ADVERTISEMENT

ಕಾಯಕವಿಲ್ಲದೆ ಕೈಲಾಸದ ಹಂಬಲ

ಅಕ್ರಮ ಲಾಟರಿ ದಂಧೆ

ಬಿ.ಕೆ.ಶಿವರಾಂ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಪಗಡೆ ಆಟದಲ್ಲಿ ಹೆಂಡತಿಯನ್ನೇ ಪಣಕ್ಕಿಟ್ಟ ಹಿನ್ನೆಲೆ ಇರುವ ದೇಶ ಭಾರತ. ಲಾಗಾಯ್ತಿನಿಂದ ಜೂಜಾಟ ಎನ್ನುವುದು ನಮ್ಮ ದೇಶದ ಸಂಸ್ಕೃತಿ–ಪರಂಪರೆಯ ಭಾಗವೇ ಆಗಿದೆ. ಇದೊಂದು ತರಹ ಮಾದಕ ವ್ಯಸನದಂತೆ. ಈ ಚಟದಿಂದ ಮುಕ್ತರಾಗುವುದು ಬಲು ಕಷ್ಟ. ಪಣ ಕಟ್ಟುವುದು, ಜೂಜು ಆಡುವುದು ನಮ್ಮ ಜನರಿಗೆ ರಕ್ತಗತವಾಗಿದೆ. ಈ ಜೂಜು ಮಹಾಭಾರತದಂತಹ ಯುದ್ಧಕ್ಕೆ ಪ್ರೇರೇಪಿಸುತ್ತದೆ. ಯುದ್ಧದಿಂದ ಜನರ ವಿನಾಶ ಕಟ್ಟಿಟ್ಟ ಬುತ್ತಿ.

ಹಿಂದೆ ಧಾರ್ಮಿಕ, ಸೇವಾ ಹಾಗೂ ಕ್ರೀಡಾ ಸಂಸ್ಥೆಗಳ ಹಣ ಕ್ರೋಡೀಕರಣಕ್ಕಾಗಿ ‘ಲಕ್ಕಿ ಡ್ರಾ’ ಎತ್ತುವುದು ರೂಢಿಯಾಗಿತ್ತು. ಸಂಸ್ಕೃತಿ–ಪರಂಪರೆಯನ್ನೇ ವಿನಾಶ ಮಾಡಿ ಗಳಿಸಿದ ಹರಾಮಿ ದುಡ್ಡು (ರಿಯಲ್‌ ಎಸ್ಟೇಟ್‌ ದಂಧೆ, ಅಕ್ರಮ ಗಣಿಗಾರಿಕೆ, ಮಾನವ ಕಳ್ಳ ಸಾಗಾಣಿಕೆ ಮೂಲದ ಅಪವಿತ್ರ ಗಳಿಕೆ) ಈಗ ಹಲವು ಧಾರ್ಮಿಕ ಸಂಸ್ಥೆಗಳಿಗೆ ಬರುತ್ತದೆ. ನೀರಾ ರಾಡಿಯಾ ಎಂಬ ರಾಜಕೀಯ ದಲ್ಲಾಳಿ ಉಡುಪಿ ಮಠಕ್ಕೆ ದೇಣಿಗೆ ಕೊಟ್ಟದ್ದನ್ನು ಇಲ್ಲಿ ಸಾಂದರ್ಭಿಕವಾಗಿ ಉದಾಹರಿಸುತ್ತೇನೆ.

