ADVERTISEMENT

ಆಡು ಒಮ್ಮೆ ಆಡು... ಬಾಜಿ ಕಟ್ಟಿ ನೋಡು

ಅಕ್ರಮ ಲಾಟರಿ ದಂಧೆ

ಡಾ.ಕೆ.ಎಂ.ಶ್ರೀನಿವಾಸ ಗೌಡ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಮಾನವ ಮೂಲತಃ ಜೂಜುಕೋರ. ದ್ಯೂತವಾಡುವ ಗುಣ ಅವನಿಗೆ ರಕ್ತಗತವಾಗಿ ಬಂದಿದೆ. ಕೆಲವರು ಆ ಗುಣವನ್ನು ಬಹಿರಂಗವಾಗಿ

ವ್ಯಕ್ತಪಡಿಸುತ್ತಾರೆ. ಮನುಕುಲದ ಹಾದಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ನಮ್ಮ ಪುರಾಣಗಳಲ್ಲೂ ಜೂಜಾಟದ ಬಗ್ಗೆ ಉಲ್ಲೇಖಗಳಿವೆ. ಪಾಂಡವರು ಪಗಡೆಯಾಡಿ ತಮ್ಮ ಆಸ್ತಿಯನ್ನು ಕಳೆದುಕೊಂಡು ಅಜ್ಞಾತವಾಸಕ್ಕೆ ತೆರಳುವುದು ಇದಕ್ಕೆ ಅತ್ಯುತ್ತಮ ಉದಾಹರಣೆ. ಬ್ರಿಟನ್‌, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾನೂನಿನ ರಕ್ಷಣೆಯಲ್ಲೇ ಬೆಟ್ಟಿಂಗ್‌, ಜೂಜಾಟಗಳು ನಡೆಯುತ್ತವೆ.

ಜೂಜು ಪರಿಕಲ್ಪನೆ ಹುಟ್ಟಿಕೊಂಡದ್ದೇ ಮನರಂಜನೆ ಮತ್ತು ರೋಮಾಂಚಕಾರಿ (ಥ್ರಿಲ್) ಅನುಭವಕ್ಕಾಗಿ. ಬ್ರಿಟನ್‌ಗೂ ಬೆಟ್ಟಿಂಗ್‌ಗೂ ಅವಿನಾಭಾವ ಸಂಬಂಧ. ಅಲ್ಲಿ ಬೆಟ್ಟಿಂಗ್‌, ಜೂಜಿನ ವ್ಯಾಪ್ತಿ ವಿಶಾಲವಾಗಿದೆ. ಒಂದರ್ಥದಲ್ಲಿ ಅದು ಜೂಜಾಡುವವರ ನಾಡು. ಅಲ್ಲಿ ಯಾವ ವಿಷಯಕ್ಕೆ ಬೇಕಾದರೂ ಬೆಟ್‌ ಕಟ್ಟಬಹುದು. ಇತ್ತೀಚೆಗೆ ರಾಜಕುಮಾರ ವಿಲಿಯಮ್ಸ್‌ ದಂಪತಿಗೆ ಹುಟ್ಟಿದ ಮಗುವಿಗೆ ಇಡುವ ಹೆಸರಿನ ಮೇಲೆಯೂ ಬೆಟ್ಟಿಂಗ್ ನಡೆದಿತ್ತು.

ಒಂದು ಉದಾಹರಣೆ ನೋಡಿ: ಇಬ್ಬರು ವ್ಯಕ್ತಿಗಳು ಒಂದು ಅಂಗಡಿಯ ಎದುರು ನಿಂತಿರುತ್ತಾರೆ. ಒಬ್ಬ ಹೇಳುತ್ತಾನೆ. ಇಂತಿಷ್ಟು ಹೊತ್ತಲ್ಲಿ ಐದು ರೋಲ್ಸ್ ರಾಯ್ಸ್‌ ಕಾರುಗಳು ಈ ರಸ್ತೆಯಲ್ಲಿ ಹಾದು ಹೋಗುತ್ತವೆ. ಅದಕ್ಕೆ ಮತ್ತೊಬ್ಬ, ಒಂದು ವೇಳೆ ಹೋದರೆ ಒಂದಕ್ಕೆ ಐದು ಪೌಂಡ್ ಕೊಡುವುದಾಗಿ ಬೆಟ್‌ ಕಟ್ಟುತ್ತಾನೆ. ಅಂಥ ಐದು ಕಾರುಗಳು ಹೋದರೆ ಮೊದಲ ವ್ಯಕ್ತಿಗೆ ಮತ್ತೊಬ್ಬ ಐದು ಪೌಂಡ್ ಕೊಡುತ್ತಾನೆ. ಇಲ್ಲದಿದ್ದರೆ, ಅವನಿಗೆ ಈತ ಐದು ಪೌಂಡ್‌ ಕೊಡುತ್ತಾನೆ. ಅಷ್ಟೇ ಏಕೆ? ಬ್ರಿಟನ್‌ ಜನರಲ್ಲಿ ಬೆಟ್‌ ಮೋಹ ಎಷ್ಟಿದೆ ಎಂದರೆ, ಈಗ ಮಳೆ ಬರುತ್ತದೆಯೇ ಇಲ್ಲವೇ ಎಂಬ ಬಗ್ಗೆಯೂ ಬೆಟ್ಟಿಂಗ್‌ ನಡೆಸುತ್ತಾರೆ!

ಲ್ಯಾಡ್‌ಬ್ರೋಕ್ಸ್‌, ವಿಲಿಯಂ ಹಿಲ್‌ನಂತಹ ಅಧಿಕೃತ ಬೆಟ್ಟಿಂಗ್‌ ಕಂಪೆನಿಗಳೇ ಅಲ್ಲಿವೆ. ಈ ಸಂಸ್ಥೆಗಳ ಹೆಸರುಗಳು ಅಲ್ಲಿನ ಷೇರು ಪೇಟೆಯ ಪಟ್ಟಿಯಲ್ಲೂ ಇವೆ. ಯಾವ ರೀತಿಯ ಬೆಟ್ಟಿಂಗ್ ಕೂಡ ಇಲ್ಲಿ ಮಾಡಬಹುದು. ಆದರೆ ವ್ಯವಸ್ಥಿತವಾಗಿ ಮತ್ತು ಅತ್ಯಂತ ಪಾರದರ್ಶಕವಾಗಿ ಬೆಟ್ಟಿಂಗ್‌ ನಡೆಸುವುದು ಈ ಸಂಸ್ಥೆಗಳ ಹೆಗ್ಗಳಿಕೆ.

1950ರ ದಶಕ. ಬಾಹ್ಯಾಕಾಶ ಕ್ಷೇತ್ರದ ತಂತ್ರಜ್ಞಾನ ಮತ್ತು ಅಧ್ಯಯನದಲ್ಲಿ ಅಮೆರಿಕ ಹಾಗೂ ರಷ್ಯಾ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದ ಸಮಯ. 1957ರಲ್ಲಿ ರಷ್ಯಾ ಕಳುಹಿಸಿದ್ದ ಸ್ಪುಟ್ನಿಕ್‌-1 ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿತ್ತು. ಇದರಿಂದಾಗಿ ಪೈಪೋಟಿಯಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗಿತ್ತು. ಅದೇ ಸಮಯದಲ್ಲಿ ಅಂತರಿಕ್ಷಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ ಬಗ್ಗೆ ಚರ್ಚೆಯಾಗುತ್ತಿತ್ತು. ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್‌ ಕೆನಡಿ ಅವರು, ಅಮೆರಿಕವು ರಷ್ಯಾಕ್ಕಿಂತ ಮೊದಲು ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲಿದೆ ಎಂದು ಘೋಷಿಸಿದ್ದರು.

ಅತ್ತ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಇತ್ತ ಬ್ರಿಟನ್‌ನಲ್ಲಿ ಲ್ಯಾಡ್‌ಬ್ರೋಕ್ಸ್‌, ಚಂದ್ರನ ಅಂಗಳಕ್ಕೆ ರಷ್ಯಾವೇ ಮೊದಲು ಮಾನವನನ್ನು ಕಳುಹಿಸುತ್ತದೆ ಎಂದು ಹೇಳಿ ಬೆಟ್ಟಿಂಗ್‌ಗೆ ಜನರನ್ನು ಆಹ್ವಾನಿಸಿತು. ಒಂದು ವೇಳೆ ಅಮೆರಿಕ ಯಶಸ್ವಿಯಾದರೆ ಒಂದು ಪೌಂಡ್‌ಗೆ 10 ಸಾವಿರ ಪೌಂಡ್‌ ನೀಡುವುದಾಗಿ ಘೋಷಿಸಿತ್ತು. ಬ್ರಿಟನ್‌ ವ್ಯಕ್ತಿಯೊಬ್ಬ ಅಮೆರಿಕ ಯಶಸ್ವಿಯಾಗುತ್ತದೆ ಎಂದು ಹೇಳಿ ಹತ್ತು ಪೌಂಡ್‌ ಇಟ್ಟು ಬೆಟ್‌ ಮಾಡಿದ್ದ. 1969ರಲ್ಲಿ ಅಮೆರಿಕದ ಗಗನಯಾತ್ರಿಗಳು ಯಶಸ್ವಿಯಾಗಿ ಚಂದ್ರನಲ್ಲಿ ಇಳಿದು ದಾಖಲೆ ಬರೆದರು. ಲ್ಯಾಡ್‌ಬ್ರೋಕ್ಸ್‌ ಸಂಸ್ಥೆ ತಾನು ಕೊಟ್ಟ ಮಾತಿನಂತೆ ಬೆಟ್‌ ಕಟ್ಟಿದ್ದ ವ್ಯಕ್ತಿಗೆ 10 ಸಾವಿರ ಪೌಂಡ್‌ ನೀಡಬೇಕಿತ್ತು. ಬೆಟ್‌ ನಡೆದು ದಶಕ ಕಳೆದಿದ್ದರೂ, ಆ ವ್ಯಕ್ತಿಯನ್ನು ಹುಡುಕಾಡಿ ಸಂಸ್ಥೆಯು ಆತನಿಗೆ ನೀಡಬೇಕಾದ ಮೊತ್ತವನ್ನು ಸಂದಾಯ ಮಾಡಿತು!

ಬ್ರಿಟನ್‌ನಲ್ಲಿ ಲಾಟರಿ ಕೂಡ ಜನಪ್ರಿಯ. ಶ್ರೀಮಂತರು, ವೃತ್ತಿಪರರು ಸೇರಿದಂತೆ ಜನಸಾಮಾನ್ಯರು ಕೂಡ ಒಂದೊಂದು ಲಾಟರಿ ಖರೀದಿಸಿ ತಮ್ಮ ಅದೃಷ್ಟ ಪರೀಕ್ಷಿಸುತ್ತಾರೆ. ಫುಟ್‌ಬಾಲ್‌ ಕ್ರೀಡೆಗೆ ಮೀಸಲಾದ ಬೆಟ್ಟಿಂಗ್‌ ಸಂಸ್ಥೆ ‘ಫುಟ್‌ಬಾಲ್‌ ಪೂಲ್‌’ ಕೂಡ ಅಲ್ಲಿ ಇದೆ. ಅಮೆರಿಕದ ಲಾಸ್‌ವೆಗಾಸ್‌, ಚೀನಾದ ಮಕಾವ್‌ ಕ್ಯಾಸಿನೊಗಳಿಗೆ ಪ್ರಸಿದ್ಧಿ ಪಡೆದಿವೆ. ಇವು ವಂಚನೆಯ ಅಡ್ಡೆಗಳು ಎಂಬ ಆರೋಪಗಳಿದ್ದರೂ, ಅಲ್ಲಿಗೆ ಹೋಗುವವರ ಸಂಖ್ಯೆ ಕಡಿಮೆ ಇಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಈ ಎಲ್ಲ ರಾಷ್ಟ್ರಗಳಲ್ಲಿ ಬೆಟ್ಟಿಂಗ್, ಲಾಟರಿ ವ್ಯವಹಾರ ಸರ್ಕಾರದ ಅನುಮತಿಯಿಂದಲೇ ನಡೆಯುತ್ತದೆ. ಇವುಗಳ ಮೇಲೆ ಆಯಾ ಸರ್ಕಾರಗಳು ಸಣ್ಣ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತವೆ. ಇದರಿಂದಾಗಿ ಸರ್ಕಾರಗಳು ನಯಾ ಪೈಸೆ ಬಂಡವಾಳ ಹೂಡದೆ, ತೆರಿಗೆ ಮೂಲಕ ಲಾಭ ಗಳಿಸುತ್ತವೆ.

ಬೆಂಗಳೂರು ಸೇರಿದಂತೆ ಜಗತ್ತಿನಾದ್ಯಂತ ಕುದುರೆ ರೇಸ್‌ ಜನಪ್ರಿಯ ಆಟ. ಇದರಲ್ಲೂ ಬೆಟ್ಟಿಂಗ್‌ ಜೋರಾಗಿ ನಡೆಯುತ್ತದೆ. ಇದನ್ನು ಕ್ರೀಡೆ ಎಂದೇ ಪರಿಗಣಿಸಲಾಗಿದೆ. ಜಗತ್ತಿನಲ್ಲಿರುವ ಕುದುರೆ ರೇಸ್‌ನ ಹಿಂಬಾಲಕರ ಸಂಖ್ಯೆ ದೊಡ್ಡದಿದೆ. ಕುದುರೆ ರೇಸ್‌ನಲ್ಲಿ ಎರಡು ವರ್ಗದವರು ಪ್ರಮುಖವಾಗಿ ಹಣ ಹೂಡುತ್ತಾರೆ. ಒಂದು ಕುದುರೆ ಮಾಲೀಕರು ಮತ್ತು ಇನ್ನೊಂದು ಪಂಟರ್‌ಗಳು (ಬೆಟ್‌ ಮಾಡುವವರು). ಈ ಎರಡು ಗುಂಪುಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ರೇಸ್‌ಕೋರ್ಸ್ ಕ್ಲಬ್‌ಗಳು ಮಾಡುತ್ತವೆ. ಅಂತಿಮವಾಗಿ ರೇಸ್‌ ಮುಗಿದಾಗ ನಾಲ್ವರಿಗೆ ಹಣ ಸಂದಾಯವಾಗುತ್ತದೆ– ಕುದುರೆ ಮಾಲೀಕರು, ಬೆಟ್ ಮಾಡಿದವರು, ರೇಸ್‌ ಸಂಘಟಿಸಿದ ಕ್ಲಬ್‌ ಹಾಗೂ ಸರ್ಕಾರ (ತೆರಿಗೆಯ ಮೂಲಕ)

ಹಾಂಕಾಂಗ್‌ನಲ್ಲಿ ಜಾಕಿ ಕ್ಲಬ್‌ ಎಂಬ ರೇಸ್‌ಕೋರ್ಸ್ ಕ್ಲಬ್‌ ಇದೆ. ಇಡೀ ಜಗತ್ತಿನಲ್ಲಿರುವ ಅತ್ಯಾಧುನಿಕ ರೇಸ್‌ಕ್ಲಬ್‌ ಇದು. ಇದು ಲಾಭದಾಯಕ ಕ್ಲಬ್‌ ಅಲ್ಲ. ಬಂದ ಹಣವನ್ನೆಲ್ಲ ಅದು ದಾನ ಮಾಡುತ್ತದೆ. ಪ್ರತಿ ವರ್ಷ  400-500 ಕೋಟಿ ಹಾಂಕಾಂಗ್‌ ಡಾಲರ್‌ (ಅಂದಾಜು ₨ 3288-4100 ಕೋಟಿ) ಅನ್ನು ವಿವಿಧ ಉದ್ದೇಶಗಳಿಗೆ ನೆರವು ನೀಡುತ್ತದೆ!  ಬೆಂಗಳೂರು ಟರ್ಫ್‌ ಕ್ಲಬ್‌ನೊಂದಿಗೆ (ಬಿಟಿಸಿ) ನಾನು ಆತ್ಮೀಯ ನಂಟು ಹೊಂದಿದ್ದೇನೆ. ನಮ್ಮಲ್ಲೂ ವ್ಯವಸ್ಥಿತವಾದ ಬೆಟ್ಟಿಂಗ್‌ ವ್ಯವಸ್ಥೆ ಇದೆ.

