ADVERTISEMENT

ಮಸುಕಾದ ಸಮಾನತೆ

ಗದ್ದಲದ ರಾಜಕಾರಣ

ಎ.ಎನ್‌ ಎಮ ಇಸ್ಮಾಯಿಲ್
Published 22 ಅಕ್ಟೋಬರ್ 2016, 11:50 IST
Last Updated 22 ಅಕ್ಟೋಬರ್ 2016, 11:50 IST
ಎನ್‌.ಎ.ಎಂ.ಇಸ್ಮಾಯಿಲ್‌ ಪ್ರಜಾವಾಣಿ, ಬೆಂಗಳೂರು
ಎನ್‌.ಎ.ಎಂ.ಇಸ್ಮಾಯಿಲ್‌ ಪ್ರಜಾವಾಣಿ, ಬೆಂಗಳೂರು   

ಮಾಧ್ಯಮಗಳು ಸೃಷ್ಟಿಸುವ ಅತಿ ಎನಿಸುವ ಗದ್ದಲ ಕೆಲವು ಸಾಮಾಜಿಕ ಸಮಸ್ಯೆಗಳ ನಿಜ ಸ್ವರೂಪವನ್ನೇ ಅರಿಯದಂತೆ ಮಾಡಿಬಿಡುತ್ತದೆ. ಅಷ್ಟೇ ಅಲ್ಲ ಅದಕ್ಕಿರುವ ಸಂಭಾವ್ಯ ಪರಿಹಾರವನ್ನೂ ಕಂಡುಕೊಳ್ಳಲು ಆಗದೇ ಇರುವಂತೆ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ಈ ಕದಡಿದ ವಾತಾವರಣಕ್ಕೆ ರಾಜಕೀಯ ಲಾಭ ಪಡೆಯುವವರ ಮತ್ತು ಮತೀಯ ಮೂಲಭೂತವಾದಿಗಳ ಪ್ರವೇಶವಾದರೆ ಸಮಸ್ಯೆಯ ಸ್ವರೂಪವೇನೆಂದು ಅರಿಯುವ ಅವಕಾಶಗಳೂ ಇಲ್ಲವಾಗಿಬಿಡುತ್ತವೆ.  ಇದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಏಕರೂಪ ನಾಗರಿಕ ಸಂಹಿತೆ, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗಳ ಸಿಂಧುತ್ವದ ಕುರಿತ ಚರ್ಚೆ.

ಏಕರೂಪ ನಾಗರಿಕ ಸಂಹಿತೆ ಬೇಕು ಅಥವಾ ಬೇಡ ಎಂದು ಯಾರಾದರೂ ಹೇಳುವುದಕ್ಕೆ ಮುಖ್ಯವಾಗಿ ಬೇಕಿರುವುದು ಇಂಥದ್ದೊಂದು ಸಂಹಿತೆಯ ಕರಡು. ಕಾನೂನು ಆಯೋಗವಾಗಲೀ ಸರ್ಕಾರವಾಗಲೀ ಅದನ್ನು ರೂಪಿಸಿಲ್ಲ. ಹಾಗಿರುವುದರಿಂದ ಅದರ ಒಳಿತು, ಕೆಡುಕುಗಳ ಬಗ್ಗೆ ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಮತ–ಧರ್ಮ ಆಧಾರಿತವಾದ ವೈಯಕ್ತಿಕ ಕಾನೂನುಗಳು ಇರಬೇಕೋ ಬೇಡವೋ ಎಂಬುದು ಮತ್ತೊಂದು ಚರ್ಚೆ.

ಸಂವಿಧಾನವನ್ನು ರೂಪಿಸಿದವರು ಈ ಬಗೆಯ ಕಾನೂನಿನ ಬಹುತ್ವ ಅಗತ್ಯ ಎಂದು ಭಾವಿಸಿದ್ದರು. ಆದರೆ ಏಕರೂಪ ನಾಗರಿಕ ಸಂಹಿತೆ ರೂಪುಗೊಳ್ಳಬೇಕೆಂಬ ದೂರಗಾಮಿ ಗುರಿಯಿಟ್ಟುಕೊಂಡಿದ್ದರು. ಇಲ್ಲೊಂದು ಸೂಕ್ಷ್ಮ ವಿಚಾರವಿದೆ. ಸಂವಿಧಾನ ನಿರ್ಮಾಪಕರು ‘ಏಕರೂಪ’ ನಾಗರಿಕ ಸಂಹಿತೆ ಎಂದರೇ ಹೊರತು ‘ಸಮಾನ’ ನಾಗರಿಕ ಸಂಹಿತೆ ಎನ್ನಲಿಲ್ಲ. ಈ ಪದ ಪ್ರಯೋಗವೇ ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಹೇಳುತ್ತದೆ.

‘ಸಮಾನ’ವಾಗಿರುವ ನಾಗರಿಕ ಸಂಹಿತೆ ಎಂಬುದು ಯಾವುದೇ ವೈವಿಧ್ಯವನ್ನು ಗುರುತಿಸದೇ ಅನ್ವಯವಾಗುವ ಕಾನೂನು. ‘ಏಕರೂಪ’ ಎಂದರೆ ಒಂದೇ ಬಗೆಯ ಸಂದರ್ಭಗಳಲ್ಲಿ ಅನ್ವಯವಾಗುವ ಕಾನೂನು. ಈ ವ್ಯತ್ಯಾಸ ಗುರುತಿಸಿಕೊಂಡು ಮುಂದುವರಿದರೆ ಇಂದು ನಾಗರಿಕ ಸಂಹಿತೆ ಕುರಿತ ಅನೇಕ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಮತ–ಧರ್ಮದ ಆಚರಣೆಗೆ ಸಂವಿಧಾನ ನೀಡಿರುವ ಸ್ವಾತಂತ್ರ್ಯವನ್ನು ಉಲ್ಲಂಘಿಸದೆಯೇ ಲಿಂಗ ಸಮಾನತೆಯಂಥ ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡ ನಾಗರಿಕ ಸಂಹಿತೆಯೊಂದನ್ನು ರೂಪಿಸಲು ಸಾಧ್ಯವಿದೆ. ಆದರೆ ಈಗ ನಡೆಯುತ್ತಿರುವ ಚರ್ಚೆ ಇಂಥ ಯಾವುದೇ ಸೂಕ್ಷ್ಮಗಳನ್ನು ಪರಿಗಣಿಸುತ್ತಲೇ ಇಲ್ಲ.

ಅದು ಎಷ್ಟರ ಮಟ್ಟಿಗೆಂದರೆ ಭಾರತದಲ್ಲಿ ಮದುವೆ ಮತ್ತು ಆಸ್ತಿಯ ಉತ್ತರಾಧಿಕಾರ ನಿರ್ಣಯಿಸುವುದಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನಿನಂತೆಯೇ ಹಿಂದೂಗಳಿಗೂ (ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದಂತೆ) ಕ್ರೈಸ್ತರಿಗೂ ಭಿನ್ನವಾದ ಕಾನೂನುಗಳಿವೆ. ಪಾರ್ಸಿ ಮದುವೆಗಳಿಗೆ ಸಂಬಂಧಿಸಿದ ಕಾಯ್ದೆಯೂ ಇದೆ. ಈ ಎಲ್ಲಾ ಕಾನೂನುಗಳಲ್ಲಿಯೂ ಅವುಗಳದ್ದೇ ಆದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿವೆ.

ADVERTISEMENT

ಲಿಂಗಾಧಾರಿತ ಅಸಮಾನತೆ ಈ ಎಲ್ಲಾ ಕಾನೂನುಗಳಲ್ಲಿಯೂ ಬೇರೆ ಬೇರೆ ರೀತಿಯಲ್ಲಿದೆ. ಆಧುನಿಕ ಲಿಂಗ ಸಮಾನತೆ ಪರಿಕಲ್ಪನೆಗೆ ಅನುಗುಣವಾಗಿ ಇವುಗಳೆಲ್ಲವನ್ನೂ ಸುಧಾರಿಸುವ ಅಗತ್ಯವೂ ಇದೆ. ಆದರೆ ಈಗಿನ ಗದ್ದಲದಲ್ಲಿ ಇಂಥದ್ದೊಂದು ತರ್ಕಬದ್ಧವಾದ ಸಮಸ್ಯೆಯ ಪರಿಹಾರದತ್ತ ಕೊಂಡೊಯ್ಯಬಹುದಾದ ಸಾಧ್ಯತೆಗಳೇ ಮಂಕಾಗಿಬಿಟ್ಟಿವೆ.

‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಎಂಬ ಸಂಘಟನೆಯೊಂದು ತಾನು ಮುಸ್ಲಿಮರ ಪ್ರತಿನಿಧಿಯೆಂದು ಘೋಷಿಸಿಕೊಂಡು ಬಿಟ್ಟಿದೆ. ಸರ್ಕಾರದಿಂದ ಆರಂಭಿಸಿ ಮಾಧ್ಯಮಗಳ ತನಕ ಈ ಸಂಘಟನೆ ಹೇಳುವ ಮಾತುಗಳನ್ನೇ ಆಲಿಸುತ್ತಿರುವುದರಿಂದ, ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗಳಿಗೆ ಸಂಬಂಧಿಸಿದಂತೆ ಇರುವ ಭಿನ್ನ ಧ್ವನಿಗಳು ಎಲ್ಲಿಯೂ ಕೇಳಿಬರುತ್ತಿಲ್ಲ. ಅಷ್ಟೇಕೆ 2002ರಲ್ಲಿ ಉತ್ತರ ಪ್ರದೇಶದ ಶಮೀಮ್ ಅರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಹುಮುಖ್ಯವಾದ ತೀರ್ಪೊಂದನ್ನು ನೀಡಿ, ಒಂದೇ ಉಸಿರಿನಲ್ಲಿ ನೀಡುವ ಮೂರು ತಲಾಖ್‌ಗಳು ಮಾನ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಪ್ರತೀ ತಲಾಖ್‌್‌ನ ಮಧ್ಯೆ ಸಂಧಾನದ ಅವಧಿಯೊಂದಿರಬೇಕು ಎಂಬುದನ್ನು ಮಾನ್ಯ ಮಾಡಿತ್ತು. ಈ ತೀರ್ಪನ್ನು ಉಪಯೋಗಿಸಿಕೊಂಡು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಮುಸ್ಲಿಂ ಮಹಿಳೆಯರು ದಾವೆ ಹೂಡಿ ತಮ್ಮ ಹಕ್ಕನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ತೀರ್ಪಿನ ಕುರಿತು ಮಾಧ್ಯಮಗಳಾದಿಯಾಗಿ ಯಾರೂ ಮಾತನಾಡುವುದಿಲ್ಲ.

ಸುನ್ನಿ ಇಸ್ಲಾಮಿನ ನಾಲ್ಕು ನ್ಯಾಯಶಾಸ್ತ್ರ ವಿಭಾಗಗಳಿವೆ. ಅವುಗಳನ್ನು ಹನಫಿ, ಶಾಫಿ, ಹಂಬಲಿ, ಮಾಲಿಕಿ ಎಂದು ಗುರುತಿಸುತ್ತಾರೆ. ಹನಫಿ ವಿಭಾಗ  ಹೊರತುಪಡಿಸಿದರೆ ಉಳಿದ ಮೂರೂ ವಿಭಾಗಗಳೂ ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗಳನ್ನು ಮಾನ್ಯ ಮಾಡುವುದಿಲ್ಲ. ಒಬ್ಬಾತ ತನ್ನ ಪತ್ನಿಯನ್ನು ತ್ಯಜಿಸಬೇಕೆಂದು ತೀರ್ಮಾನಿಸಿದರೆ ಆಕೆಯ ಋತುಚಕ್ರದ ದಿನಗಳನ್ನು ಹೊರತುಪಡಿಸಿದ ದಿನದಂದು ಮೊದಲ ತಲಾಖ್‌ ಹೇಳಬೇಕು. ನಂತರ ಒಂದು ಋತುಚಕ್ರದ ಅವಧಿ ಮುಗಿದ ಮೇಲೆ ಮತ್ತೊಂದನ್ನು ಹೇಳಬೇಕು. ಈ ಅವಧಿಯಲ್ಲಿ ಸಂಧಾನದ ಪ್ರಯತ್ನಗಳು ನಡೆಯಬೇಕು. ಇವ್ಯಾವೂ ಯಶಸ್ವಿಯಾಗದಿದ್ದಲ್ಲಿ ಮೂರನೇ ತಲಾಖ್‌ ಹೇಳಬಹುದು. ಆಗ ಮದುವೆ ಸಂಬಂಧ ಕೊನೆಗೊಳ್ಳುತ್ತದೆ. ಹನಫಿ ವಿಭಾಗ ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗಳನ್ನು  ಮಾನ್ಯ ಮಾಡುತ್ತದೆ.

ಒಬ್ಬಾತ ಮೂರು ತಲಾಖ್‌ ಹೇಳಿದ್ದರೂ ತನ್ನದು ಒಂದೇ ತಲಾಖ್‌ನ ಸಂಕಲ್ಪವಾಗಿತ್ತು ಎಂದರೆ ಅದನ್ನೂ ಮಾನ್ಯ ಮಾಡುತ್ತದೆ. ಈ ನಿಲುವಿನ ಹಿಂದೆ ಕೆಲವು ಗ್ರಹೀತಗಳಿವೆ. ಹೀಗೆ ಮಾಡುವುದರಿಂದ ತಲಾಖ್‌ನ ದುರ್ಬಳಕೆ ತಪ್ಪಿಸಬಹುದು ಎಂಬುದು ಮುಖ್ಯವಾದುದು. ಇದು ಪುರುಷನಿಗೆ ಮರು ಮದುವೆ ಕಷ್ಟ ಎಂಬ ಗ್ರಹೀತವನ್ನು ಆಧಾರವಾಗಿಟ್ಟುಕೊಂಡಿದೆ. ಇಸ್ಲಾಮಿ ನ್ಯಾಯಶಾಸ್ತ್ರವನ್ನು ಪೂರ್ಣವಾಗಿ ಅಳವಡಿಸಿಕೊಂಡಿರುವ ದೇಶಗಳಲ್ಲಿ ತಲಾಖ್‌ ನಂತರ ಮಹಿಳೆಗೆ ನೀಡಬೇಕಾಗಿರುವ ಪರಿಹಾರದ ಪ್ರಮಾಣ ದೊಡ್ಡದು.

ತಲಾಖ್‌ನ ಪರಿಣಾಮ ಎದುರಿಸುವುದಕ್ಕೆ ಮಹಿಳೆಗಿಂತ ಪುರುಷನಿಗೇ ಕಷ್ಟ. ಆದರೆ ಭಾರತದ ಪರಿಸ್ಥಿತಿ ಭಿನ್ನ. ಇಲ್ಲಿ ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗನ್ನು ಮಹಿಳೆಯನ್ನು ರಾತ್ರೋರಾತ್ರಿ ಮನೆ ಮಠ ಇಲ್ಲದಂತೆ ಮಾಡಿಬಿಡುತ್ತವೆ. ಹೀಗಾಗಿ ಈ ಬಗೆಯ ತಲಾಖ್‌ ಅಸಿಂಧುಗೊಳಿಸಬೇಕಾದ ಅಗತ್ಯವಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಭಾರತದಲ್ಲಿರುವ ಮುಸ್ಲಿಂ ವೈಯಕ್ತಿಕ ಕಾನೂನು ಕುರ್‌ಆನ್ ಅಥವಾ ಹದೀಸ್‌ಗಳನ್ನು ಎಷ್ಟರ ಮಟ್ಟಿಗೆ ಆಧಾರವಾಗಿಟ್ಟುಕೊಂಡಿದೆ ಎಂಬುದೇ ಪ್ರಶ್ನಾರ್ಹ. 1937ರಲ್ಲಿ ಬ್ರಿಟಿಷ್ ಆಡಳಿತಾವಧಿಯಲ್ಲಿ ಬಂದಿರುವ ಈ ಕಾನೂನನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ತಥಾಕಥಿತ ಮುಸ್ಲಿಂ ಸಂಘಟನೆಗಳು ವಾದಿಸುತ್ತಿರುವುದೇ ಒಂದು ತಮಾಷೆ ಸಂಗತಿ. ತನ್ನಷ್ಟಕ್ಕೆ ತಾನೇ ಮುಸ್ಲಿಮರ ಪ್ರತಿನಿಧಿ ಎಂದು ಘೋಷಿಸಿಕೊಂಡಿರುವ ಅಖಿಲ ಭಾರತ ಮುಸ್ಲಿಮ್‌ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕೆಲ ವರ್ಷಗಳ ಹಿಂದೆ ವೈಯಕ್ತಿಕ ಕಾನೂನನ್ನು ಇಸ್ಲಾಮಿ ನ್ಯಾಯಶಾಸ್ತ್ರದ ನಿಜವಾದ ಅರ್ಥದಲ್ಲಿ ಪುನರ್ ರೂಪಿಸುತ್ತೇನೆ ಎಂದು ಹೇಳಿಕೊಂಡಿತ್ತು. ಆದರೆ ಈ ತನಕ ಅದು ಸಂಭವಿಸಿಲ್ಲ. ಏಕೆಂದರೆ ಎಲ್ಲಾ ಮುಸ್ಲಿಮರ ಎಲ್ಲಾ ವಿಭಾಗಗಳೂ ಒಪ್ಪುವ ಒಂದು ಕರಡು ರೂಪಿಸುವುದಕ್ಕೆ ಈ ಸಂಘಟನೆಗೆ ಸಾಧ್ಯವಿಲ್ಲ. ಶಿಯಾ ಮುಸ್ಲಿಮರಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನು ಮಂಡಳಿಯೊಂದು ಬೇರೆಯೇ ಇದೆ. ಹಾಗೇ  ಇತ್ತೀಚೆಗೆ ಮಹಿಳೆಯರು ಮತ್ತೊಂದು ವೈಯಕ್ತಿಕ ಕಾನೂನು ಮಂಡಳಿ ರಚಿಸಿಕೊಂಡಿದ್ದಾರೆ. ಇದು ಸರ್ಕಾರದಿಂದ ತೊಡಗಿ ಮಾಧ್ಯಮಗಳ ತನಕ ಮಾನ್ಯ ಮಾಡಿರುವ ಎಐಎಂಪಿಎಲ್‌ಬಿ ಮುಸ್ಲಿಮರ ಪ್ರಾತಿನಿಧಿಕ ಸಂಘಟನೆಯೇ ಅಲ್ಲ. ಹಾಗಾಗಿ ಈ ಸಂಘಟನೆ ನ್ಯಾಯಾಲಯದ ಮುಂದಿಟ್ಟಿರುವ ವಾದಗಳನ್ನು ನಿರ್ದಿಷ್ಟ ಸಂಘಟನೆಯೊಂದರ ವಾದವೆಂದು ಪರಿಗಣಿಸಬೇಕೇ ಹೊರತು ಇಡೀ ಮುಸ್ಲಿಮ್ ಸಮುದಾಯ ಅದರ ಪರವೆಂಬ ಪೂರ್ವಗ್ರಹದೊಂದಿಗೆ ಚರ್ಚಿಸುವುದು ಅರ್ಥಹೀನ.

ಇನ್ನು ಭಾರತದಲ್ಲಿರುವ ಮತ–ಧರ್ಮ ಆಧಾರಿತ ವೈಯಕ್ತಿಕ ಕಾನೂನುಗಳೆಲ್ಲವೂ ನಿರ್ದಿಷ್ಟ ಚೌಕಟ್ಟಿನೊಳಗಷ್ಟೇ ಅನ್ವಯಕ್ಕೆ ಒಳಪಡುತ್ತವೆ. ಅಂದರೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ), ಭಾರತೀಯ ದಂಡ ಸಂಹಿತೆ ಮುಂತಾದುವನ್ನು ಈ ಕಾನೂನು ಅಮಾನ್ಯಗೊಳಿಸುವುದಿಲ್ಲ. ಶಾಬಾನೋ ಪ್ರಕರಣದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸಿಆರ್‌ಪಿಸಿಯ ನಿರ್ದಿಷ್ಟ ನಿಯಮವೊಂದರಿಂದ ಮುಸ್ಲಿಂ ವೈಯಕ್ತಿಕ ಕಾನೂನನ್ನು ಹೊರಗಿಡುವಂಥ ಕಾನೂನೊಂದನ್ನು ರೂಪಿಸಿತ್ತು. ವೈಯಕ್ತಿಕ ಕಾನೂನುಗಳ ಕುರಿತ ಚರ್ಚೆ ಮುಸ್ಲಿಂ ವಿವಾಹ ವಿಚ್ಛೇದನ ಸುತ್ತಲೇ ನಡೆಯುವುದಕ್ಕೆ ಇದೂ ಒಂದು ಕಾರಣ. ಈ ತಪ್ಪನ್ನು ಸಂವಿಧಾನದ ನಿರೂಪಕರು ಮುಂಗಾಣ್ಕೆಯಾಗಿ ನೀಡಿದ ‘ಏಕರೂಪ’ ನಾಗರಿಕ ಸಂಹಿತೆಯ ಬೆಳಕಿನಲ್ಲಿ ಸರಿಪಡಿಸುವುದಕ್ಕೆ ಬೇಕಿರುವ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ.

ವೈಯಕ್ತಿಕ ಕಾನೂನುಗಳು ದೇಶವ್ಯಾಪಿಯಾಗಿ ಸಮಾನವಾಗಿಯೂ ಇಲ್ಲ ಎಂಬ ಅಂಶವನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ಗೋವಾದಲ್ಲಿರುವ ಹಿಂದೂಗಳಿಗೆ ಸುಧಾರಿತ ಹಿಂದೂ ಕಾನೂನು ಅನ್ವಯಿಸುವುದಿಲ್ಲ. ಅವರಿನ್ನೂ ಪೋರ್ಚುಗೀಸರ ಕಾಲದಲ್ಲಿ ರೂಪಿಸಿದ ಅನೇಕ ಕೊರತೆಗಳಿರುವ ಹಿಂದೂ ಕಾನೂನಿನ ಪ್ರಕಾರವೇ ಮದುವೆ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದ ವಿವಾದಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಅಲ್ಲಿನ ಮುಸ್ಲಿಮರ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. 1937ರ ವೈಯಕ್ತಿಕ ಕಾನೂನುಗಳು ಅವರಿಗೆ ಅನ್ವಯವಾಗುವುದಿಲ್ಲ. ಅಷ್ಟೇಕೆ ಅತ್ಯಂತ ಜಾತ್ಯತೀತವಾದ ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆಗೆ ಹತ್ತಿರವಾಗಿರುವ ‘ವಿಶೇಷ ವಿವಾಹಗಳ ಕಾಯ್ದೆ’ಯ ಸವಲತ್ತೂ ಗೋವಾದ ನಾಗರಿಕರಿಗೆ ಇಲ್ಲ. ಕಾಶ್ಮೀರದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಅವಕಾಶವಿಲ್ಲ. ಇಲ್ಲಿನ ಹಿಂದೂ ಕಾನೂನು ಕೂಡ ಕೇಂದ್ರ ಸರ್ಕಾರ ರೂಪಿಸಿದ ಕಾನೂನುಗಳನ್ನು ಹೋಲುವುದಿಲ್ಲ.

ವೈಯಕ್ತಿಕ ಕಾನೂನುಗಳನ್ನು ಸಮಗ್ರವಾಗಿ ಸುಧಾರಣೆಗೆ ಒಳಪಡಿಸುವ ಚರ್ಚೆಯೊಂದು ಈ ಎಲ್ಲಾ ಸಮಸ್ಯೆಗಳನ್ನು ಒಳಗೊಂಡು ನಡೆಯಬೇಕಾಗಿತ್ತು. ಆದರೆ ಆಡಳಿತಾರೂಢ ಬಿಜೆಪಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ವೈಯಕ್ತಿಕ ಕಾನೂನನ್ನು ಕೇಂದ್ರವಾಗಿಟ್ಟುಕೊಂಡ ಚರ್ಚೆಯೊಂದನ್ನು ಆರಂಭಿಸಿದೆ. ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆಯೊಂದರ ಕರಡನ್ನೂ ರೂಪಿಸದೆ ಕೆಲವು ಅಸ್ಪಷ್ಟ ಪ್ರಶ್ನೆಗಳನ್ನು ಕೇಳುವ ಮೂಲಕ ಚರ್ಚೆಯ ಹಾದಿ ತಪ್ಪಲು ಕಾರಣವಾಗಿದೆ ಎಂದು ಇಲ್ಲಿ ಹೇಳಲೇಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.