ADVERTISEMENT

ಸಂಬಂಧವೊಂದು ಶಿಕ್ಷಾರ್ಹವಾಗುವುದು ಎಷ್ಟು ಸರಿ?

ವಾರದ ಸಂದರ್ಶನ: ಜಯ್ನಾ ಕೊಠಾರಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ

ವಿಜಯ್ ಜೋಷಿ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
-ಚಿತ್ರಗಳು: ರಂಜು ಪಿ.
-ಚಿತ್ರಗಳು: ರಂಜು ಪಿ.   

ಭಾರತೀಯ ದಂಡ ಸಂಹಿತೆಯ (ಐಪಿಸಿ) 377ನೇ ಕಲಮು ಅಸಾಂವಿಧಾನಿಕ ಅಲ್ಲ ಎಂದು ತಾನು 2013ರಲ್ಲಿ ನೀಡಿದ್ದ ತೀರ್ಪನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ. 2013ರ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ‘ಪರಿಹಾರಾತ್ಮಕ ಅರ್ಜಿ’ಯ ವಿಚಾರಣೆ ನಡೆಸಲು ಸಂವಿಧಾನ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಐಪಿಸಿಯ 377ನೇ ಕಲಮು ಸಾಮಾಜಿಕ ವಾಗ್ವಾದದ ಕೇಂದ್ರ ಸ್ಥಾನಕ್ಕೆ ಮತ್ತೆ ಬಂದು ನಿಂತಿದೆ. 377ನೇ ಕಲಮು ಹೇಳುವುದು ಏನನ್ನು? ಈ ಕಲಮು ಅಸ್ತಿತ್ವದಲ್ಲಿ ಇರುವುದರಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾತ್ರವೇ ತೊಂದರೆಯೇ? ಇತರರಿಗೆ ಸಮಸ್ಯೆ ಇಲ್ಲವೇ? ಐಪಿಸಿಯ ನೂರೆಂಟು ಕಲಮುಗಳ ಪೈಕಿ ಒಂದಾಗಿರುವ ಇದರ ಬಗ್ಗೆ ಏಕಿಷ್ಟು ಚರ್ಚೆ?

ಕೌಟುಂಬಿಕ ಹಿಂಸೆ, ಲೈಂಗಿಕ ಅಲ್ಪಸಂಖ್ಯಾತರೂ ಸೇರಿದಂತೆ ಸಮಾಜದ ವಿವಿಧ ವರ್ಗಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳ ವಿರುದ್ಧ ಕಾನೂನು ಹೋರಾಟದಲ್ಲಿ ಭಾಗಿಯಾಗಿರುವ ಸಾಮಾಜಿಕ ಕಾರ್ಯಕರ್ತೆ, ವಕೀಲೆ ಜಯ್ನಾ ಕೊಠಾರಿ ಅವರು ಈ ಬಗ್ಗೆ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಅನೈಸರ್ಗಿಕ ಲೈಂಗಿಕ ಕ್ರಿಯೆಯು ಶಿಕ್ಷಾರ್ಹ ಅಪರಾಧ ಎಂದು ಐಪಿಸಿ 377ನೇ ಕಲಮು ಹೇಳುತ್ತದೆ. ಆದರೆ, ಅನೈಸರ್ಗಿಕ ಲೈಂಗಿಕ ಕ್ರಿಯೆ ಅಂದರೆ ನಿರ್ದಿಷ್ಟವಾಗಿ ಏನು? ‘ಇದು ಅನೈಸರ್ಗಿಕ ಲೈಂಗಿಕ ಕ್ರಿಯೆ’ ಎಂದು ನಿರ್ಧರಿಸಿದವರು ಯಾರು?
ವಂಶಾಭಿವೃದ್ಧಿಯ ಉದ್ದೇಶ ಇಲ್ಲದೆ, ಬೇರೆ ಯಾವುದೇ ಉದ್ದೇಶದಿಂದ ನಡೆಸುವ ಲೈಂಗಿಕ ಕ್ರಿಯೆ ಅನೈಸರ್ಗಿಕ ಎಂದು ಈ ಕಲಮು ಹೇಳುತ್ತದೆ. ಸಂತಾನವೃದ್ಧಿಯ ಉದ್ದೇಶದಿಂದ ಮಾಡುವ ಲೈಂಗಿಕ ಕ್ರಿಯೆ ಮಾತ್ರ ನೈಸರ್ಗಿಕ ಎನ್ನುತ್ತದೆ ಇದು. ವಿವಾಹದ ನಂತರ, ಸಂತಾನ ಅಪೇಕ್ಷೆಯಿಂದ ಮಾತ್ರ ಲೈಂಗಿಕ ಕ್ರಿಯೆ ನಡೆಸಬೇಕು ಎನ್ನುತ್ತದೆ ಈ ಕಾನೂನು. ಅಂದರೆ, ಸಂತಾನ ಪಡೆಯುವ ಅಪೇಕ್ಷೆ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಗಳೆಲ್ಲ ಅನೈಸರ್ಗಿಕ ಎಂಬ ಅರ್ಥ ಬರುತ್ತದೆ.

ಭಾರತ ಬ್ರಿಟಿಷರ ವಸಾಹತು ಆಗಿದ್ದ ಕಾಲದಲ್ಲಿ ರೂಪುಗೊಂಡಿರುವ ಈ ಕಾನೂನಿನ ಹಿಂದೆ ಕ್ರೈಸ್ತ ಚಿಂತನೆಗಳ ಪ್ರಭಾವವೂ ಇದೆ. ಅಲ್ಲದೆ, ಲೈಂಗಿಕ ಕ್ರಿಯೆಯನ್ನು ಮದುವೆ ನಂತರ, ಮಕ್ಕಳನ್ನು ಪಡೆಯುವ ಉದ್ದೇಶಕ್ಕೇ ನಡೆಸಬೇಕು ಎಂಬ ನಿಲುವು ನಮ್ಮ ದೇಶದಲ್ಲೂ ಇದೆ. ಮತ್ತು ಇಂಥದ್ದೊಂದು ನಿಲುವು ನೈತಿಕವಾಗಿ ಸರಿ ಎಂಬ ನಂಬಿಕೆಯೂ ಇದೆ.

ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ಕಲಮನ್ನು ಸಲಿಂಗಿಗಳ ವಿರುದ್ಧ ಮಾತ್ರವಲ್ಲದೆ, ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸುವ ಯಾವುದೇ ‘ಗಂಡು–ಹೆಣ್ಣಿನ’ ವಿರುದ್ಧ ಪ್ರಯೋಗಿಸಬಹುದು. ಗಂಡು–ಹೆಣ್ಣು ಸಂತಾನ ಅಪೇಕ್ಷೆ ಇಲ್ಲದೆ ಪರಸ್ಪರರನ್ನು ಅನುಭವಿಸಿದ್ದಾರೆ ಎಂಬ ನೆಲೆಯಲ್ಲಿ. ಆದರೆ, ಪೊಲೀಸರು ಇದುವರೆಗೆ ಈ ಕಲಮನ್ನು ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಬಳಸಿದಂತಿದೆ.

* ವಸಾಹತು ಕಾಲದ ಈ ಕಾನೂನನ್ನು ನಾವು ಇಂದಿಗೂ ಉಳಿಸಿಕೊಂಡಿರುವುದು ಏಕೆ?
ಈ ಕಲಮಿನ ಬಗ್ಗೆ ದೇಶದಲ್ಲಿ ಚರ್ಚೆ ಆರಂಭವಾಗಿದ್ದು 90ರ ದಶಕದಲ್ಲಿ ಎಂಬುದನ್ನು ಗಮನಿಸಬೇಕು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಪ್ರಪಂಚದ ವಿವಿಧ ಭಾಗಗಳಲ್ಲಿ ಆರಂಭವಾದ ಹೋರಾಟಗಳು, ಭಾರತ ಪ್ರವೇಶಿಸಿದ್ದು 90ರ ದಶಕದ ಕೊನೆಯಲ್ಲಿ. ಈ ಕಲಮನ್ನು ಕಿತ್ತುಹಾಕಬೇಕು ಎಂಬ ಬೇಡಿಕೆ ದೇಶದಲ್ಲಿ ಗಟ್ಟಿಯಾಗಿ ಕೇಳಿಬಂದಿದ್ದು ಆ ಹೋರಾಟಗಳು ಇಲ್ಲಿ ನೆಲೆಯೂರಿದ ನಂತರವೇ.

* ಈ ಕಲಮನ್ನು ರದ್ದುಪಡಿಸುವ ಅಧಿಕಾರ ಸಂಸತ್ತಿಗೆ ಇದೆಯಲ್ಲ? ಈ ಬಗ್ಗೆ ಸಂಸತ್ತು ಯಾವತ್ತಾದರೂ ಚರ್ಚಿಸಿದೆಯೇ?
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಹೋರಾಟ ಆರಂಭವಾಗುವವರೆಗೆ ಈ ಕಲಮಿನ ಬಗ್ಗೆ ಸಂಸತ್ತು ಚರ್ಚಿಸಿದಂತೆ ಕಾಣುತ್ತಿಲ್ಲ. ಈ ಕಲಮಿನ ವಿರುದ್ಧ ನಾಜ್‌ ಪ್ರತಿಷ್ಠಾನ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು.  ನಂತರ ಈ ವಿಚಾರ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಬಂತು. ದೆಹಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಅನೂರ್ಜಿತಗೊಳಿಸಿತು.

ಸಮ್ಮತಿಯ ಸಲಿಂಗಕಾಮವು ಅಪರಾಧವಲ್ಲ ಎನ್ನುವ ಖಾಸಗಿ ಮಸೂದೆಯನ್ನು ಕಾಂಗ್ರೆಸ್ಸಿನ ಶಶಿ ತರೂರ್ ಅವರು ಲೋಕಸಭೆಯಲ್ಲಿ ಈಚೆಗೆ ಮಂಡಿಸಿದ್ದರು. ಈ ವಿಚಾರದ ಬಗ್ಗೆ ಸಮಗ್ರ ಚರ್ಚೆಗೆ ಆಗ ಒಂದು ಅವಕಾಶ ಸೃಷ್ಟಿಯಾಗಿತ್ತು. ಆದರೆ, ಇದರ ಬಗ್ಗೆ ಚರ್ಚೆಯೂ ಬೇಡ ಎಂದು ಕೆಲವು ಸದಸ್ಯರು ಹೇಳಿದರು. ಖಾಸಗಿ ಮಸೂದೆಯನ್ನು ತಿರಸ್ಕರಿಸುವ ಮುನ್ನ ಚರ್ಚೆಯನ್ನಾದರೂ ಮಾಡಬಹುದಿತ್ತಲ್ಲ? ಲೈಂಗಿಕ ಅಲ್ಪಸಂಖ್ಯಾತರ ಕುರಿತು ಇರುವ ತಾರತಮ್ಯ ಯಾವ ಮಟ್ಟದ್ದು ಎಂಬುದು ಇಲ್ಲಿ ಗೊತ್ತಾಗುತ್ತದೆ.

ಇಂಥದ್ದೊಂದು ವಿಚಾರದ ಬಗ್ಗೆ ಚರ್ಚಿಸಲಿಕ್ಕೂ ನಮಗೆ ಆಗುತ್ತಿಲ್ಲ ಎಂದರೆ ಏನರ್ಥ? ಇದಕ್ಕೆಲ್ಲ ಕಾರಣ ವಸಾಹತು ಕಾಲದ ಚಿಂತನಾ ಕ್ರಮ ಎಂದು ನಾನು ಹೇಳುವುದಿಲ್ಲ. ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದ ವಿಚಾರ ಇದು. ಅವರನ್ನು ಒಪ್ಪಿಕೊಳ್ಳುವುದು ಸಮಾಜದ ಒಂದು ಬಹುದೊಡ್ಡ ವರ್ಗಕ್ಕೆ ಸಾಧ್ಯವಾಗುತ್ತಿಲ್ಲ. ಅದೇ ಮನೋಭಾವ ಸಂಸತ್ತಿನಲ್ಲೂ ಕಾಣುತ್ತಿದೆ.

