ADVERTISEMENT

ಹೊಣೆ ಹೊರಲಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2016, 19:30 IST
Last Updated 30 ಸೆಪ್ಟೆಂಬರ್ 2016, 19:30 IST
ಹೊಣೆ ಹೊರಲಿ
ಹೊಣೆ ಹೊರಲಿ   

ಸರ್ಕಾರಿ ವಸತಿ ನಿಲಯದಲ್ಲಿದ್ದ ಅನಾಥ ಮಗುವೊಂದನ್ನು ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಕಾಏಕಿ ಡಿಸ್‌ಚಾರ್ಜ್‌ ಮಾಡಿ, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಮಗು ಬದುಕಲಿಲ್ಲ. ಆಂಬುಲೆನ್ಸ್‌ ಮತ್ತು ವೆಂಟಿಲೇಟರ್‌ ಇಲ್ಲದೆ ಮಗುವನ್ನು ಹೇಗೆ ಹೊರಗೆ ಕಳುಹಿಸಿದಿರಿ ಎಂದು ಜಿಲ್ಲಾ ಸರ್ಜನ್‌ ಅವರನ್ನು ವಿಚಾರಿಸಿದೆವು. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಪ್ರತಿ ಇಲಾಖೆಯಲ್ಲೂ ಮಕ್ಕಳ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.

ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಮಾಡಬೇಕು. ಇಂಥ ಶಿಬಿರಗಳಲ್ಲೂ ಮಕ್ಕಳಿಗೆ ಉಚಿತ ಔಷಧಿ ಕೊಡುವುದಿಲ್ಲ. ಮಕ್ಕಳ ಔಷಧಿ, ಮಾತ್ರೆ ದಾಸ್ತಾನು ಮಾಡಿಕೊಂಡಿಲ್ಲ ಎಂದು ಹೇಳುತ್ತಾರೆ.

ಕಲಬುರ್ಗಿ ಜಿಲ್ಲೆಯ ಪ್ರಾಥಮಿಕ, ಸಮುದಾಯ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರೇ ಇಲ್ಲ. ಇಡೀ ಜಿಲ್ಲೆಯಲ್ಲಿ ಮೂವರು ಮಕ್ಕಳ ತಜ್ಞರಿದ್ದಾರೆ. ಮಕ್ಕಳ ತಜ್ಞರಿಲ್ಲದ ಕಡೆಗಳಲ್ಲಿ ಕನಿಷ್ಠ ಔಷಧೋಪಚಾರ ಮಾಡುವ ಜವಾಬ್ದಾರಿಯನ್ನೂ ಇತರ ವೈದ್ಯರು ಹೊರುತ್ತಿಲ್ಲ.

ತೀರಾ ಇತ್ತೀಚೆಗೆ ಒಂದು ಘಟನೆ ನಡೆದಿದೆ. ಚಿಂಚೋಳಿ ತಾಲ್ಲೂಕಿನ ಕೊಂಚಾವರಂ ಹತ್ತಿರ 15 ವರ್ಷದ ಅನಾಥ ಬಾಲಕನೊಬ್ಬ ರಸ್ತೆಯಲ್ಲಿ ಮೂರ್ಛೆ ರೋಗದಿಂದ ಬಿದ್ದುಬಿಟ್ಟಿದ್ದ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಕೊಟ್ಟರು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಅಲ್ಲಿದ್ದ ವೈದ್ಯರು ಇಂಥ ಮಕ್ಕಳನ್ನು ಏಕೆ ತರುತ್ತೀರಿ ಎಂದು ದಬಾಯಿಸಿದರು. ಮಗುವಿಗೆ ಏನಾಗಿದೆ ಎಂದು ಕೇಳುವ ಸೌಜನ್ಯವನ್ನೂ ತೋರಿಸಲಿಲ್ಲ. ದಾದಿಯೊಬ್ಬರು ಕಾಲಿಗೆ ಮುಲಾಮು ಹಚ್ಚಿ ಉಪಚರಿಸಿದರು. ಬೆಳಿಗ್ಗೆ ಮಗುವನ್ನು ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಲಾಯಿತು. ವೈದ್ಯರ ಈ ನಡವಳಿಕೆ ಕುರಿತು ಮಕ್ಕಳ ಕಲ್ಯಾಣ ಸಮಿತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದ್ದೇವೆ.

ಹೈದರಾಬಾದ್‌ ಕರ್ನಾಟಕದಲ್ಲಿ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕೆಲಸವಾಗುತ್ತಿಲ್ಲ. ಅಪೌಷ್ಟಿಕತೆ ತಡೆಯಲು ಅಂಗನವಾಡಿಗಳಲ್ಲಿ ಬಾಳೆಹಣ್ಣು, ಹಾಲು, ಮೊಟ್ಟೆ ವಿತರಣೆ ಆಗುತ್ತಿಲ್ಲ. ಹಿರಿಯ ಅಧಿಕಾರಿಗಳ ಮಟ್ಟದಲ್ಲೇ ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಮಕ್ಕಳ ತೂಕ ಮತ್ತು ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಯುತ್ತಿಲ್ಲ.

ಮಕ್ಕಳ ತೂಕ ಆಧರಿಸಿ ಸಾಧಾರಣ, ಕಡಿಮೆ ತೂಕ, ವಿಪರೀತ ಕಡಿಮೆ ತೂಕ ಎಂದು ವಿಂಗಡಿಸಬೇಕು. ಇದನ್ನು ಮಾಡುವುದಕ್ಕೆ ಅಂಗನವಾಡಿಗಳಲ್ಲಿ ತೂಗುವ ಯಂತ್ರಗಳೇ ಇಲ್ಲ. ವಿಪರೀತ ತೂಕವಿರುವ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇದಕ್ಕಾಗಿ ‘ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ’ ಇದೆ.

ADVERTISEMENT

ಇಲ್ಲಿ 15 ದಿನಗಳವರೆಗೆ ಮಗು ಹಾಗೂ ಪಾಲಕರನ್ನು ಇಟ್ಟುಕೊಂಡು ಯಾವ ಆಹಾರ ಕೊಡಬೇಕು ಎನ್ನುವ ತರಬೇತಿ ನೀಡಲಾಗುತ್ತದೆ. ₹175 ಭತ್ಯೆ ಕೊಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಅಪೌಷ್ಟಿಕತೆ ಗುರುತಿಸುವ ಕೆಲಸ ಆಗಬೇಕಿದೆ.
-ವಿಠ್ಠಲ ಚಿಕಣಿ, ಸಾಮಾಜಿಕ ಪರಿವರ್ತನ ಜನಾಂದೋಲನ, ಕಲಬುರ್ಗಿ ಪ್ರಾದೇಶಿಕ ಸಂಯೋಜಕ

*
ಬಡವರ ಪಾಡೇನು?
ಬಡವರಿಗೆ ಉಚಿತ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ಆದರೆ, ರಕ್ತ, ಕಫ ಮುಂತಾದ ಪರೀಕ್ಷೆ ಮಾಡಿಸಿ ಎಂದು ಖಾಸಗಿ ಪ್ರಯೋಗಾಲಯಕ್ಕೆ ಹೋಗಲು ವೈದ್ಯರು ಚೀಟಿ ಬರೆದುಕೊಡುತ್ತಾರೆ. ಅಲ್ಲಿ ಸಾವಿರಾರು ರೂಪಾಯಿ ಶುಲ್ಕ ಕೇಳುತ್ತಾರೆ. ಅಷ್ಟೆಲ್ಲ ದುಡ್ಡು ಇದ್ದಿದ್ದರೆ ನಾವು ಸರ್ಕಾರಿ ಆಸ್ಪತ್ರೆಗೇ ಬರುತ್ತಿರಲಿಲ್ಲ.

ಏಕೆ ಚೀಟಿ ಬರೆದುಕೊಡುತ್ತೀರಿ ಎಂದು ಕೇಳಿದರೆ ಯಂತ್ರ ಕೆಟ್ಟು ಹೋಗಿದೆ ಎಂದು ಸಾಗಹಾಕುತ್ತಾರೆ. ₹ 5,000 ಸಾಲ ಮಾಡಿ ಮಗಳು ಸುಷ್ಮಿತಾಳನ್ನು ಆಸ್ಪತ್ರೆಗೆ ಕರೆತಂದಿದ್ದೆ. ಆದರೆ, ಈ ಡಾಕ್ಟ್ರುಗಳು ಅಸಡ್ಡೆಯಿಂದ ನೋಡುತ್ತಾರೆ. ಕೊಳ್ಳೇಗಾಲದಿಂದ ಬಂದು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದ ವ್ಯಕ್ತಿಯ ಜೇಬಿನಲ್ಲಿ ಕೇವಲ ₹ 100 ಇತ್ತು. ಅವನನ್ನು ನೋಡಿ ನನಗೇ ಅಳುಬಂತು.

ಆಸ್ಪತ್ರೆಯಲ್ಲಿ ಹೆಚ್ಚಿಗೆ ಹಾಸಿಗೆ ಹಾಕಲು ಇವರಿಗೇನು ದಾಡಿಯೋ ಗೊತ್ತಿಲ್ಲ. ಜ್ವರದಿಂದ ಬಳಲುತ್ತಿದ್ದ ಮಗಳನ್ನು ಸೇರಿಸಿದ ದಿನ ಒಂದೂ ಹಾಸಿಗೆ ಖಾಲಿ ಇರಲಿಲ್ಲ. ₹ 100  ಕೊಟ್ಟು ತಂದ ಚಾಪೆಯನ್ನು ನೆಲದಲ್ಲಿ ಹಾಕಿ ಮಲಗಿಸಿದೆ. ಆಸ್ಪತ್ರೆಗೆ ದಾಖಲಿಸಿ ಅರ್ಧ ದಿನವಾದರೂ ಕೇಳುವವರೇ ಇರಲಿಲ್ಲ.
-ಪ್ರಸನ್ನ, ಎಚ್‌.ಡಿ.ಕೋಟೆ
(ಜ್ವರದಿಂದ ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ಸುಷ್ಮಿತಾಳ ತಂದೆ)

*
ಹೆಚ್ಚಿನ ನಿಗಾ ಅಗತ್ಯ
ಅಪೌಷ್ಟಿಕತೆ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೆಚ್ಚು ನಿಗಾ ವಹಿಸಬೇಕು. ಸಮಸ್ಯೆ ಇದ್ದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದುಕೊಂಡು ಹೋಗಬೇಕು. ಜಿಲ್ಲಾ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರದಲ್ಲಿ ಅಂಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಜತೆಗೆ ಪೌಷ್ಟಿಕ ಆಹಾರ ಒದಗಿಸುತ್ತೇವೆ. ವೈದ್ಯರು ಹೇಳಿದಷ್ಟು ದಿನ ಚಿಕಿತ್ಸೆ ಕೊಡಿಸಲು ಪೋಷಕರು ಸಿದ್ಧರಿರಬೇಕು.
-ಡಾ. ಕೆ.ವಿ.ಚೇತನಾ, ವೈದ್ಯಾಧಿಕಾರಿ, ಅಪೌಷ್ಟಿಕ ಮಕ್ಕಳ ಪಾಲನಾ ವಿಭಾಗ, ಕೊಪ್ಪಳ ಜಿಲ್ಲಾ ಆಸ್ಪತ್ರೆ

*
ಏಕೆ ಅರ್ಥವಾಗದು?
ಬಡವರು ದೂರದ ಹಳ್ಳಿಗಳಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಸ್ಕ್ಯಾನಿಂಗ್‌, ಎಕ್ಸ್‌ರೇ, ರಕ್ತ ಪರೀಕ್ಷೆಗೆಂದು 15–20 ದಿನ ಕಾಯಿಸುತ್ತಾರೆ. ಕೂಲಿ ಮಾಡಿದ ಹಣ ಇಟ್ಟುಕೊಂಡು ಬರುವವರು ಎಷ್ಟು ದಿನ ಆಸ್ಪತ್ರೆಗಳಲ್ಲಿ ಇರಲು ಸಾಧ್ಯ? ಎಲ್ಲಿ ವಾಸ್ತವ್ಯ ಹೂಡಬೇಕು? ಊಟಕ್ಕೆ ಏನು ಮಾಡಬೇಕು? ಇವೆಲ್ಲಾ ಏಕೆ ಸರ್ಕಾರಕ್ಕೆ, ವೈದ್ಯರಿಗೆ ಅರ್ಥವಾಗದು?
-ಸರಸ್ವತಿ, ನಿರ್ದೇಶಕಿ, ಗ್ರಾಮೀಣ ಶಿಕ್ಷಣ–ಆರೋಗ್ಯ ಸ್ವಯಂಸೇವಾ ಸಂಸ್ಥೆ , ಮೈಸೂರು

*
ಸೌಲಭ್ಯ ಬಳಸಿ
ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ರಾಜ್ಯದಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಆದರೆ ತಕ್ಕ ಸಮಯದಲ್ಲಿ ಸೌಲಭ್ಯ ಪಡೆಯಲು ಜನರು ಮುಂದಾಗುವುದಿಲ್ಲ. ಆರೋಗ್ಯ ಪೂರ್ಣ ಹದಗೆಟ್ಟಾಗ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಕೆಲವೊಮ್ಮೆ ಏನೂ ಮಾಡಲಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲೂ ಶ್ರಮ ಹಾಕಿ ಮಕ್ಕಳನ್ನು ಉಳಿಸುವ ಪ್ರಸಂಗಗಳು ಸಾಕಷ್ಟು ನಡೆಯುತ್ತಿವೆ.
-ಡಾ. ಪ್ರಕಾಶ ವಾರಿ, ಮಕ್ಕಳ ಆಸ್ಪತ್ರೆ ಮುಖ್ಯಸ್ಥ, ಕಿಮ್ಸ್‌ ಹುಬ್ಬಳ್ಳಿ

*
ರಾತ್ರಿ ವೈದ್ಯರಿರಲಿ
ಗ್ರಾಮೀಣ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ವೈದ್ಯರಿಲ್ಲದೆ  ತೊಂದರೆಯಾಗುತ್ತದೆ. ಇಲ್ಲಿ ವೈದ್ಯರು ಎಲ್ಲ  ಸಂದರ್ಭದಲ್ಲೂ  ಲಭ್ಯವಿದ್ದರೆ ಅನೇಕ ಸಮಸ್ಯೆಗಳನ್ನು ಸ್ಥಳೀಯವಾಗೇ ನಿವಾರಿಸಬಹುದು.
-ಅನ್ನಪೂರ್ಣ ಸಿ.ಗಿರಿಯಪ್ಪಗೌಡ್ರ,
ಆರೋಗ್ಯ ಕಾರ್ಯಕರ್ತೆ, ಶಿರಗುಪ್ಪಿ ಆರೋಗ್ಯ ಕೇಂದ್ರ, ಧಾರವಾಡ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.