ADVERTISEMENT

ಶಾಸಕರ ಬೈಗುಳವೇ ‘ಪ್ರಸಾದ’ವಯ್ಯಾ

ವಾರೆಗಣ್ಣು

ಶರತ್‌ ಹೆಗ್ಡೆ
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST

ಶಾಸಕರ ಬೈಗುಳವೇ ‘ಪ್ರಸಾದ’ವಯ್ಯಾ
ಕೊಪ್ಪಳ:
  ಕೊಪ್ಪಳದ ಕಾಂಗ್ರೆಸ್‌ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಗಳಿಗೆ ಧಮಕಿ ಹಾಕಿ ಪೊಲೀಸ್‌ ವಶದಲ್ಲಿದ್ದ ಮರಳು ದಂಧೆಕೋರರು, ಮಟ್ಕಾ ಬುಕ್ಕಿಗಳನ್ನು ಬಿಡಿಸಿ ತಮ್ಮ ಕಾರಿನಲ್ಲಿ ಕರೆದೊಯ್ದ ವಿಷಯ ಮುಖ್ಯಮಂತ್ರಿ ಕಿವಿಗೂ ತಲುಪಿದೆ.

 ಮಂಗಳಾರತಿ ಮಾಡಿಸಿಕೊಂಡಿರುವ ಪೊಲೀಸ್‌ ಅಧಿಕಾರಿಗಳು ಪ್ರಕರಣದ ಬಗ್ಗೆ ಬಾಯಿ ಬಿಡುತ್ತಿಲ್ಲ. ಠಾಣೆಯ ಸಿಸಿಟಿವಿ ಕ್ಯಾಮೆರಾ ಕೆಟ್ಟಿತ್ತು ಎಂದು ನೆಪ ಹೇಳಿ ಪ್ರಕರಣವನ್ನು ಸಮಾಧಿ ಮಾಡಿದ್ದಾರೆ ಎನ್ನುವುದು ಮೂಕ ಪ್ರೇಕ್ಷಕ ಸಿಬ್ಬಂದಿ ಮತ್ತು ಪ್ರತ್ಯಕ್ಷದರ್ಶಿಗಳ ಬೇಸರ.

ಏ. 3ರಂದು ರಾತ್ರಿ ಪೊಲೀಸರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಮಾಲೀಕ ಹಾಗೂ ಅವನ ಆಪ್ತ, ಮಟ್ಕಾ ಬುಕ್ಕಿಯೊಬ್ಬನನ್ನು ಎಳೆದು ತಂದರು. ಇಬ್ಬರಿಗೂ ಚೆನ್ನಾಗಿಯೇ ಬಿಸಿಬಿಸಿ ಕಜ್ಜಾಯ ಸಿಕ್ಕಿದವು. ಶಾಸಕರಿಗೆ ವಿಷಯ ಗೊತ್ತಾಗಿ ಠಾಣೆಗೆ ಕರೆ ಮಾಡಿದರು. ‘ವಿಚಾರಣೆಯಲ್ಲಿ’ ಬ್ಯುಸಿಯಾಗಿದ್ದ ಪೊಲೀಸರು ಕರೆಯನ್ನು ಸ್ವೀಕರಿಸಲಿಲ್ಲ. ಸಿಟ್ಟಿನಿಂದ ಕುದಿಯುತ್ತಿದ್ದ ಶಾಸಕರು ಕಾರು ಚಾಲನೆ ಮಾಡಿಕೊಂಡು ಠಾಣೆಗೆ ಬಂದು ತಮ್ಮ ‘ಶಬ್ದಕೋಶ’ವನ್ನೇ ಪೊಲೀಸರ ಮುಂದೆ ತೆರೆದಿಟ್ಟರು. ಅದೇನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ಆರೋಪಿಗಳನ್ನು ಕಾರಿನಲ್ಲಿ ತುಂಬಿಕೊಂಡು, ಬಂದಷ್ಟೇ ವೇಗವಾಗಿ ಹೋದರು.

ಮಾಧ್ಯಮದವರು ಕೇಳಿದಾಗ, ಇನ್ಸ್‌ಪೆಕ್ಟರ್‌ನಿಂದ ಹಿಡಿದು ಎಸ್‌ಪಿವರೆಗೂ ಅಂಥದ್ದೇನೂ ನಡೆದಿಲ್ಲ ಎಂಬ ಮಾತೇ ಉತ್ತರ.

