ADVERTISEMENT

ಸವಾಲು ಎದುರಿಸಿ; ನಿರಾಳರಾಗಿ

ದತ್ತು ಯಾಕೀ ವಿಳಂಬ?

ಪ್ರಜಾವಾಣಿ ವಿಶೇಷ
Published 6 ಮಾರ್ಚ್ 2015, 20:27 IST
Last Updated 6 ಮಾರ್ಚ್ 2015, 20:27 IST

ಮಗುವನ್ನು ಹೆತ್ತರೆ ಮಾತ್ರ ಹೆಣ್ತನ ಪೂರ್ಣಗೊಳ್ಳುತ್ತದೆ ಎಂಬಂಥ ಯಾವ  ಭ್ರಮೆಯೂ ನನಗಿರಲಿಲ್ಲ. ಪಕ್ಕದ ಮನೆಯ ಮಗುವನ್ನು ಪ್ರೀತಿಯಿಂದ ನೋಡಲು ಸಾಧ್ಯ­ವಾಗುವುದಾದರೆ ನಮ್ಮ ಮನೆಗೇ ಒಂದು ಮಗು ತಂದರೆ ಇನ್ನೂ ಚೆನ್ನಾಗಿ ನೋಡಿಕೊಳ್ಳ­ಬಹುದು ಎನ್ನುವುದು ನಮ್ಮಿಬ್ಬರ ಅಭಿಪ್ರಾಯವೂ ಆಗಿತ್ತು. ಜೊತೆಗೆ ಹೆಣ್ಣು ಮಗುವನ್ನೇ ದತ್ತು ಪಡೆಯಬೇಕೆಂ­ಬುದೂ ನಮ್ಮ ನಿರ್ಧಾರವಾಗಿತ್ತು. ನಾನು ಗರ್ಭಿಣಿಯಾಗಿ ಮಗು ಪಡೆದರೆ ಎಲ್ಲಿ ಗಂಡು ಮಗುವಾಗಿ­ಬಿಡುತ್ತದೋ  ಎಂಬ ಹೆದರಿಕೆಯೂ ದತ್ತು ಪಡೆಯಲು ನಮ್ಮನ್ನು ಪ್ರೇರೇಪಿಸಿತ್ತು.

‘ನಮಗೆ ಬೆಳ್ಳಗಿನ ಮಗುವೇ ಬೇಕು’, ‘ಇಂಥದ್ದೇ ಜಾತಿಯದಾಗಬೇಕು’ ಎಂದೆಲ್ಲ ಕೇಳು­ವವ­ರಿದ್ದಾರೆ. ನಮಗೆ ಅಂಥ ಯಾವ ಬೇಡಿಕೆಯೂ ಇರಲಿಲ್ಲ.  ಕೆಲವು ಮಿತಿಯ ಕಾರಣದಿಂದ ಅನ್ಯ ಕೋಮಿನ ಹಿನ್ನೆಲೆಯ ಮಗು ಬೇಡ ಎಂದು ಹೇಳಿದ್ದೆವು. ಆದರೆ ಎರಡನೇ ಸುತ್ತಿನ ಕೌನ್ಸೆಲಿಂಗ್‌ ಹೊತ್ತಿಗಾಗಲೇ ನಾವು ಆ ಮಿತಿಯಿಂದಲೂ ಹೊರಬಂದು, ಯಾವ ಧರ್ಮದ ಮಗುವಾದರೂ ಆಗುತ್ತದೆ, ಆರೋಗ್ಯವಾಗಿದ್ದ­ರಷ್ಟೇ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದೆವು.

