ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2016, 20:18 IST
Last Updated 3 ಸೆಪ್ಟೆಂಬರ್ 2016, 20:18 IST

ವಿಜಯಪುರ: ರಾಜಕಾರಣಿಗಳೆಲ್ಲರೂ ಬಹಿರಂಗವಾಗಿ ದೂಷಿಸಿಕೊಂಡು, ವ್ಯಂಗ್ಯವಾಗಿ ಟೀಕಿಸಿಕೊಂಡರೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಎಲ್ಲವನ್ನೂ ಮರೆತು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲರ ಮನೆ ಬಾಗಿಲಿಗೆ ಹೋಗುವವರೇ...

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳರ ರಾಜಕೀಯ ವ್ಯಾಖ್ಯಾನವಿದು.

‘ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮ ಸಂಧಾನಕ್ಕಾಗಿ ಎಲ್ಲರ ಬಳಿಗೂ ಹೋಗುತ್ತಾನೆ. ಅದೇ ರೀತಿ ಇಂದು ನಾವೂ ನಮ್ಮ ರಾಜಕಾರಣದ ಸ್ವಾರ್ಥಕ್ಕಾಗಿ ಎಲ್ಲರ ಬಳಿಗೂ ಹೋಗುತ್ತೇವೆ. ಉಳಿದವರೂ ನಮ್ಮ ಬಳಿಗೆ ಬರುತ್ತಾರೆ’ ಎಂದರು. ಇದಕ್ಕೆ ಪತ್ರಕರ್ತರು, ಮಹಾಭಾರತದ ಕತೆ ಬೇಡ.

ADVERTISEMENT

ಪ್ರಸ್ತುತ ವಿಚಾರದ ಬಗ್ಗೆ ಮಾತನಾಡಿ ಎಂದಾಕ್ಷಣವೇ ಬಸನಗೌಡ, ‘ನಾನು ಹಿಂದೂ ಧರ್ಮದ ಪ್ರತಿಪಾದಕನಾದ್ದರಿಂದ ಶ್ರೀಕೃಷ್ಣನ ಉದಾಹರಣೆ ನೀಡಿದೆ. ಇದರ ಬದಲು ದಾವೂದ್‌ ಇಬ್ರಾಹಿಂ ಉದಾಹರಣೆ ಕೊಡಲು ಸಾಧ್ಯವಾ’ ಎಂದು ಟಾಂಗ್‌ ಕೊಟ್ಟರು.

‘ಬಸನಗೌಡ ಯಾವಾಗ ಯಾರನ್ನು ಏತಕ್ಕಾಗಿ ಟೀಕಿಸುತ್ತಾರೆ, ಹೊಗಳುತ್ತಾರೆ ಎಂಬುದು ಇದುವರೆಗೂ ಯಾರಿಗೂ ಅರ್ಥವಾಗಿಲ್ಲ’ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಹಿಂದೆ ಮಾಡಿದ್ದ ಟೀಕೆಯನ್ನು ಮತ್ತೊಬ್ಬರು ನೆನಪಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಯತ್ನಾಳ,

‘ತಪ್ಪು ಕಂಡಾಗ ಬೈಯುತ್ತೇನೆ. ಚಲೋ ಕೆಲಸ ಮಾಡಿದರೆ ಹೊಗಳುತ್ತೇನೆ. ನನ್ನದು ನಾಟಕ ಕಂಪನಿ ಅಲ್ಲ. ಒಟ್ಟಾರೆ ನನ್ನ ಟ್ರ್ಯಾಕೇ ಸರಿಯಿಲ್ಲ’ ಎಂದು ನಗೆಬೀರಿದರು. ಬೇರೆ ವಿಷಯಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ‘ಮುಂದಿನ ಸಂಚಿಕೆ ನೋಡಿ’ ಎಂದು ನಗೆಬಾಂಬ್‌ ಸಿಡಿಸಿ ಪತ್ರಿಕಾಗೋಷ್ಠಿಯನ್ನು  ಮೊಟಕುಗೊಳಿಸಿದರು.

***
ರಾಹುಲ್, ಸೋನಿಯಾ ಇಮೇಜ್ ಹೆಚ್ಚಿಸ್ಬೇಕು...

ಹಾಸನ: ನಗರದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ ಅವರು ಉಸ್ತುವಾರಿ ಸಚಿವ ಎ.ಮಂಜು ಅವರಿಗೆ ಹೇಳಿದ ಹುರುಪಿನ ಮಾತುಗಳಿವು:

‘ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರ ಇಮೇಜ್‌ ಅನ್ನು ನೀವು ಹೆಚ್ಚಿಸಬೇಕು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು. ರಾಜ್ಯ ಮಾತ್ರವಲ್ಲದೆ ದೇಶದಲ್ಲೂ ನೀವು ನಂಬರ್ ಒನ್ ಮಂತ್ರಿಯಾಗಬೇಕು’ ಎಂದು ಹರಸಿದರು. ವೇದಿಕೆಯಲ್ಲಿದ್ದ ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್ ಅವರು ಸಚಿವರತ್ತ ತಿರುಗಿ ಮುಗುಳ್ನಕ್ಕರು.

ಅಷ್ಟಕ್ಕೆ ಸುಮ್ಮನಾಗದ ಮಲ್ಲಾಜಮ್ಮ , ‘ಪ್ರಕಾಶ್ ಅವರೇ ನೀವೂ ನಮ್ಮ ಸಹೋದರರೇ’ ಎಂದುಬಿಟ್ಟರು. ನಂತರದ ಸರದಿ ಪ್ರಕಾಶ್‌ ಅವರದ್ದು, ‘ಜೆಡಿಎಸ್‌ನಿಂದ ಟಿಕೆಟ್‌ ಪಡೆದು ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ದೇವೇಗೌಡರ ಆಶೀರ್ವಾದದಿಂದ ಗೆಲುವು ನನಗೆ ಒಲಿದು ಬರುತ್ತಿದೆ’ ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಜು, ‘ಟಿಕೆಟ್ ನೀವು ತಗೊಂಡಿದ್ದಲ್ಲ, ಅವರಾಗೇ ಕರೆದು ಕೊಟ್ಟಿದ್ದು, ಸರಿಯಾಗಿ ಮಾತಾಡಿ’ ಎಂದು ಹಾಸ್ಯವಾಗಿ ತಿವಿದರು.

***
ಚಟಮುಕ್ತ ಗ್ರಾಮದಲ್ಲಿ ಹೆರಿಗೆ ಜಾಸ್ತಿ!

ದಾವಣಗೆರೆ: ಆದರ್ಶ ಗ್ರಾಮ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಸದರ ಪ್ರಗತಿ ಪರಿಶೀಲನಾ ಸಭೆ ಈಚೆಗೆ ನಡೆಯಿತು. ‘ಮುಸ್ಟೂರು ಗ್ರಾಮವು ಮದ್ಯಪಾನ, ಧೂಮಪಾನ ಹಾಗೂ ಗುಟ್ಕಾಗಳಿಂದ ಮುಕ್ತವಾಗಿದೆಯೇ?’ ಎಂದು ಕೇಳಿದ ಸಂಸದ ಜಿ.ಎಂ.ಸಿದ್ದೇಶ್ವರ, ‘ಗ್ರಾಮದಲ್ಲಿ ಎಷ್ಟು ಹೆಂಡದಂಗಡಿಗಳಿವೆ? ಎಷ್ಟು ಜನ ಧೂಮಪಾನ ಮಾಡ್ತಾರೆ? ಗುಟ್ಕಾ ಎಷ್ಟು ಜನ ತಿಂತಾರೆ?’ ಎಂಬ ಪ್ರಶ್ನೆಗಳನ್ನು ಮುಂದುವರಿಸಿದರು.

ಸಂಸದರ ಪ್ರಶ್ನೆಗಳ ಸುರಿಮಳೆಯಿಂದ ತತ್ತರಿಸಿ ಹೋದ ಪಿಡಿಒ, ‘ಹೆಂಡದಂಗಡಿ ಇಲ್ಲ ಸಾರ್‌; ಆದರೆ, ಬಹಳಷ್ಟು ಜನ ಡ್ರಿಂಕ್ಸ್‌ ತಗೋತಾರೆ. ಪಕ್ಕದೂರಿಗೆ ಹೋಗಿ ಕುಡಿದು ಬರ್ತಾರೆ. ಧೂಮಪಾನ, ಗುಟ್ಕಾ ಅಷ್ಟಾಗಿ ಇಲ್ಲ. ಆದರೆ, ತಿಂಗಳಿಗೊಂದೇ ಹೆರಿಗೆ ಆಗುತ್ತೆ ಅಷ್ಟೆ’ ಎಂದು ಪಟಪಟನೆ ಮಾತು ಮುಗಿಸಿದರು.

ಕಂಗಾಲಾದ ಸಂಸದರು, ‘ಆದರ್ಶ ಗ್ರಾಮದ ಜನ ಎಲ್ಲಾ ರೀತಿಯಿಂದಲೂ ಆದರ್ಶವಾಗಿದ್ದಾರೆಯೇ’ ಎಂದು ಹುಬ್ಬೇರಿಸುತ್ತಿದ್ದಂತೆ ಎದ್ದು ನಿಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ‘ಆದರ್ಶ ಗ್ರಾಮದವರೆಲ್ಲ ಹೆರಿಗೆಗೆ ತಾಲ್ಲೂಕು ಕೇಂದ್ರಕ್ಕೆ ಹೋಗ್ತಾರೆ; ಹೆರಿಗೆ ಸಂಖ್ಯೆ ಜಾಸ್ತಿ ಆಗಿದೆ ಹೊರತು ಕಡಿಮೆ ಆಗಿಲ್ಲ’ ಎಂದರು. ಸಂಸದರು ಇನ್ನಷ್ಟು ತಬ್ಬಿಬ್ಬಾದರು.
-ಡಿ.ಬಿ.ನಾಗರಾಜ, ಕೆ.ಎಸ್‌.ಸುನಿಲ್‌, ಪ್ರಕಾಶ ಕುಗ್ವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.