ADVERTISEMENT

ಸಿನಿಮಾ ಕಟ್ಟುವ ಸೂಕ್ಷ್ಮಗಳು

ನೂರೊಂದು ನೆನಪು

ಎಸ್‌.ವಿ ರಾಜೇಂದ್ರ ಸಿಂಗ್ ಬಾಬು
Published 22 ಆಗಸ್ಟ್ 2015, 19:30 IST
Last Updated 22 ಆಗಸ್ಟ್ 2015, 19:30 IST

ಕಥೆ ಸಿದ್ಧಪಡಿಸಲು ಕುಳಿತಾಗ ಯಾವಾಗಲೂ ನಿರ್ದೇಶಕನ ತಲೆಯಲ್ಲಿ ಅನುಮಾನದ ಗುಂಗಿಹುಳ ಸದ್ದು ಮಾಡುತ್ತಲೇ ಇರುತ್ತದೆ. ಏನೋ ಕೊರತೆ ಇದೆ ಎಂದು ಪದೇ ಪದೇ ಅನಿಸುತ್ತದೆ. ಭಾವನಾತ್ಮಕ ದೃಶ್ಯಗಳು ಕಡಿಮೆಯಾದವೇ, ಈ ದೃಶ್ಯವನ್ನು ಇನ್ನೂ ಸುಧಾರಿಸಬಹುದಾಗಿತ್ತಲ್ಲ, ಹಾಸ್ಯ ಸನ್ನಿವೇಶಗಳೇ ಇಲ್ಲದಿದ್ದರೆ ಹೇಗೆ, ಈ ಹಾಡು ಎಲ್ಲಿ ಬಂದರೆ ಚೆನ್ನ, ಅದರ ಚಿತ್ರೀಕರಣ ಹೇಗೆಲ್ಲಾ ಮಾಡಬೇಕು ಇತ್ಯಾದಿ ಸಂಗತಿಗಳು ಕಾಡುತ್ತಲೇ ಇರುತ್ತವೆ. ಭಾರತೀಯ ಸಿನಿಮಾಗಳೆಂದರೆ ಹೀಗೆಯೇ. ಅವುಗಳಲ್ಲಿ ನವರಸಗಳೂ ಇರಬೇಕಾದದ್ದರಿಂದ ಯಾವುದರಲ್ಲಿಯೂ ಕೊರತೆಯಾಗಕೂಡದು ಎಂದು ಮನಸ್ಸು ಎಚ್ಚರಿಸುತ್ತಲೇ ಇರುತ್ತದೆ.

ಒಂದು ಕಥೆಯ ಯೋಚನೆ ಆವರಿಸಿಕೊಂಡಿರುವಾಗ ಇನ್ನೊಂದು ಕಥೆಯ ಕುರಿತು ಯೋಚಿಸುವುದು ನನ್ನಿಂದ ಅಂತೂ ಸಾಧ್ಯವಿಲ್ಲ. ನಿರ್ದಿಷ್ಟ ಸಿನಿಮಾ ಹಿಟ್ ಆದೀತೇ ಎಂದು ಊಹಿಸುವುದೂ ಕಷ್ಟ. ಇಡೀ ಕಥಾಹಂದರ ಯಾವುದನ್ನೇ ಆಧರಿಸಿದ್ದರೂ ಅದು ನಿರ್ದೇಶಕನ ಅಥವಾ ಚಿತ್ರಕಥಾಗಾರನ ಕಲ್ಪನಾಲೋಕವೇ ಆಗಿರುತ್ತದೆ. ಜನ ಮೆಚ್ಚಿ ನೋಡಿದರಷ್ಟೇ ನಿರ್ಮಾಪಕ ನೆಮ್ಮದಿಯ ನಿಟ್ಟುಸಿರಿಡುವುದು ಸಾಧ್ಯ. ಎಷ್ಟೋ ಸಿನಿಮಾಗಳು ಚೆನ್ನಾಗಿದ್ದೂ ಜನಮೆಚ್ಚುಗೆ ಗಳಿಸಲು ಸಾಧ್ಯವಾಗಿಲ್ಲ.

