ADVERTISEMENT

ಇದು ಪುಣ್ಯ‘ಕೋಟಿ’ಯ ವ್ಯವಹಾರ!

ಗೋರಕ್ಷಣೆ ಮತ್ತು ಗೋಮಾಂಸ ಭಕ್ಷಣೆ ಸುತ್ತ...

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಇದು ಪುಣ್ಯ‘ಕೋಟಿ’ಯ ವ್ಯವಹಾರ!
ಇದು ಪುಣ್ಯ‘ಕೋಟಿ’ಯ ವ್ಯವಹಾರ!   

ಗೋವು ಈಗ ಕೇವಲ ಮೂಕ ಪ್ರಾಣಿಯಲ್ಲ. ಗೋವು ತಾನಾಗೇ ಮಾತಾಡದಿದ್ದರೂ ಗೋವಿನ ಕಾರಣಕ್ಕೆ ಸಮುದಾಯಗಳು, ಸಂಘಟನೆಗಳು, ಪಕ್ಷಗಳು ಮಾತಾಡುವಂತಾಗಿದೆ. ನಿಜವಾದ ‘ಗೋಪಾಲಕರ’ ದನಿ ಯಾರಿಗೂ ಕೇಳಿಸುತ್ತಿಲ್ಲ. ಗೋವು ಸಾಕುವವರ ಕಷ್ಟನಷ್ಟ ಕೇಳುವವರೂ ಇಲ್ಲ!

ಗೋವಿನಲ್ಲಿ ಉಪಯೋಗಕ್ಕೆ ಬರುವ ಹಾಲು, ಸಗಣಿ, ಮೂತ್ರ, ಚರ್ಮ, ಮಾಂಸ, ಮೂಳೆ ಮಾತ್ರವಷ್ಟೇ ಅಲ್ಲ ‘ಮತ ಬ್ಯಾಂಕ್‌’ ಸಹ ಇದೆ ಎನ್ನುವ ರಹಸ್ಯ ರಾಜಕೀಯ ಪಕ್ಷಗಳಿಗೂ ಗೊತ್ತಾಗಿದೆ. ಲಾಭ–ನಷ್ಟದ ದೃಷ್ಟಿ ಇಟ್ಟುಕೊಂಡೇ ಅವು ಪರ–ವಿರೋಧದ ದನಿ ಎತ್ತುತ್ತಿವೆ. ಗೋವಿನ ಹಿಂದೆ ಕೋಟಿಕೋಟಿ ವಹಿವಾಟಿನ ವ್ಯವಹಾರ ಇದೆ. ಗೋಹತ್ಯೆ ನಡೆದಾಗ ಪರ–ವಿರೋಧಿಗಳ ಕಾದಾಟವೂ ನಡೆಯುತ್ತಿದೆ. ಇದು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚುತ್ತಿದೆ. ಜಾತಿ, ಧರ್ಮಗಳ ನಡುವೆ ಸಂಘರ್ಷಕ್ಕೂ ಹಾದಿಯಾಗಿದೆ.

ಮಲೆನಾಡಿನಲ್ಲಿ ಶ್ರೀಗಂಧ ಖಾಲಿಯಾದ ಮೇಲೆ ಮರಳು, ಅರಣ್ಯ ನಾಟಾ ಕಳ್ಳಸಾಗಣೆ ನಡೆಯುತ್ತಿತ್ತು. ಇದರ ಜತೆಗೆ ಕೆಲ ವರ್ಷಗಳಿಂದ ಜಾನುವಾರು ಕಳ್ಳಸಾಗಣೆ ಸೇರಿಕೊಂಡಿದೆ. ಹುಸಿ ಹೋರಾಟಗಾರರು, ಅದರಲ್ಲೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಶ್ರೀರಾಮ ಸೇನೆಯ ಗೋರಕ್ಷಾ ದಳಗಳ ಹೆಸರಿನಲ್ಲಿ ದಾಳಿ ನಡೆಸುವ ಕೆಲವು ಪುಂಡರು ಗೋಸಾಗಣೆದಾರರಿಂದ ‘ಹಫ್ತಾ ವಸೂಲಿ’ ಮಾಡಿ ದುಂಡಗಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು.