* ಸಂಸತ್ತಿಗೆ ಸಾಧ್ಯವಾಗದಿದ್ದರೆ, ಈ ಕಲಮನ್ನು ರದ್ದು ಮಾಡುವ ಅಧಿಕಾರ ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ಗೆ ಇದೆಯಲ್ಲವೇ?
ಸುಪ್ರೀಂ ಕೋರ್ಟ್‌ ಈ ಕಲಮಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಆದೇಶ ನೀಡಬಲ್ಲದು. ಯಾವುದೇ ಕಾನೂನು ಅಥವಾ ನಿಯಮ ಪ್ರಜೆಯ ಮೂಲಭೂತ ಹಕ್ಕಿಗೆ ಧಕ್ಕೆ ತಂದರೆ, ಆ ಕಾನೂನು ಅಸಾಂವಿಧಾನಿಕ ಎಂದು ಆದೇಶಿಸುವ ಪರಮಾಧಿಕಾರ ಸುಪ್ರೀಂ ಕೋರ್ಟ್‌ಗೆ ಇದ್ದೇ ಇದೆ.

* ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ನಾಜ್‌ ಪ್ರತಿಷ್ಠಾನದ ನಿಲುವು ಏನು?
ಪ್ರತಿಷ್ಠಾನದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಈ ಕಲಮು ಸಮಾಜದ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದ್ದರೂ, ಇದು ಲೈಂಗಿಕ ಅಲ್ಪಸಂಖ್ಯಾತರನ್ನು ತಾರತಮ್ಯದ ಕಣ್ಣಿನಿಂದ ನೋಡುತ್ತದೆ. ಅವರನ್ನು ಶೋಷಿಸಲು ಪೊಲೀಸರಿಗೆ ಇದೊಂದು ಅಸ್ತ್ರ, ಲೈಂಗಿಕ ಅಲ್ಪಸಂಖ್ಯಾತರದ್ದೊಂದೇ ಅಲ್ಲ, ಎಲ್ಲರ ಖಾಸಗಿತನದ ಹಕ್ಕಿಗೆ ಧಕ್ಕೆ ತರುತ್ತದೆ.

ನಾಲ್ಕು ಗೋಡೆಗಳ ಮಧ್ಯೆ ಇರುವಾಗ ವ್ಯಕ್ತಿಯೊಬ್ಬ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಿರ್ದೇಶಿಸುವ ಅಧಿಕಾರವನ್ನು ಈ ಕಲಮು ಪ್ರಭುತ್ವಕ್ಕೆ ನೀಡುತ್ತದೆ. ಮಾನವನ ಘನತೆಗೆ, ಸಮಾನತೆಯ ಆಶಯಕ್ಕೆ ಇದು ವಿರುದ್ಧ. ಪರಸ್ಪರ ಸಮ್ಮತಿ ಇರುವಾಗ ಇಬ್ಬರು ವಯಸ್ಕರು ತಮಗೆ ಇಷ್ಟ ಬಂದ ರೀತಿಯಲ್ಲಿ ಸಂಬಂಧ ರೂಪಿಸಿಕೊಳ್ಳುತ್ತಾರೆ. ಹಾಗೆ ರೂಪಿಸಿಕೊಳ್ಳುವ ಸಂಬಂಧ ಶಿಕ್ಷಾರ್ಹ ಅಪರಾಧ ಹೇಗೆ ಆಗುತ್ತದೆ? ಇವು ನಾಜ್‌ ಪ್ರತಿಷ್ಠಾನದ ನಿಲುವುಗಳು.

* ಗಂಡು–ಗಂಡು ಅಥವಾ ಹೆಣ್ಣು–ಹೆಣ್ಣಿನ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆ ನಾಲ್ಕು ಗೋಡೆಗಳ ನಡುವೆ ನಡೆಯುತ್ತದೆ. ಇಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ, ಅವರಿಗೆ ಶಿಕ್ಷೆ ಕೊಡಿಸುವುದು ಹೇಗೆ ಸಾಧ್ಯ?
ಶಿಕ್ಷೆ ಕೊಡಿಸಬೇಕು ಎಂದೇನೂ ಇಲ್ಲ. ಇಬ್ಬರು ವಯಸ್ಕರ ವಿರುದ್ಧ ಈ ಕಲಮಿನ ಅಡಿ ಒಂದು ಆರೋಪ ಹೊರಿಸಿದರೆ ಮುಗಿಯಿತಲ್ಲ? ಇಂಥದ್ದೊಂದು ಆರೋಪವನ್ನು ಸಾಬೀತು ಮಾಡಲೇಬೇಕು ಎಂಬ ಅನಿವಾರ್ಯವೇನೂ ಪೊಲೀಸರಿಗೆ ಇರುವುದಿಲ್ಲ. ಆದರೆ, ಆರೋಪ ಹೊರಿಸಿ ಅವರನ್ನು ಬಂಧಿಸಿಬಿಟ್ಟರೆ ಮುಗಿಯಿತು. ನಂತರ ಅವರನ್ನು ಬಿಡುಗಡೆ ಮಾಡಿದರೂ, ಅಷ್ಟು ದಿನ ಹಿಂಸೆ ಅನುಭವಿಸಬೇಕು. ಇದು ತಪ್ಪು. ಇಬ್ಬರು ಒಟ್ಟಾಗಿ ನಡೆದುಕೊಂಡು ಹೋಗುತ್ತಿದ್ದಾಗಲೂ, ಪೊಲೀಸರು ಮಧ್ಯಪ್ರವೇಶಿಸಿ ಅವರ ವಿರುದ್ಧ ಈ ಕಲಮಿನ ಅಡಿ ಪ್ರಕರಣ ದಾಖಲಿಸಿಕೊಳ್ಳಬಹುದು.

* 377ನೇ ಕಲಮಿಗೆ ಸಂಬಂಧಪಟ್ಟಂತೆ ಕಾನೂನು ಹೋರಾಟದ ಕಥೆ ಏನು?
ಈ ಕಲಮು ಅಸಾಂವಿಧಾನಿಕ ಎಂದು ನಾಜ್ ಪ್ರತಿಷ್ಠಾನ ದೆಹಲಿ ಹೈಕೋರ್ಟ್‌ಗೆ ಮೊದಲು ಅರ್ಜಿ ಸಲ್ಲಿಸಿತು. ನಂತರದ ದಿನಗಳಲ್ಲಿ ಈ ಅರ್ಜಿಯ ಜೊತೆ ಲೈಂಗಿಕ ಅಲ್ಪಸಂಖ್ಯಾತರ ಕೆಲವು ಸಂಘಟನೆಗಳೂ ಅರ್ಜಿ ಸಲ್ಲಿಸಿದವು. ಈ ಅರ್ಜಿಗಳನ್ನೆಲ್ಲ ವಿಚಾರಣೆಗೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್‌ 2009ರಲ್ಲಿ ವಿಸ್ತೃತ ಆದೇಶವೊಂದನ್ನು ನೀಡಿತು. ಖಾಸಗಿತನ, ಘನತೆಯ ಬದುಕಿನ ಹಕ್ಕುಗಳನ್ನು ಪರಿಗಣಿಸಿದ ಹೈಕೋರ್ಟ್‌, ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವಯಸ್ಕರ ಹಕ್ಕುಗಳನ್ನು ಈ ಕಲಮು ಉಲ್ಲಂಘಿಸುತ್ತದೆ ಎಂದು ಹೇಳಿತು.

ಸಮ್ಮತಿಯೊಂದಿಗೆ, ಕೋಣೆಯೊಂದರಲ್ಲಿ ನಡೆಯುವ ಕೃತ್ಯ ಶಿಕ್ಷಾರ್ಹ ಅಪರಾಧ ಆಗಲು ಸಾಧ್ಯವಿಲ್ಲ ಎಂದು ಆದೇಶಿಸಿತು. ಈ ಆದೇಶವನ್ನು ಅಂದಿನ ಕೇಂದ್ರ ಸರ್ಕಾರ ಪ್ರಶ್ನಿಸಲಿಲ್ಲ. ಆದರೆ, ಸುರೇಶ್ ಕುಮಾರ್‌ ಕೌಶಲ್‌ ಮತ್ತು ಇತರ ಕೆಲವರು ‘ಸಾರ್ವಜನಿಕ ಹಿತಾಸಕ್ತಿ’ಯ ಹೆಸರಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದರು. ಕೆಲವು ಧಾರ್ಮಿಕ ಗುಂಪುಗಳೂ ಅರ್ಜಿ ಸಲ್ಲಿಸಿದವು. 2013ರಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್‌ ನೀಡಿದ ಆದೇಶವನ್ನು ತಳ್ಳಿಹಾಕಿತು.

* ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಹೇಳಿದ್ದೇನು? ಈ ಕಲಮು ಜಾರಿಯಲ್ಲಿರಲಿ ಎಂದು ಹೇಳಿತೇ?
ಇಂಥದ್ದೊಂದು ಕಲಮು ಅಸ್ತಿತ್ವದಲ್ಲಿ ಇರಬೇಕೇ, ಬೇಡವೇ ಎಂಬುದನ್ನು ಸಂಸತ್ತು ತೀರ್ಮಾನಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತು. ಈ ಕಲಮು ದೇಶಕ್ಕೆ ಅಗತ್ಯವಿಲ್ಲ ಎಂದಾದರೆ, ಅಂಥದ್ದೊಂದು ನಿರ್ಧಾರವನ್ನು ಅದೇ ಕೈಗೊಳ್ಳಲಿ ಎಂದಿತು. ಸಂಸತ್ತು ಮಾಡಬೇಕಾದ ಕೆಲಸವನ್ನು ತಾನು ಮಾಡುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿತು.

ಈ ಕಲಮಿನಿಂದ ತೊಂದರೆ ಆಗಿರುವುದು ತೀರಾ ಸಣ್ಣದಾದ ಒಂದು ಗುಂಪಿಗೆ. ಅದನ್ನು ನಾವು ಪರಿಗಣಿಸಬೇಕಿಲ್ಲ ಎಂಬ ಮಾತು ಕೂಡ ಬಂತು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಡೆದ ಹೋರಾಟಗಳಿಗೆ ಇದೊಂದು ಆಘಾತವಾಗಿತ್ತು. ಇದಾದ ನಂತರ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೋರಾಡುತ್ತಿರುವವರೆಲ್ಲ ಸೇರಿ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಸಾಂವಿಧಾನಿಕ ಮಹತ್ವದ ವಿಚಾರಗಳನ್ನು ಇದು ಒಳಗೊಂಡಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಇದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

* ಸಲಿಂಗಿಗಳ ಬಗ್ಗೆ ವೈದ್ಯಕೀಯ ವಿಜ್ಞಾನ ಏನು ಹೇಳುತ್ತದೆ?
ಈ ಪ್ರಶ್ನೆಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲವೆನಿಸುತ್ತದೆ. ಇದರ ಬಗ್ಗೆ ವೈದ್ಯಕೀಯ ವಿಜ್ಞಾನ ಸ್ಪಷ್ಟವಾಗಿ ಏನನ್ನೂ ಹೇಳಿದಂತಿಲ್ಲ. ಅದೇನೇ ಇರಲಿ, ಸಲಿಂಗಕಾಮ ಎಂಬುದನ್ನು ವೈದ್ಯಕೀಯ ಸಮಸ್ಯೆ ಎನ್ನಲಾಗದು. ಅದು ವ್ಯಕ್ತಿಯೊಬ್ಬ ತನ್ನನ್ನು ಹೇಗೆ ರೂಪಿಸಿಕೊಳ್ಳಲು ಬಯಸುತ್ತಾನೆ ಎಂಬಷ್ಟಕ್ಕೆ ಮಾತ್ರ ಸಂಬಂಧಿಸಿದ್ದು.

* ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದ ನಂತರವೂ, ಇಂಥದ್ದೊಂದು ಕಾನೂನನ್ನು ಉಳಿಸಿಕೊಂಡಿರುವುದಕ್ಕೆ ಯಾರನ್ನು ದೂಷಿಸಬೇಕು?
ಈಗ ಯಾರನ್ನೂ ದೂಷಿಸಬೇಕಿಲ್ಲ. ಆದರೆ, ನಾವು ಈಗ ಈ ಕಾನೂನು ಏಕೆ ಇರಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಬೇಕು. ಇದರ ಸಿಂಧುತ್ವವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬೇಕು. ಸಂಸದರ ಮನವೊಲಿಸುವ ಮೂಲಕ ಇಂಥ ಕಾನೂನುಗಳನ್ನು ತೆಗೆದುಹಾಕಲು ಯತ್ನಿಸಬೇಕು. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನಾಳೆ ಏನೇ ಆದೇಶ ನೀಡಬಹುದು. ಆದರೆ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ. ಇದು ಆಶಾದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.