ADVERTISEMENT

ಮದುವೆ ಮುಂಚೆ ಹೇಗಿದ್ಯಪ್ಪ ದೊರೆ...

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 20:44 IST
Last Updated 1 ಜುಲೈ 2017, 20:44 IST

ತುಮಕೂರು: ‘ಈಗಲೇ ಈ ರೀತಿ ಇದ್ದೀಯಾ. ಮದುವೆ ಮುಂಚೆ ಹೇಗಿದ್ದಪ್ಪ ದೊರೆ’ ಹೀಗೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡ ಅವರತ್ತ ವಾರೆ ನೋಟ ಬೀರಿ ನಕ್ಕರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ.

ಅವರ ಈ ಚಟಾಕಿ ಮಾತು ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಸಭೆಯಲ್ಲಿ ನಗುವಿನ ಅಲೆ ಎದ್ದಿತು. ಜಿಲ್ಲಾಡಳಿತ ಭವನದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ತಹಶೀಲ್ದಾರರ ಜೊತೆ ಸುರೇಶ ಗೌಡ ಪದೇ ಪದೇ ಜಟಾಪಟಿ ನಡೆಸುತ್ತಿದ್ದರು.  

‘ಈ ತಹಶೀಲ್ದಾರ್ ನಿಮ್ಮ ಕ್ಯಾಂಡಿಡೇಟ್ ಅಲ್ಲವಾ ಸರ್. ತುಂಬಾ ಒಳ್ಳೆಯವರು, ಸಾಧು ಮನುಷ್ಯ. ಆದರೆ ಸಿಕ್ಕಾಪಟ್ಟೆ ಪುಕ್ಕಲ. ರೈತರ ಕೆಲಸ ಮಾಡಿಕೊಡಿ ಎಂದರೆ ಎಲ್ಲದಕ್ಕೂ ಹೆದರುತ್ತಾರೆ. ನೀವು ಅವರಿಗೆ ಈ ಸಭೆಯಲ್ಲಿಯೇ ರೈತರ ಪರ ಕೆಲಸ ಮಾಡುವಂತೆ  ಸೂಚನೆ ನೀಡಬೇಕು’ ಎಂದು ಏರು ಧ್ವನಿಯಲ್ಲಿ ಪಟ್ಟು ಹಿಡಿಯುತ್ತಿದ್ದರು. ಜಯಚಂದ್ರ, ಮಾತನಾಡಲು ಮುಂದಾಗುತ್ತಿದ್ದಂತೆ ಥಟ್ಟನೆ ನಡುವೆ ಬಾಯಿ ಹಾಕುತ್ತಿದ್ದರು.

ADVERTISEMENT

ಗೌಡರನ್ನು ದೊರೆ ಎಂದು ಸಂಬೋಧಿಸುತ್ತಿದ್ದ ಸಚಿವರು, ‘ಗೌಡ, ಎಷ್ಟು ವರ್ಷಾಯಿತು ನಿನ್ನ ಮದುವೆಯಾಗಿ’ ಎಂದರು. ಶಾಸಕರು ‘25 ವರ್ಷ ಸರ್’ ಎಂದ ತಕ್ಷಣ ‘ಈಗ ಇಷ್ಟು ಜೋರಾಗಿದ್ದೀಯ. ಮದುವೆಗೂ ಮುಂಚೆ ಹೇಗಿದ್ಯಪ್ಪ’ ಎಂದಾಗ ಇಡೀ ಸಭೆ ನಗೆಗಡಲಲ್ಲಿ ಮುಳುಗಿತು.
–ಡಿ.ಎಂ.ಕುರ್ಕೆ ಪ್ರಶಾಂತ್

*
ದೇವರಿಗೆ ‘ಕದ್ದ ಹೂವಿನ ಪೂಜೆ’
ದಾವಣಗೆರೆ:
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರು ‘ಅಮೆರಿಕದ ಸೇಬು’ ಹಾಗೂ ನಮ್ಮೂರಲ್ಲಿ ನಿತ್ಯ ನಡೆಯುವ ‘ದೇವರಿಗೆ ಕದ್ದ ಹೂವಿನ ಪೂಜೆ’ಯ ವೃತ್ತಾಂತ ಹೇಳುವ ಮೂಲಕ ಸಭಿಕರನ್ನು ಚಿಂತನೆಗೆ ಹಚ್ಚಿದರು. ಅಮೆರಿಕದ ಟಕೊಮಾ ಊರಿಗೆ ತಾವು ತೆರಳಿದ್ದಾಗ ಆದ ಅನುಭವವನ್ನು ಭೈರಪ್ಪ ಹಂಚಿಕೊಂಡರು.

‘ನಾನು ಉಳಿದುಕೊಂಡ ಮನೆಯ ಬಳಿ ಸೇಬು ಗಿಡದಲ್ಲಿ ಬಹಳಷ್ಟು ಹಣ್ಣುಗಳು ಬಿಟ್ಟಿದ್ದವು. ಅಲ್ಲಿ ಎರಡು ಮನೆಗಳ ನಡುವೆ ಬೇಲಿ ಹಾಕುವುದಿಲ್ಲ. ಪಕ್ಕದಲ್ಲೇ ಮಕ್ಕಳು ಆಟವಾಡುತ್ತಿದ್ದರೂ ಒಂದು ಹಣ್ಣನ್ನೂ ಕಿತ್ತುಕೊಳ್ಳಲಿಲ್ಲ. ಈ ಬಗ್ಗೆ ಅಲ್ಲಿನ ಶಿಕ್ಷಕರನ್ನು ವಿಚಾರಿಸಿದೆ. ‘ನನಗೆ ಸೇರದೇ ಇರುವುದನ್ನು ತೆಗೆದುಕೊಳ್ಳುವುದು ಕಳ್ಳತನ’ ಎಂಬುದನ್ನು ಪಾಲಕರು ಮಕ್ಕಳಿಗೆ ಬಾಲ್ಯದಲ್ಲೇ ಮನವರಿಕೆ ಮಾಡಿಕೊಡುತ್ತಾರೆ. ಇದು ಇಲ್ಲಿನ ಶಿಕ್ಷಣದ ಒಂದು ಭಾಗವೂ ಆಗಿದೆ’ ಎಂದು ಅವರು ಹೇಳಿದಾಗ ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಆಲೋಚನೆ ಬಂತು’ ಎನ್ನುತ್ತಿದ್ದಂತೆ ಸಾಹಿತ್ಯಾಸಕ್ತರು ನಗೆಗಡಲಿನಲ್ಲಿ ತೇಲಿದರು.  