ಇಂತಹ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಲ್ಲೇ ಕೆಲವರು ಗೋಕಳ್ಳಸಾಗಣೆದಾರರ ಜತೆ ಶಾಮೀಲಾದ ಪ್ರಕರಣಗಳು ನಡೆದಿವೆ. ಈಗ ಅಲ್ಲಿನ ಗೋದಂಧೆಯ ಹಿಂದೆ ಕಾಂಗ್ರೆಸ್‌ ಇದೆ ಎನ್ನುವ ಆರೋಪ ಬಿಜೆಪಿ ಮುಖಂಡರದು. ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ಜೂಜುಕೋರ ತೇಜಸ್‌ ಅಪಹರಣ ಪ್ರಕರಣದ ಪ್ರಮುಖ ಆರೋಪಿ, ವಿಎಚ್‌ಪಿ ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಖಾಂಡ್ಯ ಪ್ರವೀಣನ ಜಾತಕ ಜಾಲಾಡುತ್ತಿರುವ ಸಿಐಡಿ ಪೊಲೀಸರಿಗೆ ಲಭಿಸಿರುವ ಮಾಹಿತಿ ಪ್ರಕಾರ, ಪ್ರವೀಣ್ ಮತ್ತು ಆತನ ಹಿಂಬಾಲಕರು ಗೋರಕ್ಷಣೆ ಹೆಸರಿನಲ್ಲಿ ‘ಹಫ್ತಾ ವಸೂಲಿ ದಂಧೆ’ ನಡೆಸಿದ್ದಾರೆ. ಪ್ರವೀಣ್‌ ಮೇಲಿರುವ 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ 25ಕ್ಕೂ ಹೆಚ್ಚು, ಗೋಸಾಗಣೆದಾರರ ಮೇಲಿನ ಹಲ್ಲೆ ಮತ್ತು ಸುಲಿಗೆಗೆ ಸಂಬಂಧಿಸಿದವು.

ಕಳೆದ ಎರಡು ಮೂರು ವರ್ಷಗಳಿಂದ ಸಂಘ ಪರಿವಾರದ ಸ್ಥಳೀಯ ಮುಖಂಡರಿಗೆ ಹಾಗೂ ಪೊಲೀಸ್‌ ಠಾಣೆಗಳಿಗೆ ಮಾಮೂಲಿ ನೀಡಿದರೆ ಮಾತ್ರ ಗೋಸಾಗಣೆ ಸರಾಗ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಬಂದು ನಿಂತಿದೆ. ಇದರ ಬಿಸಿ ರೈತರಿಗೂ ನೇರವಾಗಿ ತಟ್ಟಿದೆ. ಕೃಷಿ, ಹೈನುಗಾರಿಕೆ ಉದ್ದೇಶಕ್ಕೆ ರೈತರ ನಡುವೆ ವ್ಯಾಪಾರ ನಡೆದು, ಊರಿಂದ ಊರಿಗೆ ಸಾಗಿಸುತ್ತಿದ್ದರೂ ‘ಜಾನುವಾರು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದೀರಿ’ ಎಂದು ಕಳವು ಹಣೆಪಟ್ಟಿ ಹೊರಿಸಿ ರೈತರ ಮೇಲೆ ಹಲ್ಲೆ ನಡೆಸಿರುವ ನಿದರ್ಶನಗಳು ಇವೆ.

ದಾಳಿ ನಡೆದಾಗ ಜಾನುವಾರು ಕಳುವಾಗಿದೆ ಎಂದು ವಾರಸುದಾರನೇ ಅಲ್ಲದ ವ್ಯಕ್ತಿ ಪೊಲೀಸ್‌ ಠಾಣೆಗೆ ಹೋಗಿ ಸುಳ್ಳು ದೂರು ದಾಖಲಿಸಿ, ಕೋರ್ಟ್‌ ಮೆಟ್ಟಿಲು ಹತ್ತಿಸಿದ ಪ್ರಸಂಗಗಳಿಗೂ ಮಲೆನಾಡು ಸಾಕ್ಷಿಯಾಗಿದೆ. ಹಸು ಕೊಂದ ಆರೋಪ ಹೊತ್ತವರು ‘ಹೌದು ಆಹಾರಕ್ಕಾಗಿ ಕಡಿದದ್ದು ನಿಜ, ಅದರೆ ಅದಕ್ಕೆ ಹಣ ಕೊಟ್ಟಿದ್ದೇವೆ. ನಮ್ಮ ಮೇಲೆ ಅಮಾನವೀಯ ಹಲ್ಲೆ ಮಾಡಿದ್ದು ಸರಿಯೇ?’ ಎಂದು ನ್ಯಾಯ ಕೇಳುತ್ತಿದ್ದಾರೆ. ಗೋಹತ್ಯೆ ವಿರೋಧಿಸುತ್ತಿರುವವರು ‘ಕೊಟ್ಟಿಗೆಯಲ್ಲಿದ್ದ ಹಸುವನ್ನು ಕದ್ದೊಯ್ದು ಕಡಿದಿದ್ದು ನ್ಯಾಯವೇ?’ ಎಂದು ಮರು ಪ್ರಶ್ನೆ ಮುಂದಿಟ್ಟಿದ್ದಾರೆ.

