ADVERTISEMENT

ಮರೀಚಿಕೆಯ ಬೆನ್ನೇರಿ...

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ

ವೈ.ಗ.ಜಗದೀಶ್‌
Published 7 ಜನವರಿ 2017, 6:53 IST
Last Updated 7 ಜನವರಿ 2017, 6:53 IST
ಮರೀಚಿಕೆಯ  ಬೆನ್ನೇರಿ...
ಮರೀಚಿಕೆಯ ಬೆನ್ನೇರಿ...   

ರಾಜ್ಯದಲ್ಲಿ ಖಾಸಗಿ ಕ್ಷೇತ್ರದ ‘ಸಿ’ ಮತ್ತು ‘ಡಿ’ ವರ್ಗದ ಉದ್ಯೋಗಗಳಲ್ಲಿ  ಕನ್ನಡಿಗರಿಗೆ ಶೇ 100 ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ 1961ರ ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳಿಗೆ ತಿದ್ದುಪಡಿ ಕರಡನ್ನು ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಇದರಿಂದ ಕನ್ನಡಿಗರಿಗೆ ನಿಜಕ್ಕೂ ಅನುಕೂಲವಾಗುತ್ತದೆಯೆ? ಆರ್ಥಿಕ ಅಭಿವೃದ್ಧಿಗಾಗಿ ಶ್ರಮ ಹಾಗೂ ಬಂಡವಾಳದ ಮುಕ್ತ ಚಲನೆಗೆ ಅವಕಾಶ ಇರಬೇಕೆಂಬ ‘ಆರ್ಥಿಕ ತತ್ವ’ ಪಾಲನೆಗೆ ತೊಡಕಾಗದೇ? ಈ ಬೆಳವಣಿಗೆಯನ್ನು ಉದ್ಯಮಿಗಳು ಹೇಗೆ ವಿಶ್ಲೇಷಿಸುತ್ತಾರೆ? ಹೊರ ರಾಜ್ಯಗಳ ಕಾರ್ಮಿಕರೂ ಈ ಉದ್ದಿಮೆಗಳ ಬೆಳವಣಿಗೆಯಲ್ಲಿ ಮುಖ್ಯ ಪಾಲು ಹೊಂದಿರುವುದರಿಂದ, ಹೊಸ ನೀತಿಯಿಂದ ಆಗಬಹುದಾದ ಪಲ್ಲಟಗಳೇನು?

***

ವಿಸ್ತರಿಸುತ್ತಿರುವ ಜಾಗತಿಕ ಮಾರುಕಟ್ಟೆ, ವಿದೇಶಿ ಬಂಡವಾಳದ ನೇರ ಹೂಡಿಕೆ, ಆನ್‌ಲೈನ್‌ ವಹಿವಾಟು, ಬಂಡವಾಳ ಆಕರ್ಷಣೆಗೆ ರಾಜ್ಯಗಳ ಮಧ್ಯೆ ಪೈಪೋಟಿ ಹೆಚ್ಚುತ್ತಿರುವ ಆರ್ಥಿಕ ಸ್ಥಿತ್ಯಂತರದ ಕಾಲದಲ್ಲಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಿಸುವ ‘ದಿಟ್ಟ ಹೆಜ್ಜೆ’ ಇಡಲು ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT
ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇದ್ದರಷ್ಟೇ ಸಾಲದು;  ಇಂತಹ ಹೆಜ್ಜೆಗೆ ಸಂವಿಧಾನಾತ್ಮಕ ಬಲ ಸಿಗದೇ ಹೋದರೆ ಎಂತಹ ದಿಟ್ಟ ಹೆಜ್ಜೆಯೂ ‘ಸೊಟ್ಟ ನಡೆ’ಯಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ ಎಂಬ ಅಭಿಮತ ಕಾನೂನು ಸೇರಿದಂತೆ ಹಲವು ಕ್ಷೇತ್ರಗಳ ಪರಿಣತರಿಂದ ವ್ಯಕ್ತವಾಗಿದೆ.
 
