೇ ತೀರ್ಮಾನಿಸಬೇಕಿತ್ತು. ಬಳಿಕ ನಾವು ಕೂಡ ಜನರಿಗೆ ಹೇಳುವುದಕ್ಕೆ ಸರಿ ಇರುತ್ತಿತ್ತು.

* ಇಷ್ಟಕ್ಕೇ ನಿಮಗೆ ಸಿಟ್ಟೇ?
ಸಿಟ್ಟೇನೂ ಇಲ್ಲ. ಬೇಸರ ಆಗಿದೆ. ನೋವಾಗಿದೆ. ಪಕ್ಷಕ್ಕಾಗಿ ದುಡಿದ ನನ್ನನ್ನೇ ನಮ್ಮ ನಾಯಕ ದೇವೇಗೌಡ ಮೀರ್‌ ಸಾದಿಕ್‌ ಅಂದಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ? ಅವರು ವಹಿಸಿದ್ದ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸಿದ್ದೇನೆ. ಚುನಾವಣೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ.
ಅಲ್ಪಸಂಖ್ಯಾತರನ್ನು ಪಕ್ಷದ ಕಡೆಗೆ ಕರೆತಂದಿದ್ದೇನೆ. ಇದು ನನ್ನಿಂದ ಆದ ತಪ್ಪಾ?

* ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೌಡರು ಹೇಳಿದ್ದಾರಲ್ಲ?
ಅದು ಗೊತ್ತಿಲ್ಲ. ಮೊದಲ ದಿನದ ಅವರ ಹೇಳಿಕೆ ಪತ್ರಿಕೆಗಳಲ್ಲಿ ಬಂದ ನಂತರ ನಮ್ಮ ಸಮಾಜದ ಜನ ದಂಗೆ ಎದ್ದಿದ್ದಾರೆ. ಪ್ರತಿಭಟನೆ ಬೇಡ ಎಂದು ತಡೆದಿದ್ದೇನೆ. ನಮ್ಮ ಧರ್ಮಗುರುಗಳು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ರಾಜಕಾರಣಿ ಪರ ಪ್ರತಿಭಟನೆ ಮಾಡಿದ್ದಾರೆ. ಇದು ನನ್ನ ಪುಣ್ಯ.

* ನೀವೇ ಪ್ರತಿಭಟನೆಗೆ ಕರೆ ಕೊಟ್ಟಿದ್ದೀರಿ ಎನ್ನುವ ಗುಮಾನಿ ಇದೆಯಲ್ಲ?
ಖಂಡಿತ ಇಲ್ಲ. ಹಾಗೆ ಮಾಡಲೇಬೇಕು ಎಂದಿದ್ದರೆ ಲಕ್ಷ ಲಕ್ಷ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತಿದ್ದೆ. ಅಂತಹ ದುರ್ಬುದ್ಧಿ ನನಗಿಲ್ಲ.

* ದೇವೇಗೌಡರನ್ನು ದೇವರ ಸಮಾನ ಎನ್ನುತ್ತಿದ್ದ ನೀವು ಈಗೇಕೆ ಅವರ ವಿರುದ್ಧ ಗುಟುರು ಹಾಕುತ್ತಿದ್ದೀರಿ?
ನೋಡಿ ಇವತ್ತಿಗೂ ನಮ್ಮ ಸಮಾಜದಲ್ಲಿ ಗೌಡರ ಬಗ್ಗೆ ಅಪಾರ ಅಭಿಮಾನ, ಗೌರವ ಇದೆ. ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಬಗೆಹರಿಸಿದ್ದು ಗೌಡರೇ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟರು. ನಾನು ಇವತ್ತು ಶಾಸಕನಾಗಲು ಗೌಡರೇ ಕಾರಣ. ಅವರ ಮಗನಿಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ ತೋರಿಸಿದ್ದಾರೆ. ನನ್ನ ಮೊದಲ ಚುನಾವಣೆಯಲ್ಲಿ ಮನೆ ಮನೆ ಸುತ್ತಿದ್ದಾರೆ. ಅವರಿಲ್ಲದಿದ್ದರೆ ಶಾಸಕನೇ ಆಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಯಾರದ್ದೋ ಮಾತು ಕೇಳಿ ಏನೇನೊ ಮಾತನಾಡುತ್ತಿದ್ದಾರೆ. ಇದು ಬೇಸರ ತರಿಸಿದೆ.

