ADVERTISEMENT

ವೋಟಿಗಾಗಿ ಗುಡಿ ಕಟ್ಸೋದ್ ಅನಿವಾರ್ಯ..!

ವಾರೆಗಣ್ಣು

ಡಿ.ಬಿ, ನಾಗರಾಜ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST

ವಿಜಯಪುರ: ‘ವೋಟಿನಾಸೆಗಾಗಿ ಗುಡಿ ಕಟ್ಸೋದ್ಕೆ ಅನುದಾನ ನೀಡೀವ್ನೀ. 15 ವರ್ಸದಲ್ಲಿ 400–500 ಗುಡಿ ಕಟ್ಟಿರ್ಬೋದು. ಇನ್ನೂ ಪಟ್ಟಿ ಮುಗ್ದಿಲ್ಲ. ಬೇರೆ ಸಾಮಾಜಿಕ ಚಟುವಟಿಕೆಗೆ ಅನುದಾನ ಕೊಡಕ್ಕಾಗ್ತಿಲ್ಲ...’ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಅಸಹಾಯಕ ನುಡಿಗಳಿವು.

ಖಾಸಗಿ ಶಾಲೆಗಳನ್ನು ತೊರೆದು ವಿಜಯಪುರ ತಾಲ್ಲೂಕಿನ ಹಣಮಸಾಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರ್ಪಡೆಯಾದ 112 ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ, ಗ್ರಾಮಸ್ಥರು ಶಾಲೆಯ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದಾಗ ಸಚಿವರು ನೀಡಿದ ಉತ್ತರವಿದು.

‘ಪ್ರತಿ ವರ್ಸ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನ ಹಂಚಿಕೆ ಮುನ್ನ ಆಪ್ತ ಸಹಾಯಕ ಭೋಸಲೆ ಅವರು ಹೇಳುವ ಮಾತು ಒಂದೇ, ‘ಈ ವರ್ಸ ಒಂದಿಪ್ಪತ್ತು ಗುಡಿಗಳು ಬಂದಾವೆ. ಇವಷ್ಟಕ್ಕೆ ರೊಕ್ಕ ಕೊಟ್ರೆ ಮುಗೀತು. ಮುಂದಿನ ವರ್ಸದಿಂದ ಬೇರೆ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೌದು’ ಅಂತ.

ADVERTISEMENT

ಆದ್ರೇ ಮುಂದಿನ ವರ್ಸವೂ ಅದೇ ಪ್ರಶ್ನೆ. ಅದೇ ಉತ್ತರ. ವೋಟಿನಾಸೆಗಾಗಿ ನಾನು ಸಹ ಗುಡಿಗಳಿಗೇ ಹೆಚ್ಚಿನ ಅನುದಾನ ನೀಡಿದ್ದೇನೆ. ನಮ್ಮ ಜನರೂ ಹಂಗೆ ಇದ್ದಾರೆ. ಸಾಲಿಗೆ, ಶೌಚಾಲಯಕ್ಕೆ ಬೇಡಲ್ಲ. ಊರ ಗುಡಿಗೆ ಕೊಡ್ರಿ ಅನ್ತಾವ್ರೇ. ಕೊಡದಿದ್ರೇ ಮುನಿಸಿಕೊಳ್ತಾರೆ.

ನೀವು ಮಾತ್ರ ಸಾಲಿಗೆ ಅನುದಾನ ಕೇಳೀರಿ. ಉಳಿದೆಡೆ ಕೇಳಿದ್ರೂ ನಮ್ಮ ಶಾಸಕರು ಸಹ ಸಾಲಿಗೆ ಅನುದಾನ ಕೊಟ್ರೇ ಯಾರೂ ವೋಟ್‌ ಹಾಕಲ್ಲ ಅಂತ ಕೊಡಲ್ಲ. ಆದ್ರೆ ನಾ ಖುಷಿಯಿಂದ ₹ 10 ಲಕ್ಷ ಕೊಡ್ತೀನಿ’ ಎನ್ನುತ್ತಿದ್ದಂತೆ ಗ್ರಾಮಸ್ಥರ ಸಂಭ್ರಮ ಮುಗಿಲುಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.