ಗೋವು ಇಲ್ಲದೆ ರೈತನ ಬದುಕು ಇಲ್ಲ. ಚಹಾ, ಕಾಫಿಗೆ ಹಾಲಿಲ್ಲ, ರೊಟ್ಟಿಗೆ ಬೆಣ್ಣೆ ಇಲ್ಲ, ಹೋಳಿಗೆಗೆ ತುಪ್ಪ ಇಲ್ಲ... ಅಷ್ಟೇ ಏಕೆ ಕಾಕಾ, ರೆಹಮಾನಿಯ ಹೋಟೆಲುಗಳಲ್ಲಿ ‘ಅಂಬಾ ಬಿರ್ಯಾನಿ’ಯೂ ಇಲ್ಲ! ಪಟ್ಟಿ ಮಾಡುತ್ತಾ ಹೋದರೆ ಗೋವಿನ ಉತ್ಪನ್ನದ ಸಾಲು ಬೆಳೆಯುತ್ತಾ ಹೋಗುತ್ತದೆ. ಆದರೆ, ಗೋವು ಯಾಕೆ ಚರ್ಚೆಯ ಮುಖ್ಯ ಭೂಮಿಕೆಗೆ ಬರುತ್ತಿದೆ? ಕೆಲವರ ಮನಸ್ಸುಗಳನ್ನು ಕೆರಳಿಸುತ್ತಿದೆ? ತಳ ಸಮುದಾಯದವರ ದನಿ ದಮನಿಸುತ್ತಿದೆ ಎನ್ನುವುದು ಪ್ರಶ್ನೆ. ಹಾಲು, ಬೆಣ್ಣೆ ವಿಷಯಕ್ಕೆ ಜಗಳವಿಲ್ಲ, ಜಗಳ ಬಂದಿರುವುದು ‘ಬಿರ್ಯಾನಿ’ ವಿಷಯಕ್ಕೆ ಎನ್ನುವುದು ಗೋ ರಕ್ಷಕರ ವಾದ.

ಸಂವಿಧಾನದ ಪ್ರಕಾರವೇ 1964ರ ಗೋಹತ್ಯೆ ನಿಷೇಧ ಕಾಯ್ದೆ ಮತ್ತು 1960ರ ಪ್ರಾಣಿ ಹಿಂಸೆ ನಿರ್ಬಂಧ ಕಾಯ್ದೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆಗೆ ಅವಕಾಶವಿಲ್ಲ. ಆದರೆ, ಈ ನಾಡಿನಲ್ಲಿ ಯಾವತ್ತೂ ಗೋಹತ್ಯೆ ನಡೆದಿರಲಿಲ್ಲವೇ? ಮೇಲ್ಪಂಕ್ತಿಯಲ್ಲಿ ನಿಂತು ಗೋರಕ್ಷಣೆಯ ಪರ ಘೋಷವನ್ನು ಜೋರು ದನಿಯಲ್ಲಿ ಕೂಗುತ್ತಿರುವ ಸಮುದಾಯದವರ ಪೂರ್ವಜರೂ ಯಜ್ಞ, ಯಾಗದಲ್ಲಿ ಹವಿಸ್ಸು ಅರ್ಪಿಸುವಾಗ ಗೋಮಾಂಸ ಭಕ್ಷಣೆ ಮಾಡಿರುವ ಬಗ್ಗೆ ವೇದ, ಪುರಾಣಗಳಲ್ಲೇ ಉಲ್ಲೇಖವಿದೆಯಲ್ಲ? ಹಾಗಾದರೆ ಅವರು ಗೋಮಾಂಸ ಸೇವಿಸಿರುವುದು ಸುಳ್ಳಾದರೆ ವೇದ, ಪುರಾಣವೂ ಸುಳ್ಳೇ ಎನ್ನುವ ವಾದ ‘ಗೋಮಾಂಸ ನಮ್ಮ ಆಹಾರದ ಹಕ್ಕು’ ಎಂದು ಪ್ರತಿಪಾದಿಸುವವರದ್ದು.