ಲಕ್ಕಿ ಡ್ರಾ ವಿಷಯಕ್ಕೆ ಮತ್ತೆ ಬರೋಣ. ಹಿಂದೆ ಸಂಘ–ಸಂಸ್ಥೆಗಳು ಹಣ ಎತ್ತಲು ಇಂತಹ ಚೀಟಿ ಆಟ ನಡೆಸುತ್ತಿದ್ದವು. ಜನ ಹಣ ಕೊಟ್ಟು ಚೀಟಿ ಪಡೆಯಬೇಕಿತ್ತು. ಕೊನೆಗೆ ಸಂಘಟಕರು ಚೀಟಿ ಎತ್ತುತ್ತಿದ್ದರು. ಗೆದ್ದವರಿಗೆ ಮನೆ, ಕಾರು ಎಂದೆಲ್ಲ ಆಕರ್ಷಕ ‘ಬಂಪರ್‌’ ಬಹುಮಾನ ಇಡುತ್ತಿದ್ದರು. ಇಂತಹ ಸ್ಪರ್ಧೆ ಏರ್ಪಡಿಸುವ ಮುನ್ನ ಸಂಘಟಕರು ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಿತ್ತು. ಆದರೆ, ಬಲಾಢ್ಯ ಸಂಸ್ಥೆಗಳು ಕಾನೂನು ಧಿಕ್ಕರಿಸಿದವು. ಕಾನೂನುಬಾಹಿರ ಚಟುವಟಿಕೆ ನಡೆದರೂ ಆರ್ಥಿಕ ಇಲಾಖೆ ಕಣ್ಮುಚ್ಚಿಕೊಂಡು ಕುಳಿತಿತು. ವಾಣಿಜ್ಯ ತೆರಿಗೆ ಅಧಿಕಾರಿಗಳೂ, ಪೊಲೀಸ್‌ ಅಧಿಕಾರಿಗಳೂ ಕಾನೂನು ಪರಿಜ್ಞಾನವಿಲ್ಲದೆ ಜಾಣ ಕುರುಡು ಪ್ರದರ್ಶಿಸಿದರು.

ಆಸೆ–ಆಮಿಷಕ್ಕೆ ಜನ ಬಲಿಯಾಗುತ್ತಾರೆ ಎನ್ನುವುದು ಹುಟ್ಟಾ ವಂಚಕರಿಗೆ ತಿಳಿಯಿತು. ನೂರು ರೂಪಾಯಿ ಕೊಟ್ಟರೆ ಹತ್ತು ಸಾವಿರ ರೂಪಾಯಿ ಮೌಲ್ಯದ ಸರಕು ಕೊಡುವ, ಹತ್ತಾರು ಸಾವಿರ ಸದಸ್ಯರನ್ನು ಮಾಡುವ ಕಾರ್ಯಪಡೆ ಸಿದ್ಧವಾಯಿತು. ಜನ ಮುಗಿಬಿದ್ದು ಹಣ ಕಟ್ಟಿದರು. ಮೊದಮೊದಲು ಹಣ, ಸರಕು ಕೊಟ್ಟು ವಿಶ್ವಾಸ ಗಳಿಸಿದವರು, ಕೋಟ್ಯಂತರ ರೂಪಾಯಿ ಸಂಗ್ರಹ ಆಗುತ್ತಿದ್ದಂತೆ ರಾತ್ರೋರಾತ್ರಿ ಊರು ಬಿಟ್ಟು ಓಡಿದರು. ವಂಚಕರ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು.

ವಂಚನೆ ಹೆಚ್ಚಿದಂತೆ ಪೊಲೀಸ್‌ ಠಾಣೆಗಳಲ್ಲಿ ದೂರುಗಳು ದಾಖಲಾದವು. ಆಗ ಪೊಲೀಸರು ಸ್ವಲ್ಪ ಎಚ್ಚೆತ್ತುಕೊಂಡರು. ಆದರೆ, ವಂಚಕ ಸಂಸ್ಥೆಗಳು ಸಂವಿಧಾನದ ಹಕ್ಕು ಎನ್ನುವ ನೆಪದಲ್ಲಿ ನ್ಯಾಯಾಂಗದ ಮೊರೆ ಹೋದವು. ಕೋರ್ಟ್‌ಗಳಿಂದ ತಡೆಯಾಜ್ಞೆಗಳು ಬಂದವು. ಆಗ ಕ್ರಮ ಕೈಗೊಳ್ಳುವುದನ್ನು ಬಿಟ್ಟ ಪೊಲೀಸರು ಬೆದರಿಕೆ ಹಾಕಲು ಶುರು ಮಾಡಿದರು. ವಂಚಕರು ಅವರಿಗೂ ‘ಮೇವು’ ಹಾಕಿದರು. ‘ಮೇವು’ ತಿಂದ ಪೊಲೀಸರು ಕೋರ್ಟ್‌ ತಡೆಯಾಜ್ಞೆ ಇದೆ, ಏನು ಮಾಡುವುದು ಎಂದು ಕೈಕಟ್ಟಿ ಕುಳಿತರು. ನೂರಾರು ಕೋಟಿ ರೂಪಾಯಿ ವಂಚನೆ ನಡೆದುಹೋಯಿತು.

