ADVERTISEMENT

49 ರೂಪಾಯಿ ಹಿಂದೆ ಬಂದಿದ್ದ ಯಮರಾಯ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
49 ರೂಪಾಯಿ ಹಿಂದೆ ಬಂದಿದ್ದ ಯಮರಾಯ!
49 ರೂಪಾಯಿ ಹಿಂದೆ ಬಂದಿದ್ದ ಯಮರಾಯ!   

ತಮಿಳುನಾಡು ಮೂಲದ ಅಣ್ಣಾಮಲೈ ಅವರು ಬೆಂಗಳೂರಿನ ಕಾರ್ಖಾನೆಯೊಂದರ ಉದ್ಯೋಗಿ. ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಪದ್ಮಿನಿ ಇವರ ಏಕೈಕ ಮಗಳು.

ಅಣ್ಣಾಮಲೈ ಅವರು ಪ್ರತಿದಿನ ಮಗಳನ್ನು ಶಾಲೆಗೆ ಬಿಟ್ಟು,ಅಲ್ಲಿಂದ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಮನೆಗೆ ವಾಪಸ್‌ ಬರುವಾಗ ಮಗಳನ್ನು ಕರೆದುಕೊಂಡು ಬರುತ್ತಿದ್ದರು. ಯಾವತ್ತೂ ಮಗಳೊಬ್ಬಳನ್ನೇ ಕಳುಹಿಸಿದವರೇ ಅಲ್ಲ. ಪದ್ಮಿನಿ ಬುದ್ಧಿವಂತೆಯಾದರೂ ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ... ಬೇರೇನೂ ತಿಳಿದಿರಲಿಲ್ಲ.

ಅಂದು ಅಣ್ಣಾಮಲೈ  ಅವರು ಎಂದಿನಂತೆ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ಕಾರ್ಖಾನೆಯಿಂದ ಕರೆಬಂತು. ತುರ್ತಾಗಿ ಒಂದು ಕೆಲಸವನ್ನು ಅವರಿಗೆ ವಹಿಸಿ ಬೇರೆಡೆ ಹೋಗುವಂತೆ ಹೇಳಲಾಯಿತು. ಅವರು ಹೋಗಬೇಕಿರುವ ಜಾಗ ಮಗಳ ಶಾಲೆಯ ಇನ್ನೊಂದು ದಿಕ್ಕಿನಲ್ಲಿ ಇತ್ತು. ಕೂಡಲೇ ಅಲ್ಲಿಗೆ ಹೋಗಬೇಕಿದ್ದ ಕಾರಣ, ಮಗಳನ್ನು ಶಾಲೆಗೆ ಬಿಟ್ಟುಬರುವಷ್ಟು ಸಮಯ ಅವರಲ್ಲಿ ಇರಲಿಲ್ಲ.

ADVERTISEMENT

ಆದ್ದರಿಂದ ಅವರು ಮಗಳನ್ನು ಬಸ್‌ ಮೂಲಕ ಶಾಲೆಗೆ ಕಳುಹಿಸುವ ಯೋಚನೆ ಮಾಡಿದರು. ಅದುವರೆಗೂ ಪದ್ಮಿನಿ ಒಬ್ಬಳೇ ಎಲ್ಲಿಗೂ ಹೋದವಳಲ್ಲ. ಆದರೆ ಅಣ್ಣಾಮಲೈ ಅವರಿಗೆ ಮಗಳೊಬ್ಬಳನ್ನೇ ಕಳಿಸದೆ ವಿಧಿ ಇರಲಿಲ್ಲ. ಆತಂಕದಿಂದಲೇ ಬಸ್‌ಗೆ ಕಳಿಸುವ ನಿರ್ಧಾರ ಮಾಡಿದರು. ಆದ್ದರಿಂದ ಸಿಟಿ ಮಾರ್ಕೆಟ್‌ ಬಸ್‌ ನಿಲ್ದಾಣದ ಬಳಿ ಅವಳನ್ನು ಕರೆದುಕೊಂಡು ಬಂದರು. ಮಗಳಿಗೆ ಯಾವ ಸಂಖ್ಯೆಯ ಬಸ್‌ ಹತ್ತಬೇಕು, ಎಲ್ಲಿ ಇಳಿಯಬೇಕು ಎಂದು ವಿವರಿಸಿದರು. ಬುದ್ಧಿವಂತೆಯಾಗಿದ್ದ ಪದ್ಮಿನಿ ತಾನು ಸರಿಯಾದ ಬಸ್‌ ಹತ್ತುವುದಾಗಿ ಅಪ್ಪನಿಗೆ ಭರವಸೆ ನೀಡಿದಳು.

ಬಸ್‌ನಲ್ಲಿ ಆಗ ಮಕ್ಕಳಿಗೆ ಒಂದು ರೂಪಾಯಿ ಟಿಕೆಟ್‌ ಇತ್ತು. ಮಗಳ ಕೈಯಲ್ಲಿ ಟಿಕೆಟ್‌ಗಾಗಿ ಒಂದು ರೂಪಾಯಿ ನೀಡಲು ಜೇಬಿನಲ್ಲಿ ಕೈಹಾಕಿದಾಗ ಚಿಲ್ಲರೆ ಸಿಗಲಿಲ್ಲ. 50 ರೂಪಾಯಿ ನೋಟು ಇತ್ತು. ಮಗಳ ಕೈಯಲ್ಲಿ ಅದೇ ನೋಟನ್ನು ನೀಡಿ ಕಂಡಕ್ಟರ್‌ನಿಂದ 49 ರೂಪಾಯಿ ಚಿಲ್ಲರೆ ಪಡೆದುಕೊಳ್ಳುವಂತೆ ತಿಳಿಸಿದರು.

ಬಸ್‌ ಬಂದಾಗ ಪದ್ಮಿನಿ  ಹತ್ತಿದಳು. ಅಪ್ಪ ಹೇಳಿದಂತೆ 50 ರೂಪಾಯಿಯನ್ನು ಭದ್ರವಾಗಿ ಕೈಯಲ್ಲಿ ಹಿಡಿದುಕೊಂಡಿದ್ದಳು. ಕಂಡಕ್ಟರ್ ರಾಜು ಟಿಕೆಟ್ ಕೊಡಲು ಬಂದಾಗ ಪದ್ಮಿನಿ 50 ರೂಪಾಯಿ ಕೊಟ್ಟಳು. ರಾಜು ಒಂದು ರೂಪಾಯಿ ಚಿಲ್ಲರೆ ನೀಡುವಂತೆ ಕೇಳಿದರು. ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಪದ್ಮಿನಿ ಹೇಳಿದಾಗ ರಾಜು 50 ರೂಪಾಯಿ ಪಡೆದುಕೊಂಡರು. 49 ರೂಪಾಯಿ ವಾಪಸ್‌ ನೀಡುವ ಬದಲು, ಆ ಹಣವನ್ನು ಇಳಿಯುವಾಗ ನೀಡುವುದಾಗಿ ಪೆನ್ಸಿಲ್‌ನಲ್ಲಿ ಟಿಕೆಟ್‌ ಹಿಂದೆ ಬರೆದುಕೊಟ್ಟರು.

ಟಿಕೆಟನ್ನು ಪದ್ಮಿನಿ ಕೈಯಲ್ಲಿ ಭದ್ರವಾಗಿ  ಮಡಚಿ ಇಟ್ಟುಕೊಂಡಳು. ಶಾಲೆಯ ಸ್ಟಾಪ್‌ ಬಂದಾಗ, ಆಕೆ  ಕಂಡಕ್ಟರ್ ಬಳಿ 49 ರೂಪಾಯಿ ಚಿಲ್ಲರೆ ನೀಡುವಂತೆ ಕೇಳಿದಳು. ಆಗ ಕಂಡಕ್ಟರ್‌, ‘ಯಾವ ಚಿಲ್ಲರೆ? ನಿನಗೆ ನಾನು ಚಿಲ್ಲರೆ ಗಿಲ್ಲರೆ ಕೊಡುವುದು ಯಾವುದೂ ಇಲ್ಲವಲ್ಲ’ ಎಂದ. ಆಗ ಪದ್ಮಿನಿ ತಾನು 50 ರೂಪಾಯಿ ನೀಡಿದ್ದನ್ನು ಹೇಳಿದಾಗ, ರಾಜು, ‘ಹಾಗಿದ್ದರೆ ಟಿಕೆಟ್ ತೋರಿಸು’ ಎಂದರು. ಪದ್ಮಿನಿ ಟಿಕೆಟ್ ತೋರಿಸಿದಳು. ಆದರೆ  ದುರದೃಷ್ಟ ನೋಡಿ. ಅವಳು ಟಿಕೆಟ್ ಅನ್ನು ಕೈಯಲ್ಲಿ ಮಡಚಿ ಇಟ್ಟುಕೊಂಡಿದ್ದರಿಂದ ಪೆನ್ಸಿಲ್‌ನಿಂದ ಕಂಡಕ್ಟರ್ ಬರೆದ ಅಕ್ಷರ ಅಳಿಸಿ ಹೋಗಿತ್ತು. ಅದನ್ನು ನೋಡಿದ ಕಂಡಕ್ಟರ್‌, ‘ಸುಳ್ಳು ಹೇಳ್ತೀಯಾ?’ ಎಂದು ಕೇಳಿ ಇಳಿಸಿಬಿಟ್ಟರು. ಬಸ್ಸು ಮುಂದೆ ಹೋಯಿತು.

ಪುಟಾಣಿ ಪದ್ಮಿನಿಗೆ ಏನು ಮಾಡಬೇಕು ಎಂದು ತೋಚದಾಯಿತು. 49 ರೂಪಾಯಿ ತರದಿದ್ದರೆ ಅಪ್ಪ ಎಲ್ಲಿ ಹೊಡೆದುಬಿಡುತ್ತಾರೋ ಎನ್ನುವ ಭಯ ಬೇರೆ. ಜೋರಾಗಿ ಅಳುತ್ತಾ ಕೂತಳು. ಆ ಬಸ್ ಪುನಃ ಬಂದಾಗ ಆಗಲಾದರೂ ತನಗೆ ಕಂಡಕ್ಟರ್ ಹಣ ಕೊಡಬಹುದು ಎಂದುಕೊಂಡು ಅಳುತ್ತಾ, ಶಾಲೆಗೂ ಹೋಗದೆ ಆ ಬಸ್ ವಾಪಸ್ ಬರುವುದನ್ನು ಕಾಯತೊಡಗಿದಳು. ಆದರೆ ಆ ಬಸ್ ವಾಪಸ್ ಬರಲಿಲ್ಲ (ಬಂದಿದ್ದರೂ ಇವಳಿಗೆ ಅದು ತಿಳಿಯಲಿಲ್ಲವೋ ಏನೊ...) ಇತ್ತ ಅಣ್ಣಾಮಲೈ ಅವರು ಕೆಲಸದಿಂದ ವಾಪಸ್ ಬರುವಾಗ ಮಗಳನ್ನು ಕರೆದುಕೊಂಡು ಹೋಗಲು ಶಾಲೆಗೆ ಹೋದರು. ಆದರೆ ಆಕೆ ಎಲ್ಲಿಯೂ ಕಾಣಲಿಲ್ಲ. ಭಯಗೊಂಡ ಅವರು  ಮನೆಗೆ ಕರೆ ಮಾಡಿದಾಗ ಅವರ ಹೆಂಡತಿ, ಮಗಳು ಬರಲಿಲ್ಲ ಎಂದರು. ಅವರಿಗೆ ಇನ್ನಷ್ಟು ಗಾಬರಿಯಾಯಿತು.

ಶಾಲೆಯ ಸ್ಟಾಪ್ ಬಿಟ್ಟು ಮತ್ತೆ ಬೇರೆಡೆ ಮಗಳು ಇಳಿದುಬಿಟ್ಟಿದ್ದಾಳೋ ಎಂದು ಭಯಗೊಂಡು ಅದರ ಬಗ್ಗೆ ಬಸ್ ಡ್ರೈವರ್‌ನಿಂದಲೇ ತಿಳಿದುಕೊಳ್ಳುವ ಎಂದುಕೊಂಡು ಮಗಳನ್ನು ಬಸ್ಸಿಗೆ ಹತ್ತಿಸಿದ ಸ್ಟಾಪ್ ಬಳಿ ಹೋದರು. ಅಲ್ಲಿ ನೋಡಿದರೆ, ಪದ್ಮಿನಿ ಇನ್ನೂ ಅಳುತ್ತಾ ಕುಳಿತಿದ್ದಳು. ಮಗಳನ್ನು ನೋಡಿ ಅಣ್ಣಾಮಲೈ ಅವರಿಗೆ ಒಂದೇ ಬಾರಿಗೆ ಖುಷಿ, ಆಶ್ಚರ್ಯ, ಭಯ ಎಲ್ಲವೂ ಆಯಿತು.  ಪದ್ಮಿನಿ ಎಲ್ಲ ವಿಷಯವನ್ನೂ ಅಪ್ಪನಿಗೆ ತಿಳಿಸಿದಳು. ಮೊದಲೇ ಮಗಳು ಸಿಗದೆ ದುಃಖದಿಂದ ಕುಗ್ಗಿದ್ದ ಅಣ್ಣಾಮಲೈ ಅವರಿಗೆ ಈ ವಿಷಯ ಕೇಳಿ ಕಂಡಕ್ಟರ್‌ ಮೇಲೆ ಕೋಪ ಉಕ್ಕಿತು. ಆ ಕಂಡಕ್ಟರ್‌ಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದುಕೊಂಡ ಅವರು ಬಸ್ ಬರುವುದನ್ನೇ ಕಾದರು.

ಆ ಬಸ್ ಬಂತು. ಆದರೆ ಕಂಡಕ್ಟರ್ ರಾಜು ಅವರ ಪಾಳಿ ಮುಗಿದಿದ್ದ ಕಾರಣ, ಬೇರೆಯ ಕಂಡಕ್ಟರ್‌ ಅದರಲ್ಲಿದ್ದರು. ಅವರ ಬಳಿ ಅಣ್ಣಾಮಲೈ ಹೋಗಲು ಮುಂದಾದಾಗ ಪದ್ಮಿನಿ ‘ನನಗೆ ದುಡ್ಡು ಕೊಡದ ಅಂಕಲ್ ಇವರಲ್ಲ’ ಎಂದಳು. ಕೋಪದಿಂದ ಕುದಿಯುತ್ತಿದ್ದ ಅಣ್ಣಾಮಲೈ ಅವರಿಗೆ ನಿರಾಸೆಯಾಯಿತು. ಆದರೆ ಕಂಡಕ್ಟರ್ ರಾಜು ಅವರ ಸಮಯ ಸರಿಯಿರಲಿಲ್ಲ ಎನಿಸುತ್ತದೆ. ಅದೇ ಬಸ್‌ನಲ್ಲಿ ಅವರು ಪಾಳಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಸಾಲದು ಎಂಬುದಕ್ಕೆ ಅದೇ ಸ್ಟಾಪ್‌ನಲ್ಲಿ ಇಳಿದರು. ಅವರು ಇಳಿಯುತ್ತಿದ್ದಂತೆಯೇ ಅವರನ್ನು ಗಮನಿಸಿದ ಪದ್ಮಿನಿ ‘ಇದೇ ಅಂಕಲ್, ಇದೇ ಅಂಕಲ್’ ಎಂದಳು.

ತಮಗೆ ಬಂದ ಕೋಪವನ್ನು ನುಂಗಿಕೊಂಡ ಅಣ್ಣಾಮಲೈ ಅವರು ರಾಜು ಬಳಿ ಹೋಗಿ ಆದದ್ದನ್ನು ವಿವರಿಸಿದರು. 49 ರೂಪಾಯಿ ವಾಪಸ್ ನೀಡುವಂತೆ ಹೇಳಿದರು. ಆದರೆ ದುರಹಂಕಾರಿ ರಾಜು ‘ಈ ಹುಡುಗಿ ಯಾರು ಎಂದೇ ನನಗೆ ಗೊತ್ತಿಲ್ಲ. ಇದೇ ಮೊದಲು ನೋಡುತ್ತಾ ಇರುವುದು. ನಾನು ಇವಳಿಗೆ ಯಾವ ದುಡ್ಡು ಕೊಡುವುದೂ ಇಲ್ಲ. ಇವಳು ಸುಳ್ಳು ಹೇಳುತ್ತಿದ್ದಾಳೆ’ ಎಂದುಬಿಟ್ಟರು. ಆಗ ಪದ್ಮಿನಿ ‘ಇಲ್ಲಾ... ನಾನು ಸುಳ್ಳು ಹೇಳುತ್ತಿಲ್ಲ. ಇದೇ ಅಂಕಲ್ ನನಗೆ ದುಡ್ಡು ಕೊಡದೆ ಇಳಿಸಿಬಿಟ್ಟರು’ ಎಂದಳು. ಕೈಯಲ್ಲಿ ಮುದ್ದೆಯಾಗಿದ್ದ ಟಿಕೆಟ್ ಅನ್ನು ರಾಜು ಅವರಿಗೆ ತೋರಿಸಲು ಅಣ್ಣಾಮಲೈ ಅವರು ಮುಂದಾದಾಗ, ‘ಓಹೋ ಇದರಲ್ಲಿ ನಿಮ್ಮದೂ ಕೈವಾಡ ಇದೆಯಾ? ಮಕ್ಕಳಿಗೆ ಸುಳ್ಳು ಹೇಳುವುದನ್ನು ಬೇರೆ ಕಲಿಸುತ್ತೀರಾ?’ ಎಂದು ಹೇಳಿ ಟಿಕೆಟ್ ಅನ್ನು ಕಸಿದುಕೊಂಡು ಅದನ್ನು ಎಸೆದು ಮುಂದೆ ಹೋದರು.

ಇಲ್ಲಿಯವರೆಗೆ ಸಿಟ್ಟನ್ನೆಲ್ಲಾ ನುಂಗಿಕೊಂಡಿದ್ದ ಅಣ್ಣಾಮಲೈ ಅವರು ಕಂಡಕ್ಟರ್ ಅವರ ಈ ದುರ್ವರ್ತನೆಯಿಂದ ರೋಸಿ ಹೋದರು. ದುಡ್ಡು ವಾಪಸ್ ಕೊಡುವುದು ದೂರದ ಮಾತು, ಮಗಳಿಗೇ ‘ಸುಳ್ಳಿ’ ಎಂದು ಹೇಳಿದ್ದು ಅವರಿಂದ ಸಹಿಸಲು ಆಗಲಿಲ್ಲ. ಸ್ಥಿಮಿತ ಕಳೆದುಕೊಂಡರು. ಕಂಡಕ್ಟರ್‌ಗೆ ಚೆನ್ನಾಗಿ ಹೊಡೆಯಬೇಕು ಎನಿಸಿತು. ಅತ್ತ-ಇತ್ತ ನೋಡಿದರು. ಕಂಡಕ್ಟರ್ ರಾಜು ಅವರ ದುರದೃಷ್ಟಕ್ಕೆ ಪಕ್ಕದಲ್ಲಿಯೇ ಕತ್ತಿ- ಚಾಕು ಮಾರಲಾಗುತ್ತಿತ್ತು. ಅದನ್ನೇ ಎತ್ತಿಕೊಂಡ ಅಣ್ಣಾಮಲೈ ಅವರು ತಾನೇನು  ಮಾಡುತ್ತಿದ್ದೇನೆ ಎಂಬ ಪರಿಜ್ಞಾನ ಇಲ್ಲದೆಯೇ, ಅತ್ತ ಹೋಗುತ್ತಿದ್ದ ಕಂಡಕ್ಟರ್ ರಾಜು ಅವರ ತಲೆಗೆ ಹೊಡೆದೇ ಬಿಟ್ಟರು. ಒಂದೇ ಏಟು. ಅಲ್ಲಿಯೇ ಕುಸಿದುಬಿದ್ದರು ರಾಜು. ನೋಡನೋಡುತ್ತಿದ್ದಂತೆಯೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟರು! ಘಟನೆ ನೋಡಿದ ಸ್ಥಳೀಯರು ಅಣ್ಣಾಮಲೈ ಅವರನ್ನು ಚೆನ್ನಾಗಿ ಥಳಿಸಿದರು. ಮುಂದಿನ ಅಪಾಯ ಅರಿತ ಅಣ್ಣಾಮಲೈ ಮಗಳನ್ನು ಕರೆದುಕೊಂಡು ಸಮೀಪದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಶರಣಾದರು.