* ನಿಮ್ಮ ಮಧ್ಯೆ ಹುಳಿ ಹಿಂಡುತ್ತಿರುವವರು ಯಾರು?
ಅದೇ ಗೊತ್ತಾಗುತ್ತಿಲ್ಲ. ಕಾಲ ಕಳೆದಂತೆ ಅವರಿಗೇ ಸತ್ಯ ಏನು ಎಂಬುದು ಗೊತ್ತಾಗುತ್ತದೆ. ಅಷ್ಟೊತ್ತಿಗೆ ಕಾಲ ಮಿಂಚಿರುತ್ತದೆ.

* ಮುಂದೇನು ಮಾಡುತ್ತೀರಿ? ಪಕ್ಷದಲ್ಲಿ ಇರುತ್ತೀರೊ ಅಥವಾ ಗುಡ್‌ ಬೈ ಹೇಳುತ್ತೀರೊ?
ನಾನು ಸದ್ಯ ಪಕ್ಷದಲ್ಲಿಯೇ ಇದ್ದೇನೆ. ನನಗೆ ಪಕ್ಷ ಬಿಟ್ಟು ಹೋಗಬೇಕೆನ್ನುವ ಆಸೆ ಇಲ್ಲ. ಆದರೆ, ಪಕ್ಷದ ವರಿಷ್ಠರು ಬಿಟ್ಟು ಹೊರ ಹೋಗಿ ಅಂದರೆ ನಾನು ಮಾತ್ರ ಇರುವುದಿಲ್ಲ. ನನಗೂ ಸ್ವಾಭಿಮಾನ ಇದೆ. ಅದನ್ನು ಬಿಟ್ಟು ಬದುಕಲು ಇಷ್ಟ ಇಲ್ಲ. ನಾನು ಡೋಂಟ್‌ ಕೇರ್‌ ಮಾಸ್ಟರ್‌.

* ಪಕ್ಷದಲ್ಲಿ ಇದ್ದುಕೊಂಡೇ ಅದನ್ನು ದುರ್ಬಲಗೊಳಿಸುತ್ತಿದ್ದೀರಿ  ಅನಿಸುವುದಿಲ್ಲವೇ?
ಹಾಗೇನೂ ಇಲ್ಲ. ಅದಕ್ಕೆ ಒಳ್ಳೆಯದಾಗಲಿ ಎಂದು ಬಯಸುವವ. ಅದು ನಮ್ಮ ಮನೆ. ಆದರೆ, ಒಳ್ಳೆಯದಾಗುವುದು ವರಿಷ್ಠರಿಗೇ ಇಷ್ಟ ಇಲ್ಲ. ಅವರಿಗೆ ಯಾರೂ ನಾಯಕರಾಗಿ ಬೆಳೆಯುವುದು ಬೇಕಾಗಿಲ್ಲ.

* ನಿಮ್ಮ ತಂಡದ ಪಂಚ ಪಾಂಡವರಲ್ಲಿ ಎಷ್ಟು ಜನ ಒಟ್ಟಾಗಿದ್ದೀರಿ?
ನಾನು, ಕುಮಾರಸ್ವಾಮಿ, ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ– ಇಷ್ಟೂ ಮಂದಿ ಪಂಚ ಪಾಂಡವರ ರೀತಿ ಇದ್ದೆವು. ಈಗ ಅವರಲ್ಲಿ ಒಬ್ಬರು (ಕುಮಾರಸ್ವಾಮಿ) ನಮ್ಮೊಟ್ಟಿಗೆ ಇಲ್ಲ. ಉಳಿದ ನಾಲ್ಕು ಮಂದಿ ಜತೆಗಿದ್ದೇವೆ. ಆಗಾಗ್ಗೆ ಸಭೆ ಸೇರಿ ಹರಟೆ ಹೊಡೆಯುತ್ತೇವೆ.