‘ನಮ್ಮೂರಲ್ಲಿ ಮನೆಯ ಕಾಂಪೌಂಡ್‌ ಒಳಗೆ ಬಿಟ್ಟಿರುವ ಹೂವು ಬೆಳಿಗ್ಗೆ ಕತ್ತಲು ಕಳೆಯುವುದರೊಳಗೆ ಕಿತ್ತುಕೊಂಡು ಹೋಗುತ್ತಾರೆ. ಇದನ್ನು ಕಂಡು ನಾವೇನಾದರು ಕೇಳಿದರೆ, ‘ದೇವರಿಗೆ ಕಣ್ರೀ’ ಎಂದು ನಮ್ಮನ್ನೇ ಸುಮ್ಮನಾಗಿಸುತ್ತಾರೆ. ವಾಯುವಿಹಾರಕ್ಕೆ ಹೋಗುವಾಗ ಹೂವು ಕೀಳಲು ಸಣ್ಣ ಕೊಕ್ಕೆಯನ್ನೂ ಜೊತೆಗೆ ತೆಗೆದುಕೊಂಡು ಹೋಗುತ್ತಾರೆ. ದೇವರಿಗೆ ಕದ್ದ ಹೂವಿನಿಂದ ನಿತ್ಯ ಪೂಜೆ ಮಾಡುತ್ತಾರೆ!’ ಎಂದು ಭೈರಪ್ಪ ನಗುತ್ತಲೇ ಹೇಳಿದಾಗ, ಅಲ್ಲಿದ್ದ ಕೆಲವರ ಮುಖ ಸ್ವಲ್ಪ ಕಪ್ಪಿಟ್ಟಿತು.

‘ನಮ್ಮವರಲ್ಲಿ ನೈತಿಕತೆ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ನೈತಿಕ ಶಿಕ್ಷಣದ ಬಗ್ಗೆ ನಮ್ಮ ಮೇಸ್ಟ್ರಲ್ಲೇ ಸ್ಪಷ್ಟತೆ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
–ವಿನಾಯಕ ಭಟ್‌

*
ನಿಮ್ಮ ಕನ್ನಡ ಬೇರೇನೆ ಇದೆ, ಇಂಗ್ಲಿಷ್‌ನಲ್ಲಿ ವಿವರಿಸಿ
ಧಾರವಾಡ:
‘ನಿಮ್ಮ ಕನ್ನಡಕ್ಕೂ ನನ್ನ ಕನ್ನಡಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಹೀಗಾಗಿ ಸಾಧ್ಯವಾದಷ್ಟು ಅಂಕಿ ಅಂಶಗಳನ್ನು ಇಂಗ್ಲೀಷ್‌ನಲ್ಲಿ ಹೇಳಿ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವಾ ಅವರ ಮನವಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಬ್ಬಿಬ್ಬಾದರು.

‘ಜಿಲ್ಲೆಯ ಶಾಲೆಗಳ ಮಾಹಿತಿ ನೀಡುತ್ತಿದ್ದ ಡಿಡಿಪಿಐ ಎನ್‌.ಎಚ್.ನಾಗೂರ ಅವರು ಸಂಖ್ಯೆಗಳನ್ನು ವಿವರಿಸುವಾಗ ಎರಡುನೂರಾ ಐವತ್ತೊಂದು (251) ಎಂದರು. ‘ಏನಮ್ಮಾ, ಯು ಮೀನ್‌ ಸೆವೆನ್ ಹಂಡ್ರೆಡ್‌?’ ಎಂದು ಕೇಳಿದಾಗ ಡಿಡಿಪಿಐ ತಾನೇ ತಪ್ಪು ಹೇಳಿದೆನೇ ಎಂಬ ಅನುಮಾನಕ್ಕೀಡಾದರು.

ತಕ್ಷಣ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ‘ದಕ್ಷಿಣ ಕನ್ನಡದವರಾದ ಮೇಡಂ ಕನ್ನಡಕ್ಕೂ ನಮ್ಮ ಈ ಭಾಗದ ಕನ್ನಡಕ್ಕೂ ವ್ಯತ್ಯಾಸವಿರುವುದರಿಂದ ಅವರಿಗೆ ಇಂಗ್ಲೀಷ್‌ನಲ್ಲೇ ಸಂಖ್ಯೆಗಳನ್ನು ವಿವರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ ಅಧಿಕಾರಿಗಳು, ಆಡಳಿತ ಭಾಷೆ ಕನ್ನಡವನ್ನು ಬದಿಗೊತ್ತಿ ತಮ್ಮ ಇಂಗ್ಲಿಷ್ ಪಾಂಡಿತ್ಯವನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡರು.
ಇ.ಎಸ್‌.ಸುಧೀಂದ್ರ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.