ADVERTISEMENT

ಹಾಲು ಅವರೇ ತಗೊಳ್ಲಿ ಸ್ವಾಮಿ!

ಕೆ.ಎಸ್.ಸುನಿಲ್
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಹಾಸನ: ಬರ ನಿರ್ವಹಣೆಗಾಗಿ ಕೇಂದ್ರ ಹಣ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ನೀಡುತ್ತಿಲ್ಲ ಎಂಬ ಆರೋಪ ಮಾಡಲು ತಾವು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ  ಪತ್ರಕರ್ತರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.

‘ಹ್ಯಾಂಗೂ ಜಿಲ್ಲಾಧಿಕಾರಿ ನಿವಾಸದ ಸುತ್‌ಲೂ ಕಾಂಪೌಂಡ್ ಕಟ್ಟಿಸಿಕೊಟ್ಟಿದ್ದೀನಿ. ಜಿಲ್ಲೆಯಲ್ಲಿ ಕುಡಿಯಕ್ಕೆ ನೀರೂ ಸಿಗ್ತಿಲ್ಲ. ಕಾಂಪೌಂಡ್ ಒಳಗೆ ಹುಲ್ಲು ಚಲೋ ಬೆಳದೈತೆ, ಅಲ್ಲೇ ನಮ್ಮ ದನಗಳನ್ನ ಬಿಟ್‌ಬಿಡ್ತೀವಿ. ಡಿ.ಸಿ. ಬೋರ್‌ ಕೊರೆಸಿ ಕುಡಿಯೋ ನೀರಿಗೆ ವ್ಯವಸ್ಥೆ ಮಾಡಿದ್ರೆ ಸಾಕು. ಎಲ್ಲ ದನಗಳು ಹುಲ್ಲು ತಿಂದ್‌ಕಂಡ್ ಬದುಕ್ತವೆ. ನಮಗೇನ್ ಅದರ ಹಾಲು ಬೇಕಿಲ್ಲ, ಬೇಕಾದ್ರೆ ಅವರೇ ತಗೊಳ್ಲಿ ಸ್ವಾಮಿ’ ಎಂದರು.

‘ಮೊದಲಿದ್ದ ಕಡ್ಡಿಪುಡಿ (ಹಿಂದಿನ ಜಿಲ್ಲಾಧಿಕಾರಿ) ಹಾಗೂ ಭರತನಾಟ್ಯ ಪಾರಂಗತ ಎ.ಸಿ (ಮಹಿಳಾ ಉಪವಿಭಾಗಾಧಿಕಾರಿ) ಅವರ ಚಾಳಿಯನ್ನೇ ಈಗಿನವರೂ ಮುಂದುವರುಸ್ತಿದ್ದಾರೆ. ಜಿಲ್ಲೆಯ ಜನ ಸಾಯ್ತಾ ಇದ್ರೂ ಕಚೇರಿ ಸಿಬ್ಬಂದಿಗೆ ಕೆಮ್ಮಣ್ಣುಗುಂಡಿ ತೋರ್ಸೋ ಬುದ್ಧಿ ಯಾಕ್‌ ಬಂತು ಈ ಅಮ್ಮಂಗೆ (ಜಿಲ್ಲಾಧಿಕಾರಿ)’ ಎಂದರು.

ಹೊಸ ವರ್ಷಾಚರಣೆ ಪ್ರಯುಕ್ತ ತಮ್ಮ ಸಿಬ್ಬಂದಿಯನ್ನು ಕೆಮ್ಮಣ್ಣುಗುಂಡಿಗೆ ಪ್ರವಾಸ ಕರೆದೊಯ್ದಿದ್ದ ಜಿಲ್ಲಾಧಿಕಾರಿ, ರೇವಣ್ಣ ಅವರ ವ್ಯಂಗ್ಯೋಕ್ತಿಗೆ ಗುರಿಯಾಗಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.