* ಕುಮಾರಸ್ವಾಮಿ ಜತೆ ಮುನಿಸು ಏಕೆ?
ಪ್ರೀತಿ– ವಿಶ್ವಾಸ ಹೆಚ್ಚಾದಾಗ ಅದೆಲ್ಲ ಸಾಮಾನ್ಯ. ಕುಮಾರಸ್ವಾಮಿ 2006ರಲ್ಲಿ ಇದ್ದ ಹಾಗೆ ಈಗಿಲ್ಲ. ಫುಲ್‌ ಬದಲಾಗಿದ್ದಾರೆ. ಅವರು ಈಗ ಮಾಜಿ ಮುಖ್ಯಮಂತ್ರಿ, ನಾಯಕರಾಗಿಬಿಟ್ಟಿದ್ದಾರೆ. ನಮ್ಮಂತಹವರು ಈಗ ಅವರಿಗೆ ಬೇಕಾಗಿಲ್ಲ.

* ಇದರ ಒಳಾರ್ಥ ಏನು?
ಅವರು ಹಿಂದೊಂದು ಮುಂದೊಂದು ಮಾತನಾಡುತ್ತಾರೆ. ಒಬ್ಬ ನಾಯಕ ನೇರ–ನಿಷ್ಠುರವಾದಿಯಾಗಿರಬೇಕು. ಇದು ತಪ್ಪು ಅಂದರೆ ಅದನ್ನು ನೇರವಾಗಿ ಕರೆದು ಸಂಬಂಧಪಟ್ಟವರಿಗೆ ಹೇಳಬೇಕು. ಅವರಿವರ ಜತೆ ಹೇಳಿ, ಮಾನ ಹರಾಜು ಹಾಕುವುದು ಎಷ್ಟರಮಟ್ಟಿಗೆ ಸರಿ? ಇವು ನಾಯಕನ ಲಕ್ಷಣಗಳಾ?

* ದುಬೈ ಉದ್ಯಮಿ ಜಫ್ರುಲ್ಲಾ ಖಾನ್‌ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎನ್ನುವುದಕ್ಕೆ ಬೇಸರವೇ?
ಛೇ, ಛೇ... ಆ ರೀತಿ ಇಲ್ಲ. ನನಗೂ ಜಫ್ರುಲ್ಲಾ ಖಾನ್‌ ಅವರಿಗೂ ಏಕೆ ಹೋಲಿಕೆ ಮಾಡುತ್ತೀರಿ. ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಆ ವಿಷಯದಲ್ಲಿ ಅಸಮಾಧಾನ ಏನೂ ಇಲ್ಲ.

* ನಿಮ್ಮ ನಡೆ ಹಿಂದೆ ಮುಖ್ಯಮಂತ್ರಿ ಇದ್ದಾರೆ ಎನ್ನುವ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರಲ್ಲಾ?
ಛೇ..., ಆ ರೀತಿ ಇಲ್ಲ. ಅಲ್ಲಾನ ಮೇಲೆ ಆಣೆ ಇಟ್ಟು ಹೇಳುತ್ತೇನೆ, ಎಂದೂ ಸಿದ್ದರಾಮಯ್ಯ ಅವರು ಜೆಡಿಎಸ್‌ ವಿರುದ್ಧ ಮಾತನಾಡಿ ಎಂದಿಲ್ಲ. ನನಗೆ ಅಲ್ಲಾನಿಗಿಂತ ದೊಡ್ಡ ವ್ಯಕ್ತಿ ಯಾರೂ ಇಲ್ಲ. ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರಾಗಿದ್ದವರು. ಅವರ ಜತೆಗಿನ ಒಡನಾಟ ಚೆನ್ನಾಗಿದೆ. ಅದನ್ನು ನನ್ನ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದೇನೆ. ಎಂದೂ ಅವರು ನಮ್ಮನ್ನು ಕೆಟ್ಟದ್ದಕ್ಕೆ ಬಳಸಿಕೊಂಡಿಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳಲು ಸಿದ್ಧ. ಈ ವಿಷಯದಲ್ಲಿ ಅನುಮಾನ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ.