ಕೆಲವು ಚೆನ್ನಾಗಿಲ್ಲದ ಸಿನಿಮಾಗಳು ಯಾವ್ಯಾವುದೋ ಕಾರಣಕ್ಕೆ ಜನಮೆಚ್ಚುಗೆ ಗಳಿಸಿರುವ ಉದಾಹರಣೆಗಳೂ ಇವೆ. ಯಶಸ್ಸಿನ ಸೂತ್ರವೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ಗಣಿತ, ವಿಜ್ಞಾನದ ಸೂತ್ರಗಳು ಕೊಡುವ ಫಲಿತಾಂಶ ಇಲ್ಲಿ ಸಾಧ್ಯವಿಲ್ಲ. ಅಡ್ಡೇಟಿನ ಮೇಲೆ ಗುಡ್ಡೇಟು ಎನ್ನುತ್ತೀವಲ್ಲ, ಹಾಗೆ. ಎಲ್ಲೋ ಒಂದು ಕಡೆ ನಿರ್ದೇಶಕನ ಹೃದಯ ಇದು ಸರಿಯಾಗಿದೆ ಎಂದು ಹೇಳುತ್ತಾ ಇರುತ್ತದೆ. ನನಗೂ ಹಾಗೆಯೇ ಅನ್ನಿಸುತ್ತದೆ.

ಕಥೆ ಸಿದ್ಧವಾದ ಮೇಲೆ ಲೊಕೇಷನ್‌ಗಳ ಆಯ್ಕೆಯ ಹೋಂವರ್ಕ್ ನಡೆಸಬೇಕು. ‘ಬಂಧನ’ ಸಿನಿಮಾದಲ್ಲಿ ಆಸ್ಪತ್ರೆ, ‘ಮುತ್ತಿನಹಾರ’ದಲ್ಲಿ ಹಿಮ ಸುರಿಯುವ ಜಾಗಗಳು, ಮರುಭೂಮಿ, ಅಂಡರ್‌ವರ್ಲ್ಡ್ ಸೆಟ್ಸ್, ‘ನಾಗರಹೊಳೆ’ ಸಿನಿಮಾದಲ್ಲಿ ಕಾಡು ಬಹಳ ಮುಖ್ಯ ಪಾತ್ರಗಳೇ ಆಗಿದ್ದವು.

ಈ ಸಿನಿಮಾಗೂ ಲೊಕೇಷನ್‌ಗಳನ್ನು ನೋಡಲು ಹೊರಟೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದರಿಗೆ ಜ್ಞಾನೋದಯ ಆಗಿದ್ದ ಸ್ಥಳದಲ್ಲಿ ಕುಳಿತೆ. ಈ ದೃಶ್ಯವನ್ನು ಅಲ್ಲಿ ತೆಗೆದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡೆ. ಕ್ರೇನ್ ಶಾಟ್ ತೆಗೆಯುವುದು ಅಲ್ಲಿ ಸಾಧ್ಯವಿರಲಿಲ್ಲ. ಫ್ಲಾಟ್ ಶಾಟ್‌ಗಳನ್ನು ಹೇಗೆ ತೆಗೆಯಬೇಕು ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಲಾರಂಭಿಸಿದೆ. ಯಾವಾಗಲೂ ಆ ಕಾಲಘಟ್ಟದಲ್ಲಿ ಲಭ್ಯವಿರುವ ತಂತ್ರಜ್ಞಾನದ ಜೊತೆಗೇ ನಿರ್ದೇಶಕನ ಯೋಚನೆಗಳು ತಳಕು ಹಾಕಿಕೊಂಡಿರುತ್ತವೆ.

‘ಮುಂಗಾರು ಮಳೆ’ ಸಿನಿಮಾದಲ್ಲಿ ವಿಶೇಷ ಕ್ರೇನ್ ಇದ್ದಿದ್ದರಿಂದ ಜೋಗ್‌ ಜಲಪಾತವನ್ನು ಹಾಗೆ ತೋರಿಸಲು ಸಾಧ್ಯವಾಗಿದ್ದು. ಅದಕ್ಕೂ ಮೊದಲು ಎಷ್ಟೋ ಸಿನಿಮಾಗಳಲ್ಲಿ ಜೋಗ್‌ ಜಲಪಾತವನ್ನು ತೋರಿಸಿದ್ದರೂ, ‘ಮುಂಗಾರು ಮಳೆ’ ಸಿನಿಮಾದ ತಾಂತ್ರಿಕ ಜಾಣ್ಮೆ ಹೊಸತೇ ರೀತಿಯಲ್ಲಿ ಆ ಲೊಕೇಷನ್ ಅನ್ನು ಹಿಡಿದು ತೋರಿಸಿತು. ಇಳಿದುಕೊಳ್ಳುವುದು ಎಲ್ಲಿ, ಚಿತ್ರೀಕರಣದ ಸ್ಥಳದಿಂದ ಆ ಜಾಗ ಎಷ್ಟು ದೂರದಲ್ಲಿದೆ ಎಲ್ಲವನ್ನೂ ಸ್ಪಷ್ಟಪಡಿಸಿಕೊಳ್ಳುವುದೂ ಮುಖ್ಯ. ಕನ್ಯಾಕುಮಾರಿಯಲ್ಲಿ ಅವೆಲ್ಲವನ್ನೂ ಲೆಕ್ಕ ಹಾಕಿಕೊಂಡು, ನಾನು ಭಗತ್‌ಸಿಂಗ್ ಮನೆಯತ್ತ ಪ್ರಯಾಣ ಮಾಡುವುದೆಂದು ನಿರ್ಧರಿಸಿದೆ.

ನಾನು ‘ಮೇರಿ ಆವಾಜ್ ಸುನೊ’ ಹಿಂದಿ ಸಿನಿಮಾ ನಿರ್ದೇಶಿಸಿದ್ದಾಗ ದೇಶದ ಬಹುತೇಕ ಭಾಗಗಳನ್ನು ನೋಡಿದ್ದೆ. ಯಾವ್ಯಾವ ಪ್ರೇಕ್ಷಕರಿಗೆ ಸಿನಿಮಾದಲ್ಲಿ ಏನು ಇಷ್ಟವಾಗಿದೆ, ಏನು ಇಷ್ಟವಾಗಿಲ್ಲ ಎಂದು ತಿಳಿಯುವುದು ನನ್ನ ಉದ್ದೇಶವಾಗಿತ್ತು. ಪ್ರದೇಶ ಯಾವುದೇ ಆಗಿರಲಿ, ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಏಕಪ್ರಕಾರವಾಗಿ ಇರುತ್ತಿತ್ತು.

‘ಸಿಂಹದ ಮರಿ ಸೈನ್ಯ’ ಸಿನಿಮಾ ಮಾಡಿದಾಗಲೂ ಅದೇ ಅನುಭವವಾಗಿತ್ತು. ಅದನ್ನು ಪ್ಯಾರಿಸ್ ಚಿತ್ರೋತ್ಸವಕ್ಕೆ ತೆಗೆದುಕೊಂಡು ಹೋದಾಗ, ಭಾರತದ ಪ್ರೇಕ್ಷಕರು ಯಾವ ಶಾಟ್‌ಗಳಿಗೆ ಚಪ್ಪಾಳೆ ತಟ್ಟುತ್ತಿದ್ದರೋ ಅಲ್ಲಿಯೂ ಅದೇ ಶಾಟ್‌ಗಳಿಗೆ ಚಪ್ಪಾಳೆ ತಟ್ಟುತ್ತಿದ್ದರು. ಚೀನಾ, ಯು.ಕೆ, ಅಮೆರಿಕ, ಜಪಾನ್‌ನಿಂದ ಬಂದಿದ್ದ ಮಕ್ಕಳು ಆಗ ಪ್ರೇಕ್ಷಕರ ಸಾಲುಗಳಲ್ಲಿ ಇದ್ದರು. ಅಂತ ಸಿನಿಮಾಗೂ ಅಂಥದ್ದೇ ಯೂನಿವರ್ಸಲ್ ಎನ್ನಬಹುದಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಕನ್ನಡದ ಪ್ರೇಕ್ಷಕರು ಎಲ್ಲೆಲ್ಲಿ ಮೆಚ್ಚುಗೆ ಸೂಸಿದ್ದರೋ ಪಂಜಾಬ್, ಹರಿಯಾಣ, ದೆಹಲಿಯ ಜನರೂ ಅದೇ ಭಾಗಗಳಿಗೆ ಬೆರಗಾದದ್ದನ್ನು ನಾನು ನೋಡಿದೆ. ಒಂದು ಬಗೆಯಲ್ಲಿ ಇದನ್ನು ಮಾಸ್ ಇನ್‌ಟ್ಯೂಷನ್ ಎನ್ನಬಹುದೇನೋ?

