ADVERTISEMENT

ಸ್ವಚ್ಛತೆಗೆ ಬಂದರು; ಕಸ ಹಾಕಿ ಹೋದರು

ಪೀರ್‌ ಪಾಶ, ಬೆಂಗಳೂರು
Published 25 ಮಾರ್ಚ್ 2017, 19:30 IST
Last Updated 25 ಮಾರ್ಚ್ 2017, 19:30 IST

ಬೆಂಗಳೂರು: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು (ಎಂಪ್ರಿ) ನಗರದ ಪುಟ್ಟೇನಹಳ್ಳಿ ಕೆರೆಯಲ್ಲಿ ಇತ್ತೀಚೆಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿತ್ತು.

ಕೆರೆಯ ಆವರಣವನ್ನು ಶುಚಿಗೊಳಿಸಲೆಂದು ಹತ್ತಾರು ಸ್ವಯಂಸೇವಾ ಸಂಸ್ಥೆಗಳ ನೂರಾರು ಪ್ರತಿನಿಧಿಗಳನ್ನು ಕರೆತರಲಾಗಿತ್ತು. ಅವರು ಸುದ್ದಿಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಕಸ ಆಯುತ್ತಿರುವಂತೆ ಪೋಸು ನೀಡಿದರು. ಮಹಿಳಾ ಪ್ರತಿನಿಧಿಗಳಂತೂ ಕೂಲಿಂಗ್‌ ಗ್ಲಾಸ್‌ ಮತ್ತು ವ್ಯಾನಿಟಿ ಬ್ಯಾಗ್‌ ಹಾಕಿಕೊಂಡೇ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕ್ಯಾಮೆರಾಗಳು ಎದುರಾದಾಗ ಮಾತ್ರ ಅವರ ನಡು ಬಾಗಿ ಕೈ ಕಸದ ಮೇಲೆ ಹೋಗುತ್ತಿತ್ತೇ ವಿನಾ ಕಸ ಬುಟ್ಟಿಗೆ ಸೇರುತ್ತಿರಲಿಲ್ಲ. ಛಾಯಾಗ್ರಾಹಕರು ಸ್ಥಳದಿಂದ ತೆರಳಿದ ಬಳಿಕ ಅವರ ಸ್ವಚ್ಛತಾ ಕೆಲಸವೂ ನಿಂತಿತು. ಕೆಲವರು ಕಸ ಆಯುತ್ತಿರುವಂತೆ ನಟಿಸುತ್ತ ಸ್ನೇಹಿತರಿಂದ ಫೋಟೊ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ಗಳಿಗೆ ಪೋಸ್ಟ್‌ ಮಾಡುವುದರಲ್ಲಿ ನಿರತರಾದರು.

ಹಲವರು ಕುರುಕಲು ತಿಂಡಿ ಹಾಗೂ ಚಾಕೊಲೇಟ್‌ಗಳನ್ನು ತಿಂದು ಅವುಗಳ ಪೊಟ್ಟಣಗಳನ್ನು ಕೆರೆಯ ದಡದಲ್ಲಿಯೇ ಬಿಸಾಡಿದರು. ಒಬ್ಬರು ಮರಳಿ ಹೋಗುವಾಗ ಕೆರೆ ಆವರಣದಲ್ಲಿ ಬೆಳೆದಿದ್ದ ಎರಡು ಹೂವಿನ ಸಸಿಗಳನ್ನು ಕಿತ್ತುಕೊಂಡು ಹೋದರು. ಸಂಸ್ಥೆಯ ಪ್ರತಿನಿಧಿಯೊಬ್ಬರು ಬಳಿ ಬಂದು ‘ಅಭಿಯಾನದ ಸುದ್ದಿಯನ್ನು ದೊಡ್ಡದಾಗಿ ಹಾಕಿ’ ಎಂದಾಗ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಲು ಮಾತೇ ಹೊರಡಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.