ಅಣ್ಣಾಮಲೈ ನೀಡಿದ ಹೇಳಿಕೆ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿಕೊಂಡ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ತೊಡಗಿದರು. ಅಣ್ಣಾಮಲೈ ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ತಮಗೆ ಜಾಮೀನು ನೀಡುವಂತೆ ಕೋರಿ ಅಲ್ಲಿ ಅವರು ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಸೆಷನ್ಸ್ ಕೋರ್ಟ್  ಕೂಡ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಮೊರೆ ಹೋದರು. ಆಗ ಅವರ ಪರವಾಗಿ ನಾನು ವಕಾಲತು ವಹಿಸಿದ್ದೆ. ನಡೆದ ವಿಷಯಗಳನ್ನು ಕೋರ್ಟ್‌ನಲ್ಲಿ ಸವಿಸ್ತಾರವಾಗಿ ತಿಳಿಸಿದೆ. ಕೋಪದ ಹಿನ್ನೆಲೆಯಲ್ಲಿ ಇಂಥದ್ದೊಂದು ಕೆಲಸ ಆಗಿರುವುದಾಗಿ ವಾದಿಸಿದೆ. ನನ್ನ ವಾದವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಅಣ್ಣಾಮಲೈ ಅವರಿಗೆ ಜಾಮೀನು ನೀಡಿದರು.

ನಂತರದ ವಿಚಾರಣಾ ಪ್ರಕ್ರಿಯೆ ಶಿಕ್ಷೆಯದ್ದು. ಕೊಲೆ ಹೇಗೆ ಮಾಡಿದ್ದರೂ, ಯಾವ ಕಾರಣಕ್ಕೆ ಮಾಡಿದ್ದರೂ ಅದು ಕೊಲೆಯೆ. ಈ ಕೊಲೆ ಮಾಡಿರುವ ಹಿನ್ನೆಲೆ ಎಲ್ಲಾ ಇಲ್ಲಿ ಮುಖ್ಯವಾಗುವುದಿಲ್ಲ. ಆದ್ದರಿಂದ ಆರೋಪಿಗಳನ್ನು ಬಿಡಿಸಬೇಕಿದ್ದರೆ, ಕಾನೂನಿನಲ್ಲಿ ಆರೋಪಿಗಳ ಪರವಾಗಿ ಇರುವಂಥ ಅಂಶಗಳು, ಜೊತೆಗೆ ಪೊಲೀಸರು ತನಿಖೆಯ ವೇಳೆ ಮಾಡುವ ಎಡವಟ್ಟುಗಳನ್ನು ಬಳಸಿಕೊಳ್ಳುವುದು ಅನಿವಾರ್ಯ. ಅದರಂತೆಯೇ ಈ ಪ್ರಕರಣದಲ್ಲಿಯೂ ಆಯಿತು. ಕಾನೂನು ಹೇಳುವಂತೆ ಯಾವುದೇ ಎಫ್ಐಆರ್ ಅನ್ನು ಆರೋಪಿಯ ಹೇಳಿಕೆಯ ಮೇಲೆ ದಾಖಲು ಮಾಡಿಕೊಳ್ಳುವಂತೆ ಇಲ್ಲ. ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಹೇಳಿದರೂ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆಯೇ ಅವನೇ ಅಪರಾಧಿ ಎನ್ನುವಂತಿಲ್ಲ. ಆದರೆ ಕಾನೂನಿನ ಅರಿವಿನ ಕೊರತೆ ನಮ್ಮ ಸಾಕಷ್ಟು ಪೊಲೀಸರಿಗೆ ಇರುವಂತೆ ಇಲ್ಲಿಯೂ ಆಯಿತು. ತಾವೇ ಕೊಲೆ ಮಾಡಿರುವುದಾಗಿ ಅಣ್ಣಾಮಲೈ ಪೊಲೀಸರಿಗೆ ಹೇಳಿದ್ದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಎಫ್ಐಆರ್ ದಾಖಲು ಮಾಡಿದರು. ಇದನ್ನು ನಾನು ಅಣ್ಣಾಮಲೈ ಅವರನ್ನು ಬಿಡಿಸಲು ಅಸ್ತ್ರವಾಗಿಸಿಕೊಂಡೆ. ಜೊತೆಗೆ,  ಇದು ಸಿಟ್ಟಿನಿಂದ ಮಾಡಿರುವ ಕೃತ್ಯವೇ ವಿನಾ ಉದ್ದೇಶಪೂರ್ವಕವಾಗಿ ಅಲ್ಲ ಎಂದು ವಾದಿಸಿದೆ. ಇದಕ್ಕೆ ಸಾಕ್ಷಿಯಾಗಿ ರಾಜು ಅವರ ತಲೆಯ ಮೇಲೆ ಆಗಿದ್ದ ಒಂದೇ ಒಂದು ಏಟಿನ ಬಗ್ಗೆಯೂ ತಿಳಿಸಿದೆ.

