ADVERTISEMENT

ಪೊಲೀಸ್‌, ವಕೀಲ, ವೈದ್ಯರ ಮೋಸದಾಟ...!

ಎಚ್.ಎಸ್.ಚಂದ್ರಮೌಳಿ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ಪೊಲೀಸ್‌, ವಕೀಲ, ವೈದ್ಯರ ಮೋಸದಾಟ...!
ಪೊಲೀಸ್‌, ವಕೀಲ, ವೈದ್ಯರ ಮೋಸದಾಟ...!   

ವಕೀಲರು ಹಾಗೂ ಪೊಲೀಸರು ಕಾನೂನು ರಕ್ಷಕರು ಎಂದು ಗುರುತಿಸಿಕೊಂಡಿದ್ದರೆ, ವೈದ್ಯರನ್ನು ದೇವರಿಗೇ ಹೋಲಿಸಲಾಗಿದೆ. ಆದರೆ ಇಲ್ಲಿ ಹೇಳಹೊರಟಿರುವುದು ಈ ಮೂವರನ್ನು ಒಳಗೊಂಡಿರುವ ಮೋಸಗಾರರ ಗುಂಪು. ಇವರು ಅಂಥಿಂಥ ವಂಚಕರಲ್ಲ. ಕಾನೂನಿನ ಕಣ್ಣಿಗೆ ಮಣ್ಣೆರಚಿ ನುಸುಳಿಕೊಳ್ಳುತ್ತಿರುವ ನಿಪುಣರು.  ತಮ್ಮ ವೃತ್ತಿಯನ್ನೇ ಕಳ್ಳಾಟಕ್ಕೆ ಬಳಸಿಕೊಂಡು ಯಾರಿಗೂ ಗುಮಾನಿ ಬರದ ಹಾಗೆ ತಪ್ಪಿಸಿಕೊಳ್ಳುತ್ತಿರುವ ಚತುರರು ಇವರು...!

ವಾಹನ ಅಪಘಾತ ಎಂದಾಗ ಅರೆಕ್ಷಣ ಎಲ್ಲರೂ ಬೆಚ್ಚಿಬೀಳುವುದು ಸಹಜ. ಆದರೆ ಈ ಗುಂಪಿನ ಸದಸ್ಯರಿಗೆ ಮಾತ್ರ ಎಲ್ಲಿಯಾದರೂ ಅಪಘಾತ ಸಂಭವಿಸಿತೆಂದರೆ ಇನ್ನಿಲ್ಲದ ಸಂತೋಷ. ಅಪಘಾತ ಸಂಭವಿಸಿ ಯಾರಾದರೂ ಗಾಯಗೊಂಡರೆ ಇನ್ನೂ ಸಂತಸ...! ವಾಹನ ಅಪಘಾತ ಮಾತ್ರವಲ್ಲದೇ ಬೇರಾವುದೇ ರೀತಿಯಲ್ಲಿ ಗಾಯಮಾಡಿಕೊಂಡು ಗಾಯಾಳುಗಳು ಆಸ್ಪತ್ರೆಗೆ ದಾಖಲಾದರೂ ಇವರಿಗೆ ಹಿಗ್ಗೋ ಹಿಗ್ಗು. ಅಂಥ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ಲಕ್ಷ ಲಕ್ಷ ರೂಪಾಯಿ ಇವರ ಕಣ್ಣಮುಂದೆ ಕುಣಿದಾಡುತ್ತದೆ...!

ಇಂದಿಗೂ ಆರಾಮಾಗಿ ಓಡಾಡಿಕೊಂಡಿರುವ ಇಂಥ ಮೋಸಗಾರರ ಪೈಕಿ ಒಂದು ಗುಂಪಿನ ಬಗ್ಗೆ ನಾನು ಇಲ್ಲಿ ವಿವರಿಸುತ್ತಿದ್ದೇನೆ.