ಭಗತ್‌ಸಿಂಗ್ ಮನೆಗೆ ನಾನು ಹೋದಾಗ ಥ್ರಿಲ್ ಆಯಿತು. ಭಗತ್‌ಸಿಂಗ್ ಅಂತ್ಯಕ್ರಿಯೆ ನಂತರದ ಬೂದಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದರು. ಭಾರತಮಾತೆಯ ಲೈಫ್‌ಸೈಜ್ ಫೋಟೊ ಅಲ್ಲಿತ್ತು. ಅದರ ಮುಂದೆ ಬೂದಿಯ ಕಟ್ಟು. ಎಲ್ಲರೂ ಹೊರಗೆ ಚಪ್ಪಲಿಗಳನ್ನು ಬಿಟ್ಟು ಹೂಗಳನ್ನು ತಂದು ಭಗತ್‌ಸಿಂಗ್ ನೆನಪಿನಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಭಗತ್‌ಸಿಂಗ್ ಫೋಟೊ ಸಹ ಅಲ್ಲಿತ್ತು.

ಅದೊಂದು ಪ್ರವಾಸಿ ತಾಣವೇ ಆಗಿತ್ತು. ಅಲ್ಲಿ ಚಿತ್ರೀಕರಣ ನಡೆಸುವುದು ಸಾಧ್ಯವಿರಲಿಲ್ಲ. ಅಷ್ಟು ವಿಶಾಲ ಸ್ಥಳ ಅದಾಗಿರಲಿಲ್ಲ. ಅದಕ್ಕೇ ಆ ವಾತಾವರಣವನ್ನು ಸೆಟ್ ಮೂಲಕ ಸೃಷ್ಟಿಸಬೇಕು ಎಂದುಕೊಂಡೆ. ಅದಕ್ಕೆ ಬೇಕಾದ ಫೋಟೊಗಳನ್ನು ಅಲ್ಲಿದ್ದವರು ಒದಗಿಸಿದರು. ನಿರ್ದೇಶಕ ಎಷ್ಟೋ ಸಲ ಈ ರೀತಿ ಲೊಕೇಷನ್‌ಗಳನ್ನು ಸೆಟ್ ಮೂಲಕ ಪುನರ್‌ಸೃಷ್ಟಿಸುವುದು ಅನಿವಾರ್ಯ. ಆಗ ವಾಸ್ತವಕ್ಕೆ ಹತ್ತಿರವಾಗುವಂತೆ ಪುನರ್‌ಸೃಷ್ಟಿಸಿದರೆ ದೃಶ್ಯ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಭಗತ್‌ಸಿಂಗ್ ಮನೆಯ ಹೊರಭಾಗದ ಶಾಟ್‌ಗಳನ್ನು ನಾವು ಚಿತ್ರೀಕರಿಸಿಕೊಳ್ಳಬಹುದಾಗಿತ್ತು. ಒಳಗೆ ಕ್ರೇನ್ ಮತ್ತಿತರ ಪರಿಕರಗಳನ್ನು ಬಳಸುವಷ್ಟು ಸ್ಥಳಾವಕಾಶ ಇರಲಿಲ್ಲವಾದ್ದರಿಂದ ಸೆಟ್ ಹಾಕುವುದೆಂದು ತೀರ್ಮಾನಿಸಿದೆ.