ಮಾರುಕಟ್ಟೆಯಲ್ಲಿ ಕುರಿ ಮಾಂಸ ಕೆ.ಜಿ.ಗೆ ₹400ಕ್ಕೆ ಏರಿರುವಾಗ, ಕೋಳಿ ಮಾಂಸ ₹200ರ ಸಮೀಪ ತಲುಪಿರುವಾಗ ಬಡವರು, ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ತಳಸಮುದಾಯದವರು, ಅಲ್ಪಸಂಖ್ಯಾತರು ಕೆ.ಜಿ.ಗೆ ಕನಿಷ್ಠ ₹120ರಿಂದ ₹140ರ ಆಸುಪಾಸಿನಲ್ಲಿ ಸಿಗುವ ಗೋಮಾಂಸವನ್ನು ಅವಲಂಬಿಸುವುದು ಅನಿವಾರ್ಯವೂ ಆಗಿರಬಹುದು. ಅಹಿಂಸಾವಾದಿಗಳು ಕುರಿ, ಕೋಳಿ, ಹಂದಿ ಮಾಂಸ ತಿನ್ನಬೇಡಿ ಎಂದರೆ ಹಿಂದೂ ಸಮಾಜದ ಮಾಂಸಾಹಾರಿಗಳು ಇವನ್ನು ವರ್ಜಿಸಲು ಸಿದ್ಧರಿದ್ದಾರೆಯೇ? ಹಾಗೆಯೇ ಗೋಮಾಂಸ ತಿನ್ನಬೇಡಿ ಎಂದು ದಲಿತರು, ಅಲ್ಪಸಂಖ್ಯಾತರಿಗೆ  ನಿಷೇಧ ಹೇರಲು ಸಾಧ್ಯವೇ ಎಂದು ಪ್ರಶ್ನಿಸುವವರೂ ಇದ್ದಾರೆ.

ರಾಜ್ಯದ ಯಾವ ನಗರದಲ್ಲಿ ಗೋಹತ್ಯೆ ನಡೆಯುತ್ತಿಲ್ಲ? ಕಸಾಯಿಖಾನೆ ಮುಚ್ಚಿದರೆ ವಯಸ್ಸಾದ ಎತ್ತುಗಳು, ಹಸುಗಳು, ಗೊಡ್ಡುಬಿದ್ದ ಹಸುಗಳು, ಎಮ್ಮೆಕೋಣಗಳನ್ನು ಎಲ್ಲಿಗೆ ಕಳುಹಿಸುವುದು? ಇವೆಲ್ಲವನ್ನು ಮಾರಾಟ ಮಾಡದೆ ಉಳಿಸಿಕೊಂಡರೆ ಕಾಯ್ದುಕಟ್ಟಲು ಜನರಿದ್ದಾರೆಯೇ? ಮೇವು ಒದಗಿಸುವ ಗೋಮಾಳಗಳು ಉಳಿದಿವೆಯೇ? ಹುಲ್ಲುಬನಿ ಇವೆಯೇ? ಗೋಪಾಲನೆಗೆ ಅಮೃತ ಮಹಲ್‌ ಕಾವಲುಗಳು ಉಳಿದಿವೆಯೇ?– ಜಾನುವಾರು ಪಾಲಕರು ಕೇಳುವ ಇಂತಹ ಪ್ರಶ್ನೆಗಳಿಗೆ ಉತ್ತರಗಳೆಲ್ಲಿವೆ?

ಕಡಿವಾಣ ಇಲ್ಲ
ಗೋಸಂಪತ್ತು ಕದಿಯುವುದರಲ್ಲಿಯೂ ಭಾರಿ ಲಾಭ ಕಂಡಿರುವ ಗೋಕಳ್ಳರು, ಕೊಟ್ಟಿಗೆಯಲ್ಲಿ ಕಟ್ಟಿದ, ಹೊಲಗದ್ದೆಗಳಲ್ಲಿ ಮೇಯಲು ಬಿಟ್ಟಿದ್ದ ಜಾನುವಾರು, ರಸ್ತೆ ವೃತ್ತಗಳಲ್ಲಿ ಮಲಗಿರುತ್ತಿದ್ದ ಬೀಡಾಡಿ ದನಗಳನ್ನೂ ಬಿಡುತ್ತಿಲ್ಲ. ಕಳ್ಳಸಾಗಣೆಯಾಗುವ ಗೋವು ನಗರದೊಳಗಿರುವ ಕಸಾಯಿಖಾನೆ ಪಾಲಾಗುವುದಷ್ಟೇ ಅಲ್ಲ, ಜಿಲ್ಲೆ, ರಾಜ್ಯದ ಗಡಿಯನ್ನೂ ದಾಟಿ ಬಾಂಗ್ಲಾದಂಥ ಹೊರದೇಶಕ್ಕೂ ಹೋಗುತ್ತಿದೆ. ಇದರ ಹಿಂದೆ ಈಗ ದೊಡ್ಡ ಮಾಫಿಯಾವೇ ತೊಡಗಿಕೊಂಡಿದೆ. ಇವರ ರಕ್ಷಣೆಗೆ ನಿಂತವರು ಮತ್ತವೇ ರಾಜಕೀಯ ಪಕ್ಷಗಳ ನೇತಾರರು!