* ದೇವದುರ್ಗ, ಬೀದರ್‌ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕಾದರೂ ನೀವು ಹೋಗಬಹುದಿತ್ತಲ್ಲ?
ಗೌಡರೇ ಎಲ್ಲಿಗೂ ಹೋಗುವುದು ಬೇಡ ಅಂದರು. ಈ ನಡುವೆ ಮೀರ್ ಸಾದಿಕ್‌ ಅಂತ ಅನ್ನಿಸಿಕೊಂಡು ನಾನು ಪ್ರಚಾರಕ್ಕೆ ಹೋಗಿದ್ದರೆ ನಮ್ಮ ಜನ ಮೆಟ್ಟಿನಲ್ಲಿ ಹೊಡೆಯುತ್ತಿದ್ದರು. ಅದು ಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಸಮಸ್ಯೆಗೆ ಕಾರಣ ಆಗುವುದು ಬೇಡ ಅಂತ ಪ್ರಚಾರಕ್ಕೆ ಹೋಗಿಲ್ಲ.

*  ತಮ್ಮ ಜನಪ್ರಿಯತೆಗೆ ಕಾರಣ ಏನು?
ನನ್ನ ಒಟ್ಟು ಆದಾಯದ ಶೇ 70ರಷ್ಟು ಸಮಾಜ ಸೇವೆಗೆ ಬಳಸುತ್ತೇನೆ. ನನಗೆ ಇವತ್ತಿಗೂ ಮನೆ ಇಲ್ಲ. ಬಡ ಮಕ್ಕಳ ಸಲುವಾಗಿ ನನ್ನ ಕ್ಷೇತ್ರದಲ್ಲಿ ಹೈ–ಟೆಕ್‌ ಶಾಲೆ ಮತ್ತು ಹಾಸ್ಟೆಲ್‌ ಕಟ್ಟಿಸಲು ಯೋಜನೆ ರೂಪಿಸುತ್ತಿದ್ದೇನೆ. ಪ್ರತಿ ವರ್ಷ ಹಜ್‌ ಯಾತ್ರೆಗೆ ವ್ಯವಸ್ಥೆ ಮಾಡುತ್ತೇನೆ. ಇದುವರೆಗೂ 580 ಮಂದಿಗೆ ಹಜ್‌ ಯಾತ್ರೆ, 400 ಮಂದಿಗೆ ಉಮ್ರಾ ಮಾಡಿಸಿದ್ದೇನೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡಿಸುತ್ತೇನೆ.

ತಂದೆಯನ್ನು ಕಳೆದುಕೊಂಡ ನನ್ನ ಕ್ಷೇತ್ರದ ಎಲ್ಲ ಧರ್ಮಗಳ ಮಕ್ಕಳಿಗೆ ಪ್ರಸ್ತುತ ತಿಂಗಳಿಗೆ ತಲಾ ₹1,500 ಪಿಂಚಣಿ ನೀಡುತ್ತಿದ್ದೇನೆ. ಈ ಸಲುವಾಗಿ ಪ್ರತಿ ತಿಂಗಳು ₹19.6 ಲಕ್ಷ ಖರ್ಚು ಮಾಡುತ್ತಿದ್ದೇನೆ. ನಾನು ಸಾಯುವುದಕ್ಕೂ ಮುನ್ನ ನನ್ನ ಆಸ್ತಿಯನ್ನೆಲ್ಲ ಸಾರ್ವಜನಿಕ ಟ್ರಸ್ಟ್‌ಗೆ ಬರೆದು ಹೋಗುತ್ತೇನೆ. ನನಗೆ ಇಲ್ಲಿ ಮನೆ ಬೇಡ, ಸ್ವರ್ಗದಲ್ಲಿ ಮನೆ ಸಿಕ್ಕರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.