 ‘ಮಣ್ಣಿನ ಮಕ್ಕಳಿಗೆ’ ಉದ್ಯೋಗ ನೀಡಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ. ಸರೋಜಿನಿ ಮಹಿಷಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ಅಂದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ. ಆನಂತರ ಎಷ್ಟೋ ಸರ್ಕಾರಗಳು ಬಂದುಹೋಗಿವೆ, ಕಾವೇರಿ–ಕೃಷ್ಣೆಯಲ್ಲಿ ಎಷ್ಟೋ ನೀರು ಹರಿದುಹೋಗಿದೆ. ಆದರೆ, ಉದ್ಯೋಗವೆಂಬ ಮರೀಚಿಕೆಯ ಬೆನ್ನು ಹತ್ತಿ ಕನ್ನಡಿಗರು ಓಡುತ್ತಲೇ ಇದ್ದಾರೆ. ಓಟ ನಿಂತಿಲ್ಲ; ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸಿಕ್ಕಿಲ್ಲ.
 
ಕೋರ್ಟ್ ಕಟಕಟೆಯಲ್ಲಿಯೂ ಅಚಲವಾಗಿ ಉಳಿಯಬಲ್ಲ  ನಿಲುವು ತೆಗೆದುಕೊಳ್ಳದೆ, ಕೇವಲ ಮತ ಗಳಿಕೆಯ ಅಪೇಕ್ಷೆಯಿಂದ ಕೈಗೊಳ್ಳುವ ಇಂತಹ ನಿರ್ಣಯಗಳು ಬಹುಕಾಲ ಬಾಳುವುದಿಲ್ಲ, ಕಾರ್ಯಸಾಧುವಲ್ಲದ ಘೋಷಣಾತ್ಮಕ ಭರವಸೆಗಳಿಂದ ಉದ್ಯಮವನ್ನು ಕಟ್ಟಲು, ಉದ್ಯೋಗ ಕೊಡಿಸಲು ಅಸಾಧ್ಯ ಎನ್ನುತ್ತಾರೆ ಕಾನೂನು ತಜ್ಞರು. 
 
‘ಸಂವಿಧಾನದ 19ನೇ ಪರಿಚ್ಛೇದದ ಅನ್ವಯ ಯಾವುದೇ ಭಾರತೀಯ ಪ್ರಜೆಗೆ ಉದ್ಯೋಗ, ವ್ಯಾಪಾರ ಮತ್ತಿತರ ಉದ್ದೇಶಕ್ಕಾಗಿ ದೇಶದ ಗಡಿಯೊಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಚಲಿಸಲು ಅವಕಾಶವಿದೆ. ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬ ಆದೇಶ ಹೊರಡಿಸಲು ಸಾಧ್ಯವಿಲ್ಲ. ಇದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ಬಿ.ಟಿ.ವೆಂಕಟೇಶ್.
 
‘ಭೂಮಿ, ನೀರು, ವಿದ್ಯುತ್ ಎಲ್ಲವನ್ನೂ ನೀಡುತ್ತೇವೆ, ಬಂಡವಾಳ ಹೂಡಿ ಎಂಬ ಸರ್ಕಾರದ ಕೆಂಪುಹಾಸಿನ ಆಹ್ವಾನ ಮನ್ನಿಸಿ ಉದ್ಯಮಿಯೊಬ್ಬ ಇಲ್ಲಿ ಬಂಡವಾಳ ಹೂಡಿದ ಮೇಲೆ, ಕನ್ನಡಿಗರಿಗೆ ಶೇ 70ರಿಂದ 100ರಷ್ಟು ಉದ್ಯೋಗ ನೀಡಬೇಕು ಎಂಬ ಷರತ್ತು ವಿಧಿಸುವುದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಸರ್ಕಾರದ ಆದೇಶ ಬಿದ್ದುಹೋಗುತ್ತದೆ. ಹಾಗಾಗಿ ಕಾನೂನಿನ ಮೂಲಕ ಕನ್ನಡಿಗರಿಗೆ ಉದ್ಯೋಗ ಕೊಡಿಸಲಾಗದು’ ಎನ್ನುತ್ತಾರೆ ಅವರು.
 
ಕೆಲವು ರಾಜ್ಯಗಳಲ್ಲಿ  ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಆದೇಶವಿದೆ. ಆದರೆ, ಸಂಪೂರ್ಣವಾಗಿ ಅದು ಅನುಷ್ಠಾನವಾಗಿಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿಗಳು ಜಾರಿಯಾದ ಬಳಿಕ ಬಹುರಾಷ್ಟ್ರೀಯ ಕಂಪೆನಿ, ಅಂತರ್‌ದೇಶೀಯ ನಿಗಮಗಳ ಹೂಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಯಾವ ರಾಜ್ಯಗಳಲ್ಲೂ ಇಂತಹ ನಿಯಮ ಅನುಷ್ಠಾನವಾಗಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ.
 
ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಉದ್ಯೋಗಿಯಾಗುವ ಬದಲು ಉದ್ಯಮಿಯಾಗಿ’ ಎಂಬ  ಯೋಜನೆ  ಜಾರಿ ಮಾಡಲಾಗಿತ್ತು. ಆದರೆ, ಅದು ಘೋಷಣೆಯಾಗಿಯೇ ಉಳಿಯಿತು.
 
ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ  ಬಂಡವಾಳ ಹೂಡುವವರಲ್ಲಿ ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪೆನಿಗಳು ಅಥವಾ ಹೊರ ರಾಜ್ಯದ ಉದ್ಯಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರೇ ಉದ್ಯಮಿಗಳಾಗುವಂತೆ ಪ್ರೋತ್ಸಾಹಿಸಿದರೆ  ಸಹಜವಾಗಿಯೇ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.
 
ಕಲಬುರ್ಗಿ ಜಿಲ್ಲೆಯಲ್ಲಿರುವ ಸಿಮೆಂಟ್, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿರುವ ಕಬ್ಬಿಣದ ಅದಿರು ಮತ್ತು ಉಕ್ಕಿನ ಕಾರ್ಖಾನೆಗಳು ವಿದೇಶಿ  ಪಾಲುದಾರಿಕೆ ಅಥವಾ ಹೊರರಾಜ್ಯದ ಉದ್ಯಮಿಗಳ ಒಡೆತನದಲ್ಲಿವೆ. ಇಂತಹ ಉದ್ದಿಮೆಗಳಲ್ಲಿ ಕಠಿಣ ಪರಿಶ್ರಮ ಬೇಡುವ ಕೆಳಹಂತದ ಬಹುತೇಕ ಉದ್ಯೋಗಗಳಲ್ಲಿ ಬಿಹಾರ, ಉತ್ತರ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳ ಜನರೇ  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರು ಸಿಗುವುದರಿಂದ ಉತ್ತರದ ಉದ್ಯಮಿಗಳು ಅಲ್ಲಿನವರನ್ನೇ ಕರೆತರುತ್ತಾರೆ. 
 
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿನ್ನದ ಅಂಗಡಿ ತೆರೆದಿರುವ ಕಲ್ಯಾಣ್, ಮಲಬಾರ್, ಜಾಯ್‌ ಅಲುಕ್ಕಾಸ್, ಜಿಆರ್‌ಟಿ, ಲಲಿತ್‌ ಹೀಗೆ ಎಲ್ಲಾ ಅಂಗಡಿಗಳಲ್ಲಿ ಕೇರಳ ಮತ್ತು ತಮಿಳುನಾಡಿನ ಉದ್ಯೋಗಿಗಳೇ ಬಹುಸಂಖ್ಯಾತರು. ಇನ್ನು ಹೋಟೆಲ್ ಉದ್ಯಮಕ್ಕೆ ಬಂದರೆ ಆಂಧ್ರ ಪ್ರದೇಶ ಮತ್ತು ಕೇರಳದ ಹೋಟೆಲ್‌ಗಳಲ್ಲಿ ಅಲ್ಲಿನವರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಎಲ್ಲಾ ಹೋಟೆಲ್‌ಗಳಲ್ಲಿ ಈಶಾನ್ಯ ರಾಜ್ಯದವರ ಸಂಖ್ಯೆಯೂ ಹೆಚ್ಚಿದೆ. ಹೆದ್ದಾರಿ, ಜಲಾಶಯ, ನಾಲೆ, ಬೆಂಗಳೂರು ಮೆಟ್ರೊ  ಅಥವಾ ಮೂಲ ಸೌಕರ್ಯ ಕ್ಷೇತ್ರದ ಸರ್ಕಾರಿ ಗುತ್ತಿಗೆಯನ್ನು ಹಿಡಿಯುವವರು ಬಹುತೇಕರು ಆಂಧ್ರ ಅಥವಾ ತಮಿಳುನಾಡು ಮೂಲದ ದೊಡ್ಡ ಗುತ್ತಿಗೆದಾರರು. ಪರಿಶ್ರಮದ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ದುಡಿಯುವವರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದರಿಂದ ಮತ್ತು ಕೆಲಸ ನೋಡಿಕೊಳ್ಳುವ ಮೇಸ್ತ್ರಿ ಸಹಜವಾಗಿ ಆ ಭಾಗದವನೇ ಆಗಿರುವುದರಿಂದ ಕನ್ನಡಿಗರಿಗೆ ಇಲ್ಲಿಯೂ ಉದ್ಯೋಗ ಸಿಗುವುದಿಲ್ಲ. ಅಲ್ಲದೆ, ಈ ಕ್ಷೇತ್ರ ಸಂಘಟಿತ ಅಥವಾ ಉದ್ಯಮ ಎಂದು ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಸರ್ಕಾರ ತರಲಿರುವ ಹೊಸ ನಿಯಮಗಳಿಂದ ಈ ಉದ್ಯಮಕ್ಕೆ ಸಹಜವಾಗಿ ಏನೂ ಪ್ರಭಾವ ಆಗುವುದಿಲ್ಲ.
 
ಒಂದು ಕಾಲದಲ್ಲಿ ಕೇಂದ್ರ  ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ, ಎನ್‌ಜಿಇಎಫ್, ಐಟಿಐ, ವಿಐಎಸ್ಎಲ್ ಸೇರಿದಂತೆ ಅನೇಕ ಉದ್ದಿಮೆಗಳು ಪ್ರಬಲವಾಗಿದ್ದವು. ಕರ್ನಾಟಕ ಸರ್ಕಾರದ ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ಲ್ಯಾಂಪ್ಸ್, ಮೈಸೂರು ಕಾಗದ ಕಾರ್ಖಾನೆ, ಕರ್ನಾಟಕ ವಿದ್ಯುತ್‌ ಕಾರ್ಖಾನೆ ಇವೆಲ್ಲವೂ ಲಾಭದಲ್ಲಿಯೇ ಇದ್ದವು. ಈ ಎಲ್ಲಾ ಕಾರ್ಖಾನೆಗಳಲ್ಲಿ ಆಡಳಿತ ನಡೆಸುವ ಕೆಲವೇ ಐಎಎಸ್ ಅಧಿಕಾರಿಗಳು ಅಥವಾ ಆಯಕಟ್ಟಿನ ಹುದ್ದೆಗಳಲ್ಲಿ ಮಾತ್ರ ಅನ್ಯ ಭಾಷಿಕರು ಇರುತ್ತಿದ್ದರು. ಮಧ್ಯಮ ಮತ್ತು ಕೆಳಹಂತದ ಸಿಬ್ಬಂದಿಯಲ್ಲಿ ಬಹುಸಂಖ್ಯಾತರು ಕನ್ನಡಿಗರೇ ಆಗಿದ್ದರು. ಮೈಕೊ, ಕಿರ್ಲೋಸ್ಕರ್‌, ಹರಿಹರ ಪಾಲಿಫೈಬರ್ಸ್‌ನಂತಹ ಹತ್ತಾರು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರೇ ಇದ್ದರು. ಸಾರ್ವಜನಿಕ ಉದ್ದಿಮೆಗಳು ಒಂದರ ಮೇಲೊಂದು ಬಾಗಿಲು ಹಾಕಿದ್ದರಿಂದ ಕನ್ನಡಿಗರು ಕೆಲಸ ಕಳೆದುಕೊಂಡರು.
 
ಬೆಂಗಳೂರಿನ ಪೀಣ್ಯ ಮತ್ತಿತರ ಕೈಗಾರಿಕಾ ಪ್ರದೇಶಗಳಲ್ಲಿ ಬಹುಪಾಲು ಕನ್ನಡಿಗರೇ ಉದ್ದಿಮೆ ಸ್ಥಾಪಿಸಿದ್ದರು. ಸರ್ಕಾರದ ನಿಲುವು, ಭ್ರಷ್ಟಾಚಾರ, ಉದ್ದಿಮೆಗಳಿಗೆ ಪ್ರೋತ್ಸಾಹ ಸಿಗದ ವಾತಾವರಣ, ದೊಡ್ಡ ಬಂಡವಾಳಿಗರ ಹೊಡೆತವನ್ನು ತಾಳದೇ ಇವರೆಲ್ಲ ಬೇರೆಯವರಿಗೆ ಮಾರಾಟ ಮಾಡಿ ಹೊರಟೇ ಹೋದರು. ಕನ್ನಡಿಗರು ಹೆಚ್ಚಿನ ಮಾಲೀಕತ್ವ ಹೊಂದಿರುವ ಸಕ್ಕರೆ ಕಾರ್ಖಾನೆ, ಸರಕು ಸಾಗಣೆ, ಇತರೆ ಉದ್ದಿಮೆಗಳಲ್ಲಿ ಕನ್ನಡಿಗ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಸರ್ಕಾರಕ್ಕೆ ನಿಜವಾದ ಸಂಕಲ್ಪ ಇದ್ದಲ್ಲಿ ಕನ್ನಡಿಗರನ್ನು ಉದ್ಯಮಿಗಳಾಗಿಸುವತ್ತ ಪ್ರೋತ್ಸಾಹಿಸಬೇಕಾಗಿದೆ. ಗುಜರಾತ್, ಆಂಧ್ರ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳನ್ನು ನೀಡಲಾಗಿದೆ. ಆ ದಾರಿಯಲ್ಲಿ ರಾಜ್ಯ ಸರ್ಕಾರ ಸಾಗಬೇಕಾಗಿದೆ ಎನ್ನುತ್ತಾರೆ ಕನ್ನಡ ಹೋರಾಟಗಾರರು.
 
‘ವಿಶ್ವವಿಖ್ಯಾತ ವಿಮಾನ ತಯಾರಿಕೆ ಕಂಪೆನಿಗಳ ಒಳವಿನ್ಯಾಸ ಸಿದ್ಧಪಡಿಸುವ, ಆಸನಗಳನ್ನು ಪೂರೈಸುವ ಕಂಪೆನಿಯೊಂದನ್ನು ಜರ್ಮನಿಯಲ್ಲಿ ಸ್ಥಾಪಿಸಿದ್ದೇನೆ. ಕರ್ನಾಟಕದಲ್ಲಿ ಘಟಕ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಎರಡು ಬಾರಿ ಬಂದಿದ್ದೆ. ಜಾಗ ಇನ್ನೂ ಕೊಡಲಿಲ್ಲ. ಭ್ರಷ್ಟಾಚಾರ, ಯೋಜನೆಗೆ ಅನುಮತಿ ನೀಡುವಲ್ಲಿ ಆಗುವ ವಿಳಂಬದಿಂದಾಗಿ ಉದ್ಯಮ ಸ್ಥಾಪನೆಯ ಆಸಕ್ತಿಯೇ ಹೊರಟುಹೋಗಿದೆ. ‘ಉದ್ಯಮಿ ಸ್ನೇಹಿ’ಯಾಗಿ ಸರ್ಕಾರ ಕಾರ್ಯವೈಖರಿ ಬದಲಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ಕರ್ನಾಟಕ ಮೂಲದ ಉದ್ಯಮಿ ಗಿರೀಶ್.
 
‘ನೂತನ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತು ಇದೆ. ಉದ್ಯಮಿಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳುವಾಗ ಇದನ್ನು ಉಲ್ಲೇಖಿಸಲಾಗುವುದು. ಆದರೆ, ಬಂಡವಾಳ ಹೂಡಿಕೆಗೆ ಹೆಚ್ಚು ಒತ್ತು ನೀಡಿ, ಕೈಗಾರಿಕೆಗೆ ಪ್ರೋತ್ಸಾಹ ನೀಡುವುದೇ ಸರ್ಕಾರದ ಆದ್ಯತೆ. ಹೀಗಾಗಿ ಅವರು ಷರತ್ತು ಪಾಲಿಸದೇ ಇದ್ದರೂ ಕ್ರಮ ಕೈಗೊಳ್ಳಲು ಹೆಚ್ಚಿನ ಅವಕಾಶ ಇರುವುದಿಲ್ಲ. ಕನ್ನಡಿಗರಿಗೆ ಕಡ್ಡಾಯವಾಗಿ ನೀಡಬೇಕು ಎಂಬುದು ತಾತ್ವಿಕವಾಗಿ ಸರಿಯಾದರೂ, ಅದನ್ನು ಅನುಷ್ಠಾನ ಮಾಡಿಸುವುದು ಕಷ್ಟ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
 
‘ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರ್ಕಾರ ಎಷ್ಟು ಕಠಿಣವಾದ ನಿಯಮ ರೂಪಿಸುತ್ತದೆ ಎಂಬುದು ಮುಖ್ಯ. ಇಲ್ಲದೇ ಇದ್ದರೆ ಹಿಂದೆ ಬಂದಂತಹ ಅನೇಕ ಆದೇಶ, ನಿಯಮಗಳು ಕಾಗದಗಳಲ್ಲಿ ಉಳಿದಂತೆ ಇದೂ ಆಗುತ್ತದೆ. ಕೈಗಾರಿಕೆಗಳು ಲಾಭಾಂಶದಲ್ಲಿ ಇಂತಿಷ್ಟು ಪ್ರಮಾಣವನ್ನು ಸ್ಥಳೀಯರಿಗೆ ಕೊಡಬೇಕೆಂಬ ನೀತಿ ಪನಾಮ, ಈಕ್ವೆಡಾರ್‌ನಂತಹ ದೇಶಗಳಲ್ಲಿ ಜಾರಿಯಲ್ಲಿದೆ. ಅಗ್ಗದ ಕೂಲಿಗೆ ಸಿಗುತ್ತಾರೆ ಎಂದು ಎಲ್ಲಿಂದಲೋ ಕರೆತಂದು ದುಡಿಸಿಕೊಳ್ಳುವುದು ಶೋಷಣೆ. ಅದನ್ನು ನಿರ್ಬಂಧಿಸಿ ಸ್ಥಳೀಯರಿಗೆ ಉದ್ಯೋಗ ಕೊಡಿಸಲು ಅವಕಾಶವಿದೆ’ ಎನ್ನುತ್ತಾರೆ ಕನ್ನಡ ಹೋರಾಟಗಾರರೂ ಆಗಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್.
 
‘ಐ.ಟಿ– ಬಿ.ಟಿ ಉದ್ದಿಮೆಗಳು ಅಂತರರಾಷ್ಟ್ರೀಯ ಕಾನೂನಿನ ವ್ಯಾಪ್ತಿಗೆ ಒಳಪಡಲಿವೆ. ಎಲ್ಲವನ್ನೂ ಕಾನೂನಿನ ಅಸ್ತ್ರದಿಂದ ಮಣಿಸಲಾಗದು. ಸರ್ಕಾರ ಮಾತುಕತೆ ಮೂಲಕ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ದಾರಿಯನ್ನು ಆರಿಸಿಕೊಳ್ಳಬೇಕು’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ.
 
‘ಕಾನೂನು ಹೇರಿ ಉದ್ಯೋಗ ಕೊಡಿಸಲಾಗದು, ಅದರ ಬದಲು ಕನ್ನಡಿಗರಿಗೆ ಉದ್ಯೋಗ ನೀಡಿ ಎಂದು ಮನವೊಲಿಸುವುದು, ಹೆಚ್ಚಿನ ಉದ್ಯೋಗವನ್ನು ಕನ್ನಡಿಗರಿಗೆ ನೀಡಿದರೆ  ರಿಯಾಯಿತಿಯ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಉತ್ತೇಜನ ಕ್ರಮಗಳು, ಪುರಸ್ಕಾರಗಳನ್ನು ಘೋಷಿಸಬೇಕು. ಪ್ರತಿ ಉದ್ಯಮಿಯ ಜತೆಗೆ ಈ ಕುರಿತು ಚರ್ಚಿಸುವ ‘ಉದ್ಯಮಿ ಸ್ನೇಹಿ’ ಅಧಿಕಾರಿಗಳ ತಂಡ ರಚಿಸುವುದರಿಂದ ಮಾತ್ರ ಇದನ್ನು ಅನುಷ್ಠಾನ ಮಾಡಬಹುದು’ ಎನ್ನುತ್ತಾರೆ ವಕೀಲ ಬಿ.ಟಿ.ವೆಂಕಟೇಶ್.
 
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.