ADVERTISEMENT

***
ಘಟನೆ ವಿವರಿಸುವ ಮುನ್ನ ಅಪಘಾತ ಪ್ರಕರಣಗಳು ಹಾಗೂ ಅದಕ್ಕೆ ಸಂಬಂಧಿಸಿರುವ ಕಾನೂನಿನ ಕುರಿತು ಒಂದಿಷ್ಟು ಉಲ್ಲೇಖ ಸೂಕ್ತ ಎನಿಸುತ್ತದೆ. ಅದೇನೆಂದರೆ... ಅಪಘಾತ ಪ್ರಕರಣಗಳಲ್ಲಿ ಪರಿಹಾರದ ಮೊತ್ತ ನಿಗದಿ ಮಾಡುವುದನ್ನು ನಮ್ಮ ಕಾನೂನು ಸುಲಭಗೊಳಿಸಿದೆ. ಇಂಥ ಪ್ರಕರಣ
ಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಸಂಬಂಧ ‘ಲೋಕ್‌ ಅದಾಲತ್‌’ ವಿಚಾರಣೆ ಕೈಗೊಳ್ಳುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಇಂತಿಷ್ಟು ಪರಿಹಾರ ಎಂದು ನಿಗದಿ ಮಾಡಲಾಗಿದೆ. ಒಂದು ವೇಳೆ ವಾಹನ ಅಪಘಾತಗಳಲ್ಲಿ ಗಾಯಗೊಂಡಿದ್ದರೆ, ಆ ಗಾಯದ ಪ್ರಮಾಣ ಎಷ್ಟು ಎಂದು ವೈದ್ಯರು ನೀಡುವ ಪ್ರಮಾಣ ಪತ್ರವನ್ನು ಆಧರಿಸಿ ಪರಿಹಾರ ನೀಡುವಂತೆ ಕೋರ್ಟ್‌ಗಳು ವಿಮಾ ಕಂಪೆನಿಗೆ ಆದೇಶಿಸುತ್ತವೆ. ಗಾಯದ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡು ಪರಿಹಾರದ ಮೊತ್ತವನ್ನು ಲೆಕ್ಕ ಮಾಡಲಾಗುತ್ತದೆ. ಪರಿಹಾರದ ಮೊತ್ತ ಹಲವು ಲಕ್ಷದ್ದಾಗಿರುತ್ತದೆ. ಒಳ್ಳೆಯ ನೌಕರಿಯಲ್ಲಿದ್ದು ಸಂಬಳ ಪಡೆಯುತ್ತಿರುವವರೇನಾದರೂ ಸತ್ತರೆ, ಅಂಥ ಮೃತ ವ್ಯಕ್ತಿಯ ಕುಟುಂಬಕ್ಕೆ ಕೋಟಿಗಟ್ಟಲೆ ಪರಿಹಾರವೂ ಸಿಗುವುದುಂಟು.

ಮೃತ ವ್ಯಕ್ತಿಯ ಕುಟುಂಬ ವರ್ಗಕ್ಕೆ ತುಂಬಾ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ಪರಿಹಾರದ ಪ್ರಕ್ರಿಯೆಯನ್ನು ಹಿಂದಿಗಿಂತ ಸ್ವಲ್ಪ ಸರಳೀಕರಣಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ಈ ಪ್ರಕರಣಗಳನ್ನು ದಾಖಲು ಮಾಡುವುದು, ಕೇಸನ್ನು ನಡೆಸುವುದು ಅತೀ ಸುಲಭ ಮಾಡಲಾಗಿದೆ. ಈ ಪ್ರಕ್ರಿಯೆಯನ್ನು ಕಾನೂನಿನ ಭಾಷೆಯಲ್ಲಿ ‘ಸಮ್ಮರಿ ಪ್ರೊಸೀಡಿಂಗ್ಸ್‌’ ಎನ್ನಲಾಗುತ್ತದೆ.

***
ಈಗ ವಿಷಯಕ್ಕೆ ಬರೋಣ. ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯ ಮುಖ್ಯ  ವೈದ್ಯರಾಗಿದ್ದವರು ಡಾ. ಅರಕೇಶ್ವರ. ವೈದ್ಯರಾಗಿ ಎಷ್ಟು ಬುದ್ಧಿವಂತರೋ ಕಾನೂನಿನ ವಿಷಯದಲ್ಲೂ ಅಷ್ಟೇ ನುರಿತವರು. ಕಾನೂನಿನ ಎಲ್ಲಾ ಆಯಾಮಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು (ವೈದ್ಯಕೀಯ ಜ್ಞಾನಕ್ಕಿಂತ ಕಾನೂನಿನ ಜ್ಞಾನವೇ ಅವರಿಗೆ ಹೆಚ್ಚಿನ ಅವಶ್ಯಕತೆ ಇತ್ತು ಅನ್ನಿ...!). ಆ ಆಸ್ಪತ್ರೆ ವ್ಯಾಪ್ತಿಯಲ್ಲಿಯೇ ಇರುವ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಗಿದ್ದವರು ರಮಾನಾಥ ಶೆಟ್ಟಿ. ಇವರಿಗೆ ವಿಮಾ ಇಲಾಖೆ ಸಿಬ್ಬಂದಿಯ ಒಡನಾಟ ಹೆಚ್ಚಿತ್ತು. ಒಬ್ಬ ವಕೀಲ ಹಾಗೂ ಸಾರಿಗೆ ಇಲಾಖೆ ಅಧಿಕಾರಿ ಕೂಡ ಯಾವತ್ತೂ ಇವರ ಸುತ್ತಮುತ್ತ ತಿರುಗುತ್ತಿದ್ದರು.

ಇಂತಿಪ್ಪ ‘ಜಾಣರ ಗುಂಪು’ ತಮ್ಮ ಕಾರ್ಯತಂತ್ರ ರೂಪಿಸಲು ಶುರು ಮಾಡುವುದು ಯಾವುದಾದರೂ ವ್ಯಕ್ತಿ ಯಾವುದೇ ರೀತಿಯಲ್ಲಿ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ತಕ್ಷಣ. ಹೀಗೆ ಗಾಯಾಳು ಆಸ್ಪತ್ರೆಗೆ ದಾಖಲಾದ ತಕ್ಷಣ  ಡಾ. ಅರಕೇಶ್ವರ ಚುರುಕಾಗುತ್ತಿದ್ದರು. ಆ ಗಾಯ ಹೇಗಾಯಿತು, ಅದು ವಾಹನ ಅಪಘಾತವೋ ಇಲ್ಲಾ ಮಾಮೂಲು ಗಾಯವೋ ಎನ್ನುವುದನ್ನು ನೋಡುತ್ತಿರಲಿಲ್ಲ. ಅದನ್ನು ರಸ್ತೆ ವಾಹನ ಅಪಘಾತ (ಆರ್‌ಟಿಎ) ಎಂದು ನಮೂದಿಸಿಕೊಳ್ಳುತ್ತಿದ್ದರು. ಕೂಡಲೇ ಆ ವರದಿಯನ್ನು ತಮ್ಮ ಗುಂಪಿನ ಲೀಸರಿಗೆ ಕಳುಹಿಸುತ್ತಿದ್ದರು.

ಈಗ ಚುರುಕಾಗುವ ಸಮಯ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮಾನಾಥ ಶೆಟ್ಟಿ  ಅವರದ್ದು. ತಕ್ಷಣ ಆಸ್ಪತ್ರೆಗೆ ಧಾವಿಸುತ್ತಿದ್ದ ಅವರು ಗಾಯಾಳುವಿನ ಹೇಳಿಕೆಯನ್ನು  ಪಡೆದುಕೊಳ್ಳುತ್ತಿದ್ದರು (ಪಡೆದುಕೊಳ್ಳುವಂತೆ ನಟಿಸುತ್ತಿದ್ದರು!). ಆ ಗಾಯಾಳು ಯಾವುದೇ ರೀತಿಯಲ್ಲಿ ಗಾಯಮಾಡಿಕೊಂಡಿ
ದ್ದರೂ ‘ನನಗೆ ಅಪಘಾತ ವಾಹನದಿಂದಲೇ ಸಂಭವಿಸಿದೆ’ ಎಂಬ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದರು. ‘ಅಪಘಾತ ಸಂಭವಿಸಿದ’ ವಾಹನದ ಸಂಖ್ಯೆಯನ್ನು ಈ ಇನ್‌ಸ್ಪೆಕ್ಟರ್ ಅವರೇ  ಸೃಷ್ಟಿ ಮಾಡುತ್ತಿದ್ದರು. ಅರ್ಥಾತ್‌, ತಮಗೆ ತಿಳಿದಿರುವ, ತಮ್ಮದೇ ಗುಂಪಿನ ವಿಮಾ ಸೌಲಭ್ಯ ಹೊಂದಿರುವ ವಾಹನದ ಸಂಖ್ಯೆ, ಚಾಲನಾ ಪರವಾನಗಿ ಹೊಂದಿರುವ ವಾಹನ ಸವಾರನ ಹೆಸರು ಸೇರಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡುತ್ತಿದ್ದರು.
ಈಗ ವಕೀಲ ರಾಮುವಿನ ಸರದಿ. ಆಸ್ಪತ್ರೆಗೆ ಧಾವಿಸುತ್ತಿದ್ದ ರಾಮು ತಾನು ಗಾಯಾಳುವಿಗೆ ಪರಿಹಾರದ ಮೊತ್ತ ಕೊಡಿಸುವುದಾಗಿ ಹೇಳುತ್ತಿದ್ದರು. ಸುಖಾಸುಮ್ಮನೆ ಪರಿಹಾರದ ಮೊತ್ತ ಸಿಗುತ್ತದೆ ಎಂದರೆ ಯಾರಿಗೆ ಬೇಡ ಹೇಳಿ...? ಅವರು ಹೀಗೆ ‘ಭರವಸೆ’ ನೀಡಿದ ಮೇಲೆ ಗಾಯಾಳು ವಕಾಲತ್ತು ಅರ್ಜಿಗೆ ಮರುಮಾತನಾಡದೇ ಸಹಿ ಹಾಕುತ್ತಿದ್ದರು. ಅಲ್ಲಿಗೆ ಒಂದು ಹಂತ ಮುಗಿಯುತ್ತಿತ್ತು.

ಮುಂದಿನ ಪ್ರಕ್ರಿಯೆಗಳೆಲ್ಲಾ ಸಲೀಸು.  ವೈದ್ಯಕೀಯ ಪ್ರಮಾಣ ಪತ್ರ, ಪೊಲೀಸರಿಂದ ಎಫ್‌ಐಆರ್‌, ವಕೀಲರಿಂದ ವಕಾಲತ್ತು, ಗಾಯಾಳುವಿನ (ನಕಲಿ) ಎಕ್ಸ್‌ರೇ.. ಇವೆಲ್ಲಾ ದಾಖಲೆಗಳು ಇದ್ದ ಮೇಲೆ ಕೋರ್ಟ್‌ಗೆ ಇನ್ನೇನು ಬೇಕು? ದಾಖಲೆಗಳ ಆಧಾರದ ಮೇಲೆ, ಆ ಗಾಯಾಳುವಿಗೆ ಕಾನೂನು ಬದ್ಧವಾಗಿ ವಿಮಾ ಕಂಪೆನಿಯಿಂದ ಎಷ್ಟು ಹಣ ಬರಬೇಕೋ ಅಷ್ಟು ಹಣವನ್ನು ನೀಡುವಂತೆ ಕೋರ್ಟ್‌ ಆದೇಶಿಸುತ್ತಿತ್ತು.  ಕಂತೆಗೆ ತಕ್ಕ ಬೊಂತೆಯಂತೆ ವಿಮಾ ಇಲಾಖೆಯ ಕೆಲ ವಕೀಲರೂ ಇವರ ಕೈಜೋಡಿಸುತ್ತಿದ್ದರು. ಗಾಯಾಳುವಿಗೆ ಅಲ್ಪಸ್ವಲ್ಪ ಹಣ ಕೊಟ್ಟು ಉಳಿದದ್ದನ್ನು ಈ ‘ಕಳ್ಳರು’ ಹಂಚಿಕೊಳ್ಳುತ್ತಿದ್ದರು.
ಇಲ್ಲೊಂದು ಮಾತು ಹೇಳಲೇಬೇಕು. ಅದೇನೆಂದರೆ ನಮ್ಮ ಕಾನೂನಿನ ಅನ್ವಯ ವಾಹನ ಅಪಘಾತ ಸಂಭವಿಸಿದಾಗ  ಆ ಅಪಘಾತ
ದಲ್ಲಿ ಯಾರಾದರೂ ಸಾವನ್ನಪ್ಪಿದರೆ ಮಾತ್ರ ವಾಹನ ಚಾಲಕನಿಗೆ ಜೈಲುಶಿಕ್ಷೆ. ಬರೀ ಗಾಯಗಳಾದರೆ ಅವರ ಗಾಯದ ಗಂಭೀರತೆಯನ್ನು ಪರಿಗಣಿಸಿ ತಪ್ಪಿತಸ್ಥ ವಾಹನ ಚಾಲಕರಿಗೆ ಕೋರ್ಟ್‌ ಕೇವಲ ದಂಡ ವಿಧಿಸುತ್ತದೆ.  ಈ ದಂಡದ ಮೊತ್ತ ಕೆಲವೇ ಸಾವಿರ ರೂಪಾಯಿಗಳಾಗಿರುತ್ತದೆ. ಈ ಕಾನೂನು ಕೂಡ ಇಂಥ ಕಪಟಿಗಳಿಗೆ ಅನುಕೂಲ ಆಗುವ ಹಾಗೆಯೇ ಇದೆ. ತಮಗೆ ಗೊತ್ತಿರುವ ಚಾಲಕನನ್ನು  ಇವರು ಕೋರ್ಟ್‌ಗೆ ಹಾಜರುಪಡಿಸುವುದು, ಆತ ತಾನೇ ಈ ಅಪಘಾತ ಮಾಡಿದೆ ಎಂದು ಒಪ್ಪಿಕೊಳ್ಳುವುದು, ಅವನಿಗೆ ಕೋರ್ಟ್‌ ಒಂದಿಷ್ಟು ದಂಡ ವಿಧಿಸಿ ಬಿಡುವುದು... ಇದು ಈಗಿರುವ ಪರಿಸ್ಥಿತಿ. ಇನ್ನೊಂದು ಕಡೆ, ರೋಗಿ ಬಯಸಿದ್ದೂ ಹಾಲು ಅನ್ನ... ಎನ್ನುವ ಹಾಗೆ, ಇಂಥ ಪ್ರಕರಣ ಲೋಕ್‌ ಅದಾಲತ್‌ನಲ್ಲಿ ಎರಡೂ ಕಡೆಯವರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳ್ಳುವ ಕಾರಣ, ಯಾರೇ ಆಗಲೀ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇರುವುದಿಲ್ಲ. ಅಪಘಾತ ಪ್ರರಣಗಳ ಸಂಖ್ಯೆ ವಿಪರೀತ ಹೆಚ್ಚಿರುವ ಕಾರಣ, ಪ್ರತಿಯೊಂದು ಪ್ರಕರಣದ ಸತ್ಯಾಸತ್ಯತೆಯನ್ನು ಪರೀಕ್ಷಿಸುವಷ್ಟು ತಾಳ್ಮೆ ನ್ಯಾಯಾಧೀಶರಿಗೂ ಇರುವುದಿಲ್ಲ.

ಆದ್ದರಿಂದ ಈ ದಂಧೆ ಇಂದಿಗೂ ನಿರಾತಂಕವಾಗಿ ನಡೆದೇ ಬಂದಿದೆ.

***
ಪುಣೆ– ಬೆಂಗಳೂರು ಹೆದ್ದಾರಿಯಲ್ಲಿ  ಅಪಘಾತ ಮಾಮೂಲು. ಇಲ್ಲಿ ಅಪಘಾತ ಆಯಿತು ಎಂದರೆ ಬದುಕುಳಿಯುವವರ ಸಂಖ್ಯೆ ತೀರಾ ಕಮ್ಮಿ. ಒಂದು ವೇಳೆ ಬದುಕುಳಿದರೂ ಗಂಭೀರ ಸ್ವರೂಪದಲ್ಲಿ ಗಾಯಗಳಾಗುವುದು ಸಹಜ. ಆದ್ದರಿಂದ ಇಂಥ ಮೋಸಗಾರರ ದೃಷ್ಟಿ ಈ ರೀತಿಯ ಹೆದ್ದಾರಿಯ ಮೇಲೆ ಸದಾ ನೆಟ್ಟಿರುತ್ತದೆ. ಇಂತಿಪ್ಪ ರಸ್ತೆಯಲ್ಲಿ ಅದೊಂದು ದಿನ ಅಪಘಾತ ಸಂಭವಿಸಿತು. ಜನರಿಂದ ತುಂಬಿದ್ದ ಲಾರಿಯೊಂದು ಅತಿವೇಗವಾಗಿ ಚಲಿಸಿದ್ದರಿಂದ ಆ  ದಾರಿಯಲ್ಲಿ ಸಾಗುತ್ತಿದ್ದ ಕುರಿಗಳ ಮೇಲೆ ಹರಿದುಹೋಯ್ತು. ಹಲವಾರು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದವು. ಆ ಕುರಿಗಾಹಿಗೂ ಲಾರಿ ಗುದ್ದಿದ ಪರಿಣಾಮ ಅವನಿಗೂ ಗಂಭೀರ ಸ್ವರೂಪದ ಗಾಯವಾಯಿತು. ಯಾವುದಾದರೂ ಅಪಘಾತ ಸಂಭವಿಸುವುದನ್ನೇ ಮಾಮೂಲಿನಂತೆ ಕಾಯುತ್ತಿದ್ದ ಇನ್‌ಸ್ಪೆಕ್ಟರ್ ರಮಾನಾಥ ಶೆಟ್ಟಿ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದರು. ಲಾರಿಯ ಚಾಲಕನನ್ನು  ಬಂಧಿಸಿ ಠಾಣೆಗೆ ಕರೆದುಕೊಂಡು ಹೋದರು. ಅಪಘಾತ ಮಾಡಿರುವ ಭಯದಲ್ಲಿರುವ ಎಂಥ ಚಾಲಕರಾದರೂ ಆ ಸಮಯದಲ್ಲಿ ತಪ್ಪಿಸಿಕೊಳ್ಳಲು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರುವಂತೆ ಈ ಚಾಲಕನೂ ಇದ್ದ. ಆದ್ದರಿಂದ ಎಲ್ಲರೂ ಸೇರಿ ಈ ಲಾರಿ ಚಾಲಕನ ಬುದ್ಧಿ ತಿರುಚಿದರು.

ಕೂಡಲೇ ಇನ್‌ಸ್ಪೆಕ್ಟರ್ ತಮ್ಮ ಗುಂಪಿನ ವ್ಯಕ್ತಿಗಳನ್ನು ಸಂಪರ್ಕಿಸಿದರು. ವಿಮಾ ಕಂಪೆನಿಗೆ ಹೇಗೆ ವಂಚಿಸುವುದು ಎಂಬ ಬಗ್ಗೆ  ಚರ್ಚೆ ನಡೆಯಿತು. ಚರ್ಚೆಯ ಬಳಿಕ ಎಫ್‌ಐಆರ್‌ ದಾಖಲು ಮಾಡಿಕೊಂಡರು ರಮಾನಾಥ್‌.  ತಮ್ಮದೇ ಪರಿಚಯದ ವ್ಯಕ್ತಿಯನ್ನು ಆ ಅಪಘಾತದ ಸಾಕ್ಷಿದಾರನನ್ನಾಗಿ ಮಾಡಿದರು. ‘ದಾರಿಯಲ್ಲಿ ಹೋಗುತ್ತಿದ್ದ ಕುರಿಗಳ ಜೊತೆಯಲ್ಲಿ ಜನರೂ ಗುಂಪಾಗಿ ಹೋಗುತ್ತಿದ್ದರು. ಲಾರಿ ಅವರ ಮೇಲೆ ಡಿಕ್ಕಿ ಹೊಡೆದುದರಿಂದ ಹಲವಾರು ಮಂದಿ ಗಾಯಾಗೊಂಡಿದ್ದಾರೆ’ ಎಂದು ಬರೆದುಕೊಂಡರು. ಅಲ್ಲಿಗೆ ತಮ್ಮ ‘ತನಿಖಾ ಶಾಸ್ತ್ರ’ ಮುಗಿಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಮಾಮೂಲಿ
ಯಂತೆ ಗಾಯಾಳುಗಳ ಪರ ವಕಾಲತ್ತು ವಹಿಸಿದ ರಾಮು, ನ್ಯಾಯಾಲಯದಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು. ಲೋಕ್‌ ಅದಾಲತ್‌ ಆದೇಶದಂತೆ ಲಕ್ಷಗಟ್ಟಲೆ ಪರಿಹಾರದ ಹಣ ಇವರಿಗೆ ದಕ್ಕಿತು.

