ADVERTISEMENT

ಮೈಗೆ ಎಣ್ಣೆ ಹಚ್ಕೊಂಡಿಲ್ಲ...

ಮಲ್ಲೇಶ್ ನಾಯಕನಹಟ್ಟಿ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಯಾದಗಿರಿ: ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಸರ್ಕಾರ ಭೂಮಿ ಒದಗಿಸದಿರುವುದನ್ನು ಖಂಡಿಸಿ ವಕೀಲರಿಂದ ಇತ್ತೀಚೆಗೆ ಅನಿರ್ದಿಷ್ಟಾವಧಿ ಹೋರಾಟ ಆರಂಭವಾಯಿತು. ಎಂಟು ದಿನಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಕ್ಕೆ ಸೊಪ್ಪು ಹಾಕಲಿಲ್ಲ.

ರೊಚ್ಚಿಗೆದ್ದ ವಕೀಲರು ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ಚಿಸಿದರು. ಇದೇ ಸಮಯ ಕಾಯುತ್ತಿದ್ದ ಬಿಜೆಪಿ ಮುಖಂಡರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ವಕೀಲರ ಮೆಚ್ಚುಗೆ ಗಳಿಸಿದರು. ಜೊತೆಗೆ  ಜಿಲ್ಲೆಯ ಇದ್ದಬದ್ದ ಸಂಘಟನೆಗಳಿಂದಲೂ ವಕೀಲರಿಗೆ ನಿತ್ಯ ಭರಪೂರ ಬೆಂಬಲ ವ್ಯಕ್ತವಾಯಿತು. ಆದರೂ, ಸಚಿವರು ಮಾತ್ರ ಕ್ಯಾರೇ ಅನ್ನಲಿಲ್ಲ.

ಇದರಿಂದ ಬೇಸತ್ತ ವಕೀಲರು ಜಿಲ್ಲಾ ಬಂದ್‌ ಘೋಷಿಸಿಬಿಟ್ಟರು. ಬಂದ್‌ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಎದ್ದುಬಿದ್ದು ಓಡಿ ಬಂದ ಸಚಿವರು, ಗಬ್ಬುನಾರುವ ಹಳೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಯೊಂದಿಗೆ ತಾಸಿಗೂ ಹೆಚ್ಚು ಕಾಲ ತಲೆಕೆಡಿಸಿಕೊಂಡು ಸಭೆ ನಡೆಸಿದರು. ಸಚಿವರ ಆತಂಕ ಕಂಡು, ಅದುವರೆಗೂ ವಕೀಲರಿಗೆ ಜಗ್ಗದಿದ್ದ ಮಹಿಳಾ ಜಿಲ್ಲಾಧಿಕಾರಿ ‘ಮಿನಿ ವಿಧಾನಸೌಧದ ಬಳಿಯ 15 ಎಕರೆ ಕಂದಾಯ ಭೂಮಿಯನ್ನು ವಕೀಲರಿಗೆ ಕೊಟ್ಟುಬಿಡೋಣ ಸಾರ್’ ಎಂದು  ಸಲಹೆ ಕೊಟ್ಟರು.

ಸಚಿವರು ನೇರವಾಗಿ ಹೋರಾಟದ ಸ್ಥಳಕ್ಕೆ ಬಂದು, ‘ನಿಮಗ ಮೂರ್ ಆಪ್ಷನ್ಸ್‌ ಅದಾವು ಕೇಳ್ರಿ’ ಎಂದು ಮಾತಿಗೆ ಶುರುವಿಟ್ಟರು.

ಮೊದಲೇ ಸಚಿವರ ಮೇಲೆ ಆಕ್ರೋಶಗೊಂಡಿದ್ದ ವಕೀಲರು ಛೂಬಾಣದಂತೆ ಪ್ರಶ್ನೆಗಳನ್ನು ಎಸೆಯತೊಡಗಿದರು. ತಾಳ್ಮೆ ಕಳೆದುಕೊಂಡ ಸಚಿವರು ‘ನೋಡ್ರಿ ನಾ ಏನ್‌ ಮೈಗೆ ಎಣ್ಣೆ ಹಚ್ಕೊಂಡು ಬಂದಾಂವ ಅಲ್ಲ’ ಎಂದು ಹೇಳುತ್ತಿದ್ದಂತೆ, ಈಗಿನ್ನೂ  ಕನ್ನಡ ಕಲಿಯುತ್ತಿರುವ ಜಿಲ್ಲಾಧಿಕಾರಿ ಸಚಿವರ ಮೈ ನೋಡತೊಡಗಿದರು! ಆಪ್ತ ಸಹಾಯಕನಿಂದ ಮಾತಿನ ಅರ್ಥ ತಿಳಿದು ಗೊಳ್ ಎಂದು ನಕ್ಕುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.