ADVERTISEMENT

ತೇಜಸ್‌, ಟಾಲ್ಗೊ, ಬುಲೆಟ್ ವಿಸ್ಮಯ

ರೈಲ್ವೆ ವೇಗೋತ್ಕರ್ಷ

ಎ.ಎಸ್.ನಾರಾಯಣರಾವ್
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
ತೇಜಸ್‌, ಟಾಲ್ಗೊ, ಬುಲೆಟ್ ವಿಸ್ಮಯ
ತೇಜಸ್‌, ಟಾಲ್ಗೊ, ಬುಲೆಟ್ ವಿಸ್ಮಯ   

ನಮ್ಮ ದೇಶದಲ್ಲಿ ಮೊದಲ ರೈಲು ಓಡಿದ್ದು 1853ರಲ್ಲಿ. ಆದರೆ, ‘ಓಡಿದ್ದು’ ಎನ್ನುವುದಕ್ಕಿಂತ ತೆವಳಿದ್ದು ಎನ್ನುವುದೇ ಹೆಚ್ಚು ಸರಿ. ಯಾಕೆಂದರೆ ಅದಕ್ಕೇನೂ ಅಂತಹ ವೇಗ ಇರಲಿಲ್ಲ. ಗಂಟೆಗೆ 20– 25 ಕಿ.ಮೀ. ಹೋದರೆ ಅದೇ ಭಾರಿ ‘ಸ್ಪೀಡ್’. ಅಷ್ಟೇ ಏಕೆ? ಇವತ್ತಿಗೂ ಎಷ್ಟೋ  ರೈಲುಗಳ ವೇಗ ಗಂಟೆಗೆ 40–50 ಕಿ.ಮೀ. ದಾಟಿಲ್ಲ. ಭಾರಿ ವೇಗದ ರೈಲು ಎನ್ನುವ ‘ರಾಜಧಾನಿ ಎಕ್ಸ್‌ಪ್ರೆಸ್‌ಗೆ ಬೆಂಗಳೂರಿನಿಂದ 560 ಕಿ.ಮೀ. ದೂರದ ಸೇಡಂ ತಲುಪಲು ಎಂಟೂ ಮುಕ್ಕಾಲು ತಾಸು ಬೇಕು. ಅಂದರೆ ತಾಸಿಗೆ ಸರಾಸರಿ 64 ಕಿ.ಮೀ. ಹಾಗೆಯೇ ‘ಶತಾಬ್ದಿ’  ಶ್ರೇಣಿಯ ವೇಗದ ರೈಲು ಬೆಂಗಳೂರು– ಮೈಸೂರು ನಡುವಿನ 139 ಕಿ.ಮೀ. ದೂರವನ್ನು 2 ತಾಸಿನಲ್ಲಿ ಕ್ರಮಿಸುತ್ತದೆ. ಅಂದರೆ ಗಂಟೆಗೆ ಸರಾಸರಿ 70 ಕಿ.ಮೀ.



ದೇಶದಲ್ಲಿಯೇ ಅತ್ಯಂತ ವೇಗದ ರೈಲು ಎನ್ನುವ ಕೀರ್ತಿ ದೆಹಲಿ– ಆಗ್ರಾ ನಡುವಿನ ‘ಗತಿಮಾನ್‌’ ಎಕ್ಸ್‌ಪ್ರೆಸ್‌ನದು.  ತಾಸಿಗೆ ಸರಾಸರಿ 113 ಕಿ.ಮೀ .
ಇನ್ನೊಂದು ವಿಷಯ. ಸಾಮಾನ್ಯ ಪ್ಯಾಸೆಂಜರ್‌ ರೈಲೇ ಇರಲಿ, ‘ಶತಾಬ್ದಿ’ ಅಥವಾ ‘ರಾಜಧಾನಿ’, ‘ಗರೀಬ್‌ ರಥ’, ‘ತುರಂತೊ’ ಎಂಬ ಆಕರ್ಷಕ ಹೆಸರುಗಳನ್ನು ಹೊತ್ತ ವೇಗದ ಆದರೆ  ದುಬಾರಿ ಪ್ರಯಾಣ ದರದ ರೈಲುಗಳೇ ಇರಲಿ, ಒಳಗೆ ಮಾತ್ರ ಸೌಲಭ್ಯ ಹೆಚ್ಚೂ ಕಡಿಮೆ ಒಂದೇ. ಅವೇ ಸ್ಲೀಪರ್‌ಗಳು, ಅವೇ ಶೌಚಾಲಯಗಳು. ಎ.ಸಿ ಎನ್ನುವುದೇ ಅತಿ ದೊಡ್ಡ ಲಗ್ಷುರಿ.

ಆದರೆ ಶರವೇಗದ ಬದುಕಿಗೆ ಒಗ್ಗಿಕೊಂಡ ನಮಗೆ ಈ ವೇಗವೂ ಸಾಲುತ್ತಿಲ್ಲ. ಇರುವ ಸೌಕರ್ಯಗಳೂ ಕಡಿಮೆ ಅನಿಸುತ್ತಿದೆ. ಜಪಾನ್‌, ಚೀನಾ, ಫ್ರಾನ್ಸ್, ಸ್ಪೇನ್‌, ಜರ್ಮನಿಯಂತಹ ದೇಶಗಳಲ್ಲಿ ಸೂಪರ್‌ ಫಾಸ್ಟ್ ರೈಲುಗಳು ಓಡುತ್ತಿವೆ. ಜಪಾನ್‌ನ ಮ್ಯಾಗ್ಲೆವ್‌ ಬುಲೆಟ್‌ ರೈಲಿನ ವೇಗ ಗಂಟೆಗೆ 603 ಕಿ.ಮೀ.

ಇದನ್ನೆಲ್ಲ ನೋಡಿದ ಮೇಲೆಯೇ ನಮ್ಮಲ್ಲೂ ವಿಮಾನದೊಳಗಿನ ಆರಾಮಕ್ಕೆ ಸರಿಸಮನಾದ ಸೌಕರ್ಯ ಇರುವ ವೇಗದ ರೈಲುಗಳ ಬಗ್ಗೆ ಚರ್ಚೆ ಶುರುವಾಗಿದೆ. ಒಂದಿಷ್ಟು ಕೆಲಸವೂ ನಡೆದಿದೆ. ತೇಜಸ್‌, ಟಾಲ್ಗೊ, ಬುಲೆಟ್‌ ರೈಲುಗಳ ಕಲರವ ಕೇಳಿ ಬರುತ್ತಿದೆ.

ತೇಜಸ್‌ನ ತಾಕತ್ತು
‘ತೇಜಸ್‌’ ಎಂಬ ಐಷಾರಾಮಿ ಹೊಸ ರೈಲು ಕಳೆದ ತಿಂಗಳಿಂದ ಮುಂಬೈ ಸಿಎಸ್‌ಟಿ– ಗೋವಾದ ಕರಮಾಲಿ ಮಧ್ಯೆ ಓಡುತ್ತಿದೆ. ಈಗ ಮಳೆಗಾಲ ಆಗಿರುವುದರಿಂದ 725 ಕಿ.ಮೀ. ಅಂತರವನ್ನು 10 ತಾಸು 30 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ವಿಮಾನ ಪ್ರಯಾಣಕ್ಕೆ ಸಮನಾದ ಸೌಕರ್ಯಗಳು ಇದರಲ್ಲಿವೆ. ವಿಮಾನದಲ್ಲಿನ ಮಾದರಿಯ ಆಸನಗಳು, ಕಾಲ ಬಳಿ ಹೆಚ್ಚು ಜಾಗ, ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಮತ್ತು ಬೆಂಕಿ ಬಗ್ಗೆ ಎಚ್ಚರಿಸುವ ಸೈರನ್‌ಗಳು, ಹಳಿ ಮೇಲೆ ಹೊಲಸು ಮಾಡದೇ ಇರುವ ಸುಧಾರಿತ ಜೈವಿಕ ಶೌಚಾಲಯಗಳು, ಪ್ರತೀ ಆಸನದ ಎದುರೂ ಜಿಪಿಎಸ್‌ ಆಧಾರಿತ ಮಾಹಿತಿ ಮತ್ತು ಮನರಂಜನೆ ಪರದೆಗಳು, ಪ್ರತೀ ಬೋಗಿಯಲ್ಲೂ  ಹಣ ಹಾಕಿದರೆ ಕಾಫಿ– ತಿಂಡಿ ಹೊರ ಬರುವ ಯಂತ್ರಗಳಿವೆ.

ಕಳೆದ ವಾರ ಈ ರೈಲು ಕಾರಣಾಂತರದಿಂದ ಗೋವಾದಿಂದ 3 ತಾಸು ತಡವಾಗಿ ಹೊರಟರೂ ಮುಂಬೈಯನ್ನು ನಿಗದಿತ ಸಮಯಕ್ಕಿಂತ 1 ನಿಮಿಷ ಮೊದಲೇ ತಲುಪಿ ಹೊಸ ದಾಖಲೆಯನ್ನೇ ಬರೆದಿತ್ತು. ಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ  ಇದಕ್ಕಿದೆ. ಆದರೆ ಪಶ್ಚಿಮ ಘಟ್ಟದ ಸಂಕೀರ್ಣ ರೈಲು ಮಾರ್ಗ ಮತ್ತು  ಸುರಕ್ಷತೆ ದೃಷ್ಟಿಯಿಂದ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಕನಸಿನ ಈ ರೈಲುಗಳು ಮುಂದೆ ದೆಹಲಿ– ಚಂಡೀಗಡ ಮತ್ತು ಸೂರತ್‌– ಮುಂಬೈ ಮಧ್ಯೆ ಓಡಲಿವೆ.

ADVERTISEMENT



ಭಲೆ ಭಲೆ ಬುಲೆಟ್ ರೈಲು
ಜಪಾನ್‌ ಸೇರಿ ಅನೇಕ ಕಡೆ ಇರುವ ಬುಲೆಟ್‌ ರೈಲುಗಳು ಆಧುನಿಕ ವಿಶ್ವದ ಸಂಚಾರ ವ್ಯವಸ್ಥೆ ವಿಸ್ಮಯ ಎನ್ನಬಹುದು. 400– 500 ಕಿ.ಮೀ. ವೇಗ ಎಂದರೆ ಇವಕ್ಕೆ ಏನೇನೂ ಅಲ್ಲ. ವೇಗ, ಐಷಾರಾಮಿ ಎರಡರ ಸಂಗಮ ಇವು. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಅವರು ಮುಂಬೈ– ಅಹಮದಾಬಾದ್‌ ಮಧ್ಯೆ ಬುಲೆಟ್‌ ರೈಲು ಸಂಚಾರದ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಆರಂಭಿಕ ಸಮೀಕ್ಷೆಗಳು ನಡೆದಿದ್ದು, ಇವಕ್ಕೆ 508 ಕಿ.ಮೀ. ಉದ್ದದ ಪ್ರತ್ಯೇಕ ಎತ್ತರಿಸಿದ ಮಾರ್ಗ ಮತ್ತು ಸಮುದ್ರದ ಅಡಿಯ ಸುರಂಗ ಮಾರ್ಗ  ನಿರ್ಮಾಣ ಮಾಡಬೇಕಾಗುತ್ತದೆ. ಈಗಿನ ಲೆಕ್ಕದಂತೆ ಆಗುವ ವೆಚ್ಚ ₹ 1.08 ಲಕ್ಷ ಕೋಟಿ. ಈಗ ಕೆಲಸ ಶುರು ಮಾಡಿದರೂ 2024ರ ಹೊತ್ತಿಗೆ ಮುಗಿಯಬಹುದು. ಇದೇನಾದರೂ ಬಂದರೆ ಗಂಟೆಗೆ 350 ಕಿ.ಮೀ. ವೇಗದ ರೈಲು ಸಂಚಾರ ಪ್ರಾರಂಭವಾಗಲಿದೆ. ಆಗ ಮುಂಬೈ–ಅಹಮದಾಬಾದ್‌ ಪ್ರಯಾಣಕ್ಕೆ ಎರಡು ತಾಸೂ ಬೇಕಿಲ್ಲ. ಈಗ ಏಳು ತಾಸು ಬೇಕು.



ಹಗುರ ಟಾಲ್ಗೊ
ಟಾಲ್ಗೊ. ಇದು ಸ್ಪೇನ್‌ನ ಪ್ರತಿಷ್ಠಿತ ರೈಲ್ವೆ ಕಂಪೆನಿ. ವಿಶ್ವದ ಏಳನೇ ಅತಿ ವೇಗದ ರೈಲು (ಗಂಟೆಗೆ 350 ಕಿ.ಮೀ.) ಓಡಿಸುತ್ತಿರುವ ಖ್ಯಾತಿ ಇದರದು. ಮಧ್ಯಮ ದೂರದ ಅಂದರೆ ಸುಮಾರು 500 ಕಿ.ಮೀ. ಉದ್ದದ ಮಾರ್ಗಗಳಲ್ಲಿ ಓಡಿಸಲು ಪ್ರಶಸ್ತವಾಗಿದ್ದು, ಭಾರತೀಯ ರೈಲ್ವೆ ಜತೆ ಕೈ ಜೋಡಿಸಲು ಮಾತುಕತೆಗಳು ನಡೆಯುತ್ತಿವೆ.

ಕೆಲ ತಿಂಗಳ ಹಿಂದೆ ದೆಹಲಿ– ಮುಂಬೈ ಮಧ್ಯೆ ಈ ರೈಲಿನ ಪ್ರಾಯೋಗಿಕ ಸಂಚಾರವೂ ನಡೆದಿತ್ತು. 1400 ಕಿ.ಮೀ. ದೂರವನ್ನು ಬರೋಬ್ಬರಿ 12 ತಾಸಿನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿತ್ತು. ಈ ರೈಲಿನ ಬೋಗಿಗಳು ಸಹ ಆರಾಮದಾಯಕ ಆಸನ, ಮಾಹಿತಿ– ಮನರಂಜನೆ ಸೌಕರ್ಯ ಹೊಂದಿವೆ. ಬೋಗಿಯೊಳಗೇ ಸ್ನಾನ ಗೃಹ, ರೆಸ್ಟೊರೆಂಟ್‌ಗಳ ಸೌಲಭ್ಯ ಕಲ್ಪಿಸುವ ಅವಕಾಶವಿದೆ. ಬೋಗಿ ನಿರ್ಮಾಣ, ನಿರ್ವಹಣಾ ವೆಚ್ಚ ನಮ್ಮಲ್ಲಿ ಈಗಿರುವ ಶತಾಬ್ದಿ, ರಾಜಧಾನಿ ಬೋಗಿಗಳಿಗಿಂತ ಕಡಿಮೆ. ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಈಗಿರುವ ಹಳಿಗಳ ಮೇಲೆಯೇ ಓಡಿಸಬಹುದು. ಇದರ ವಿದ್ಯುತ್‌ ಚಾಲಿತ ಎಂಜಿನ್‌ ಮತ್ತು ಬೋಗಿಗಳು ಹಗುರ ಇರುವುದರಿಂದ ವಿದ್ಯುತ್‌ ವೆಚ್ಚ ಶೇ 30ರಷ್ಟು ಕಡಿಮೆ ಆಗುತ್ತದೆ. ಆದರೆ ಬಂಡವಾಳ ಹೂಡಿಕೆ ಲೆಕ್ಕ ಹಾಕಿದರೆ ಪ್ರಯಾಣ ದರ ದುಬಾರಿ ಆಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.