ADVERTISEMENT

ಶೀಘ್ರ ಹೊಸ ಮಾರ್ಗಸೂಚಿ

ಟ್ಯಾಕ್ಸಿ ಸೇವೆ ಆತಂಕ ತರವೇ?

ಪ್ರಜಾವಾಣಿ ವಿಶೇಷ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ದೆಹಲಿ ಅತ್ಯಾಚಾರ ಘಟನೆಯ ಬಳಿಕ, ಟ್ಯಾಕ್ಸಿ ಸೇವೆ ಒದಗಿಸು­ತ್ತಿ­ರುವ ಕಂಪೆನಿಗಳ ಮೇಲೆ ರಾಜ್ಯದಲ್ಲೂ ನಿಗಾ ಇಡಲಾ­ಗುತ್ತಿದೆ. ಕೆಲವು ದಿನಗಳಿಂದ ಈಚೆಗೆ ಹಲವು ಕಂಪೆನಿಗಳ ಕಚೇರಿ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಪ್ರಯಾಣಿಕರ ಸುರಕ್ಷತಾ ನಿಯಮಗಳನ್ನು ಪಾಲಿಸದ ಕೆಲವು ಕಂಪೆನಿಗಳ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ಕ್ರಮದ ಬಗ್ಗೆ ಪರ–ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಕುರಿತು ಇಲಾಖೆಯ ಆಯುಕ್ತ ಡಾ. ರಾಮೇಗೌಡ ಅವರ ಸಂದರ್ಶನ ಇಲ್ಲಿದೆ...

* ಒಬ್ಬ ಟ್ಯಾಕ್ಸಿ ಚಾಲಕ ತಪ್ಪು ಮಾಡಿದರೆ ಇಡೀ ಕಂಪೆನಿಯ  ಟ್ಯಾಕ್ಸಿ ಸೇವೆ ನಿಷೇಧಿಸುವುದು ಸರಿಯೆ?
ನಮ್ಮ ರಾಜ್ಯದಲ್ಲಿ ಯಾವುದೇ ಸಂಸ್ಥೆಯ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಿಲ್ಲ. ಪ್ರಯಾಣಿಕರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ನಿಯಮದ ಪ್ರಕಾರ ನೋಂದಣಿ ಮಾಡಿಸದ ಸಂಸ್ಥೆಗಳ ಸೇವೆಯ ಸ್ಥಗಿತಕ್ಕೆ ಆದೇಶಿಸಲಾಗುತ್ತಿದೆ. ಈವರೆಗೆ ‘ಉಬರ್’, ‘ಟ್ಯಾಕ್ಸಿ ಫಾರ್ ಶೂರ್’, ‘ಝೂಮ್’ ಸೇರಿದಂತೆ ಕೆಲವು ಸಂಸ್ಥೆಗಳ ಸೇವೆಯನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಕಾನೂನಿನ ಪ್ರಕಾರ ನೋಂದಣಿ ಮಾಡಿಸಿಕೊಂಡರೆ ಈ ಕಂಪೆನಿಗಳಿಗೂ ಪುನಃ ಟ್ಯಾಕ್ಸಿ ಸೇವೆ ಒದಗಿಸಲು ಅವಕಾಶ ದೊರೆಯುತ್ತದೆ.

* ಟ್ಯಾಕ್ಸಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಯಾವುದಾದರೂ ಸೂಚನೆ ನೀಡಿದೆಯೆ?
ದೆಹಲಿ ಘಟನೆ ಬಳಿಕ ಎಲ್ಲ ರಾಜ್ಯಗಳಿಗೂ ಸುತ್ತೋಲೆ ರವಾನಿಸಿರುವ ಕೇಂದ್ರ ಸರ್ಕಾರ, ಬಿಗಿ ಕ್ರಮ ಅನುಸರಿಸುವಂತೆ ಸೂಚಿಸಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.

