ADVERTISEMENT

ಮೆಟ್ರೊ ಪಯಣವೂ... ಮುಖ್ಯಮಂತ್ರಿ ಮೌನವೂ...

ಪಿ.ವಿ.ಪ್ರವೀಣ್‌ ಕುಮಾರ್‌
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST

ಬೆಂಗಳೂರು:  ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಎಲ್ಲ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಇಂಟರ್‌ಚೇಂಜ್‌ ನಿಲ್ದಾಣಕ್ಕೆ ಭೇಟಿ ಕೊಟ್ಟಿದ್ದರು.  

ಅವರು ಮೊದಲ ಬಾರಿ ರೈಲಿನಲ್ಲಿ ಪ್ರಯಾಣಿಸುವ ಚಿತ್ರವನ್ನು ಸೆರೆ ಹಿಡಿಯಲು ಟಿ.ವಿ.ಚಾನೆಲ್‌ಗಳ ವಿಡಿಯೊ ಗ್ರಾಫರ್‌ಗಳು ಹಾಗೂ ಪತ್ರಿಕಾ  ಛಾಯಾಗ್ರಾಹಕರು ನಾಮುಂದು– ತಾಮುಂದು ಎಂದು ಮುಗಿಬಿದ್ದರು. ಈ ನೂಕಾಟ, ತಳ್ಳಾಟದಲ್ಲಿ ಕೆಲವರು ಸಿದ್ದರಾಮಯ್ಯ ಅವರ ಮೈಮೇಲೆ ಬಿದ್ದ ಪ್ರಸಂಗವೂ ನಡೆಯಿತು.

ಕಾಮಗಾರಿ ವೀಕ್ಷಿಸಿದ ಬಳಿಕ ರಾಜಕಾರಣಿಗಳು ಸಾಮಾನ್ಯವಾಗಿ ಮಾಧ್ಯಮದವರ ಜೊತೆ ಮಾತನಾಡುತ್ತಾರೆ. ವಿಳಂಬವಾಗಿಯಾದರೂ ನಮ್ಮ ಮೆಟ್ರೊ ಯೋಜನೆಯ ಮೊದಲ ಹಂತ ಸಂಪನ್ನಗೊಂಡ ಬಗ್ಗೆ ಮುಖ್ಯಮಂತ್ರಿ  ಪ್ರತಿಕ್ರಿಯೆ ಪಡೆಯಲು  ಸುದ್ದಿಗಾರರು ಕಾಯುತ್ತಾ ನಿಂತಿದ್ದರು. ಆದರೆ ಸಿದ್ದರಾಮಯ್ಯ ಮಾಧ್ಯಮದವರತ್ತ ತಿರುಗದೆ ನಿಲ್ದಾಣದಿಂದ ಹೊರ ನಡೆದರು.

ADVERTISEMENT

‘ಮೈಮೇಲೆ ಬಿದ್ದ ಪತ್ರಕರ್ತರ ಬಗ್ಗೆ ಸಿ.ಎಂ. ಮುನಿಸಿಕೊಂಡಿದ್ದಾರೆ’ ಎಂದು ಬೆಂಗಳೂರು ಮೆಟ್ರೊ ರೈಲು  ನಿಗಮದ ಅಧಿಕಾರಿಗಳು ಗುಸು ಗುಸು ಮಾತನಾಡಲಾರಂಭಿಸಿದರು. ವಿಧಾನ ಪರಿಷತ್‌ ಸಭಾಪತಿ ವಿರುದ್ಧ ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಅದೇ ದಿನ ಸೋಲಾಗಿತ್ತು. ‘ಈ ಮುಜುಗರದ ಪ್ರಸಂಗದ ಬಗ್ಗೆ ಪ್ರಶ್ನೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಮಾತನಾಡಲಿಲ್ಲ’ ಎಂಬುದು ಸುದ್ದಿಗಾರರ ಲೆಕ್ಕಾಚಾರವಾಗಿತ್ತು.

ಈ ಎಲ್ಲ ಚರ್ಚೆಗಳು ನಡೆಯುವಾಗ  ಮುಖ್ಯಮಂತ್ರಿ ಮಾತ್ರ ಸಚಿವರಾದ ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕ ಗೋವಿಂದರಾಜು ಅವರ ಜೊತೆ ಜನಾರ್ದನ ಹೋಟೆಲ್‌ನಲ್ಲಿ ಮಸಾಲೆ ದೋಸೆ ಮೆಲ್ಲುತ್ತಿದ್ದರಂತೆ. ಅವರು ಮೆಟ್ರೊ ಕಾಮಗಾರಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಏಕೆ ನಿರಾಕರಿಸಿದರು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.