ಲೊಕೇಷನ್‌ಗಳನ್ನು ನೋಡಿ ಬಂದ ನಂತರ ಸ್ಕ್ರಿಪ್ಟ್ ತಿದ್ದುವುದು ಇದ್ದೇ ಇರುತ್ತದೆ. ಎಷ್ಟೋ ಸಲ ಲೊಕೇಷನ್‌ಗಳನ್ನು ನೋಡಿದ ಮೇಲೆ ಹೊಸ ಆಲೋಚನೆಗಳು ಹೊಳೆಯುತ್ತವೆ. ಅವನ್ನೆಲ್ಲಾ ಸೇರಿಸಿ, ಲೊಕೇಷನ್‌ಗಳಿಗೆ ತಕ್ಕಂತೆ ಸ್ಕ್ರಿಪ್ಟ್ ಸುಧಾರಿಸುವುದು ಕಸುಬುದಾರಿಕೆಯ ಭಾಗ. ಹಾಲಿವುಡ್‌ನಲ್ಲಿ ಸ್ಕ್ರಿಪ್ಟ್ ರೂಪಿಸುವುದು ತುಂಬಾ ವೃತ್ತಿಪರವಾದ, ನಾಜೂಕಾದ ಕೆಲಸ ಎಂದು ಭಾವಿಸಿದ್ದಾರೆ.

ಅವರ ಶೈಲಿಗೆ ಹೋಲಿಸಿದರೆ ನಮ್ಮಲ್ಲಿ ಶೇ 1ರಷ್ಟು ಮಾತ್ರ ಸ್ಕ್ರಿಪ್ಟ್ ರೂಪಿಸುವ ಪ್ರಕ್ರಿಯೆ ಇದೆ ಎನ್ನಬೇಕು. ಅಲ್ಲಿ ಕಥೆಯ ಎಳೆಯನ್ನು ಒಬ್ಬ ಹೇಳುತ್ತಾನೆ. ಮತ್ತೊಬ್ಬ ಕಥಾಹಂದರ ಬರೆಯುತ್ತಾನೆ. ಇನ್ನೊಬ್ಬ ಪಾತ್ರಗಳ ಪೋಷಣೆಯ ಕುರಿತು ತಲೆಕೆಡಿಸಿಕೊಳ್ಳುತ್ತಾನೆ.

ಎಲ್ಲವನ್ನೂ ಒಂದು ಶಿಲ್ಪದಲ್ಲಿ ಕಟ್ಟಿಕೊಡುವ ಕೆಲಸವನ್ನು ಬೇರೊಬ್ಬ ಮಾಡುತ್ತಾನೆ. ಅಂತಿಮ ಸ್ಕ್ರಿಪ್ಟ್ ಅನ್ನು ಎಷ್ಟು ನಿಮಿಷಕ್ಕೆ ಒಗ್ಗಿಸಬೇಕು ಎಂದು ತಲೆ ಕೆಡಿಸಿಕೊಳ್ಳುವವನು ಬೇರೆ ಪರಿಣತ. ಕೊನೆಗೆ ಪೂರ್ಣವಾಗಿ ಸಿದ್ಧಗೊಂಡ ಚಿತ್ರಕಥಾ ಪ್ರತಿಯನ್ನು ಸ್ಕ್ರಿಪ್ಟ್ ಡಾಕ್ಟರ್ ಕೈಗೆ ನೀಡುತ್ತಾರೆ. ಆತ ಅದರಲ್ಲಿ ಯಾವ್ಯಾವ ಅಂಶಗಳು ಸರಿಯಿಲ್ಲ, ಯಾವ್ಯಾವುದು ಸೂಕ್ಷ್ಮವಾಗಿಯೂ ಜನರನ್ನು ಹಿಡಿದಿಡುವಂತೆಯೂ ಇವೆ ಎಂದು ವಿವರಣೆ ಕೊಡುತ್ತಾನೆ. ಅದನ್ನು ಆಧರಿಸಿ, ಮತ್ತೆ ಸ್ಕ್ರಿಪ್ಟ್ ತಿದ್ದುತ್ತಾರೆ. ಇಷ್ಟೆಲ್ಲಾ ಪ್ರಕ್ರಿಯೆಯ ನಂತರವೂ ಕೆಲವು ಸಲ ಸಿನಿಮಾಗಳು ಸೋಲುತ್ತವೆ.

ಸಲೀಮ್-ಜಾವೆದ್, ಖಾದರ್ ಖಾನ್ ತರಹದ ದಿಗ್ಗಜರು ಕೂಡ ಘೋಸ್ಟ್ ರೈಟರ್‌ಗಳನ್ನು ಇಟ್ಟುಕೊಂಡಿದ್ದರು. ತಾವು ಬರೆದದ್ದನ್ನು ಉತ್ತಮಪಡಿಸಿಕೊಡಬಲ್ಲ ಬರಹಗಾರರು ಅವರು. ದಿಲೀಪ್ ಕುಮಾರ್ ಕೂಡ ಪ್ರೊಫೆಸರ್‌ಗಳನ್ನೆಲ್ಲಾ ಘೋಸ್ಟ್ ರೈಟರ್‌ಗಳಾಗಿ ಇಟ್ಟುಕೊಂಡಿದ್ದರು. ಸ್ಕ್ರಿಪ್ಟ್ ಮೇಲಿನ ಕಾಳಜಿಯಿಂದ ಅಂಥ ಘೋಸ್ಟ್ ರೈಟರ್‌ಗಳ ಸಲಹೆ ಅನಿವಾರ್ಯ. ಒಂದು ಕಡೆ ಕುಳಿತು ಚರ್ಚಿಸಿ, ಯಾವುದು ಸರಿಯಾಗಿದೆ, ಯಾವುದು ಸರಿಯಾಗಿಲ್ಲ ಎಂದು ಬಲ್ಲವರು ತೀರ್ಮಾನಿಸುವುದು ಸಿನಿಮಾಗೆ ಒಳ್ಳೆಯದು.

ಕಥೆ ಕೇಳಿ, ಕಾಲ್‌ಷೀಟ್ ಕೊಡುವ ನಟರ ಪರಂಪರೆಯೇ ನಮ್ಮಲ್ಲಿ ಇದೆ. ರಾಜ್‌ಕುಮಾರ್ ಯಾವತ್ತೂ ಕಥೆಯನ್ನೇ ಕೇಳುತ್ತಿದ್ದುದು. ಅವರಿಗೆ ಅದು ಹಿಡಿಸಿದರೆ ಮಾತ್ರ ಸಿನಿಮಾ. ರಾಜಮೌಳಿ ತಂದೆ ವಿಜಯ ಪ್ರಸಾದ್ ಅವರು ಬರೆದ ಕಥೆಯನ್ನು ಇಟ್ಟುಕೊಂಡು ರಾಕ್‌ಲೈನ್ ವೆಂಕಟೇಶ್ ಅವರು ಸಲ್ಮಾನ್ ಖಾನ್ ಕಾಲ್‌ಷೀಟ್ ಪಡೆದು, ‘ಬಜರಂಗಿ ಭಾಯಿಜಾನ್’ ಹಿಂದಿ ಸಿನಿಮಾ ನಿರ್ಮಿಸಿದ ತಾಜಾ ಉದಾಹರಣೆ ಎದುರಲ್ಲಿದೆ. ರಜನೀಕಾಂತ್ ಕೂಡ ಕಥೆ ನೆಚ್ಚಿಕೊಂಡೇ ಅವರಿಗೆ ಕಾಲ್‌ಷೀಟ್ ಕೊಟ್ಟಿದ್ದದ್ದು (ಲಿಂಗ ತಮಿಳು ಸಿನಿಮಾ).

ಇದೇ ಅಂಕಣದಲ್ಲಿ ನಾನು ಹಿಂದೆ ಸ್ವಪ್ರತಿಷ್ಠೆಯ ಸೂಕ್ಷ್ಮವೊಂದನ್ನು ಪ್ರಸ್ತಾಪಿಸಿದ್ದೆ. ಅದರಿಂದಾಗಿಯೇ ರಾಜ್‌ಕುಮಾರ್ ಅವರು ಸಿದ್ಧಲಿಂಗಯ್ಯನವರ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಪುಟ್ಟಣ್ಣನವರ ನಿರ್ದೇಶನದಲ್ಲಿ ವಿಷ್ಣು ಮತ್ತೆ ಅಭಿನಯಿಸಲಿಲ್ಲ ಎಂದು ಉದಾಹರಣೆ ಕೊಟ್ಟಿದ್ದೆ. ಅದಕ್ಕೆ ಓದುಗರೊಬ್ಬರು ನನಗೆ ಇ-ಮೇಲ್ ಪ್ರತಿಕ್ರಿಯೆ ಕಳುಹಿಸಿದರು.

ವಿಷ್ಣುವಿಗೆ ನಿರ್ದೇಶಕರು ಬೇಕಿತ್ತು. ರಾಜ್‌ಕುಮಾರ್ ಅವರಿಗೆ ಅಂಥ ಯಾರ ಬಲವೂ ಬೇಕಿರಲಿಲ್ಲ ಎಂಬ ಧಾಟಿಯಲ್ಲಿ ಅವರು ಬರೆದಿದ್ದರು. ಅವರ ಅಭಿಪ್ರಾಯ ಸರಿಯಲ್ಲ. ಸಿನಿಮಾ ಸಾಂಘಿಕ ಯತ್ನದ ಫಲ. ರಾಜ್‌ಕುಮಾರ್ ಅಥವಾ ವಿಷ್ಣು ಸಿನಿಮಾ ನಾಯಕರು ನಿಜ. ಆದರೆ ಒಂದು ಸಿನಿಮಾ ಆಗುವುದರಲ್ಲಿ ಎಷ್ಟೊಂದು ಜನರ ಕಾಣ್ಕೆ ಇರುತ್ತದೆ ಎಂದು ನಾವು ಅರಿತಿರಬೇಕು. ಕಥೆಗಾರ, ಸಂಭಾಷಣೆಕಾರ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ, ವಸ್ತ್ರ ವಿನ್ಯಾಸಕ, ಸಂಕಲನಕಾರ, ಕಲಾ ನಿರ್ದೇಶಕ, ನೃತ್ಯ ನಿರ್ದೇಶಕ ಹೀಗೆ ಹಲವರು ಸಿನಿಮಾ ಹೆಣಿಗೆಯ ಭಾಗವಾಗಿರುತ್ತಾರೆ. ರಾಜ್‌ಕುಮಾರ್ ಅವರಿಗೆ ಈ ಕಟ್ಟುವ ಕ್ರಿಯೆಯ ಪ್ರಾಮುಖ್ಯ ತುಂಬಾ ಚೆನ್ನಾಗಿ ತಿಳಿದಿತ್ತು.

ಕಥೆ ಸಿದ್ಧಗೊಂಡ ಮೇಲೆ ಬಜೆಟ್ ನಿರ್ಧರಿಸಲು ಕುಳಿತೆ. ‘ಮುತ್ತಿನ ಹಾರ’ ಸಿನಿಮಾ ಬಜೆಟ್ ಒಂದು ಕೋಟಿ 70 ಲಕ್ಷ ರೂಪಾಯಿ ಆಗಿತ್ತು. ಆ ಕಾಲಘಟ್ಟದಲ್ಲಿ ದೊಡ್ಡ ಬಜೆಟ್ ಅದು. ಅಷ್ಟು ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿದ್ದಿದ್ದರೆ ಈಗ ನೂರಾರು ಕೋಟಿ ರೂಪಾಯಿ ಆಗಿರುತ್ತಿತ್ತು ಎಂದು ನನ್ನ ಎಷ್ಟೋ ಸ್ನೇಹಿತರು ಅಭಿಪ್ರಾಯಪಟ್ಟರು. ನನಗೆ ಮಾತ್ರ ಆ ಸಿನಿಮಾ ಮಾಡಿದ್ದಕ್ಕೆ ಹೆಮ್ಮೆ ಇದೆ. ಕನ್ನಡಕ್ಕೆ ಒಂದು ಕ್ಲಾಸಿಕ್ ಸಿನಿಮಾ ಕೊಟ್ಟ ಆತ್ಮತೃಪ್ತಿ ಅದು. ಈ ಸಲ ಸಿನಿಮಾ ಬಜೆಟ್ ನಿರ್ಧರಿಸಲು ಕುಳಿತಾಗ ನನಗೆ ಕಷ್ಟವಿತ್ತು.

‘ಲವ್’ ಸಿನಿಮಾ ಮಾಡಿದಾಗ ಎರಡು ಕೋಟಿ ರೂಪಾಯಿ ನಷ್ಟವಾಗಿತ್ತು. ‘ಹೂವು ಹಣ್ಣು’ ಹಾಗೂ ಮತ್ತೊಂದು ಸಿನಿಮಾದಲ್ಲೂ ನಷ್ಟವಾಗಿತ್ತು. ಅವನ್ನೆಲ್ಲಾ ದೃಷ್ಟಿಯಲ್ಲಿ ಇಟ್ಟುಕೊಂಡು ಮಿತವಾದ ಬಜೆಟ್ ಹಾಕಿಕೊಳ್ಳುವ ಉದ್ದೇಶವಿತ್ತು. ನನ್ನ ಪ್ರೊಡಕ್ಷನ್ ಮ್ಯಾನೇಜರ್, ಸಹಾಯಕ ನಿರ್ದೇಶಕರನ್ನೆಲ್ಲಾ ಕರೆಸಿ ಚರ್ಚಿಸಿದೆ. ಅವರಲ್ಲಿ ಅನೇಕರು ನಕ್ಕರು.

ಕ್ಯಾಮೆರಾ ಹಿಂದೆ ನಿಂತರೆ ನಾನು ಬಜೆಟ್ ಮರೆತು, ಶಾಟ್ ಚೆನ್ನಾಗಿ ಬರಲಿ ಎಂದು ಕೆಲಸ ಮಾಡುತ್ತೇನೆ. ಆದ್ದರಿಂದ ಸುಮ್ಮನೆ ಕಾಗದದ ಮೇಲೆ ಇಷ್ಟು ಖರ್ಚು ಎಂದು ಬರೆಯಬೇಕಷ್ಟೆ ಎಂದು ಅವರೆಲ್ಲಾ ಹೇಳಿದ್ದರಲ್ಲಿ ಸತ್ಯವಿತ್ತು. ಹಾಗೆಂದು ಬಜೆಟ್ ಮಾಡಿಕೊಳ್ಳದೇ ಇರಲು ಸಾಧ್ಯವಿರಲಿಲ್ಲ. ಎಲ್ಲಾ ಲೆಕ್ಕ ಹಾಕಿದೆವು. ವಿಷ್ಣು ಸಂಭಾವನೆ ಹೊರತುಪಡಿಸಿ, ಮೂರೂವರೆ ಕೋಟಿ ರೂಪಾಯಿಗೆ ಬಂದು ನಿಂತಿತು. ವಿಷ್ಣು ಸಂಭಾವನೆ ಎಂದು ಬರೆದು ಅದರ ಮುಂದೆ ಖಾಲಿ ಜಾಗ ಬಿಟ್ಟಿದ್ದೆ. ಹಿಂದೆ ಸಂಭಾವನೆಯ ಕಾರಣಕ್ಕೇ ನಮ್ಮ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಮತ್ತೆ ಆ ವಿಷಯದಲ್ಲಿ ಜುಗ್ಗತನ ಮಾಡುವುದು ನನಗೆ ಇಷ್ಟವಿರಲಿಲ್ಲ. ವಿಷ್ಣುವಿಗೆ ಬ್ಲ್ಯಾಂಕ್ ಚೆಕ್ ನೀಡಿ, ಅವನ ಸಂಭಾವನೆಯ ಒಂದು ರೂಪಾಯಿ ಹೆಚ್ಚಿಗೆ ಕೊಡಬೇಕು ಎನ್ನುವುದು ನನ್ನ ತೀರ್ಮಾನವಾಗಿತ್ತು.

ಬಜೆಟ್ ನೋಡಿದ್ದೇ ವಿಷ್ಣು ಮತ್ತೆ ನನ್ನನ್ನು ತರಾಟೆಗೆ ತೆಗೆದುಕೊಂಡ. ಸಣ್ಣ ಬಜೆಟ್‌ನ ಸಿನಿಮಾ ಮಾಡೋಕೆ ನಿನಗೆ ಬರುವುದೇ ಇಲ್ಲ ಎಂದು ಬೈದ. ಆಮೇಲೆ ನಾವಿಬ್ಬರೂ ನಾಯಕಿಯರು ಯಾರಾಗಬೇಕು ಎಂಬ ಚರ್ಚೆ ಪ್ರಾರಂಭಿಸಿದೆವು.
ಮುಂದಿನ ವಾರ: ಗುರು ಮಹೇಶ್ವರ ಒಲಿಯಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.