ADVERTISEMENT

ದುರಂತದ ಹೆಬ್ಬಾಗಿಲು ತೆಗೆದಂತೆ

ಸ್ಟ್ಯಾನ್ಲಿ ಪರಶು
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ಅದು ತಿರುಗುವ ಗಾಜಿನಕೋಣೆ. ಅದರಲ್ಲಿ ಪ್ರವೇಶಿಸಿದ ಯುವತಿ­ಯೊಬ್ಬಳು ತನ್ನ ಒಂದೊಂದೇ ಬಟ್ಟೆ ಕಳಚಿ ಬೆತ್ತಲೆ­ಯಾಗಿ ನಿಂತಳು. ಅವಳು ಹೀಗೆ ನಿಂತಿದ್ದನ್ನು ಇಡೀ ನಗರವೇ ನೋಡಬಹುದು. ಆಕೆ ವೇಶ್ಯೆ. ಹಾಗೆ ನೋಡಿ ಆಕೆ­ಯನ್ನು ಇಷ್ಟಪಟ್ಟವರು ಕರೆದೊಯ್ಯಬಹುದು. ಇದನ್ನು ಕಂಡಿದ್ದು ವೇಶ್ಯಾವಾಟಿಕೆ ಕಾನೂನುಬದ್ಧವಾಗಿರುವ ಹಾಲೆಂಡ್‌ ದೇಶದ ಆಮ್‌ಸ್ಟರ್‌ಡ್ಯಾಮ್‌ನಲ್ಲಿ; ಆರು ವರ್ಷ­ಗಳ ಹಿಂದೆ. ಅವಳು ಬೆತ್ತಲೆಯಾಗಿ ನಿಂತಿದ್ದಾಗ, ನಮ್ಮಲ್ಲಿ ಉತ್ತಮ ದರ್ಜೆಯ ಕೋಳಿಯನ್ನು ಮಾಂಸ ಮಾರುವ ಅಂಗಡಿಯಲ್ಲಿ ನೇತು ಹಾಕುತ್ತಾರಲ್ಲ ಹಾಗೆ ಕಂಡಳು...

ವೇಶ್ಯಾವಾಟಿಕೆ ಕಾನೂನುಬದ್ಧವಾಗಿರುವ ಹಾಲೆಂಡ್‌, ಫಿಲಿಪ್ಪೀನ್ಸ್‌, ಜರ್ಮನಿ, ಕೊಲಂಬಿಯಾ, ಕೆನಡಾ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಬಹಳಷ್ಟು ಹದಗೆಟ್ಟಿದೆ. ವೇಶ್ಯಾವಾಟಿಕೆಯು ಕುಟುಂಬ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಉತ್ಪಾದನೆ­ಯನ್ನು ನಿಲ್ಲಿಸುತ್ತದೆ. ಗ್ರಾಮ, ಹೋಬಳಿ, ಪಟ್ಟಣ... ಹೀಗೆ ನಿಧಾನವಾಗಿ ಬೆಳೆಯುವ ವ್ಯವಸ್ಥೆಯನ್ನು ಅದು ಸಹಿಸುವುದಿಲ್ಲ. ದೀರ್ಘಕಾಲದ ಆರ್ಥಿಕ ಪ್ರಗತಿ, ಸಂಸ್ಕಾರ, ಸಂಸ್ಕೃತಿ ನೀಡುವ ಕುಟುಂಬ ವ್ಯವಸ್ಥೆಯನ್ನು ಅಳಿಸುತ್ತದೆ.

ಕಾಯುತ್ತಿವೆ ರಣಹದ್ದುಗಳು...
ಲೈಂಗಿಕ ರೋಗಗಳಿಂದ ಕುಟುಂಬ ವ್ಯವಸ್ಥೆಯ ಚೌಕಟ್ಟಿಗೆ ಬಾರದೆ, ವಾರಸುದಾರರನ್ನು ಸೃಷ್ಟಿಸದ, ವಯೋಮಾನಕ್ಕೂ ಮೊದಲೇ ಹತರಾಗಿ ಹೋಗುವ ಯುವಕರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಹುನ್ನಾರದ ಹಿಂದೆ ಲೈಂಗಿಕತೆ ಉತ್ತೇಜಿಸುವ ಔಷಧಿಗಳು, ಗರ್ಭನಿರೋಧಕಗಳು ಹಾಗೂ ಕಾಂಡೋಮ್‌ ಉತ್ಪಾದನಾ ಕಂಪೆನಿಗಳ ಕೈವಾಡವನ್ನು ಅಲ್ಲಗಳೆಯಲಾಗದು. 2 ಸಾವಿರ ವೇಶ್ಯೆಯರು ಇರುವ ಪ್ರದೇಶವೊಂದಕ್ಕೆ ಪ್ರತಿ ಮಹಿಳೆಗೆ ಹತ್ತು ಗಿರಾಕಿಗಳಂತೆ ಒಂದು ದಿನಕ್ಕೆ 20 ಸಾವಿರ, ತಿಂಗಳಿಗೆ 6 ಲಕ್ಷ ಕಾಂಡೋಮ್‌ ಬೇಕು ಎಂದು ಅಂಕಿ–ಅಂಶ ಕೊಡುವ ಸಂಸ್ಥೆಗಳಿವೆ. ಏಡ್ಸ್/ ಎಚ್‌ಐವಿ ಬಾಧಿತರಿಗೆ ಔಷಧಿ, ಲೈಂಗಿಕ ರೋಗ  ನಿಯಂತ್ರಿಸುವ ಔಷಧಿ, ಪುರುಷತ್ವ ವೃದ್ಧಿಯ ಔಷಧಿ ಅಲ್ಲದೆ, ಲೈಂಗಿಕತೆಯನ್ನು ಪ್ರಚೋದಿಸುವ, ಉತ್ತೇಜಿಸುವ ಆಟಿಕೆ ಬೊಂಬೆಗಳು, ನೀಲಿಚಿತ್ರಗಳ ತಯಾರಿಕೆ ಕಂಪೆನಿಗಳು... ಇವೆಲ್ಲವೂ ವೇಶ್ಯಾವಾಟಿಕೆಯು ಜಾಗತಿಕ ಮಟ್ಟದಲ್ಲಿ ಕಾನೂನುಬದ್ಧವಾಗುವುದನ್ನು ರಣಹದ್ದುಗಳ ಹಾಗೆ ಕಾಯುತ್ತಿವೆ.

ವೇಶ್ಯಾವಾಟಿಕೆ ಪುರುಷರ ತೃಷೆಯನ್ನು ತಣಿಸುವ ವ್ಯವಸ್ಥೆ ಎನ್ನುವುದು ಸಾರ್ವಕಾಲಿಕ ಸತ್ಯ. ವೇಶ್ಯೆಯರು, ಘರ್‌ವಾಲಿಗಳು ಮಹಿಳೆಯರೇ ಆಗಿದ್ದರೂ ತೃಷೆ ನೀಗಿಸಿಕೊಳ್ಳಲು ಹೋಗುವ ಗಿರಾಕಿಗಳು, ವಿತರಿಸುವ ತಲೆಹಿಡುಕರು, ಇವರಿಗೆ ಒದಗಿಸುವ ಮಾರಾಟ ಜಾಲದ ವ್ಯಕ್ತಿಗಳು ಪುರುಷರೇ ಆಗಿರುತ್ತಾರೆ. ಇವರೆಲ್ಲರನ್ನೂ ನಿಯಂತ್ರಿಸುವ ವ್ಯಕ್ತಿಗಳು ಬೇರೆ ಇರುತ್ತಾರೆ. ಅವರು ಕಣ್ಣಿಗೆ ಕಾಣಿ­ಸು­ವುದಿಲ್ಲ, ಕೈಗೆ ಸಿಗುವುದಿಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಬಂಧನಕ್ಕೆ ಒಳಗಾಗು­ವುದಿಲ್ಲ. ಅವರ ಅಡಿ ಕೆಲಸ ಮಾಡುವವರು ಬಂಧನಕ್ಕೆ ಒಳಗಾಗುತ್ತಾರೆ. ಅವರನ್ನು ಬಿಡಿಸಿಕೊಳ್ಳುವ ವ್ಯವಸ್ಥೆಯನ್ನು ಕಾಣದ ವ್ಯಕ್ತಿಗಳೇ ಮಾಡುತ್ತಾರೆ.

ಹೀಗಿದ್ದಾಗ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವವರು ಯಾರು? 2011ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾಧಿಕಾರಿ ಪಿ.ಎಂ.­ನಾಯರ್ ಅವರ ವರದಿ ಪ್ರಕಾರ, ಬಡವರು, ದಲಿತರು, ರೈತರು, ಅಲ್ಪಸಂಖ್ಯಾತ ಮಹಿಳೆ­ಯರು. ಇವರನ್ನು ನಿಯಂತ್ರಿಸುವವರು ಮಾತ್ರ ಮೇಲ್ವರ್ಗದವರು, ಬಲಿಷ್ಠರು. ಅವರು ಕಾಣದ ವ್ಯಕ್ತಿಗಳಾಗಿಯೇ ಇರುತ್ತಾರೆ.

ಕಾನೂನುಬದ್ಧವಾದರೆ?: ಬೆಳೆದ ಬೆಳೆ ಹಾಳಾದರೆ ರೈತರು ಪರಿಹಾರ ಕೊಡಿ ಎಂದು ಸರ್ಕಾರವನ್ನು ಕೇಳುತ್ತಾರೆ. ಹಾಗೇ ಗಿರಾಕಿಗಳು ಕಡಿಮೆಯಾಗಿದ್ದಾರೆ  ಪರಿಹಾರ ಕೊಡಿ ಎಂದು ವೇಶ್ಯೆಯರು ಸರ್ಕಾರವನ್ನು ಕೇಳಬಹುದು. ಹಿಂದೊಮ್ಮೆ ಚಿಂತಕ ಪ್ರೊ. ರಾಮದಾಸ್‌ ಹಾಗೂ ರೈತ ಹೋರಾಟಗಾರ ಪ್ರೊ. ನಂಜುಂಡ­ಸ್ವಾಮಿ ಅವರು ನಮ್ಮ ಒಡನಾಡಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿ­ಸಿ­ದ್ದಾಗ, ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲವೆಂದು ರೈತರು ಗಾಂಜಾ ಬೆಳೆದರೆ ಕಾನೂನು­ಬದ್ಧವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಈಗ ವೇಶ್ಯಾವಾಟಿಕೆ ಕಾನೂನು­ಬದ್ಧವಾದರೆ ಎಚ್‌ಐವಿ/ಏಡ್ಸ್‌ ಬಾಧಿತರ ಸಂಖ್ಯೆ ಹೆಚ್ಚಾಗುತ್ತದೆ. ವೇಶ್ಯಾವಾಟಿಕೆ­ಯಲ್ಲಿ ತೊಡಗಿಸಿಕೊಂಡ ಕುಟುಂಬದ ಮಕ್ಕಳು ಅದೇ ವೃತ್ತಿಯನ್ನು ಆಯ್ಕೆ ಮಾಡಿ­ಕೊಳ್ಳಬಹುದು. ಶಿಕ್ಷಣದಲ್ಲಿ ಹಿಂದುಳಿಯುತ್ತಾರೆ. ಇದಕ್ಕಿಂತ ಆತಂಕದ ಸಂಗತಿ ಎಂದರೆ, ಗರ್ಭದಲ್ಲೇ ಸಂಘರ್ಷ ನಡೆಯುತ್ತದೆ. ಬದುಕಬೇಕೆಂಬ ಹಂಬಲ  ಮಗು­ವಿಗಿ­ದ್ದರೆ, ಮಗುವನ್ನು ತೆಗೆಸಿದರೆ ಗಿರಾಕಿಗಳು ಬರಬಹುದು ಎಂದು ತಾಯಿ ಯೋಜಿ­ಸುತ್ತಾಳೆ. ಲಾಭ ಆಗುವುದು ಗೂಂಡಾಗಳಿಗೆ, ಲಾಡ್ಜ್ ಮಾಲೀಕರಿಗೆ, ಶ್ರೀಮಂತರಿಗೆ ಹಾಗೂ ಲೈಂಗಿಕ ಪ್ರವಾಸೋದ್ಯಮಕ್ಕೆ.

ಬಾಲಕಿಯರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದರೆ ಪುರುಷತ್ವ ವೃದ್ಧಿ­ಯಾಗು­ತ್ತದೆ ಎನ್ನುವ ಅಂತರರಾಷ್ಟ್ರೀಯ ಮಿಥ್ಯೆಗಳಿವೆ. ‘ಋತುಮತಿಯಾಗದ ಹುಡು­ಗಿಯರು ನಮ್ಮಲ್ಲಿದ್ದಾರೆ, ಬನ್ನಿ’ ಎಂದು ಆಹ್ವಾನಿಸುವ ವೆಬ್‌ಸೈಟ್‌ಗಳಿವೆ. ಇದರಿಂದ ಪೈಪೋಟಿ ಬೆಳೆಯುತ್ತದೆ. ಕಾನೂನುಬದ್ಧವಾದ ಕೂಡಲೇ ವೇಶ್ಯೆಯರು ಸರಕೆಂದು ಹೇಳಲು ಸರ್ಕಾರ ಛಾಪು ಒತ್ತಿದಂತಾಗುತ್ತದೆ. ಮಹಿಳೆಯೊಬ್ಬಳು ವೇಶ್ಯೆ ಎಂದು ಹೇಳಬೇಕಾದರೆ ಎಷ್ಟು ತೊಂದರೆ ಅನುಭವಿಸಬಹುದು ಯೋಚಿಸಿ. ಇದಕ್ಕೊಂದು ಉದಾಹರಣೆ; 20 ವರ್ಷಗಳ ಹಿಂದೆ ನಡೆದ ಘಟನೆ ಇದು. ಮೈಸೂರಿನ ರೈಲು ನಿಲ್ದಾಣ ಹತ್ತಿರದ ಮರದ ಹಿಂದೆ ಮಹಿಳೆಯೊಬ್ಬಳು ನಿಲ್ಲುತ್ತಿ­ದ್ದಳು. ವಾಹನಗಳ ಬೆಳಕು ಕಂಡರೆ ಹೊರಬರುತ್ತಿದ್ದಳು. ಯಾರಿರ­ಬಹುದು ಎಂದು ಹತ್ತಿರ ಹೋಗಿ ನೋಡಿದರೆ ಮೈಪೂರ್ತಿ ನೆರಿಗೆಯ ವೃದ್ಧೆ. ಜುಟ್ಟಿಗೆ ಮಲ್ಲಿಗೆ, ಫಳಫಳ ಹೊಳೆಯುವ ಹಳದಿ ಸೀರೆ ಉಟ್ಟುಕೊಂಡಿದ್ದಳು. ‘ಏನವ್ವ? ಇಲ್ಲಿ ನಿಂತಿದ್ದೀಯಾ’ ಎಂದು ಕೇಳಿದೆವು. ಗಳಗಳನೇ ಅತ್ತು ‘ನನ್ನ ಕರ್ಮ. ಅಪಘಾತದಲ್ಲಿ ಮಗ ಸತ್ತುಹೋದ. ಅವನ ಇಬ್ಬರು ಮಕ್ಕಳನ್ನು ಹೆತ್ತಾಕೆ ಬಿಟ್ಟುಹೋದಳು. ಆ ಮಕ್ಕಳನ್ನು ಸಾಕಲು ಕಷ್ಟಪಡುತ್ತಿರುವೆ. ಕೆಲಸ ಸಿಗಲಿಲ್ಲ. ರಾತ್ರಿ 11 ಗಂಟೆಯ ಮೇಲೆ ಈ ಮರದ ಹತ್ತಿರ ಬರುವೆ. ಕುಡುಕರು ಬರುತ್ತಾರೆ’ ಎಂದು ದುಃಖಿಸುತ್ತಾ ಅತ್ತಳು. ಪ್ರತಿವರ್ಷ ದೇಶದಲ್ಲಿ 5,325 ಮಕ್ಕಳು ಕಾಣೆಯಾಗುತ್ತಾರೆ. ಪತ್ತೆಯಾಗು­ವುದು ಶೇ 10ರಷ್ಟು ಮಾತ್ರ. ಉಳಿದವರು ವೇಶ್ಯಾವಾಟಿಕೆ, ಮಾನವ ಕಳ್ಳಸಾಗಣೆ ಆಗಿರಬಹುದು ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಳ್ಳುತ್ತದೆ.

ಈಗ ಪಾರ್ವತಿ ನೆನಪಾಗುತ್ತಿದ್ದಾಳೆ. 26 ವರ್ಷದಾಕೆ. ಮುಂಬೈಯಲ್ಲಿ ಪೊಲೀ­ಸರ ದಾಳಿ ನಡೆಯಿತು. ಘರ್‌ವಾಲಿ ಯಾರು ಎಂದು ಪೊಲೀಸರು ಕೇಳಿದಾಗ ತಾನೆಂದು ನಕ್ಕಳು. ಆಮೇಲೆ ಎರಡು ವರ್ಷ ಶಿಕ್ಷೆಯಾಗಿ ಜೈಲು ಕಂಡಳು. ಆಕೆ­ಯನ್ನು ಭೇಟಿಯಾದ ಸರ್ಕಾರೇತರ ಸಂಸ್ಥೆಗಳಿಗೆ ಗೊತ್ತಾಗುತ್ತದೆ; ಆಕೆಗೆ 26ನೇ ವಯಸ್ಸಿನಲ್ಲಿ ಇರಬೇಕಾದ ಬುದ್ಧಿ ಒಂಬತ್ತನೇ ವಯಸ್ಸಿನದು ಎಂದು. ಯಾರನ್ನೋ ಬಚಾವು ಮಾಡಲು ಪಾರ್ವತಿಯನ್ನು ಪರಿಚಯಿಸಲಾಯಿತು!

ಇಷ್ಟಕ್ಕೂ ಕಾನೂನುಬದ್ಧವಾಗಬೇಕು ಎನ್ನುವವರು ವೇಶ್ಯೆಯರ ಬದುಕನ್ನು ಬದ­ಲಿ­ಸಲು ಪ್ರಯತ್ನಿಸಿದ್ದಾರೆಯೇ? ಅವರ ನೋವಿನ ನುಡಿಗಳಿಗೆ ಕಿವಿಯಾಗಿ­ದ್ದಾರೆಯೇ? ಯಾವುದೇ ವೃತ್ತಿಗೆ ಬಡ್ತಿ ಅಂತಿರುತ್ತದೆ. ಆದರೆ, ವೇಶ್ಯಾವಾಟಿಕೆ­ಯಲ್ಲಿ ವಯಸ್ಸಾದ ಹಾಗೆ ಬೇಡಿಕೆ ಕಡಿಮೆ. 12ನೇ ವಯಸ್ಸಿನಲ್ಲಿ ಓಡುವ ಕುದುರೆಗಳಾಗಿರುತ್ತಾರೆ. 18–19ನೇ ವಯಸ್ಸಿನ ನಂತರ ಬೇಡಿಕೆ ಕುಸಿಯುತ್ತದೆ. ಪಂಚ­ತಾರಾ ಹೋಟೆಲಿನಿಂದ ಬೀದಿಗೆ ಬಂದು ನಿಲ್ಲುತ್ತಾರೆ.  ವಯಸ್ಸು, ಮೈ­ಬಣ್ಣವೇ ಪ್ರಧಾನ ಪಾತ್ರ ವಹಿಸುವ ಈ ದಂಧೆಯಲ್ಲಿ ಸಾಮಾ­ಜಿಕ ಸ್ಥಾನಮಾನ ಇರಲಿ ಅಂತ್ಯಸಂಸ್ಕಾರಕ್ಕೂ ಯಾರೂ ಗತಿ ಇರುವುದಿಲ್ಲ. ಬದುಕಿ­ನುದ್ದಕ್ಕೂ ತನ್ನ ಪಂಚೇಂದ್ರಿ­ಯಗಳನ್ನು ಅಡವು ಇಡುತ್ತ ಪ್ರತಿ ಗಿರಾಕಿಗೆ ಅಣಿಯಾಗ­ಬೇಕು. ರಾತ್ರಿ­ಯಾದರೆ ಅವರನ್ನು ಒಪ್ಪಿಕೊಳ್ಳುವ ಸಮಾಜ, ಬೆಳಗಾದರೆ ತಿರಸ್ಕರಿ­ಸುತ್ತದೆ. ಹೀಗಿ­ರುವಾಗ ಕಾನೂನುಬದ್ಧವಾದರೆ ದುರಂತದ ಹೆಬ್ಬಾಗಿಲು ತೆಗೆದ ಹಾಗಾಗುತ್ತದೆ.

(ಲೇಖಕರು ಲೈಂಗಿಕ ಶೋಷಿತರು ಹಾಗೂ ಅವರ ಮಕ್ಕಳ ಸೇವಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರು)
ನಿರೂಪಣೆ: ಗಣೇಶ ಅಮೀನಗಡ

ಇವರು ಹೀಗೆನ್ನುತ್ತಾರೆ...

ADVERTISEMENT

ಲೈಂಗಿಕ ವೃತ್ತಿಯನ್ನು ಕಾನೂನು­ಬದ್ಧ­ಗೊಳಿಸಬೇಕು. ಇದನ್ನು ವೃತ್ತಿ ಎಂದು ಒಪ್ಪುವ ಸಮಾಜ ನಿರ್ಮಾಣ ಆಗಬೇಕು.
–ಅಕ್ಕೈ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತೆ

ದಿನದಲ್ಲಿ ಏಳೆಂಟು ಗ್ರಾಹಕರನ್ನು ತೃಪ್ತಿಪಡಿಸುವ ನಮಗೆ ಗಳಿಕೆಯ ಹತ್ತನೇ ಒಂದು ಭಾಗ ಮಾತ್ರ ಸಿಗು­ತ್ತದೆ. ಉಳಿದದ್ದನ್ನು ತಲೆ­-ಹಿಡುಕರು  ಕಿತ್ತು­ಕೊಳ್ಳು­ತ್ತಾರೆ.  ಈ ವೃತ್ತಿಯನ್ನು ಕಾನೂನು­ಬದ್ಧಗೊಳಿ­ಸಿದರೆ ಗಳಿಕೆಯ ಎಲ್ಲ ಹಣವೂ ನಮಗೇ ಸಿಗಬಹುದು.
–ಮಂಜುಳಾ, ‘ಒಂದುಗೂಡು’ ಸಂಘಟನೆ, ತುಮಕೂರು
 

ಲೈಂಗಿಕ ವೃತ್ತಿನಿರತರ ಮೇಲೆ ಭೀಕರವಾದ ಅತ್ಯಾಚಾರ ನಡೆಯು­ತ್ತಿದೆ. ಕಾನೂನು ರಕ್ಷಣೆ ಮಾಡುವ­ವರೇ ಶೋಷಣೆ ಮಾಡುತ್ತಿದ್ದಾರೆ.  ಈ ವಿಚಾರವನ್ನು ನೈತಿಕ ನೆಲೆಗಟ್ಟಿ­ನಿಂದ ನೋಡುವ ಬದಲು ಆರ್ಥಿಕ ಮತ್ತು ಸಾಮಾಜಿಕ ವಿಷಯವಾಗಿ ಯೋಚಿಸಬೇಕಾದ ಅಗತ್ಯವಿದೆ.
–ದು. ಸರಸ್ವತಿ, ಸಾಮಾಜಿಕ ಕಾರ್ಯಕರ್ತೆ
 

ಈ ವೃತ್ತಿಯಿಂದ ಹೊರಹೋಗುವ ಇಚ್ಛೆ ಇರುವ­ವರಿಗೆ ಸರ್ಕಾರ ಕೆಲಸ ಕೊಡಬೇಕು. ನಮ್ಮ ಸಮುದಾಯಕ್ಕೆ ಆಗುತ್ತಿರುವ ಕಿರಿಕಿರಿ ತಪ್ಪಿದರೆ ಸಾಕು. ಅಂತಹ ಕಾನೂನು ಬಂದರೆ ಸ್ವಾಗತಿ­ಸುತ್ತೇವೆ.
–ದೀಪಿಕಾ, ಲೈಂಗಿಕ ಅಲ್ಪಸಂಖ್ಯಾತೆ, ‘ಸಹಬಾಳ್ವೆ’ ಸಂಚಾಲಕಿ
 

ವೃತ್ತಿ ಎಂದು ಪರಿಗಣಿಸಿದರೆ ತೆರಿಗೆ ಕಟ್ಟಬೇಕಾ­ಗುತ್ತದೆ. ಲೈಂಗಿಕ ವೃತ್ತಿನಿರತರ ತೆರಿಗೆ ಹಣದಿಂದ ಸರ್ಕಾರ ನಡೆಸ­ಬೇಕೇ?  ವೇಶ್ಯಾವೃತ್ತಿಗೆ ಕಾನೂ­ನು­ ­­­ಮಾನ್ಯತೆ ಸಿಗಬೇಕು ಎಂಬುದು ಘರ್‌­ವಾಲಿಗಳು, ಕಾಂಡೋಮ್‌­ ಮಾರು­­ವ­ವರ ಕೂಗಷ್ಟೇ. ಇದರಲ್ಲಿ  ರಾಜ­ಕಾರಣ ಬೇಡ.
–ಭಾರತಿ,  ‘ವಿಮೋಚನಾ’ ವಿಜಾಪುರ
 

ಅದೃಷ್ಟಕ್ಕೆ ಬೆಂಗಳೂರಿನಲ್ಲಿ ರೆಡ್‌­ಲೈಟ್‌ ಏರಿಯಾ ಇಲ್ಲ.  ಕಾನೂನು ವ್ಯಾಪ್ತಿಗೆ ತಂದರೆ ವಿವಿಧೆಡೆ ಅಂಥ ಜಾಗ ಸೃಷ್ಟಿಯಾಗುವ ಅಪಾಯವಿದೆ.
–ಶಕುನ್‌, ಸಾಮಾಜಿಕ ಕಾರ್ಯಕರ್ತೆ


ಈ ವೃತ್ತಿ ಅಸ­ಹಜ­ವೇನಲ್ಲ. ಮಾನವೀಯ ದೃಷ್ಟಿ­ಯಿಂದ ಇದನ್ನು ಕಾನೂನಿನ ವ್ಯಾಪ್ತಿಗೆ ತರಬೇಕು.
–ಎಸ್‌.ಎಚ್‌.ಪಟೇಲ್‌, ನಿವೃತ್ತ ಪ್ರಾಂಶುಪಾಲ, ದಾವಣಗೆರೆ


 

ಅತ್ಯಾಚಾರ ಪ್ರಕರಣಗಳು ಹೆಚ್ಚಾಗು­ತ್ತಿರು­ವುದನ್ನು ನೋಡಿದರೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧ­ಗೊಳಿಸುವುದು ಸೂಕ್ತ. ಲೈಂಗಿಕ ತೃಷೆ ತೀರಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಅತ್ಯಾಚಾರ ಎಸಗುತ್ತಿದ್ದಾರೆ.  
–ಡಾ. ಎನ್.ಹನುಮಂತಪ್ಪ, ಅಖಿಲ ಭಾರತ ಮಾನವ ಹಕ್ಕುಗಳ ಒಕ್ಕೂಟದ ಸದಸ್ಯ 

 

ಯಾರು ಬೇಕಾದರೂ ಈ ವೃತ್ತಿಗೆ ಬರಬಹುದು ಎಂಬ ಧೋರಣೆ ಸರಿಯಲ್ಲ. ಅತ್ಯಾಚಾರಿ­ಗಳಿಗೆ ತಕ್ಷಣ ಶಿಕ್ಷೆ ಜಾರಿಯಾಗ­ಬೇಕು. ಅದು ಬಿಟ್ಟು
ವೇಶ್ಯಾ­ವಾಟಿಕೆಗೆ ಪ್ರೋತ್ಸಾಹ ನೀಡುವುದು ಸರಿಯಲ್ಲ.
–ಕಡಿದಾಳ್‌ ಶಾಮಣ್ಣ ಶಿವಮೊಗ್ಗ

ನಿರೂಪಣೆ: ಹೇಮಾ ವೆಂಕಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.