‘ನಮಗೆ ಯಾವುದರ ಅರಿವಿರಲಿಲ್ಲ, ನಾವು ಮುಗ್ಧರು’ ಎನ್ನುತ್ತಾರೆ ಜನ. ಆದರೆ, ತಮ್ಮ ಆಸೆಬುರುಕತನದ ಬಗೆಗೆ ಚಕಾರ ಎತ್ತುವುದಿಲ್ಲ. ಇದು ಮುಗ್ಧತನ ಅಲ್ಲ, ಮೂರ್ಖತನದ ಪರಮಾವಧಿ. ಕಾಯಕವೇ ಕೈಲಾಸ ಎನ್ನುವುದನ್ನು ಮರೆತು ಕಾಯಕವಿಲ್ಲದೆ ಕೈಲಾಸ ಕಾಣುವ ಹಂಬಲ. ದಿಢೀರ್‌ ಶ್ರೀಮಂತರಾಗುವ ಬಯಕೆ.

1960ರ ದಶಕದ ಹೊತ್ತಿಗೆ ಪತ್ರಿಕೆಗಳಲ್ಲಿ ಅರಳೆ ಧಾರಣೆ ಬರುತ್ತಿತ್ತು. ದಿನದ ಆರಂಭಿಕ ಮತ್ತು ಮುಕ್ತಾಯದ ದರದ ಕೊನೆಯ ಅಂಕಿ ಯಾವುದಿರಲಿದೆ ಎಂಬ ಊಹೆ ಬೆಟ್ಟಿಂಗ್‌ಗೆ ದ್ರವ್ಯವಾಯಿತು. ಸರಿಯಾದ ಅಂಕಿ ಹೇಳಿದವನಿಗೆ ಜೂಜಾಟ ನಡೆಸುತ್ತಿದ್ದ ಕಳ್ಳ ಬಲು ನಿಯತ್ತಿನಿಂದ ಹಣ ಸಂದಾಯ ಮಾಡುತ್ತಿದ್ದ. ಕಳ್ಳನ ನಿಯತ್ತು ಎಲ್ಲೆಡೆ ಪ್ರಚಾರವಾಯಿತು. ಇದನ್ನೆಲ್ಲ ಗಮನಿಸಿದ ಭೂಗತ ಲೋಕದ ಪಾತಕರು ಮಟ್ಕಾ ಆರಂಭಿಸಿದರು. ‘ಭಾರತ್‌ ಮಾತಾ ಕೀ ಜೈ’ ಎಂದು ಎಲ್ಲರೂ ಒಂದಾಗುವಂತೆ ಧರ್ಮ, ಜಾತಿ, ರಾಜ್ಯ, ಭಾಷೆಗಳ ಗಡಿಯನ್ನೂ ಮೀರಿ ಮಟ್ಕಾ, ಜೂಜುಕೋರ ಜನರನ್ನು ಒಂದು ಮಾಡಿತು.

ಬಾಂಬೆ ಪ್ರಾಂತ್ಯದಲ್ಲಿ ಮಟ್ಕಾ ದಂಧೆಯನ್ನು ವ್ಯವಸ್ಥಿತವಾಗಿ ಬೆಳೆಸಿದ್ದು ರತನ್‌ ಖತ್ರಿ. ಆತನೇನೂ ಸರ್ಕಾರ ಅಲ್ಲ, ಸಂಸ್ಥೆ ಅಲ್ಲ, ಸ್ವಾಮೀಜಿ ಅಲ್ಲ, ಮನುಷ್ಯ ಎನ್ನಲಿಕ್ಕೂ ನಾಲಾಯಕ್ಕು. ವ್ಯವಸ್ಥೆ ವಿರುದ್ಧವೇ ಸೆಡ್ಡು ಹೊಡೆದು ನಿಂತ ವ್ಯಕ್ತಿ ಆತ. ಆಗೇನೂ ಸಿ.ಸಿ ಕ್ಯಾಮೆರಾ ಇರಲಿಲ್ಲ. ಖತ್ರಿ ಮನೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ತೋರಿಸಲು ಟಿ.ವಿ ಸಹ ಇರಲಿಲ್ಲ. ಆದರೆ, ಬಾಜಿ ಕಟ್ಟಿದ ಜನ ಆತನನ್ನು ಬಲವಾಗಿ ನಂಬಿದರು.

ಹಿಂದಿನ ದಿನ ಬಾಜಿ ಕಟ್ಟಿದ ಜನ ಫಲಿತಾಂಶಕ್ಕಾಗಿ ಮಾರನೇ ದಿನ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆಗಿನ ದಿನಗಳಲ್ಲಿ ಅದೆಲ್ಲಿತ್ತು

ತಂತ್ರಜ್ಞಾನ? ಇದ್ದುದು ಒಂದೇ: ಟ್ರಂಕ್‌ ಕಾಲ್‌! ಒಂದು ಟ್ರಂಕ್‌ ಕಾಲ್‌ಗೆ ಜನ ಕನಿಷ್ಠ 2 ಗಂಟೆ ಕಾಯಬೇಕಿತ್ತು. ಆಗ ಪ್ರಧಾನಿ ಇಂದಿರಾ ಗಾಂಧಿ ಅವರೇ ಹಾಟ್‌ಲೈನ್‌ ಟ್ರಂಕ್‌ ಕಾಲ್‌ಗೆ 5–10 ನಿಮಿಷ ಕಾಯಬೇಕಾಗುತ್ತದೆ ಎನ್ನುವ ಮಾತಿತ್ತು. ಆದರೆ, ಖತ್ರಿ ದೇಶದಾದ್ಯಂತ ಎಲ್ಲ ಏಜೆಂಟರಿಗೆ ಕೇವಲ ಐದು ನಿಮಿಷದಲ್ಲಿ ದಿನದ ಫಲಿತಾಂಶ ಕಳುಹಿಸುತ್ತಿದ್ದ. ಟೆಲಿಕಾಂ ಸಂಸ್ಥೆ ಅದಾಗಲೇ ಭ್ರಷ್ಟ ಕೂಪದಲ್ಲಿ ಬಿದ್ದಿತ್ತು.
ಬಾಂಬೆಯಿಂದ ಬಂದ ಫಲಿತಾಂಶದ ಸಂಖ್ಯೆಯನ್ನು ಮಟ್ಕಾ ಅಡ್ಡೆಗಳ ಬೋರ್ಡ್‌, ಬಸ್‌ ನಿಲ್ದಾಣ, ಸಂತೆ... ಹೀಗೆ ಜನ ಸೇರುವ ಸ್ಥಳಗಳಲ್ಲಿ ಬರೆಯಲಾಗುತ್ತಿತ್ತು. ಗೆದ್ದವರು ದುಡ್ಡು ಪಡೆಯಲು ಓಡಿದರೆ, ಸೋತವರು ಪೆಚ್ಚು ಮೋರೆ ಹಾಕಿಕೊಂಡು ಹೋಗುತ್ತಿದ್ದರು. ಈ ಜೂಜಾಟದಲ್ಲಿ ಲೆಕ್ಕವಿಲ್ಲದಷ್ಟು ಜನ ಮನೆ–ಮಠ ಕಳೆದುಕೊಂಡರು. ತೆರಿಗೆ ವ್ಯಾಪ್ತಿಗೆ ಬಾರದೆ ಲಕ್ಷಾಂತರ ಕೋಟಿ ವ್ಯವಹಾರ ನಡೆದುಹೋಯಿತು. ಆ ಹಣವೇ ದೇಶದಲ್ಲಿ ಬಲಿಷ್ಠ ಭೂಗತ ಲೋಕವನ್ನು ಪ್ರತಿಷ್ಠಾಪಿಸಿತು. ಭ್ರಷ್ಟ ರಾಜಕಾರಣಿಗಳ ಪೋಷಣೆಯನ್ನೂ ಮಾಡತೊಡಗಿತು.

ರೈತರು, ಕೂಲಿ ಕಾರ್ಮಿಕರು, ಶಾಲಾ ಮಾಸ್ತರರು, ಪಡ್ಡೆ ಹುಡುಗರು ಎಲ್ಲರೂ ಜೂಜಾಟದಲ್ಲಿ ಹಣ ಹೂಡಿದರು. ಆಟದ ಅಮಲು ಏರಿದಾಗ ಹೆಣ್ಣು ಮಕ್ಕಳಿಗೂ ಈ ರೋಗ ಅಂಟಿಕೊಂಡಿತು. ಆಗ ಸರ್ಕಾರ ಸ್ವಲ್ಪ ಎಚ್ಚೆತ್ತುಕೊಂಡಿತು. ಪ್ರಕರಣಗಳು ದಾಖಲಾದವು. ದಂಧೆಗೆ ಬೆಂಬಲಿಸಿದ ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು, ರೌಡಿಗಳು ರಾತ್ರೋರಾತ್ರಿ ಶ್ರೀಮಂತರಾದರು. ಈ ದಂಧೆಯ ಮುಂದುವರಿದ ಭಾಗವೇ ಲಾಟರಿ.

ಅಧಿಕಾರಿಗಳೆಂಬ ‘ಪ್ರಭೃತಿ’ಗಳಿಗೆ ಲಾಟರಿ ಶುರು ಮಾಡುವ ಆಲೋಚನೆಯನ್ನು ಯಾರು ಕೊಟ್ಟರೋ? ಸರ್ಕಾರಗಳಿಗೆ ಅವರು ಅದನ್ನೇ ಬೋಧಿಸಿದರು. ಜನರಲ್ಲಿ ಗೀಳು ಬೆಳೆಯುವುದನ್ನು ಅರಿಯದೆ ಕಾಂಗ್ರೆಸ್‌, ಬಿಜೆಪಿ, ಜನತಾದಳ, ಡಿಎಂಕೆ, ಎಐಎಡಿಎಂಕೆ, ಕೊನೆಗೆ ಕಮ್ಯುನಿಸ್ಟ್‌ ಸರ್ಕಾರಗಳೂ ಲಾಟರಿ ಜೂಜಾಟವನ್ನು ಪೋಷಿಸಿ ಬೆಳೆಸಿದವು. ಲಾಟರಿಯಲ್ಲಿ ಗೆದ್ದವರನ್ನು ಪತ್ರಿಕೆಗಳು ಒಲಿಂಪಿಕ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದವರಂತೆ ವಿಜೃಂಭಿಸಿದವು. ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಲಾಟರಿ ವಿಭಾಗವನ್ನೇ ಮಾಡಿ ಎಂಎಸ್‌ಐಎಲ್‌ ಅಡಿ ತಂದರು. ಸರ್ಕಾರ ಈ ಲಾಟರಿಗೆ ಎಷ್ಟೊಂದು ಒತ್ತು ಕೊಟ್ಟಿತೆಂದರೆ ರೇಡಿಯೊದಲ್ಲಿ ಪುಂಖಾನುಪುಂಖವಾಗಿ ಪ್ರಚಾರ ಮಾಡಿತು. ಎಂಎಸ್‌ಐಎಲ್‌ ಹೆಸರಿನಲ್ಲಿ ಗೀತಗಾಯನ ಕಾರ್ಯಕ್ರಮ ಮಾಡಲಾಯಿತು. ತಾಯಿ ಮೈಮಾರಿಕೊಂಡು ಮಗುವನ್ನು ಸಾಕಿದ ರೀತಿ ಅದಾಗಿತ್ತು.

ಲಾಟರಿ ವಿಜೃಂಭಣೆ ಎಲ್ಲರನ್ನೂ ಆಕರ್ಷಿಸಿತು. ಅಂಗವಿಕಲರು, ಕಣ್ಣು ಕಾಣದವರು ಸಹ ಲಾಟರಿ ಮಾರಿದರು. ರೈಲು–ಬಸ್‌ ನಿಲ್ದಾಣ, ಸಂತೆ, ಸಿಗ್ನಲ್‌ ಹೀಗೆ ಸಿಕ್ಕಸಿಕ್ಕಲ್ಲೆಲ್ಲಾ ಲಾಟರಿ ಮಾರಾಟದ ಅಬ್ಬರ. ಟಿಕೆಟ್‌ಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಿಕರಿಯಾದವು. ಧಾರ್ಮಿಕ ಕೇಂದ್ರಗಳಲ್ಲಿ ಸಹ ಮಾರಾಟವಾದವು. ಸರ್ಕಾರಿ ಕಚೇರಿಗಳಲ್ಲೂ ಅವುಗಳದೇ ಹಾವಳಿ. ಲಾಟರಿ ಎಲ್ಲೆಡೆ ಕಬಂಧಬಾಹು ಚಾಚಿತು. ಕಾರ್ಯಾಂಗದ ಜವಾಬ್ದಾರಿ ಹೊತ್ತ ಪ್ರಭೃತಿಗಳಿಗೆ ಇದು ಲಾಭದಾಯಕ ಉದ್ಯಮವಾಗಿ ಕಂಡರೆ, ಜನಸಾಮಾನ್ಯರ ಊಟವನ್ನು ಈ ಗೀಳು ಕಿತ್ತುಕೊಂಡಿತು. ಮೊದಲು ಮಾಸಿಕವಾಗಿ ಡ್ರಾ ನಡೆಯುತ್ತಿತ್ತು. ಬಳಿಕ ಪಾಕ್ಷಿಕ, ಸಾಪ್ತಾಹಿಕ, ದೈನಿಕ ಲಾಟರಿಗಳೂ ಬಂದವು. ದಕ್ಷಿಣ ಭಾರತ,  ಈಶಾನ್ಯ ರಾಜ್ಯಗಳ ಲಾಟರಿ ಹಾವಳಿ ಹೆಚ್ಚಾಯಿತು.

ಲಾಟರಿ ವ್ಯವಹಾರ ಎಷ್ಟು ದೊಡ್ಡದಾಯಿತು ಎಂದರೆ ಅದನ್ನು ನೋಡಿಕೊಳ್ಳಲು ಒಬ್ಬ ಐಎಎಸ್‌ ಅಧಿಕಾರಿಯೇ ಬಂದರು. ಜೂಜಾಟದಲ್ಲಿ ಸೋತ ಜನ ಅಪರಾಧ ಲೋಕ ಪ್ರವೇಶಿಸುತ್ತಿದ್ದಾರೆ, ಕಸುಬು ಮರೆಯುತ್ತಿದ್ದಾರೆ, ವಿದ್ಯಾಭ್ಯಾಸದತ್ತ ಗಮನವಿಲ್ಲ, ಕಳ್ಳತನ ಹೆಚ್ಚಿದೆ, ಒಂಟಿ ಮಹಿಳೆಯರನ್ನು ಕೊಲ್ಲುವ ಪ್ರವೃತ್ತಿ ಬೆಳೆಯುತ್ತಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಒಂದಂಕಿ ಲಾಟರಿಗೆ ನಾಂದಿ ಹಾಡಲಾಯಿತು. ಲಾಟರಿ ದಂಧೆಯಲ್ಲಿರುವ ಲಾಭವನ್ನು ಜೂಜಿನ ಭೂಗತ ಲೋಕ ಮತ್ತೆ ಗುರುತಿಸಿತು. ಆಯಕಟ್ಟಿನ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಲಾಟರಿ ದಂಧೆಯನ್ನು ಸರ್ಕಾರ ರಾಜಧನ ಪಡೆದು ಬೇರೆಯವರಿಗೆ ವಹಿಸುವುದು ಸೂಕ್ತ ಎಂಬ ಸಲಹೆಯನ್ನು ಅಧಿಕಾರಿಗಳು ಕೊಟ್ಟರು. ಲಾಟರಿ ದಂಧೆ ಖಾಸಗಿಯವರ ತೆಕ್ಕೆಗೆ ಜಾರಿತು. ಒಂದು ಡ್ರಾಗೆ ಒಂದು ತೆರಿಗೆ ನಿಗದಿಯಾಗಿತ್ತು. ಇಂತಿಷ್ಟೇ ಟಿಕೆಟ್‌ ಮುದ್ರಿಸಬೇಕೆಂಬ ಷರತ್ತೂ ಇತ್ತು. ಆದರೆ, ಜೂಜುಕೋರರ ಜಗತ್ತು ಸಾವಿರಕ್ಕೆ ಲಕ್ಷ ಟಿಕೆಟ್‌ ಮುದ್ರಿಸಿತು. ಸಂವಿಧಾನದ ದೇಗುಲ ವಿಧಾನಸೌಧದಲ್ಲೇ ಲಾಟರಿ ಡ್ರಾ ಆಗುತ್ತಿತ್ತು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಿದ್ದೇವೆ ಎಂಬ ಮೂರ್ಖತನದ ವ್ಯಾಖ್ಯಾನ ಮಾಡಲಾಯಿತು. ನಮ್ಮ ಮನೆ ಹೆಣ್ಣು ಮಕ್ಕಳನ್ನು ಕಾಪಾಡಿಕೊಂಡು ಶೋಷಿತ ಮಹಿಳೆಯರು ವ್ಯಭಿಚಾರಕ್ಕೆ ಬಂದರೆ ಅತ್ಯಾಚಾರ ಮುಕ್ತ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ವಿಕೃತ ಮನಃಸ್ಥಿತಿ ಇದು.

ದಿನದ ಲಾಟರಿಗಳು ಹೋಗಿ ಗಂಟೆಗೊಂದು ಲಾಟರಿಗಳು ಶುರುವಾದವು. ಮೋನಿಕುಮಾರ್‌ ಸುಬ್ಬ (ಕಾಂಗ್ರೆಸ್‌ನಿಂದ ಸಂಸದನಾಗಿದ್ದ ವ್ಯಕ್ತಿ), ಮಾರ್ಟಿನ್‌, ಪಾರಿ ರಾಜನ್‌ ಅವರಂತಹ ವ್ಯಕ್ತಿಗಳು ಮುಂಚೂಣಿಗೆ ಬಂದಿದ್ದೇ ಆ ಸಂದರ್ಭದಲ್ಲಿ. ಇದೇ ಲಾಟರಿ ಹಡಬೆ ಹಣ ಭ್ರಷ್ಟರನ್ನು ಜನಪ್ರತಿನಿಧಿಯಾಗಿಸುವ ‘ಶಕ್ತಿ’ ಪಡೆಯಿತು. ಈ ಪಾತಕಿಗಳು ಅಧಿಕಾರಿಗಳನ್ನು ಓಲೈಸಲು ಆರಂಭಿಸಿದರು. ಅಧಿಕಾರಶಾಹಿ– ದಲ್ಲಾಳಿ ಮಧ್ಯೆ ಅಪವಿತ್ರ ಮೈತ್ರಿ ಏರ್ಪಟ್ಟಿತು.


ಒಂದಂಕಿ ಲಾಟರಿ ಹಾವಳಿ ಹೆಚ್ಚಿದ ಮೇಲೆ ಜನ ಕೆಲಸ ನಿಲ್ಲಿಸಿ ಜೂಜಾಟವನ್ನೇ ಕಾಯಕ ಮಾಡಿಕೊಂಡರು. ಲಾಟರಿ ಹೊಡೆಯದಿದ್ದಾಗ ಟಿಕೆಟ್‌ ಹರಿದು ಬಿಸಾಡಿದರು. ರಾಶಿ, ರಾಶಿ ಬೀಳುತ್ತಿದ್ದ ಟಿಕೆಟ್‌ ತುಂಡುಗಳನ್ನು ಏಜೆಂಟರೇ ದುಡ್ಡು ಕೊಟ್ಟು ಗುಡಿಸಿಹಾಕಿದರು. ಇದು ಆಗಿನ ದಿನಗಳಲ್ಲೇ ಲಾಟರಿ ಲೋಕ ನಡೆಸಿದ ಸ್ವಚ್ಛ ಭಾರತ ಆಂದೋಲನ! ಡ್ರಾ ನಡೆಯುವ ಸಂದರ್ಭದಲ್ಲಿ ಆಸನದಲ್ಲಿ ವಿರಾಜಮಾನನಾದ ಅಧಿಕಾರಿ ಕಪ್ಪ ಕಾಣಿಕೆ ಸಿಕ್ಕೊಡನೆ ‘ಧೃತರಾಷ್ಟ್ರ’ನಾಗುತ್ತಿದ್ದ. ಡ್ರಾ ಎತ್ತಿದ ಸಂಖ್ಯೆಯ ಟಿಕೆಟ್‌ ಮಾರಾಟವಾಗಿಲ್ಲ ಎಂದು ವಂಚಕರು ಹೊಸ ಆಟ ಹೂಡಿದರು. ಅದು ಆದಾಯ ತೆರಿಗೆ ಅಧಿಕಾರಿಗಳಿಗೆ ಗೊತ್ತಾಯಿತು. ‘ಹವಿಸ್ಸು’ ಅಲ್ಲಿಗೂ ಹೊರಟಿತು.

