ADVERTISEMENT

ಭೂಮಿ ಕೊಡಿ; ಉದ್ಯೋಗ ಹಿಡಿ

ಭೂಸ್ವಾಧೀನ ಕಾಯ್ದೆ: ತಿದ್ದುಪಡಿ ಆಜೂಬಾಜು

ಪ್ರಜಾವಾಣಿ ವಿಶೇಷ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ಒಂದು ದೇಶದ ಅಭಿವೃದ್ಧಿ­ಯಲ್ಲಿ ಉದ್ದಿಮೆಗಳು ವಹಿಸುವ ಪಾತ್ರ ಹಿರಿದು. ಬಂಡವಾಳ ನಿರಂತರ­ವಾಗಿ ಹರಿದು ಬರು­ತ್ತಿದ್ದರೆ ರಾಷ್ಟ್ರದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ.  ಇದಕ್ಕಾಗಿ ಬಂಡವಾಳ ಹೂಡಿಕೆಗೆ ಅನುಕೂಲಕರವಾದ ವಾತಾವರಣ ಇರುವುದು ಅತ್ಯಂತ ಮುಖ್ಯ. ಕೇಂದ್ರ ಸರ್ಕಾರ ೨೦೧೩ರ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಈ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹಾಗೂ ಉದ್ಯಮ ವಲಯ ಸ್ವಾಗತಿಸುವಂತಹ ತೀರ್ಮಾನ.

ಮೂರು ವರ್ಷಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. 2010–-11ರಲ್ಲಿ ಶೇ 8.5ರಿಂದ 9ರಷ್ಟಿದ್ದ ದೇಶದ ಆರ್ಥಿಕ ವೃದ್ಧಿ ದರ ನಂತರ ಶೇ 4.5ರಿಂದ 4.7ಕ್ಕೆ ಕುಸಿದಿತ್ತು. ಈಗ ದೇಶದ ಆರ್ಥಿಕ ಸ್ಥಿತಿಗತಿ ಆಶಾದಾಯಕವಾಗಿದೆ. ಅರ್ಥ ವ್ಯವಸ್ಥೆ ಸುಧಾರಿಸುತ್ತಿದೆ. ದೇಶವು ಸ್ಥಿರ ಆರ್ಥಿಕ ಪ್ರಗತಿ ಸಾಧಿಸಲು ಸರ್ಕಾರ ಕೆಲವು ಕಠಿಣ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಇಂತಹ ಕಠಿಣ ನಿರ್ಧಾರಗಳ ಭಾಗ ಎಂದರೆ ತಪ್ಪಲ್ಲ. ಲೋಕಸಭೆ­ಯಲ್ಲಿ ಅಂಗೀಕಾರಗೊಂಡಿದ್ದರೂ, ರಾಜ್ಯಸಭೆಯಲ್ಲಿ ಅಗತ್ಯ ಬೆಂಬಲ ಇಲ್ಲದಿರುವುದರಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಸರ್ಕಾರ ಹೊರಟಿದೆ. ಈ ನಿರ್ಧಾರ ದೇಶದ ಆರ್ಥಿಕ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ ಎಂಬುದನ್ನು ಖಚಿತವಾಗಿ ಹೇಳಬಹುದು.

ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಭಾರತ­ದಲ್ಲಿ ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಯಾಗು­ತ್ತಿಲ್ಲ. ನಮ್ಮಲ್ಲಿ ಮಾನವ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಆದರೆ, ಉದ್ಯೋಗಗಳನ್ನು ಸೃಷ್ಟಿಸುವ ಉದ್ದಿಮೆಗಳ ಕೊರತೆ ಇದೆ.

ಹೊಸ ಕಾಯ್ದೆಯಲ್ಲಿ ಜಮೀನು ಸ್ವಾಧೀನಕ್ಕೆ ಮಾಲೀಕರ ಅನುಮತಿ ಅಗತ್ಯವಿಲ್ಲ ಎಂಬ ನಿಯಮ ಅಳವಡಿಸಿರುವುದಕ್ಕೆ ರೈತರಿಂದ, ಭೂಮಾಲೀಕರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಈ ಕಾನೂನಿನಿಂದ ಅವರಿಗೆ ತೊಂದರೆ ಇಲ್ಲ. ಕೈಗಾರಿಕೆಗಳಿಗೆ ಭೂಮಿ ನೀಡಿದರೆ ಅವರಿಗೆ ಈ ಹಿಂದೆ ಸಿಗುತ್ತಿದ್ದ ಪರಿಹಾರವೇ ಈಗಲೂ ಸಿಗುತ್ತದೆ.

ಅಂದಾಜಿನ ಪ್ರಕಾರ, ಪ್ರತಿ ವರ್ಷ 2.5 ಕೋಟಿ ಯುವಜನರು ಶಿಕ್ಷಣ ಪಡೆದು ಉದ್ಯೋಗ ಹೊಂದಲು ಅರ್ಹರಾಗುತ್ತಾರೆ. ಈ ಪೈಕಿ ನಾವು ಕನಿಷ್ಠ ಶೇ 70ರಷ್ಟು ಮಂದಿಗಾದರೂ ಉದ್ಯೋಗ ನೀಡಬೇಕು. ಅಂದರೆ 1.8 ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು. ಆದರೆ ನಮ್ಮಲ್ಲಿ ಅದು ಆಗುತ್ತಿಲ್ಲ. ಕೈಗಾರಿಕೆಗಳು ಸ್ಥಾಪನೆಯಾಗದೇ, ಮೂಲಸೌಕರ್ಯಗಳ ಅಭಿವೃದ್ಧಿ­ಯಾಗದೇ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಉದ್ದಿಮೆಗಳ ಸ್ಥಾಪನೆಗೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಂಡವಾಳ ಹೂಡಬೇಕು. ಅದಕ್ಕೆ ಅಗತ್ಯ ಜಮೀನು ಲಭ್ಯತೆ ಸೇರಿದಂತೆ ಪೂರಕ ವಾತಾವರಣ ಇರಬೇಕು.

ನಮ್ಮಲ್ಲಿ ಬಂಡವಾಳ ಹೂಡಿಕೆದಾರರು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಕೈಗಾರಿಕೆಗಳಿಗೆ ಸಂಬಂಧಿಸಿದ ನೀತಿಗಳು, ಕಾನೂನುಗಳು ಕೈಗಾರಿಕಾ ಸ್ನೇಹಿಯಾಗಿಲ್ಲ. ಇಲ್ಲಿ ಉದ್ದಿಮೆ ಸ್ಥಾಪನೆಗೆ ಭೂಮಿ ಪಡೆಯುವುದೇ ಪ್ರಯಾಸದ ಕೆಲಸ. ಜಮೀನಿಗಾಗಿ ಮನವಿ ಸಲ್ಲಿಸಿದ ಕೂಡಲೇ ಹಲವಾರು ಅಡ್ಡಿ ಅಡಚಣೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಪರಿಹರಿಸಿ ಜಮೀನು ಕೈಗೆ ಸಿಗುವಾಗ ಹಲವು ವರ್ಷಗಳೇ ಸಂದಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಕಷ್ಟವಾಗುತ್ತದೆ. ಬಂಡವಾಳ ಹೂಡಿಕೆಗೆ ಮುಂದೆ ಬಂದವರು ವಾಪಸ್‌ ಹೋಗುವ ಸಾಧ್ಯತೆಯೇ ಹೆಚ್ಚು. ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದ ನೀತಿಗಳು ‘ಉದ್ದಿಮೆ ಸ್ನೇಹಿ’ ಆಗಿರಬೇಕು. ಇಡೀ ಪ್ರಕ್ರಿಯೆ ಅಡಚಣೆ ಮುಕ್ತ ವ್ಯವಸ್ಥೆಯನ್ನು ಹೊಂದಿರಬೇಕು. ಕೇಂದ್ರ ಸರ್ಕಾರ ತಿದ್ದುಪಡಿ  ಮೂಲಕ ಜಾರಿಗೆ ತರಲು ಹೊರಟಿರುವ ಕಾಯ್ದೆ ಈ ವ್ಯವಸ್ಥೆಯನ್ನು ಪೋಷಿಸುತ್ತದೆ. ಹೀಗಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಇದು ಪೂರಕ.

ಹೊಸ ಕಾಯ್ದೆಯಲ್ಲಿ, ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮಾಲೀಕರ ಅನುಮತಿ ಅಗತ್ಯವಿಲ್ಲ ಎಂಬ ನಿಯಮ ಅಳವಡಿಸಿರುವುದಕ್ಕೆ ರೈತರಿಂದ, ಭೂಮಾಲೀಕರಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಈ ಕಾನೂನಿನಿಂದ ಅವರಿಗೆ ತೊಂದರೆ ಇಲ್ಲ. ಕೈಗಾರಿಕೆಗಳಿಗಾಗಿ ಭೂಮಿ ನೀಡಿದರೆ ಅವರಿಗೆ ಈ ಹಿಂದೆ ಸಿಗುತ್ತಿದ್ದ ಪರಿಹಾರವೇ ಸಿಗುತ್ತದೆ (ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ದರದ ನಾಲ್ಕು ಪಟ್ಟು, ನಗರ ಪ್ರದೇಶದಲ್ಲಿ ದುಪ್ಪಟ್ಟು ದೊರೆಯುತ್ತದೆ). ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶ ಎಂದರೆ, ರಾಷ್ಟ್ರದ ಭದ್ರತೆ, ರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಕೈಗಾರಿಕಾ ಕಾರಿಡಾರ್‌ಗಳು ಮತ್ತು ಸಾಮಾಜಿಕ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಹೊಸ ಕಾಯ್ದೆಯಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ.

ADVERTISEMENT

ನಮ್ಮಲ್ಲಿ ಬಂಡವಾಳ ಹೂಡಿಕೆದಾರರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಕೈಗಾರಿಕೆಗಳಿಗೆ ಸಂಬಂಧಿಸಿದ ನೀತಿಗಳು, ಕಾನೂನುಗಳು ‘ಕೈಗಾರಿಕಾ ಸ್ನೇಹಿ’ಯಾಗಿಲ್ಲ. ಇಲ್ಲಿ ಉದ್ದಿಮೆ ಸ್ಥಾಪನೆಗೆ ಭೂಮಿ ಪಡೆಯುವುದೇ ಪ್ರಯಾಸದ ಕೆಲಸ.

ನಮ್ಮ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ನಿಜ. ಭೂಮಿ ಪರಿವರ್ತನೆ ಎಂಬುದು ಭ್ರಷ್ಟಾಚಾರದ ಮಹಾಪೋಷಕ. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಬೇಕಾದರೆ ಅವರು ಸಾಕಷ್ಟು ಕಷ್ಟಪಡಬೇಕು. ಲಂಚವನ್ನೂ ಕೊಡಬೇಕು. ಇದರ ಜೊತೆಗೆ ಮಧ್ಯವರ್ತಿಗಳ ಕಾಟ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಕಡಿಮೆ ಬೆಲೆಗೆ ಜಮೀನಿನ ಮಾಲೀಕರಿಂದ ಭೂಮಿ ಖರೀದಿಸುವ ಮಧ್ಯವರ್ತಿಗಳು ಹೆಚ್ಚು ಬೆಲೆಗೆ ಉದ್ದಿಮೆಗಳಿಗೆ ಮಾರುತ್ತಾರೆ. ಇದರಿಂದ ಜಮೀನಿನ ಮಾಲೀಕನಿಗೆ ಯೋಗ್ಯ ಬೆಲೆ ದೊರಕುವು­ದಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸುವು­ದಕ್ಕಾಗಿ ಭೂಪರಿವರ್ತನೆ ಹಕ್ಕನ್ನು ರೈತರಿಗೆ ನೀಡಬೇಕು. ಮಧ್ಯವರ್ತಿಗಳ ಹಾವಳಿ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ರೈತರು ಎದುರಿಸುತ್ತಿರುವ ವಾಸ್ತವ ಸಮಸ್ಯೆ­ಗಳನ್ನು ಪರಿಹರಿಸಲು ಯಾರೂ ಮುಂದಾಗುತ್ತಿಲ್ಲ.

ರೈತರ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಆದರೆ, ದೇಶದ ಒಳಿತಿನ ದೃಷ್ಟಿಯಿಂದ ಅವರು ಕೂಡ ಯೋಚನೆ ಮಾಡಬೇಕು. ರಾಷ್ಟ್ರವೊಂದು ಪ್ರಗತಿ ಪಥದಲ್ಲಿ ಮುನ್ನಡೆಯಬೇಕಾದರೆ ಎಲ್ಲ ಕ್ಷೇತ್ರಗಳೂ ಅಭಿವೃದ್ಧಿ ಸಾಧಿಸಬೇಕು. ಕೃಷಿ ಕ್ಷೇತ್ರದ ಜೊತೆ ಜೊತೆಗೆ ಉದ್ಯಮ ಕ್ಷೇತ್ರ ಕೂಡ ಬೆಳೆದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದನ್ನು ಅರ್ಥ­ಮಾಡಿ­ಕೊಳ್ಳಬೇಕು.

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದರೆ ಅವರು ಕೂಡ ಲಾಭದ ಫಲವನ್ನು ಉಣ್ಣುತ್ತಾರೆ. 2013ರ ಭೂಸ್ವಾಧೀನ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕಿತ್ತು. ಈಗಿನ ಸರ್ಕಾರ ಅದನ್ನು ಮಾಡಿದೆ. ಕೈಗಾರಿಕೆ ಹಾಗೂ ದೇಶದ ಹಿತದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರ ಎಂಬುದು ನನ್ನ ಭಾವನೆ. ದೇಶದ ಉದ್ಯಮ ವಲಯದಲ್ಲೂ ಇದೇ ಅಭಿಪ್ರಾಯ ಇದೆ.
(ಲೇಖಕರು ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.