ADVERTISEMENT

ಅಂತರಂಗದಲ್ಲಿದೆ ಗ್ಲಾಮರ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2017, 19:30 IST
Last Updated 16 ಆಗಸ್ಟ್ 2017, 19:30 IST
ಆ್ಯಂಡ್ರಿಯಾ ಸೀರಾ ಸಲಾಜರ್‌
ಆ್ಯಂಡ್ರಿಯಾ ಸೀರಾ ಸಲಾಜರ್‌   

ಕೂದಲಿಲ್ಲದೇ ಕ್ಯಾಮೆರಾ ಮುಂದೆ ನಿಲ್ಲಲು ಮನಸ್ಸು ತಡವರಿಸುತ್ತಿತ್ತು. ಕಣ್ಣಂಚು ನೀರಾದರೂ ಅದನ್ನು ತಡೆದು ನಿಲ್ಲಿಸಿದೆ. ಆತ್ಮವಿಶ್ವಾಸ ಆ ಅಳುಕನ್ನು ಮೆಟ್ಟಿ ನಿಲ್ಲುವಂತೆ ಮಾಡಿತು. ಕ್ಯಾಮೆರಾಗೆ ನನ್ನ ನಗುವನ್ನು ಹೇಳಿಕೊಟ್ಟೆ’ ಹೀಗೆ ಹೇಳಿಕೊಂಡಿರುವುದು ಹದಿನೇಳು ವರ್ಷದ ಆ್ಯಂಡ್ರಿಯಾ.

ಈ ರೀತಿ ಫೋಟೊಶೂಟ್ ಮಾಡಿಸಿಕೊಂಡ ಆ್ಯಂಡ್ರಿಯಾ ಹಿಂದೆ ಒಂದು ಕಥೆಯಿದೆ. ಟೆಕ್ಸಾಸ್‌ನ ಆ್ಯಂಡ್ರಿಯಾ ಸೀರಾ ಸಲಾಜರ್‌ಗೆ, ಕ್ಯಾನ್ಸರ್‌ ಸೂಚನೆಯನ್ನೂ ನೀಡದೇ ಕೊರಳನ್ನು ಸುತ್ತಿಕೊಂಡಿತ್ತು.

ಗಂಟಲಿನಲ್ಲಿ ಕ್ಯಾನ್ಸರ್‌ನ ಗಡ್ಡೆ ಜೀವಕ್ಕೆ ಹೊಂಚು ಹಾಕಲು ಶುರು ಮಾಡಿತ್ತು. ಚಿಕಿತ್ಸೆಗೆ ಹೋದಾಗ ಅದು ಎರಡನೇ ಹಂತಕ್ಕೆ ಬಂದು ಮುಟ್ಟಿತ್ತು. ಮನಸ್ಸು ಗಟ್ಟಿ ಮಾಡಿಕೊಳ್ಳದೇ ಬೇರೆ ವಿಧಿಯೇ ಇರಲಿಲ್ಲ. ನಿರಂತರ ಚಿಕಿತ್ಸೆ, ಶಾಲೆಗೆ ಹೋಗಲೂ ಬಿಡಲಿಲ್ಲ. ಕೀಮೋಥೆರಪಿಯಿಂದ ದಿನೇ ದಿನೇ ಕೂದಲು ಉದುರುತ್ತಾ ಬಂತು.

ADVERTISEMENT

‘ನನಗೆ ಕ್ಯಾನ್ಸರ್ ಇದೆ ಎಂಬುದೇ ಗೊತ್ತಿರಲಿಲ್ಲ. ಕುತ್ತಿಗೆ ನೋವು ಬಂದಾಗ ನಾನು ಸರಿಯಾದ ಭಂಗಿಯಲ್ಲಿ ಮಲಗಿಲ್ಲ, ಅದಕ್ಕೇ ಎಂದು ಕೊಂಡಿದ್ದೆ. ಆದರೆ ಒಮ್ಮೆ ನನ್ನ ಕುತ್ತಿಗೆ ಮುಟ್ಟಿ ನೋಡಿಕೊಂಡರೆ ದೊಡ್ಡ ಗಂಟು ಸಿಕ್ಕಿದ ಹಾಗಾಯ್ತು. ಅಲ್ಲಿಂದ ಶುರುವಾಯ್ತು ಎಲ್ಲವೂ...’ ಎಂದು ಹೇಳಿಕೊಳ್ಳುವಾಗಲೂ ಆ್ಯಂಡ್ರಿಯಾ ಮುಖದಲ್ಲಿ ನಗು ಮಾಸಿರಲಿಲ್ಲ.

ಶಾಲೆಯಿಂದ ದೂರವುಳಿದಾಗ ತನ್ನಿಷ್ಟದ, 13ನೇ ವರ್ಷದಿಂದಲೇ ಹವ್ಯಾಸವಾಗಿಸಿಕೊಂಡಿದ್ದ ಮಾಡೆಲಿಂಗ್ ವೃತ್ತಿ ಕೈಗೆತ್ತಿಕೊಂಡರು ಆ್ಯಂಡ್ರಿಯಾ. ಆದರೆ ಇದೆಲ್ಲಾ ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಆಗಾಗ್ಗೆ ಮನಸ್ಸು ಚುಚ್ಚುತ್ತಿತ್ತು.

‘ಕೀಮೋಥೆರಪಿ ಮುನ್ನ ನನ್ನಲ್ಲಿ ತುಂಬಾ ಆತ್ಮವಿಶ್ವಾಸವಿತ್ತು. ಆದರೆ ಇಂಚಿಂಚೇ ಕೂದಲು ಉದುರುತ್ತಾ ಬೋಳಾಗುತ್ತಿದ್ದಾಗ ನನ್ನ ಆತ್ಮವಿಶ್ವಾಸ ಕುಗ್ಗುತ್ತಾ ಹೋಯಿತು. ಕನ್ನಡಿಯಲ್ಲಿ ನೋಡುತ್ತಾ ನೋಡುತ್ತಾ ನಾನೂ ಕಳೆದುಹೋಗುತ್ತಿದ್ದೇನೆ ಅನಿಸುತ್ತಿತ್ತು. ಆದರೆ ಧೈರ್ಯಗೆಡಲಿಲ್ಲ. ಸೌಂದರ್ಯದ ನಿಜ ವ್ಯಾಖ್ಯಾನವನ್ನು ನಾನು ಜಗತ್ತಿಗೆ ನೀಡಲೇಬೇಕು ಎಂದು ತೀರ್ಮಾನಿಸಿದೆ. ಹೀಗೆ ಫೋಟೊಶೂಟ್ ಮಾಡಿಸಿಕೊಂಡೆ’ ಎಂದು ಫೋಟೊಶೂಟ್ ಹಿಂದಿನ ಕಥೆ ಬರೆದುಕೊಂಡಿದ್ದಾರೆ ಆ್ಯಂಡ್ರಿಯಾ.

ವಿಗ್ ಇಲ್ಲದೇ ಕ್ಯಾಮೆರಾ ಎದುರು ನಿಲ್ಲಲು ಮೊದಲು ತುಂಬಾ ಮುಜುಗರವಾದರೂ, ಇದ್ದ ಹಾಗೇ ಇರಲು ನಾಚಿಕೆ ಪಟ್ಟುಕೊಳ್ಳಲು ಕಾರಣವೇ ಇಲ್ಲ, ಇದರ ಬಗ್ಗೆ ಹೆಮ್ಮೆ ಇದೆ ಎಂದು ಮುನ್ನುಗ್ಗಿದರು. ಟ್ವಿಟರ್‌ನಲ್ಲಿ ‘ಕ್ಯಾನ್ಸರ್ ನಾನು ರಾಜಕುಮಾರಿ ಆಗುವುದನ್ನು ತಡೆದಿಲ್ಲ’ ಎಂಬ ಇವರ ಫೋಟೊಶೂಟ್ ವೈರಲ್ ಕೂಡ ಆಯಿತು.

ಸೌಂದರ್ಯದ ಹಿಂದೋಡುವ, ಹಾಗೆ ಓಡು ತ್ತಲೇ ಎಡವುವ ಹುಡುಗಿಯರಿ ಗಾಗಿ, ಕ್ಯಾನ್ಸರ್‌ಗೆ ತುತ್ತಾಗಿ ಧೈರ್ಯ ಕಳೆದುಕೊಂಡವರಿಗಾಗಿ, ನಿಮ್ಮ ಸೌಂದರ್ಯ, ದೇಹ ಅಥವಾ ಕೂದಲು ಯಾವುದೂ ನಿಮ್ಮನ್ನು ವ್ಯಾಖ್ಯಾನಿಸುವುದಿಲ್ಲ. ನಿಮ್ಮೊಳಗಿನ ಸೌಂದರ್ಯವೇ ನಿಮ್ಮೊಳಗನ್ನು ಬೆಳಗುವುದು ಎಂದು ಫೋಟೊಶೂಟ್ ಮೂಲಕ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.