ಸಾಮಾನ್ಯವಾಗಿ ಕುಟುಂಬದ ಇತರ ಸದಸ್ಯರ ಬೆಂಬಲ ಇದ್ದಾಗ ದತ್ತು ಮಗುವನ್ನು ಬೆಳೆಸುವುದು ಸುಲಭ. ಆದರೆ ನಮ್ಮ ಪರಿಸ್ಥಿತಿ ಹಾಗಿರಲಿಲ್ಲ. ಅಲ್ಲದೆ ಮಗುವಿನ ಪಾಲನೆ ಪೋಷಣೆಯ ಬಗ್ಗೆ ಯಾವ ತಿಳಿವಳಿಕೆಯೂ ನಮಗಿರಲಿಲ್ಲ. ಆಗ ನಮ್ಮ ಸಹಾಯಕ್ಕೆ ಬಂದದ್ದು ಇಂಟರ್‌ನೆಟ್‌. ಯೂಟ್ಯೂಬ್‌ ನೋಡಿಕೊಂಡು ಮಗುವಿಗೆ ಮಸಾಜ್‌ ಮಾಡುತ್ತಿದ್ದೆವು. ಮಗು ಅತ್ತರೆ ಗೂಗಲ್‌ ನೋಡುವುದು, ಕಿರುಚಿಕೊಂಡರೆ ಇಂಟರ್‌­ನೆಟ್‌­ನಲ್ಲಿ ಮಾಹಿತಿ ಹುಡುಕುವುದು... ಹೀಗೆ ನಾವೂ ಕಲಿತುಕೊಳ್ಳುತ್ತಲೇ ನಮ್ಮ ಮಗುವನ್ನು ಸಾಕಿದೆವು. ಮಗು ಕರೆತಂದ ಆರಂಭದ ಕೆಲವು ದಿನಗಳ ಅವಧಿ ಪೋಷಕರಿಗೆ ತುಂಬಾ ಸವಾಲಿನದ್ದು. ತುಂಬಾ ತಾಳ್ಮೆ  ಮತ್ತು ಸಮಯವನ್ನು ಅದು ಬೇಡುತ್ತದೆ. ನಾನು ಹೊರಗೆ ದುಡಿಯುತ್ತಲೇ ಇಂತಹ ಸವಾಲನ್ನು ನಿರ್ವಹಿಸಿದೆ.

ಸಾಮಾನ್ಯವಾಗಿ ಒಂದು ಮಗುವನ್ನು ದತ್ತು ತೆಗೆದುಕೊಂಡ ಕೂಡಲೇ ಸಮಾಜವನ್ನು ಎದುರಿಸುವುದು ಹೇಗೆ ಎಂಬ ಸಮಸ್ಯೆ ನಮ್ಮನ್ನು ಕಾಡುತ್ತದೆ. ನಾವು ಎಷ್ಟು ಪ್ರಬುದ್ಧ­ವಾಗಿ ಅಂತಹ ಸಂದರ್ಭವನ್ನು ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ಅದು ನಿಂತಿರು­ತ್ತದೆ. ‘ನಿನ್ನೆಯವರೆಗೆ ಇರದ ಈ ಮಗು ಇದ್ದಕ್ಕಿದ್ದಂತೆ ಎಲ್ಲಿಂದ ಬಂತು’, ‘ನೀನು ಗರ್ಭಿಣಿಯಾದ­ದ್ದನ್ನೇ ನೋಡಿರಲಿಲ್ಲ, ನಿನಗ್ಯಾವಾಗ ಮಗುವಾಯ್ತು? ಎಂಬಂತಹ ಪ್ರಶ್ನೆ­ಗಳೆಲ್ಲ ಎದುರಾಗುತ್ತವೆ. ನಾನಂತೂ ಅಂತಹ ಸಂದರ್ಭಗಳಲ್ಲಿ ದತ್ತು ವಿಷಯ ತಿಳಿಸಿ ಮಗುವನ್ನು ಅವರಿಗೆ ಪರಿಚಯಿಸಿದೆ. ಜನರೆದುರು ಸತ್ಯ ಹೇಳಲು ನಾನೆಂದೂ ಹಿಂಜರಿ­ದಿಲ್ಲ. ಇದು ನಾನು ದತ್ತು ಪಡೆದ ಮಗು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಎಂದೋ ಒಂದು ದಿನ ಇವತ್ತು ‘ನಿನ್ನ ಡಿ ಡೇ. ನಿನ್ನ ಜೀವನದ ರಹಸ್ಯವನ್ನು ಹೇಳ್ತೇನೆ’ ಎಂದೆಲ್ಲ ದಿನ ನಿಗದಿ ಮಾಡಿ ದತ್ತು ವಿಷಯ ಹೇಳಿ ಮಗುವಿಗೆ  ಶಾಕ್‌ ಕೊಡುವುದರ ಬದಲು ಮೊದಲಿನಿಂದಲೂ ಆ ಬಗ್ಗೆ ಅದಕ್ಕೆ ತಿಳಿವಳಿಕೆ ಕೊಡುತ್ತಾ ಬರಬೇಕು. ಆಗ ಆ ವಿಷಯವನ್ನು  ಹೊರಗಿನವರು ಯಾರಾದರೂ ಹೇಳಿದರೂ ‘ಸೋ ವಾಟ್‌?’ ಎನ್ನುವಷ್ಟು ಸಹಜತೆ­ಯನ್ನು ಅದು ಬೆಳೆಸಿಕೊಳ್ಳುತ್ತದೆ. ಹೀಗೆ ದತ್ತು ಪಡೆದ ನಾವೆಲ್ಲ ಒಂದಷ್ಟು ಜನ ಪೋಷಕ ಸಂಘಟನೆ ಮಾಡಿಕೊಂಡು ನಮಗೆ ಎದುರಾಗುವ ಸಮಸ್ಯೆಗಳನ್ನು ಚರ್ಚಿಸು­ತ್ತೇವೆ. ಆದರೆ ಕೆಲವರು ದತ್ತು ಪಡೆದ  ಬಗ್ಗೆ ಮಗುವಿಗೆ ಹೇಳದೆ ಗುಟ್ಟಾಗಿಡುತ್ತಾರೆ. ಸಮಾಜಕ್ಕೂ ತಿಳಿಯಬಾರದು ಎಂಬ ಕಾರಣಕ್ಕೆ ಯಾರೊಂದಿಗೂ ಬೆರೆಯುವುದಿಲ್ಲ. ಹೀಗಾದರೆ ಅವರಿಗೆ ದತ್ತು ಮಗುವನ್ನು ಪೋಷಿಸುವುದು ಕಷ್ಟವಾಗುತ್ತದೆ. ಈ ಪ್ರಕ್ರಿಯೆ ಮುಕ್ತವಾಗಿದ್ದಷ್ಟೂ ಒಳ್ಳೆಯದು. ತನ್ನ ಜನ್ಮದ ಬಗ್ಗೆ ತಿಳಿದುಕೊಳ್ಳುವುದು ಪ್ರತಿ ಮಗುವಿನ ಹಕ್ಕು ತಾನೇ?

-ನೀರಜಾ ಸುರೇಶ್‌

--------------

ADVERTISEMENT

ನಾನು ಒಬ್ಬಳು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು 11 ವರ್ಷ ಆಯಿತು. ನನ್ನ ಮಗಳಿಗೀಗ 12 ವರ್ಷ. ನಮ್ಮ ಮನೆಗೆ ಬಂದಾಗ ಅವಳಿಗೆ ಒಂದು ವರ್ಷ. ದತ್ತು ತೆಗೆದುಕೊಂಡ ವಿಚಾರವನ್ನು ನಾನೇನೂ ಅವಳಿಂದ ಮುಚ್ಚಿಟ್ಟಿಲ್ಲ. ಎರಡು ವರ್ಷ ತುಂಬಿದಾಗಿನಿಂದಲೂ ಅವಳಿಗೆ ಯಾವ್ಯಾವುದೋ ಕಥೆಯ ರೂಪದಲ್ಲಿ ಅವಳ ಹುಟ್ಟಿನ ಬಗ್ಗೆ ಹೇಳುತ್ತಲೇ ಬಂದಿದ್ದೇವೆ. ಇಂಥ ವಿಷಯಗಳನ್ನು ಮುಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಷ್ಟು ಚಿಕ್ಕ ವಯಸ್ಸಿಗೆ ಅವಳಿಗೆ ಅರ್ಥ­ವಾಗುತ್ತಿರಲಿಲ್ಲ. ಆದರೆ ನಾನು ಮಾತ್ರ ಅವಳಿಗೆ ಹೇಳಬೇಕಾದದ್ದನ್ನು ಹೇಳುತ್ತಲೇ ಬಂದಿದ್ದೇನೆ. ಅವಳಿಗೆ ತಿಳಿವಳಿಕೆ ಬಂದ ಮೇಲೂ ತಾನು ದತ್ತು ಮಗು ಎಂಬ ವಾಸ್ತವಕ್ಕೆ ಅವಳು ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ತಾನು ಬೇರೆ ಯಾರೋ ಹೆತ್ತ ಮಗು. ಅವರು ತನ್ನನ್ನು ಸಾಕ­ಲಾಗದೇ ಒಂದು ಸಂಸ್ಥೆಗೆ ಕೊಟ್ಟು ಹೋದರು. ನಾವು ಅಲ್ಲಿಂದ ಅವಳನ್ನು ದತ್ತು ತೆಗೆದುಕೊಂಡು ಬಂದಿ­ದ್ದೇವೆ ಎಂಬುದು ಅವಳಿಗೆ ಗೊತ್ತು. ಉಳಿದಂತೆ ಈ ಬಗ್ಗೆ ನಮಗೆ ಯಾವುದೇ ತೊಂದರೆಯೂ ಬಂದಿಲ್ಲ.

ಆದರೆ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಹೊರಜಗತ್ತಿನ ಬಗ್ಗೆ ತಿಳಿವಳಿಕೆ ಬರತೊಡಗುತ್ತದೆ. ಹಾಗೆಯೇ ತಮ್ಮ ಮೂಲದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂಬ ಆಸೆ ಹುಟ್ಟುತ್ತದೆ. ನನ್ನ ಮಗಳಿಗೂ ಅಂತಹ ಆಸೆ ನಿಧಾನಕ್ಕೆ ಬೆಳೆಯುತ್ತಿರುವುದನ್ನು ಗಮನಿಸಿದ್ದೇನೆ. ಇತ್ತೀಚೆಗೆ ಅವಳಿಗೆ ತನ್ನ ಹಳೆಯ ಕುಟುಂಬದ ಬಗ್ಗೆ ಕುತೂಹಲ ಬಂದಿದೆ. ಇಲ್ಲಿಯವರೆಗೆ ಆ ಕುರಿತು ಯಾವುದೇ ಪ್ರಶ್ನೆ ಕೇಳುತ್ತಿರಲಿಲ್ಲ. ಆದರೆ ಮೊನ್ನೆಯಷ್ಟೇ ‘ನನಗೆ ಅಕ್ಕ, ತಂಗಿ ಯಾರಾದ್ರೂ ಇದ್ದಾರಾ?’ ಎಂದು ಕೇಳಿದಳು. ನಿನಗೆ ಪೂರ್ತಿ ಹದಿನೆಂಟು ವರ್ಷ ತುಂಬಿದಾಗ ನಾನು ನಿನಗೆ ಎಲ್ಲ ವಿಷಯವನ್ನೂ ತಿಳಿಸುತ್ತೇನೆ. ಅಲ್ಲಿಯವರೆಗೆ ಯಾವುದೇ ವಿಷಯ ಹೇಳಲು ನನಗೂ ತಿಳಿದಿಲ್ಲ ಎಂದು ಅವಳಿಗೆ ತಿಳಿಹೇಳಿದ್ದೇನೆ. ಅವಳು ಅದನ್ನು ಅರಿತುಕೊಂಡಿದ್ದಾಳೆ. ಇಲ್ಲಿಯವರೆಗಿನಂತೆ ಮುಂದೆಯೂ ಯಾವ ತೊಂದರೆ ಬರಲಾರದು ಎಂಬ ನಂಬಿಕೆ ನನ್ನದು.

-ಪದ್ಮಾ ದೀಪಕ್‌

(ಲೇಖಕಿಯರು ದತ್ತು ಮಕ್ಕಳ ತಾಯಂದಿರು. ಮನವಿ ಮೇರೆಗೆ ಹೆಸರು ಬದಲಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.