ಅಣ್ಣಾಮಲೈ ಅವರ ಪೂರ್ವಾಪರ, ನನ್ನ ವಾದ ಎಲ್ಲವನ್ನೂ ನೋಡಿದ ಹೈಕೋರ್ಟ್ ನ್ಯಾಯಮೂರ್ತಿಗಳು, ಎರಡು ವರ್ಷಗಳ ಕನಿಷ್ಠ ಶಿಕ್ಷೆಯನ್ನು ವಿಧಿಸಿದರು. ಜೈಲಿನಲ್ಲಿ ಇದ್ದಾಗ ಅಣ್ಣಾಮಲೈ ಅವರ ಒಳ್ಳೆಯ ನಡತೆ ನೋಡಿದ ಕೋರ್ಟ್ ಅವರನ್ನು ವರ್ಷದಲ್ಲಿಯೇ ಬಂಧಮುಕ್ತಗೊಳಿಸಿತು. ಅಣ್ಣಾಮಲೈ ಬಂಧಮುಕ್ತಗೊಂಡರು. ಕೋಪದ ಕೈಗೆ ಬುದ್ಧಿ ಕೊಟ್ಟು ಒಬ್ಬ ವ್ಯಕ್ತಿಯನ್ನು ಬಲಿ ಪಡೆದ ಪಶ್ಚಾತ್ತಾಪದ ಬೇಗೆಯಲ್ಲಿ ಅವರು ಕುದಿಯತೊಡಗಿದರು. ಆದರೆ ಕಾಲ ಮಿಂಚಿತ್ತು. ಮಾಡಿದ ತಪ್ಪಿಗೆ ಜೈಲು ಶಿಕ್ಷೆಯನ್ನೂ ಅನುಭವಿಸಿಯಾಗಿತ್ತು.

ಕೋಪದ ಮೇಲೆ ಹಿಡಿತ ಇಲ್ಲದಿದ್ದರೆ ಏನು ಅನಾಹುತ ಆಗಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೇ ರೀತಿ, ಚಿಲ್ಲರೆ ಹಣದ ಆಸೆಗಾಗಿ ಜೀವವನ್ನೇ ಬಲಿ ಕೊಟ್ಟ ಕಂಡಕ್ಟರ್‌ ರಾಜು ಅವರ ಕತೆ ಹಲವರಿಗೆ ಪಾಠವೂ ಆಗಿದೆ.

ಶಿಕ್ಷೆಯ ಆದೇಶ ಹೊರಬಂದ ವಾರವೇ ಕಾಕತಾಳೀಯ ಎನ್ನುವಂತೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿದ್ಯಾರ್ಥಿನಿ’ಯೊಬ್ಬಳು ಕವನ ಬರೆದಿದ್ದಳು. ‘ಬೆಂಗಳೂರಿನಲ್ಲಿ ಚಿಲ್ಲರೆಗಾಗಿ ಕೊಲೆಗಳಾಗಿ, ಕೊಲೆಗಳೆಲ್ಲಾ ಚಿಲ್ಲರೆಗಳಾಗುತ್ತವೆ...’ ಎಂಬ ಸಾಲು ಅದರಲ್ಲಿ ಇತ್ತು. ಈ ಘಟನೆಗೆ ಈ ಸಾಲು ಹೇಳಿ ಮಾಡಿಸಿದಂತಿತ್ತು...

ಎಚ್‌.ಎಸ್‌.ಚಂದ್ರಮೌಳಿ

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.