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಸಹ ಇದರ ಮುಂದುವರಿದ ಭಾಗ. ಜೂಜುಕೋರರು ಮತ್ತು ಬುಕ್ಕಿಗಳು ಒಂದೇ ನಾಣ್ಯದ ಎರಡು ಮುಖಗಳು. ತಿಂಗಳಿನ ಲಾಟರಿ ಗಂಟೆಗೆ ಇಳಿದರೆ, ಐದು ದಿನದ ಟೆಸ್ಟ್‌ ಏಕದಿನಕ್ಕೆ ಇಳಿದು, ಅಲ್ಲಿಂದ ಟ್ವೆಂಟಿ–20ಗೆ ಕುಸಿಯಿತು. 120 ಎಸೆತಗಳ ಒಂದೊಂದು ಇನಿಂಗ್ಸ್‌ನಲ್ಲಿ ಪ್ರತಿ ಎಸೆತಕ್ಕೂ ಬೆಟ್ಟಿಂಗ್‌ ಶುರುವಾಯಿತು. ಅದಕ್ಕೆ ತಕ್ಕಂತೆ ಸ್ಪಾಟ್‌ ಫಿಕ್ಸಿಂಗ್‌ ಸಾಥ್‌ ನೀಡಿತು. ಈ ದಂಧೆಯಲ್ಲಿ ತೊಡಗಿದವರು ಮರ್ಯಾದಾ ಪುರುಷೋತ್ತಮರಂತೆ ವಿಜೃಂಭಿಸಿದರು. ಅಂಥವರಲ್ಲಿ ಒಬ್ಬರಾದ ಶ್ರೀನಿವಾಸನ್‌, ಜಯಲಲಿತಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲವೆ?

ಕಾಳಧನಕ್ಕೆ ರಾಜಧನ ಮಾಡುವ ಮಾಂತ್ರಿಕ ಶಕ್ತಿ ಬಂತು. ಪ್ರಪಂಚದ ಯಾವ ಅರ್ಥಶಾಸ್ತ್ರಜ್ಞನಿಗೂ ಹೊಳೆಯದ ಈ ತಂತ್ರ ಕಂಡು ಹಿಡಿದವರು ನೊಬೆಲ್‌ ಪ್ರಶಸ್ತಿಗೆ ಅರ್ಹರೋ ಅಲ್ಲವೋ? ಯಾವುದೋ ರಾಜ್ಯದ ಲಾಟರಿ ಹೊಡೆದಿದೆ ಎಂದು ಹೇಳಿ ಶೇ 30ರಷ್ಟು ತೆರಿಗೆ ಕಟ್ಟಿ, ಶೇ 10ರಷ್ಟನ್ನು ದಲ್ಲಾಳಿಗಳಿಗೆ ಕೊಟ್ಟು ಕಪ್ಪು ಹಣವನ್ನೆಲ್ಲ ಬಿಳಿ ಮಾಡುವ ಕರಾಮತ್ತು ಇದು. ಆಗ ಬಂಡವಾಳ ಹೂಡದೆ ಕೋಟ್ಯಧಿಪತಿ ಆದವರಿಗೆ ಲೆಕ್ಕವಿಲ್ಲ. ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಲಾಟರಿ ನಿಲ್ಲಿಸಿತು; ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ!

ಕ್ರಿಕೆಟ್‌ ಬೆಟ್ಟಿಂಗ್‌, ಸ್ಪಾಟ್‌ ಫಿಕ್ಸಿಂಗ್‌, ಒಂದಂಕಿ ಲಾಟರಿ, ಮಟ್ಕಾ, ಜೂಜು, ಆನ್‌ಲೈನ್‌ ಲಾಟರಿ ಎಲ್ಲ ವಂಚನೆಗಳಲ್ಲೂ ಅದೇ ಮುಖಗಳು.

ADVERTISEMENT

ರಾಜಕಾರಣಿಗಳು, ಐಎಎಸ್‌ ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ ಪ್ರಮುಖರು ಮತ್ತು ಪೊಲೀಸರು ಆ ಮುಖಗಳ ಗೆಳೆತನದ ‘ಭಾಗ್ಯ’ ಪಡೆದವರು. ಆ ಗೆಳೆತನದ ಸ್ವರೂಪ ಎಂತಹದ್ದು ಎನ್ನುವುದು ಈಗ ಮತ್ತೆ ಬಯಲಾಗಿದೆ.

(ಲೇಖಕ ನಿವೃತ್ತ ಪೊಲೀಸ್‌ ಅಧಿಕಾರಿ)
ನಿರೂಪಣೆ: ಪ್ರವೀಣ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.