* ಕೆಲವು ಕಂಪೆನಿಗಳ ಟ್ಯಾಕ್ಸಿ ಸೇವೆ ಸ್ಥಗಿತದಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂಬ ಆರೋಪಗಳಿವೆಯಲ್ಲಾ?
ಟ್ಯಾಕ್ಸಿ ಸೇವೆ ಒದಗಿಸುವವರು ನಿಯಮದ ಪ್ರಕಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.  ಆ ಬಳಿಕ ‘ಸಿಟಿ ಟ್ಯಾಕ್ಸಿ ಸೇವಾ ಯೋಜನೆ–1998’ರ ಮಾರ್ಗ­ಸೂಚಿ ಪಾಲಿಸುವುದು ಕಡ್ಡಾಯ. ಆದರೆ, ಕೆಲವು ಕಂಪೆನಿ­ಗಳು ನೋಂದಣಿ ಇಲ್ಲದೆ ಕೆಲಸ ಮಾಡುತ್ತಿವೆ. ಒಂದು ‘ಆ್ಯಪ್’ ಸಿದ್ಧ­ಪಡಿಸಿಕೊಂಡು ಸೇವೆ ಒದಗಿಸುತ್ತಿವೆ. ಆ ಕಂಪೆನಿಗೆ ಸೇರಿ­ಕೊಳ್ಳುವ ವಾಹನ ಮಾಲೀಕರು ಯಾರು, ಅವರ ಹಿನ್ನೆಲೆ, ವಾಹನದ ವಿವರ ಏನು ಯಾವುದನ್ನೂ ಸರಿಯಾಗಿ ಗಮನಿಸುವುದಿಲ್ಲ. ಒಂದು ರೀತಿ ಕಮಿಷನ್ ಏಜೆಂಟರಂತೆ ಕೆಲಸ ಮಾಡುತ್ತವೆ. ಇಲಾಖೆಯ ವ್ಯಾಪ್ತಿಯಲ್ಲಿ ಈ ಕಂಪೆನಿಗಳಿಗೆ ಹೊಣೆಗಾರಿಕೆಯೇ ಇರುವುದಿಲ್ಲ. ಅವುಗಳ ಹೊಣೆಗಾರಿಕೆ ನಿಗದಿ ಮಾಡುವುದ­ಕ್ಕಾಗಿಯೇ ಈ ಕ್ರಮ.

* ಅಕ್ರಮವಾಗಿ ಕೆಲವು ಕಂಪೆನಿಗಳು ಸೇವೆ ಒದಗಿಸುತ್ತಿದ್ದುದು ಈವರೆಗೆ ತಿಳಿದಿರಲಿಲ್ಲವೇ?
ಟ್ಯಾಕ್ಸಿ ಸೇವಾ ಕಂಪೆನಿಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಾರಿಗೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯಾವುದೋ ಒಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡಿರಬಹುದು ಎಂದು ಪರಿಶೀಲನೆ ನಡೆಸಿರಲಿಲ್ಲ. ಇಂತಹ ಸಂಸ್ಥೆಗಳ ಕುರಿತು ಪೊಲೀಸ್ ಇಲಾಖೆಯಲ್ಲೂ ಸರಿಯಾದ ಮಾಹಿತಿ ಇಲ್ಲ.

* ಟ್ಯಾಕ್ಸಿ ಸೇವೆ ವಂಚನೆಯಲ್ಲಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದರೆ?
ಆ ರೀತಿ ಯಾವುದೇ ಮಾಹಿತಿ ಇಲ್ಲ. ಅಂತಹ ಸಾಧ್ಯತೆಗಳಿದ್ದರೆ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.

* ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ರಚಿಸುವ ಇರಾದೆ ಇದೆಯೆ?
ಟ್ಯಾಕ್ಸಿ ಸೇವೆ ನಿಯಂತ್ರಣ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾವ ಸಾರಿಗೆ ಇಲಾಖೆ ಮುಂದಿದೆ. ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು.

* ಟ್ಯಾಕ್ಸಿಗಳ ಮೇಲೆ ಕ್ರಮ ಕೈಗೊಂಡಂತೆ ಇತರ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯೆ ಏನು?
ಈಗಾಗಲೇ ಎಲ್ಲ ವಾಹನಗಳ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಮೊದಲು ಬಸ್‌ಗಳ ವಿರುದ್ಧ ಕ್ರಮ ಜರುಗಿಸಲಾಗಿತ್ತು. ನಂತರ ಸರಕು ಸಾಗಣೆ ವಾಹನಗಳನ್ನು ನಿಯಂತ್ರಿಸಲಾಗಿದೆ. ಶಾಲಾ ಮಕ್ಕಳನ್ನು ಕರೆತರುವ ವಾಹನಗಳ ಮೇಲೂ ನಿಗಾ ಇಡಲಾಗಿದೆ. ಕಾನೂನು ಪಾಲನೆ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT