ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2016, 19:30 IST
Last Updated 19 ನವೆಂಬರ್ 2016, 19:30 IST

ಹೆಸರೇಳ್ರೀ... ನಿಮ್ಮ ಪ್ರಶ್ನೆಗೆ ಉತ್ತರಿಸುವೆ...
ವಿಜಯಪುರ:
‘ನಿಮ್ಮ ಹೆಸರೇಳ್ರೀ... ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡ್ತೇನೆ...’ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಲ್ಲೇಶ ವೀರಯ್ಯಶೆಟ್ಟಿ ಗಾಣಗಾಪುರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಿಯಿದು.

ಮಂಡಳಿಯ ಮತ್ತೊಬ್ಬ ಸದಸ್ಯ ಶಿವಯ್ಯಸ್ವಾಮಿ ಅವರ ಜತೆ ಮಲ್ಲೇಶ, ಪ್ರಾಣಿಗಳ ಕಲ್ಯಾಣಕ್ಕಾಗಿ ಮಂಡಳಿ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಾಗ ಗೋಹತ್ಯೆ ನಿಷೇಧ, ದನದ ಮಾಂಸ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದರು.

ಆಗ ಪತ್ರಕರ್ತರೊಬ್ಬರು ಸ್ಪಷ್ಟನೆ ಕೇಳುತ್ತಿದ್ದಂತೆ ಆಕ್ರೋಶಗೊಂಡ ಸದಸ್ಯರಿಬ್ಬರೂ ‘ನಿಮಗೆ ಗೋವು ಮಾತೆಯಲ್ಲವೇ’ ಎಂದು ಪ್ರಶ್ನಿಸಿದರು. ‘ಪತ್ರಕರ್ತರ ಪ್ರಶ್ನೆಗೆ ಉತ್ತರ ಇದಲ್ಲ’ ಎನ್ನುತ್ತಿದ್ದಂತೆ, ‘ನೀವು ಭಾರತೀಯ ನಾಗರಿಕರಲ್ಲವೇ’ ಎಂದು ಮರು ಪ್ರಶ್ನೆ ಹಾಕಿದರು.

ಉಳಿದ ಪತ್ರಕರ್ತರು ಸದಸ್ಯರ ಈ ಪ್ರಶ್ನೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ, ಮಲ್ಲೇಶ ವೀರಯ್ಯಶೆಟ್ಟಿ ಮಾತ್ರ ಆಕ್ರೋಶಕ್ಕೆ ಒಳಗಾದರು. ಸದಸ್ಯರ ವರ್ತನೆಯಿಂದ ಬೇಸರಗೊಂಡ ಪತ್ರಕರ್ತರು ‘ನೀವು ಕೇಂದ್ರ ಸರ್ಕಾರದ ಅಧೀನ ಮಂಡಳಿಯ ಪ್ರತಿನಿಧಿಗಳೋ ಇಲ್ಲ ಸಂಘಟನೆಯ ಕಾರ್ಯಕರ್ತರೋ’ ಎಂದು ಕೇಳುತ್ತಿದ್ದಂತೆ ಸದಸ್ಯರಿಬ್ಬರೂ ಮೌನಕ್ಕೆ ಶರಣಾದರು. 
–ಡಿ.ಬಿ.ನಾಗರಾಜ

***
ಕನಕ ಜಯಂತಿಯಲ್ಲಿ ಸಮಯ ಪ್ರಜ್ಞೆ ಪಾಠ
ಕಲಬುರ್ಗಿ:
ಇಲ್ಲಿನ ಡಾ. ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ವತಿಯಿಂದ ಕನಕ ಜಯಂತಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 1ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು.

ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಬೇಕಿದ್ದ ಪ್ರಾಧ್ಯಾಪಕಿ ಡಾ. ಚಂದ್ರಕಲಾ ಬಿದರಿ ತುಸು ಕೋಪಗೊಂಡಿದ್ದರು. ಉಪನ್ಯಾಸದ ಕೊನೆಯಲ್ಲಿ ಅವರು, ‘ಸಮಯದ ಮಹತ್ವ ಅರ್ಥ ಮಾಡಿಕೊಳ್ಳಬೇಕು.

ನಿಗದಿತ ಸಮಯಕ್ಕೂ ಅರ್ಧ ಗಂಟೆ ಮುಂಚೆಯೇ ಬಂದು ಕಾಯುತ್ತಿದ್ದೆ. ಕನಕದಾಸರ ಭಾವಚಿತ್ರದ ಮೆರವಣಿಗೆ ಬರುವುದು ತಡವಾದ್ದರಿಂದ ಕಾರ್ಯಕ್ರಮ ವಿಳಂಬವಾಯಿತು. ಇನ್ನೊಬ್ಬರ ಸಮಯ ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ’ ಎಂದರು.

ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮತ್ತು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪರಸ್ಪರ ಮುಖ ನೋಡಿಕೊಂಡರು. ಸಾನ್ನಿಧ್ಯ ವಹಿಸಿದ್ದ ಕನಕಗುರು ಪೀಠದ (ಕಲಬುರ್ಗಿ ವಿಭಾಗ) ಸಿದ್ದರಮಾನಂದಪುರಿ ಸ್ವಾಮೀಜಿ ಮಾತು ಆರಂಭಿಸಿ, ‘ಕನಕ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಿದ ನಂತರ ಆರಂಭದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ಆರಂಭ ಆಗುತ್ತಿತ್ತು. ನಂತರ 3ಕ್ಕೆ ಶುರುವಾಗತೊಡಗಿತು. ಈಗ 2.30ಕ್ಕೆ ಆರಂಭವಾಗಿದೆ. ನಿಧಾನವಾಗಿ ಸಮಯಪ್ರಜ್ಞೆ ಮೂಡುತ್ತಿದೆ’ ಎಂದರು!  
–ಸತೀಶ ಬಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.