ಘಟನೆಯ ದಾಖಲೆ ಕೊಟ್ಟರೆ ತನಿಖೆ ಮಾಡಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದರೆ, ಅಂದು ಪಕ್ಕದಲ್ಲೇ ಇದ್ದ ಶಾಸಕರು, ಅಂಥದ್ದೇನೂ ನಡೆದಿಲ್ಲ ಎಲ್ಲವೂ ಸುಳ್ಳು ಎಂದು ಹೇಳಿ ಮುಖ ಒರೆಸಿಕೊಂಡರು.
*
ಸಚಿವರ ಕಾಗೆ ಪುರಾಣ
ಬೆಳಗಾವಿ: 
ಕಾಗೆಯನ್ನು ಬಹುತೇಕರು ಅಪಶಕುನದ ಸಂಕೇತ ಎಂದೇ ನಂಬುತ್ತಾರೆ. ಆದರೆ, ಸಣ್ಣ ಕೈಗಾರಿಕೆ ಸಚಿವ ಸತೀಶ ಜಾರಕಿಹೊಳಿ ಇದಕ್ಕೆ ತದ್ವಿರುದ್ಧ.

ಇತ್ತೀಚೆಗೆ ನಡೆದ ಖಗ್ರಾಸ ಚಂದ್ರಗ್ರಹಣದ ದಿನ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ಸ್ಮಶಾನದಲ್ಲಿ ಉಪಾಹಾರ ಕೂಟ ಹಮ್ಮಿಕೊಂಡಿದ್ದ ಸಚಿವರು ‘ವಡಾ ಪಾವ್‌’ ತಿನ್ನುತ್ತ ಕಾಗೆ ಪುರಾಣವನ್ನು ಬಿಡಿಸಿಟ್ಟರು. ‘ಬಾಲ್ಯದಲ್ಲಿ ನನ್ನ ತಲೆ ಮೇಲೆ ಒಮ್ಮೆ ಕಾಗೆ ಕುಳಿತಿತ್ತು. ಕೆಲವು ವರ್ಷಗಳ ಹಿಂದೆ ಬೈಕ್‌ನಲ್ಲಿ ಹೋಗುತ್ತಿದ್ದಾಗಲೂ ಕಾಗೆ ಬಡಿದಿತ್ತು. ನಾನೇನೂ ಯಾವುದೇ ಶಾಂತಿ–ಹೋಮ ನಡೆಸಲಿಲ್ಲ. ಇದರಿಂದ ನನಗೆ ಯಾವುದೇ ಆಪತ್ತು ಬಂದಿಲ್ಲ. ಬದಲಾಗಿ ವೈಯಕ್ತಿಕ ಹಾಗೂ ರಾಜಕೀಯ ಜೀವನದಲ್ಲಿ ಒಳ್ಳೆಯದೇ ಆಗಿದೆ’ ಎಂದು ನಗೆ ಬೀರಿದರು.

‘ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ರಾಹುಕಾಲ– ಮುಹೂರ್ತ ನೋಡಿ ನನಗೆ ಅಭ್ಯಾಸ ಇಲ್ಲ. ಬಹುಶಃ ರಾಜ್ಯದಲ್ಲಿ ಮುಹೂರ್ತ ನೋಡದೇ ನಾಮಪತ್ರ ಸಲ್ಲಿಸುವ ರಾಜಕಾರಣಿ ನಾನೊಬ್ಬನೇ ಇರಬೇಕು. ಹೀಗಿದ್ದರೂ ಕಳೆದ 18 ವರ್ಷಗಳಿಂದ ನಾಲ್ಕು ಚುನಾವಣೆಯಲ್ಲಿ ಗೆದ್ದಿದ್ದೇನೆ’ ಎಂದರು.

‘ನನ್ನ ಮದುವೆ ನಡೆದಾಗ ಹಿಂದೆ– ಮುಂದೆ ಯಾರೂ ಇರಲಿಲ್ಲ. ಕುಂಡಲಿ ನೋಡಿಸಿರಲಿಲ್ಲ. ಪುರೋಹಿತರನ್ನೂ ಕರೆಸಿರಲಿಲ್ಲ. ಬೆಂಗಳೂರಿನ ಸದಾಶಿವನಗರದ ಸಣ್ಣ ಕೋಣೆಯಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದೆ. ಇಂದಿಗೂ ನಮ್ಮ ದಾಂಪತ್ಯ ಜೀವನ ಅನ್ಯೋನ್ಯವಾಗಿದೆ. ಮಕ್ಕಳಿಗೂ ಒಳ್ಳೆಯದಾಗುತ್ತಿದೆ’ ಎಂದು ಸಚಿವರು ಮೌಢ್ಯ ಬಿತ್ತುವವರ ಗ್ರಹಚಾರ ಬಿಡಿಸಿದರು.
*
ಸಿ.ಎಂ.ಗೆ ಗಡ್ಕರಿ ಡಯಟ್‌ ಪಾಠ
ಬೆಂಗಳೂರು:
‘ವೆಲ್‌ಕಮ್‌... ವೆಲ್‌ಕಮ್...’ ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಕರೆದುಕೊಂಡು ‘ಕೃಷ್ಣಾ’ದಲ್ಲಿನ ತಮ್ಮ ಛೇಂಬರ್‌ಗೆ ಹೋದರು. ಇಬ್ಬರೂ ಗಂಭೀರ ಶೈಲಿಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಲು ಇತ್ತೀಚೆಗೆ ಕರೆದಿದ್ದ ಸಭೆಗೂ ಮುನ್ನ  ಈ ಮುಖಂಡರ ನಡುವೆ ಉಭಯಕುಶಲೋಪರಿ ನಡೆಯಿತು.