ಬೆಟ್ಟಿಂಗ್‌, ಜೂಜು ಆಡಿ ಬಡವರು ಮನೆಮಠ ಕಳೆದುಕೊಳ್ಳುತ್ತಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಕೆಲವು ಪ್ರಕರಣಗಳು ನಡೆದಿರಬಹುದು. ಹಾಗೆಂದ ಮಾತ್ರಕ್ಕೆ ಎಲ್ಲರ ಪರಿಸ್ಥಿತಿಯೂ ಅದೇ ಎಂದು ಹೇಳಲಾಗದು. ಪ್ರತಿಯೊಬ್ಬರೂ ಒಂದು ಲೆಕ್ಕಾಚಾರ ಹಾಕಿಯೇ ಬೆಟ್ಟಿಂಗ್‌ ಮಾಡುತ್ತಾರೆ. ದಿನಕ್ಕೆ 300 ರೂಪಾಯಿ ದುಡಿಯುವ ಕೂಲಿ ಕೆಲಸಗಾರ ಮನೆ ಖರ್ಚಿಗೆ ಬೇಕಾದಷ್ಟು ಇಟ್ಟುಕೊಂಡು ಉಳಿದುದನ್ನು ಬೆಟ್ಟಿಂಗ್‌ಗೆ ಹಾಕುತ್ತಾನೆ. ಬೆಟ್ಟಿಂಗ್‌, ಲಾಟರಿ ವ್ಯವಹಾರ ಮಾಡುವವರು ಕೂಡ ಸ್ವಲ್ಪ ಯೋಚಿಸಬೇಕಾಗುತ್ತದೆ. ತನ್ನ ಮಿತಿಯಲ್ಲಿ ವ್ಯವಹಾರ ನಡೆಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಧೂಮಪಾನದಿಂದಾಗಿ ಜನರ ಆರೋಗ್ಯ ಹಾಳಾಗುತ್ತದೆ. ಮದ್ಯಪಾನದಿಂದ ಹಲವು ಕುಟುಂಬಗಳೇ ನಾಶವಾಗಿವೆ. ಹಾಗಿದ್ದರೂ, ಪ್ರತಿ ವರ್ಷ ಸರ್ಕಾರಗಳು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ, ತೆರಿಗೆ ಹೆಚ್ಚಿಸುವುದರ ಹಿಂದಿನ ಕಾರಣ ಏನು? ಇವುಗಳಿಗೆ ಇಲ್ಲದ ನಿರ್ಬಂಧ ಬೆಟ್ಟಿಂಗ್‌, ಲಾಟರಿಗೆ ಏಕೆ? ಇದು ರಾಜಕಾರಣಿಗಳ ಆಷಾಢಭೂತಿತನವಲ್ಲದೆ ಮತ್ತೇನು?

ನಮ್ಮಲ್ಲಿ ಹೇಗೆ ಅಂದರೆ, ಯಾರಾದರೂ ಸಂತೋಷಕ್ಕಾಗಿ ಅಥವಾ ಮನರಂಜನೆಗಾಗಿ ಏನಾದರೂ ಮಾಡಿದರೆ ತಡೆಯಲು ಯತ್ನಗಳು ನಡೆಯುತ್ತವೆ. ನಿಷೇಧ ಹೇರುವುದರಿಂದ ಯಾವುದಕ್ಕೂ ಪರಿಹಾರ ಸಿಗದು. ನಿರ್ಬಂಧ ಹಾಕುವುದರಿಂದ ಬೆಟ್ಟಿಂಗ್‌, ಲಾಟರಿ ವ್ಯವಹಾರವನ್ನು ತಡೆಯಲು ಸಾಧ್ಯವಿಲ್ಲ. ಅಕ್ರಮ ವ್ಯವಹಾರಕ್ಕೆ ಅದು ದಾರಿ ಮಾಡಿಕೊಡುತ್ತದೆ. ಇತ್ತೀಚೆಗೆ ಬೆಳಕಿಗೆ ಬಂದಿರುವ ಒಂದಂಕಿ ಲಾಟರಿ ದಂಧೆ ಇದಕ್ಕೆ ಒಂದು ನಿದರ್ಶನ.

ನಿಷೇಧ ಹೇರುವುದನ್ನು ಬಿಟ್ಟು, ಸರ್ಕಾರಗಳು ಬೆಟ್ಟಿಂಗ್‌ ಮತ್ತು ಲಾಟರಿಯನ್ನು ಕಾನೂನುಬದ್ಧಗೊಳಿಸಲಿ. ಜನರಿಗೆ ಹೊರೆಯಾಗದಂತೆ ತೆರಿಗೆ ವಿಧಿಸಲಿ (ಶೇ 1ರಿಂದ 5ರವರೆಗೆ). ಈ ವ್ಯವಹಾರಗಳ ಮೇಲೆ ನಿಗಾವನ್ನೂ ಇಡಲಿ. ಆಗ ಇಂತಹ ಯಾವುದೇ ಸಮಸ್ಯೆ ಉದ್ಭವವಾಗದು.

(ಲೇಖಕ ವೈದ್ಯ ಮತ್ತು ಬೆಂಗಳೂರು ಟರ್ಫ್‌ ಕ್ಲಬ್‌ ಮಾಜಿ ಅಧ್ಯಕ್ಷ)

ನಿರೂಪಣೆ: ಸೂರ್ಯನಾರಾಯಣ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT