ADVERTISEMENT

ಪಾತಾಳ ಗಂಗೆಯ ಮುನಿಸು

ಕೆ.ನರಸಿಂಹ ಮೂರ್ತಿ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ನೀರೋ ನೆಳಲೋ ಇಲ್ಲಿ ಎಲ್ಲಿದೆ?
ಗಾರುಗಲ್ಲಿನ ದಾರಿಯು
ಬಿದ್ದ ಸಗ್ಗದ ಬೀಜವೆಲ್ಲವು
ಸುಟ್ಟು ಸಿಡಿಯುವ ಗೋರಿಯು
(‘ಇಂಡಿಯನ್ ರಿಪಬ್ಲಿಕ್‍’ ಕವನ, ಗೋಪಾಲಕೃಷ್ಣ ಅಡಿಗ)
–ಮೂರು ಕೊಳವೆಬಾವಿ ಕೊರೆದರೂ ನೀರು ಬರಲಿಲ್ಲ. ನಾಲ್ಕನೆಯದರಲ್ಲಿ ಸ್ವಲ್ಪ ನೀರು ಬಂತು. ಅದು ಏನೇನಕ್ಕೂ ಸಾಕಾಗ್ತಿಲ್ಲ... ಲೋಕಸಭೆ ಚುನಾವಣೆಯ ಮತ­ದಾನದ ದಿನ ಕೆಜಿಎಫ್‌ನ ಕಮ್ಮ­ಸಂದ್ರ ಗ್ರಾಮದ ಮತಗಟ್ಟೆ ಮುಂದೆ ನಿಂತ ಚೀಮನ­ಬಂಡಹಳ್ಳಿಯ ಮುರಳಿ ಹೀಗೆ ಹೇಳಿ ಮೌನವಾದರು.

ಕೊರೆಯುವ ಕೊಳವೆಬಾವಿಗಳು ವಿಫಲ­ವಾಗುವುದು ಕೋಲಾರ ಜಿಲ್ಲೆ­ಯಲ್ಲಿ ಈಗ ಸಾಮಾನ್ಯ. ‘ಹೌದಾ. ಹಾಗಾ­ದರೆ ಇನ್ನೊಂದು ಕೊರೆದು ನೀರು ಕೊಡ್ತೀವಿ ಬಿಡಿ’ ಎಂಬುದು ಜನ­ಪ್ರತಿನಿಧಿ­ಗಳು ಮತ್ತು ಅಧಿಕಾರಿಗಳು ರೂಢಿಸಿ­ಕೊಂಡಿರುವ ಮಾತು.

ನಿರಂತರ ಬರಗಾಲಪೀಡಿತ ಕೋಲಾರ, ಚಿಕ್ಕಬಳ್ಳಾಪುರದಂಥ ಬಯಲು­ಸೀಮೆ ಜಿಲ್ಲೆಗಳಲ್ಲಿ ನೀರಿನ ಕೊರ­ತೆಯ ಸಮಸ್ಯೆ ನಿವಾರಣೆಗೆ ಕೊಳವೆ­ಬಾವಿಯೊಂದೇ ಪರ್ಯಾಯ ಎಂಬ ಆಶಾವಾದ ಮಂಜುಗಡ್ಡೆಯಂತೆ ಕರಗು­ತ್ತಿದೆ. ಕೊಳವೆಬಾವಿಗಳಿಂದ ನೀರಿನ ಬದಲಿಗೆ ದೂಳು ಚಿಮ್ಮುತ್ತಿದೆ. ಒಂದೊಮ್ಮೆ ನೀರು ಚಿಮ್ಮಿದರೂ ಅದೂ ಅಲ್ಪಾಯು­ವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗು­ತ್ತಿರುವ ಬರಗಾಲದ ತೀವ್ರತೆಗೆ ಜನ, ಅದರಲ್ಲೂ ಕೃಷಿಯನ್ನೇ ಜೀವನಾಧಾರ ಮಾಡಿ­ಕೊಂಡಿರುವ ರೈತರು ನಲುಗುತ್ತಿದ್ದಾರೆ. ಕುಡಿಯಲಿಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ದುಬಾರಿ ಅಲ್ಲ, ದುರ್ಲಭ ಎನ್ನುವಂಥ ಸನ್ನಿವೇಶಗಳನ್ನು ಮುಖಾಮುಖಿ­ಯಾಗುವುದು ಅನಿವಾರ್ಯವಾಗಿದೆ.

ಹಳ್ಳಿಗಳ ಜನ ಕಿಲೋಮೀಟರುಗಳ ದೂರದಿಂದ ನೀರನ್ನು ಹೊತ್ತು, ದ್ವಿಚಕ್ರ, ಎತ್ತಿನಗಾಡಿ, ಆಟೊರಿಕ್ಷಾ­ಗಳಲ್ಲಿ ಸಾಗಿಸುತ್ತಿದ್ದಾರೆ. ಶಾಶ್ವತ ನೀರಾವರಿ ಎಂಬ ಮರೀಚಿಕೆಯನ್ನು ತೋರಿಸುತ್ತಾ ರಾಜಕಾರಣ ಮಾತ್ರ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ.

ಜಲಸಂಪನ್ಮೂಲಗಳ ಮಾಲೀಕತ್ವವನ್ನು ಹೊಂದಿದ್ದ ಸಮುದಾಯ ಈಗ ಅವಲಂಬನೆಯ ಸ್ಥಿತಿಯಲ್ಲಿ ನಿಂತಿದೆ. ಏಕೆಂದರೆ ಕೆರೆ, ಕುಂಟೆ, ಕಲ್ಯಾಣಿಗಳು ಸಹಜ ಸಂಪನ್ಮೂಲ­ಗಳ ರೂಪದಲ್ಲಿ ಉಳಿದಿಲ್ಲ. ಒತ್ತುವರಿ, ಅನ್ಯ ಉದ್ದೇಶಕ್ಕೆ ಬಳಕೆ, ದುರ್ಬಳಕೆ, ಅಪಮೌಲ್ಯಕ್ಕೆ ಒಳಗಾಗಿ­ರುವುದ­ರಿಂದ ಅವುಗಳ ಉಪಯೋಗಿ ಮೂಲದ ಮಹತ್ವ ಕಾಣೆ­ಯಾಗಿದೆ. ಆದರೆ ಭಾಷಣಗಳಲ್ಲಿ, ನೆನಪುಗಳಲ್ಲಿ, ಸರ್ಕಾರದ ಆದೇಶಗಳಲ್ಲಿ ಮಾತ್ರ ಅವು ಅತ್ಯಂತ ಮಹತ್ವಪೂರ್ಣದವಾಗಿವೆ!

2009ರ ಮೇ ತಿಂಗಳ ಹೊಸ್ತಿಲಲ್ಲಿದ್ದ ಬೇಸಿಗೆ ಮತ್ತು ಬರಗಾಲವನ್ನು ನೆನಪಿಸಿಕೊಂಡು ಈ ಕ್ಷಣವನ್ನು ಅವಲೋಕಿಸಿದರೆ ಚುರುಗುಟ್ಟುತ್ತಿದೆ ಬಿಸಿಲು. ಕೊರೆದರೆ ನೀರು ಸಿಗುತ್ತದೆ ಎಂಬ ಭರವಸೆ ಐದು ವರ್ಷದ ಹಿಂದೆ ಅಷ್ಟೇನೂ ಕರಗಿರಲಿಲ್ಲ. ಆದರೆ ಈಗ ಪಾತಾಳದಿಂದ ಗಂಗಮ್ಮ ಬರುವಳೋ, ಬಾರಳೋ, ಬಂದರೂ ಉಳಿವಳೋ ಇಲ್ಲವೋ ಎಂಬ ಆತಂಕ.

ಕುಡಿಯುವ ನೀರು: ಖಾಸಗಿ ಕೊಳವೆ ಬಾವಿಗಳಿಂದ ಪಡೆದು ಟ್ಯಾಂಕರ್‌ ಮೂಲಕ, ಬಿಂದಿಗೆಗೆ 5–6 ರೂಪಾಯಿ­ಯಂತೆ  ಮಾರುವ ನೀರು, ಸಂಸ್ಕರಣ ಘಟಕಗಳಲ್ಲಿ ಶುದ್ಧೀಕರಿಸಿ ಕ್ಯಾನುಗಳಲ್ಲಿ (ಒಂದಕ್ಕೆ ₨ 20ರಿಂದ 35) ಮಾರುವ ನೀರು– ಇವೆರಡೇ ಅನೇಕ ಕಡೆ ಸದ್ಯಕ್ಕೆ ಜನ ಕುಡಿಯಲು ಬಳಸುವ ನೀರು.

ಬಹುತೇಕ ಕಡೆ ನಲ್ಲಿಗಳಲ್ಲಿ ನೀರು ಬರುವುದಿಲ್ಲ. ನಲ್ಲಿಯಲ್ಲಿ ನೇರವಾಗಿ ಬರುವ ನೀರಿನಲ್ಲಿ ಮಿತಿ ಮೀರಿ ಫ್ಲೋರೈಡ್‌ ಅಂಶ ಇರುವುದರಿಂದ ಕುಡಿಯಲು ಯೋಗ್ಯವಿಲ್ಲ. ಯಾರೂ ಕುಡಿಯು­ವು­ದಿಲ್ಲ. ದಿನಬಳಕೆಗೆ ನೀರು ಸಾಕಾಗುವಷ್ಟಿಲ್ಲ. ಹಣವುಳ್ಳ­ವರು ವಾರಕ್ಕೆ, ಮೂರು ದಿನಕ್ಕೊಮ್ಮೆ ಅರ್ಧ, ಪೂರ್ತಿ ಟ್ಯಾಂಕರ್‌ ನೀರನ್ನು ಖರೀದಿಸುತ್ತಾರೆ. ನೀರು ಖರೀದಿಗೆಂದೇ ಸಾವಿರಾರು ರೂಪಾಯಿ­ಯನ್ನು ಜನ ವ್ಯಯಿಸುತ್ತಿದ್ದಾರೆ.

ಜೀವನೋಪಾಯ­ಕ್ಕಾಗಿ ಖರೀದಿಸುವ ಸಾಮಗ್ರಿಗಳ ಒಟ್ಟಾರೆ ಮೊತ್ತದಲ್ಲಿ ನೀರಿನ ಖರ್ಚೇ ಹೆಚ್ಚಿರುತ್ತದೆ.
ಆದರೂ, ಜನರಿಗೆ ನೀರು ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್‌ಗಳ ಮೂಲಕ ಪೂರೈಸಲೆಂದು ಸ್ಥಳೀಯ ಆಡಳಿತಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ವಿಷಯ ಇಷ್ಟೆ: ಜನರಿಗೆ ನೀರು ಪೂರೈಸಿದ ಲೆಕ್ಕ ಹಾಳೆಗಳಲ್ಲಿರುತ್ತದೆ. ಜನ ಮಾತ್ರ ಸ್ವಂತ ದುಡ್ಡಿನಲ್ಲಿ ನೀರು ಖರೀದಿಸುತ್ತಿರುತ್ತಾರೆ. ಇಂಥ ವಿಪರ್ಯಾಸಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ.

ಕೃಷಿಗೆ ದೂರದ ನೀರು: ರೇಷ್ಮೆ, ಮಾವು, ರಾಗಿ, ಡೊಣ್ಣೆಮೆಣಸು ಮೊದಲಾದ ಪ್ರಮುಖ ಬೆಳೆಗಳಿಗೆ ಕಿಲೋಮೀಟರ್ ದೂರದ  ಕೊಳವೆಬಾವಿಗಳಿಂದ ನೀರು ಖರೀದಿಸಿ ಟ್ಯಾಂಕರ್‌ನಲ್ಲಿ ತಂದು ಪೂರೈಸುವ ದೃಶ್ಯಗಳು ಈಗ ಸಾಮಾನ್ಯ. ಬರುವ ಮಳೆ ನೀರು ಸಾಕಾಗುತ್ತಿಲ್ಲ ಎಂಬುದು ದೂರು.

ಬೀಳುವ ಅಷ್ಟೋ ಇಷ್ಟೋ ಮಳೆ ನೀರಲ್ಲಿ ಸ್ವಲ್ಪವಾದರೂ ಹರಿದು ಕೆರೆ, ಕುಂಟೆ ಸೇರಲಿ ಎಂದರೆ, ರಾಜಕಾಲುವೆಗಳು ಮುಚ್ಚಿಹೋಗಿವೆ. ನಾಪತ್ತೆಯಾಗಿವೆ. ನೀರು ಹಿಡಿದಿಟ್ಟುಕೊಳ್ಳಬೇಕಾದ ಕೆರೆಗಳಲ್ಲೇ ಭರ್ತಿ ಕೃಷಿ ಚಟುವಟಿಕೆಗಳೂ ನಡೆಯುತ್ತಿವೆ.

ಭೂಮಿ ಮತ್ತು ಆಕಾಶದ ನಡುವಿನ ಸಾವಯವ ಸಂಬಂಧದ ಬಗೆಗಿನ ಗೌರವವನ್ನು ಎಂದೋ ಬಿಟ್ಟುಕೊಡ­ಲಾಗಿದೆ. ಕಳೆದ ವರ್ಷ ಬಿದ್ದ ಮಳೆ ನೀರು ಸದ್ಬಳಕೆ­ಯಾಗಲಿಲ್ಲ ಎಂದಾದರೆ, ಮುಂದಿನ ವರ್ಷ ಬೀಳುವ ಮಳೆ ನೀರಿನ ಬಳಕೆಗೆ ಇಂದಿನಿಂದಲೇ ಸಿದ್ಧ ಮಾಡಿಕೊಳ್ಳಬೇಕು ಎಂಬ ಸಾಮಾನ್ಯ ಕಾಳಜಿ, ಪೌರಪ್ರಜ್ಞೆ, ಪರಿಸರ ಪ್ರೀತಿಯೂ ಗೈರುಹಾಜರಾಗಿದೆ.

ಬತ್ತುತ್ತಿರುವ ಅಂತರ್ಜಲ ಸಮಸ್ಯೆಯನ್ನು ಗಂಭೀರ­ವಾಗಿ ಪರಿಗಣಿಸಿ, ಅದರ ಬಳಕೆಯ ಮೇಲೆ ಮಿತಿ ಹೇರುವ ಸರ್ಕಾರದ ಪ್ರಯತ್ನಗಳು ಸಫಲವಾಗಿಲ್ಲ. ಅದರ ಬಗ್ಗೆ ಜನ, ಸ್ಥಳೀಯ ಆಡಳಿತಗಳೂ ಅಷ್ಟೇನೂ ಗಂಭೀರವಾಗಿ ಚಿಂತಿಸಿಲ್ಲ. ಮಳೆ ನೀರು ಸದ್ಬಳಕೆಯ ವಿಷಯದಲ್ಲೂ ಇದೇ ಧೋರಣೆ. ಬೇಸಿಗೆ, ಬರಗಾಲ ಬಂದಾಗ ಮಾತ್ರ ತಮ್ಮ ಬಗೆಗೆ ತಮ್ಮದೇ ಅಪರಿಮಿತ ಅನುಕಂಪ.

ದೂರದ ಇಸ್ರೇಲಿನಲ್ಲಿ ದಕ್ಕುವ ಇಬ್ಬನಿ, ನೀರಿನ ತೇವಾಂಶವನ್ನಷ್ಟೇ ಬಳಸಿ ಉತ್ತಮ ಜೀವನ ನಡೆಸಲು ಸಾಧ್ಯವಾಗುವುದಾದರೆ, ವರ್ಷಕ್ಕೆ ಸರಾಸರಿ 720 ಮಿ.ಮೀ. ಮಳೆ ಬಿದ್ದರೂ ನಮ್ಮಲ್ಲೇಕೆ ಕೃಷಿಗೆ, ಕುಡಿಯಲಿಕ್ಕೆ ನೀರಿಗೆ ಬರ ಎಂಬ ಪ್ರಶ್ನೆ ಮಾತ್ರ ದಶಕಕ್ಕೂ ಹೆಚ್ಚಿನ ಅವಧಿಯಿಂದ ಹಾಗೇ ಉಳಿದಿದೆ.                      

ಮಳೆ ಮಾಪನದಲ್ಲೇ ದೋಷ
ಅಂಕಿ ಅಂಶಗಳನ್ನು ಅವಲೋಕಿಸಿದರೆ ಕೋಲಾರ ಜಿಲ್ಲೆಯಲ್ಲಿ ಸರಾಸರಿ ಮಳೆಯ ಪ್ರಮಾಣ ಕಡಿಮೆ ಏನೂ ಆಗಿಲ್ಲ. ವಿಪರ್ಯಾಸ ಎಂದರೆ, ಸರಾಸರಿ ಮಳೆಯ ಪ್ರಮಾಣವನ್ನು ಲೆಕ್ಕಾಚಾರ ಹಾಕುವ ಪದ್ಧತಿಯೇ ಪ್ರಾಯೋಗಿಕವಾಗಿ ಅತಾರ್ಕಿಕವಾಗಿರು ವುದು. ಹೋಬಳಿಯ ಎಲ್ಲೋ ಒಂದು ಕಡೆ ಮಳೆ ಬಿದ್ದರೆ ಇಡೀ ಹೋಬಳಿಯೆಲ್ಲಾ ಮಳೆ ಬಿದ್ದಿತು ಎಂಬುದು ಇಲಾಖೆಗಳು ಹೇಳುವ ಲೆಕ್ಕಾಚಾರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT