ADVERTISEMENT

ಮೇಕೆದಾಟು: ಪಟ್ಟು -ಪ್ರತಿಪಟ್ಟು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ವಿರೋಧಿಸುವ ಪ್ರಶ್ನೆ ಇಲ್ಲ


ಮೇಕೆದಾಟು ಯೋಜನೆಗೆ ಅರಣ್ಯ ಅಧಿ­ಕಾರಿ­ಗಳ ವಿರೋಧ­ವಿದೆ ಎಂಬುದು ಬರೇ ಊಹಾ­ಪೋಹ. ಪರ– ವಿರೋಧ ಮಾತ­ನಾಡಲು ಯೋಜನೆಯ ನಕ್ಷೆ ನಮ್ಮ ಕೈಗೆ ಬಂದಿಲ್ಲ. ಇಲ್ಲಿ ಅಧಿಕಾರಿಗಳು ವಿರೋಧಿಸುವ ಪ್ರಶ್ನೆಯೇ ಬರುವುದಿಲ್ಲ. ಯಾಕೆಂದರೆ ನಾವು ಸರ್ಕಾರದ ಭಾಗವೇ ಆಗಿದ್ದೇವೆ.
–ವಿನಯ್‌ ಲೂಥ್ರಾ, ರಾಜ್ಯ ವನ್ಯಜೀವಿ ವಾರ್ಡನ್‌




ಕಾಲಮಿತಿ ಬೇಕು


ಮೇಕೆದಾಟು ಯೋಜನೆ  ಹಲ­ವಾರು ವರ್ಷಗಳ ಬೇಡಿಕೆ. ಹೆಚ್ಚು­ವರಿ ನೀರು ಬಳಸಿ­ಕೊಳ್ಳು­ವುದು ರಾಜ್ಯದ ಹಕ್ಕು. ಇದನ್ನು ಕೇಂದ್ರ ಹಾಗೂ ನ್ಯಾಯಾ­ಲಯಕ್ಕೆ ಮನವರಿಕೆ ಮಾಡಿ­ಕೊಡ­ಬೇಕು. ರಾಜ್ಯ ಸರ್ಕಾರ ಕಾಲಮಿತಿ ನಿಗದಿ ಮಾಡಿ­ಕೊಂಡು ಯೋಜನೆ ಜಾರಿಗೊಳಿಸಬೇಕು.
–ಕೋಣಸಾಲೆ ನರಸರಾಜು, ರಾಜ್ಯ ಉಪಾಧ್ಯಕ್ಷರು, ರೈತ ಸಂಘ, ಮಂಡ್ಯ


ADVERTISEMENT

ಜೀವ ವೈವಿಧ್ಯಕ್ಕೆ ಧಕ್ಕೆ ಆಗದಿರಲಿ
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮೇಕೆದಾಟು ಯೋಜನೆ ತುರ್ತಾಗಿ ಆಗಬೇಕು. ಮೇಕೆದಾಟು, ಸಂಗಮ ವ್ಯಾಪ್ತಿಯಲ್ಲಿ ಅಪಾರ ಅರಣ್ಯ ಸಂಪತ್ತು, ಜೀವ ವೈವಿಧ್ಯ ಇದೆ. ಇವುಗಳಿಗೆ ಧಕ್ಕೆ ಆಗದಂತೆ ಅಣೆಕಟ್ಟು ನಿರ್ಮಿಸಬೇಕು. ಯೋಜನೆಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಕಾನೂನಿನ ಪ್ರಕಾರ ಅರಣ್ಯ ಇಲಾಖೆಗೆ ಬೇರೆಡೆ ಅಷ್ಟು ಜಾಗವನ್ನು ನೀಡಲು ಅವಕಾಶ ಇದೆ. ಅಲ್ಲದೆ ನದಿಯ ಒಳಹರಿವು ಗುರುತಿಸಿ ಅಣೆಕಟ್ಟೆ ನಿರ್ಮಿಸಿದರೆ ಅಷ್ಟು ಅರಣ್ಯ ಮುಳುಗಡೆ ಆಗದು.
-ಬಿ. ಅನಸೂಯಮ್ಮ, ರಾಜ್ಯ ರೈತ ಸಂಘದ ಉಪಾಧ್ಯಕ್ಷೆ, ಚನ್ನಪಟ್ಟಣ
 

ಅನಗತ್ಯ ವಿರೋಧ ಬೇಡ


ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವುದು ಅವಶ್ಯ. ಇಲ್ಲದಿದ್ದರೆ  ಎರಡೂ ರಾಜ್ಯಗಳಿಗೆ ಉಪಯೋಗವಾಗದೇ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಹೆಚ್ಚುವರಿ ನೀರು ಬಳಸಿ­­ಕೊಳ್ಳಲು ಅಣೆಕಟ್ಟು ನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ತಮಿಳುನಾಡು ವಿರೋಧಿಸುವುದು ಸರಿಯಲ್ಲ. ಇಬ್ಬರೂ ಮುಖ್ಯಮಂತ್ರಿಗಳು ಈ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸಬೇಕು.
-ಕೆ.ಎಸ್‌.ಪುಟ್ಟಣ್ಣಯ್ಯ, ರೈತ ಮುಖಂಡರು, ಶಾಸಕರು
 

ಪರ್ಯಾಯ ಯೋಜನೆಗಳತ್ತ ಯೋಚಿಸಿ
ಮೇಕೆದಾಟು ಯೋಜನೆಯಿಂದ ಪರಿಸರ, ಕಾಡು, ಜೀವ ವೈವಿಧ್ಯ ನಾಶವಾಗುತ್ತದೆ. ತಮಿಳುನಾಡಿನಿಂದ ಕಾನೂನು ಹೋರಾಟವನ್ನೂ ಎದುರಿಸಬೇಕಾಗುತ್ತದೆ. ಇದಕ್ಕೆ ಕಾವೇರಿ ನ್ಯಾಯಮಂಡಳಿ, ಕೇಂದ್ರದಿಂದ ಅನುಮತಿ ಪಡೆಯಬೇಕಿದೆ. ಹೀಗಾಗಿ ಯೋಜನೆ ಕಾರ್ಯ­ಸಾಧುವಲ್ಲ. ಇದಕ್ಕೆ ಪರ್ಯಾಯವಾಗಿ ಕಾನೂನು ತೊಂದರೆ ಆಗದಂತೆ ಕೆ.ಆರ್.ಎಸ್‌.­ನಿಂದ ಮಾರ್ಕೋನಹಳ್ಳಿ  ಜಲಾಶಯಕ್ಕೆ (60 ಕಿ.ಮೀ. ಅಂತರ) ನೀರು ಹರಿಸಿ, ಅಲ್ಲಿಂದ ಗುರುತ್ವಾಕರ್ಷಣೆ ಶಕ್ತಿಯಿಂದ, ವಿವಾದಾತ್ಮಕ ಆಗದಂತೆ ಕಾವೇರಿ ನೀರು ಬಳಸಲು ಸಾಧ್ಯವಿದೆ. ಈ ಸಂಬಂಧ ಡಾ. ಬೆಳ್ಳೂರು ಕೃಷ್ಣ (ತೋಟಗಾರಿಕಾ ಅಧಿಕಾರಿ) ಅವರು ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು. ಅಲ್ಲದೆ ಹೇಮಾವತಿ ನದಿಯ ಗೊರೂರು ಅಣೆಕಟ್ಟೆಯಿಂದ ತುಂಬಿ ಹರಿಯುವ ನೀರಿನ ಸದ್ಬಳಕೆ ಆಗುತ್ತಿಲ್ಲ. ಹೇಮಾವತಿ ಕಾಲುವೆ ವಿಸ್ತರಿಸಿ ಏತ ನೀರಾವರಿ ಯೋಜನೆ ಮೂಲಕ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬಹುದು. ಇದರಿಂದ ಯಾವುದೇ ವಿವಾದ, ಅಂತರ ರಾಜ್ಯ ಹೋರಾಟ ಉಂಟಾಗದು.
-ಎಂ.ಶಿವನಂಜಯ್ಯ, ಪರಿಸರವಾದಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.