ಇಷ್ಟೆಲ್ಲಾ ಆದ ಮೇಲೆ ವಿಮಾ ಕಂಪೆನಿಯ ಅಧಿಕಾರಿಯೊಬ್ಬರಿಗೆ ಎಲ್ಲೋ ಏನೋ ಎಡವಟ್ಟಾಗುತ್ತಿದೆ ಎಂಬ ಗುಮಾನಿ ಬರಲು ಶುರುವಾಯಿತು. ತಮ್ಮ ವಿಮಾ ಕಂಪೆನಿಯಿಂದ ಅಲ್ಲಿಯವರೆಗೆ ಕೊಟ್ಟ ಪರಿಹಾರದ ಪ್ರಕರಣಗಳ ದಾಖಲೆಗಳನ್ನು ಪರಿಶೀಲಿಸಿದರು. ಅವರ ಅನುಮಾನ ನಿಜವಾಗಿತ್ತು. ಅದೇ ವೈದ್ಯ, ಅದೇ ಪೊಲೀಸ್‌, ಅದೇ ವಕೀಲ, ಅದೇ ಎಕ್ಸ್‌–ರೇ, ಅವರೇ ವಾಹನ ಚಾಲಕರು...! ಇವುಗಳನ್ನು ನೋಡಿ ಅವರು ಕಂಗಾಲಾಗಿ ಹೋದರು.

ಎಲ್ಲ ದಾಖಲೆ ತೆಗೆದುಕೊಂಡು ನನ್ನ ಬಳಿ ಬಂದರು. ನಾನಾಗ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಸರ್ಕಾರಿ ವಕೀಲ) ಆಗಿದ್ದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದಾಗ ನನಗೂ ಅಚ್ಚರಿಯಾಯಿತು. ತಡ ಮಾಡಲಿಲ್ಲ. ಕೂಡಲೇ ಅಂದಿನ ಪೊಲೀಸ್‌ ಮಹಾನಿರ್ದೇಶಕರ ಹೆಸರಿಗೆ ವಿಮಾ ಕಂಪೆನಿ ಅಧಿಕಾರಿ ಅವರಿಂದ ಪತ್ರ ಬರೆಸಿ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಯಿತು.

ಸಹಸ್ರಾರು ಕೋಟಿ ರೂಪಾಯಿಗಳನ್ನು ಈಗಾಗಲೇ ವಿಮಾ ಕಂಪೆನಿಗೆ ವಂಚಿಸಿದ್ದು ತನಿಖೆಯಿಂದ ಬೆಳಕಿಗೆ ಬಂತು. ಎಲ್ಲರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಯಿತು. ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದರು. ಅವರ ವಿರುದ್ಧ ನಾನು ವಾದ ಮಂಡಿಸಿದೆ. ಸಾರ್ವಜನಿಕರ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಇಂಥವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದೆ. ನನ್ನ ವಾದ ಮಾನ್ಯ ಮಾಡಿದ ಕೋರ್ಟ್‌, ಜಾಮೀನು ನೀಡಲಿಲ್ಲ. ಕೊನೆಗೆ ವಿಚಾರಣೆ ನಡೆದು ಎಲ್ಲರೂ ಜೈಲು ಪಾಲಾದರು.

ಇಲ್ಲಿ ಹೇಳಿರುವುದು ಒಂದು ಪ್ರಕರಣ ಮಾತ್ರ. ನಾನು ಮೊದಲೇ ಹೇಳಿದ ಹಾಗೆ ಇಂದಿಗೂ ಇಂಥದ್ದೊಂದು ದೊಡ್ಡ ಜಾಲ ಕೆಲಸ ಮಾಡುತ್ತಲೇ ಇದೆ. ಕೆಲವೇ ಪ್ರಕರಣಗಳು ಬೆಳಕಿಗೆ ಬರುತ್ತಿವೆಯಷ್ಟೇ. ಇಂಥವರನ್ನು ಮಟ್ಟಹಾಕುವ ಒಂದು ವ್ಯವಸ್ಥೆ ಜಾರಿಯಾಗಬೇಕಿದೆ.
 (ಎಲ್ಲರ ಹೆಸರು ಬದಲಾಯಿಸಲಾಗಿದೆ)

*

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.