ಒಂದು ಗೋವನ್ನು ಕದ್ದು ಮಂಗಳೂರು, ಕಾಸರಗೋಡು, ಕೇರಳದವರೆಗೆ ಸಾಗಿಸಿಕೊಟ್ಟರೆ ಕನಿಷ್ಠ ₹ 20 ಸಾವಿರದವರೆಗೂ ಲಾಭ ಸಿಗುತ್ತದೆ. ಕದಿಯುವವನಿಗೆ ಒಂದು ಗೋಸಾಗಣೆಗೆ ಹೆಚ್ಚೆಂದರೆ ₹ 3 ಸಾವಿರ ವೆಚ್ಚ ತಗುಲಬಹುದು. ಜಾನುವಾರು ಕಳ್ಳಸಾಗಣೆಯಲ್ಲಿ ಮಂಗಳೂರಿನ ಕೈಕಂಬ, ಶಿವಮೊಗ್ಗದ ಭದ್ರಾವತಿ, ಹಾಸನದ ಬೇಲೂರು ಮೂಲದ ‘ವೃತ್ತಿಪರ’ ತಂಡಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ತೊಡಗಿಸಿಕೊಂಡಿವೆ.

ಪೊಲೀಸರು ದನಗಳ್ಳರನ್ನು ಮುಟ್ಟುವ ಧೈರ್ಯ ತೋರುತ್ತಿಲ್ಲ. ಹಾಗಾಗಿ ‘ಮಲೆನಾಡು ಗಿಡ್ಡ’ ತಳಿ ಗೋವುಗಳು ಮಂಗಳೂರು, ಕೇರಳ ಕಸಾಯಿಖಾನೆಗಳ ಪಾಲಾಗುವುದು ಸರಾಗವಾಗಿ ನಡೆಯುತ್ತಿದೆ.
-ನಾಗೇಶ ಅಂಗೀರಸ, ಕಾರ್ಯಕರ್ತ
ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ

ಜನಜಾಗೃತಿಗೆ ತೀರ್ಮಾನ
ಎಂತಹ ಗೋವನ್ನು ಕೊಲ್ಲಲು ಅವಕಾಶವಿದೆ, ಕೊಲ್ಲುವ ಮೊದಲು ಪಶುವೈದ್ಯರ ದೃಢೀಕರಣ ಪತ್ರ ಪಡೆದಿರಬೇಕಾದುದು ಎಲ್ಲವನ್ನೂ ಗೋಸಂಬಂಧಿ ಕಾಯ್ದೆ ಸ್ಪಷ್ಟಪಡಿಸಿದೆ. ಆದರೆ, ಇವು ಯಾವುವೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಗೋಸಂರಕ್ಷಣೆಯ ಅರಿವು ಮೂಡಿಸಲು ದೊಡ್ಡ ಜನಜಾಗೃತಿಗೆ ಸದ್ಯದಲ್ಲೇ ನಡೆಯುವ ಬೈಠಕ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ.
-ಯೋಗೀಶ್‌ ರಾಜ್‌ ಅರಸ್‌,
ಜಿಲ್ಲಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌

ADVERTISEMENT

ಹಫ್ತಾ ವಸೂಲಿ
ಗೋರಕ್ಷಣೆಗೆ ಈಗ ಟೊಂಕಕಟ್ಟಿ ನಿಂತವರು ನಿಜವಾದ ಗೋಪಾಲಕರಲ್ಲ, ಗೋಮಾಂಸ ಸೇವಿಸುವವರ ಜತೆಗೆ ಸೇರಿ ತಿಂದವರೆ! ಅವರೀಗ ಯಾರದೋ ಲಾಭಕ್ಕೆ ವಿರೋಧದ ಪ್ರಹಸನ ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿರುವ 45ಕ್ಕೂ ಹೆಚ್ಚು ಕಸಾಯಿಖಾನೆಗಳಲ್ಲಿ  ನಿತ್ಯ ನೂರಾರು ಜಾನುವಾರುಗಳ ಹತ್ಯೆಯಾಗುತ್ತಿದೆ. ಜನಪ್ರತಿನಿಧಿಗಳೇ ಪ್ರತಿ ತಿಂಗಳು ಇಲ್ಲಿ ಮಾಮೂಲಿ ವಸೂಲಿ ಮಾಡುತ್ತಾರೆ.
-ಎಚ್‌.ಎಚ್‌.ದೇವರಾಜ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.