ADVERTISEMENT

ಭಾಷಣದ ಬದಲು ಬೆಳ್ಳುಬ್ಬಿ ಗಾಯನ..!

ಡಿ.ಬಿ, ನಾಗರಾಜ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST

ವಿಜಯಪುರ: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಗಾಗಿ ವಿಜಯಪುರದ ದರಬಾರ ಪ್ರೌಢಶಾಲಾ ಮೈದಾನದಲ್ಲಿ ಜನಸ್ತೋಮ ಸೇರಿತ್ತು. ಮುಸ್ಸಂಜೆ ದಾಟಿ, ರಾತ್ರಿಯಾದರೂ ನಾಯಕರು ಯಾರೂ ಬರಲಿಲ್ಲ. ಜನರನ್ನು ಸಮಾಧಾನದಿಂದ ಇರಿಸಲು ಸ್ಥಳೀಯ ನಾಯಕರಿಂದಲೇ ಭರ್ಜರಿ ಭಾಷಣ ನಡೆಯುತ್ತಿತ್ತು.

ಬಿಜೆಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರನ್ನು ಭಾಷಣ ಮಾಡುವಂತೆ ಆಹ್ವಾನಿಸಿದರು. ಬೆಳ್ಳುಬ್ಬಿ ಅವರು ಇನ್ನೇನು ಕಾಂಗ್ರೆಸ್‌ ಪಕ್ಷದ ವಿರುದ್ಧ ಟೀಕಾ ಪ್ರಹಾರ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾರ್ಯಕರ್ತರು ‘ಭಾಷಣ ಬ್ಯಾಡ್ರೀ... ಬಿಜಾಪುರ ಹಾಡ ಹಾಡ್ರೀ’ ಎಂಬ ಒತ್ತಾಯ ಆರಂಭಿಸಿದರು. ಅದನ್ನು ನಿರ್ಲಕ್ಷಿಸಿದ ಬೆಳ್ಳುಬ್ಬಿ ಭಾಷಣಕ್ಕೆ ಮುಂದಾಗುತ್ತಿದ್ದಂತೆ ಕಾರ್ಯಕರ್ತರ ಗದ್ದಲ ಹೆಚ್ಚಾಯಿತು.

ಒತ್ತಾಯಕ್ಕೆ ಮಣಿದ ಬೆಳ್ಳುಬ್ಬಿ ಭಾಷಣಕ್ಕೆ ಮಂಗಳ ಹಾಡಿ, ವಿಜಯಪುರ ಜಿಲ್ಲೆಯ ಐತಿಹ್ಯ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಬಿಂಬಿಸುವ ‘ಭೂ ಲೋಕದ ಸ್ವರ್ಗ ಬಿಜಾಪುರ’ ಎಂಬ ಹಾಡು ಹಾಡಲು ಆರಂಭಿಸಿದರು. ಕಾರ್ಯಕರ್ತರು ಕೇಕೇ, ಶಿಳ್ಳೆ, ಚಪ್ಪಾಳೆಯ ಸುರಿಮಳೆ ಗೈದರು. ಬೆಳ್ಳುಬ್ಬಿ ಮೊಗದಲ್ಲಿ ಮಂದಹಾಸ ಮೂಡಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.