‘ಆ ಪಾಟೀ ದಪ್ಪ ಇದ್ದ ನೀವು ಅದ್ಹೇಗೆ ಇಷ್ಟೊಂದು ತೆಳ್ಳಗಾಗಿದ್ದು (ಸ್ಲಿಮ್‌)...’ ಎಂದು ಸಿದ್ದರಾಮಯ್ಯ ಅವರು ಗಡ್ಕರಿ ಅವರನ್ನು ಕೇಳಿದರು.

ಈ ಪ್ರಶ್ನೆಯಿಂದ ಪುಳಕಿತರಾದ ಗಡ್ಕರಿ ‘ಅದಕ್ಕೊಂದು ಕಥೆ ಇದೆ... ’ ಎಂದು ಎಲ್ಲವನ್ನೂ ಬಿಡಿಸಿಟ್ಟರು.

‘ನೀವು ನಂಬಲು ಸಾಧ್ಯ ಇಲ್ಲ. ನಾನು ಬರೋಬ್ಬರಿ 35 ಕೆ.ಜಿ ತೂಕ ಇಳಿಸಿದ್ದೇನೆ. ಪ್ರತಿನಿತ್ಯ ಯೋಗ, ವ್ಯಾಯಾಮ ಕಡ್ಡಾಯ. ಊಟ– ತಿಂಡಿಯಲ್ಲಿ ಕಟ್ಟುನಿಟ್ಟಿನ ಡಯಟ್‌...’ ಹೀಗೆ ಹೇಳುತ್ತಾ ತಮ್ಮ ಜೀವನ ಶೈಲಿಯನ್ನು ವಿವರಿಸಿದರು.

ಇದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ‘ನಾನು ಏನು ಮಾಡಿದರೂ ಹೊಟ್ಟೆ ಇಳಿಸಲು ಆಗುತ್ತಿಲ್ಲ.  ನೀವು 35 ಕೆ.ಜಿ ತೂಕ ಇಳಿಸಿರುವುದು ನೋಡಿದರೆ ನಂಬಲು ಸಾಧ್ಯ ಆಗುತ್ತಿಲ್ಲ’ ಎಂದು ಗಡ್ಕರಿ ಅವರನ್ನು ಒಮ್ಮೆ ಮೇಲಿಂದ ಕೆಳಗೆ ಕಣ್ಣಾಯಿಸಿದರು.

ಹೀಗೆ ಮಾತನಾಡುತ್ತಿದ್ದಾಗಲೇ ಅವರು ಕುಳಿತಿದ್ದ ಜಾಗಕ್ಕೇ ತಿಂಡಿ ವ್ಯವಸ್ಥೆ ಆಯಿತು. ಮಸಾಲೆ ದೋಸೆ, ಉದ್ದಿನ ವಡೆ, ಮೈಸೂರು ಪಾಕ್‌...  ಹೀಗೆ ಎಲ್ಲವನ್ನೂ ತಿನ್ನುತ್ತಿದ್ದ  ಗಡ್ಕರಿ ಅವರನ್ನು ಮುಖ್ಯಮಂತ್ರಿ ಒಮ್ಮೆ ನೋಡಿ ‘ಓಹೋ..  ಇದೇ ಇರಬಹುದು ಡಯಟ್‌’ ಎಂದು ಒಳಗೊಳಗೇ ಮುಗುಳ್ನಕ್ಕರು.

ಇಷ್ಟಾದ ಮೇಲೂ ಗಡ್ಕರಿ ಅವರ ಡಯಟ್‌ ಪಾಠ ಮಾತ್ರ ಮುಗಿದಿರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.