ADVERTISEMENT

ಅಪರೂಪದ ಮಾರ್ಜಾಲ ಪ್ರಭೇದ ‘ಬೊಬ್‌’ ಬೆಕ್ಕು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 14:36 IST
Last Updated 17 ಜೂನ್ 2018, 14:36 IST
‘ಬೊಬ್‌
‘ಬೊಬ್‌   

ಬೆಕ್ಕುಗಳಲ್ಲಿ ಈವರೆಗೆ ಹಲವು ತಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕಾಡು ಬೆಕ್ಕಿನಂತೆ ಕಾಣುವ ಮತ್ತು ವಿಶಿಷ್ಟವಾದ ತಳಿ ‘ಬೊಬ್‌’. ಇದು ಪರ್ವತ ಭಾಗಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಬೆಕ್ಕಿನ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ. ಬೊಬ್‌ ಬೆಕ್ಕಿನಲ್ಲಿ 12 ಪ್ರಭೇದಗಳಿವೆ. ಪರ್ವತ ಪ್ರದೇಶಗಳಲ್ಲಿ ಕಾಣಿಸುವ ಬೊಬ್‌ ಬೆಕ್ಕು ಉಳಿದ ಪ್ರದೇಶದಲ್ಲಿ ಕಾಣಿಸುವ ಬೆಕ್ಕಿಗಿಂತಲೂ ವಿಶಿಷ್ಟವಾಗಿರುತ್ತದೆ.

ಅಪರೂಪಕ್ಕೊಮ್ಮೆ ಕಾಣಸಿಗುವ ಈ ಬೆಕ್ಕು ಸಿಂಹದ ಲಕ್ಷಣವನ್ನು ಹೋಲುವುದರಿಂದ ಪರ್ವತದ ಸಿಂಹ ಎಂದೂ ಕರೆಯಲಾಗುತ್ತದೆ. ಇದರ ಸುಂದರ ತುಪ್ಪಳ ಮತ್ತು ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ. ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿಯೂ ಇದನ್ನು ಕೊಲ್ಲುತ್ತಾರೆ. ಈ ಎಲ್ಲಾ ಕಾರಣಗಳಿಂದ ಇದರ ಸಂತತಿ ಗಣನೀಯವಾಗಿ ಕ್ಷೀಣಿಸಿದೆ. ಹೀಗಾಗಿ ಇದನ್ನು ಅಳವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ.

ಹೇಗಿರುತ್ತದೆ?: ಇದು ಮೂರು ವಿಭಿನ್ನ ಪ್ರದೇಶಗಳಲ್ಲಿದ್ದು, ಆಯಾ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ಇರುತ್ತದೆ. ನೋಡಲು ದಷ್ಟ–ಪುಷ್ಟವಾಗಿರುತ್ತದೆ. ಸಣ್ಣ ಬಾಲವನ್ನು ಹೊಂದಿದೆ. ತುಪ್ಪಳವು ಕಂದು ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ. ಚರ್ಮದ ಮೇಲೆ ಚಿರತೆಗೆ ಇರುವಂತೆ ಕಪ್ಪು ಚುಕ್ಕಿಗಳು ಇರುತ್ತವೆ. ಕಿವಿಗಳು ಸೂಕ್ಷ್ಮವಾಗಿರುತ್ತದೆ. ಇದರ ಬಾಲವು 15 ಸೆ.ಮೀ ನಷ್ಟು ಮಾತ್ರ ಇರುತ್ತದೆ. 

ADVERTISEMENT

ಎಲ್ಲೆಲ್ಲಿವೆ?: ದಕ್ಷಿಣ ಆಫ್ರಿಕಾ, ಉತ್ತರ ಅಮೆರಿಕ ಮತ್ತು ಮೆಕ್ಸಿಕೊ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಹೆಚ್ಚು ಪರ್ವತ ಪ್ರದೇಶ ಮತ್ತು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಾಸ ಮಾಡಲು ಇಷ್ಟಪಡುತ್ತವೆ.

ಜೀವನ ಕ್ರಮ ಮತ್ತು ವರ್ತನೆ: ಈ ಪ್ರಾಣಿ ಏಕಾಂಗಿಯಾಗಿ ಜೀವಿಸಲು ಇಷ್ಟಪಡುವುದರೊಂದಿಗೆ ಹೆಚ್ಚು ಕತ್ತಲಲ್ಲಿ ವಾಸಿಸುತ್ತದೆ. ಇತರ ಪ್ರಾಣಿಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಹೊಂದಿದೆ. ರಾತ್ರಿ ಹೊತ್ತು ಹೆಚ್ಚು ಚುರುಕಾಗಿರುತ್ತದೆ. ಆಹಾರ ಅರಸಿ ರಾತ್ರಿಯೆಲ್ಲ ಸುತ್ತುತ್ತದೆ. ಹಗಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ.

ಸಂತಾನೋತ್ಪತ್ತಿ: ವಸಂತ ಕಾಲ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ವರ್ಷಕ್ಕೆ ಒಂದು ಬಾರಿ ಮಾತ್ರ ಜನ್ಮ ನೀಡುತ್ತದೆ.

ಮರಿಯ ಪಾಲನೆ ಮತ್ತು ಪೋಷಣೆಯಲ್ಲಿ ಗಂಡು ಯಾವುದೇ ಪಾತ್ರವನ್ನು ವಹಿಸುವುದಿಲ್ಲ.  ಒಂದು ಬಾರಿಗೆ ಐದರಿಂದ ಆರು ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದ ಮರಿಗಳು 10 ದಿನಗಳವರೆಗೆ ಕಣ್ಣು ಬಿಡುವುದಿಲ್ಲ.

ಜನಿಸಿದ ಎಂಟು ತಿಂಗಳವರೆಗೆ ಆಹಾರಕ್ಕಾಗಿ ತಾಯಿಯನ್ನೇ ಅವಲಂಭಿಸಿರುತ್ತದೆ. ತಾಯಿಯೊಂದಿಗೆ ಬೇಟೆಯಾಡುವುದನ್ನು ಮರಿಗಳು ಕಲಿಯುತ್ತವೆ.

ವಿಶೇಷ

* ಪರ್ವತದ ಸಿಂಹ ಎಂದು ಹೆಸರುವಾಸಿಯಾಗಿದೆ
* ತನಗಿಂತಲ್ಲು ದೊಡ್ಡ ಪ್ರಾಣಿಯನ್ನು ಬೇಟೆಯಾಡುವ ಸಾಮರ್ಥ್ಯವಿರುವ ಪ್ರಾಣಿ
* ಮೂರು ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಮೂರು ಪ್ರದೇಶಗಳಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ
* ಒಟ್ಟು 12 ಪ್ರಭೇದಗಳಿದೆ
* ನೋಡಲು ದಷ್ಟ–ಪುಷ್ಟವಾಗಿರುತ್ತದೆ
* ಜಾನುವಾರುಗಳನ್ನು ಬೇಟೆಯಾಡುವ ಸಾಮರ್ಥ್ಯವಿದ್ದು, 3 ಮೀಟರ್‌ಗಳ ಅಂತರದಿಂದ ಹೊಂಚು ಹಾಕುತ್ತದೆ
* ಇದರ ಚರ್ಮಕ್ಕೆ ಹೆಚ್ಚಿನ ಬೇಡಿಕೆ

ಆಹಾರ
ಸಾಮಾನ್ಯವಾಗಿ ಸಣ್ಣ ಪ್ರಾಣಿಗಳಾದ ಇಲಿ, ಮೊಲ, ಕೀಟ ಮತ್ತು ಹಲ್ಲಿ, ನೆಲದ ಮೇಲೆ ವಾಸಿಸುವ ಪ್ರಾಣಿಗಳನ್ನು ಭಕ್ಷಿಸುತ್ತದೆ. ತೀವ್ರ ಚಳಿಗಾಲದಲ್ಲೂ ಮಂದವಾದ ತುಪ್ಪಳದಿಂದ ದೇಹ

ವನ್ನು ರಕ್ಷಿಸಿಕೊಳ್ಳುತ್ತದೆ. ಗಾತ್ರದಲ್ಲಿ ತನಗಿಂತ ದೊಡ್ಡ ಪ್ರಾಣಿಯನ್ನು ಬೇಟೆಯಾಡುತ್ತದೆ. ಇದು ಮೂರು ಮೀಟರ್‌ ದೂರದಿಂದಲೂ ಜಿಗಿಯುವ ಸಾಮರ್ಥ್ಯ ಹೊಂದಿದ್ದು, ಕತ್ತಲೆಯಲ್ಲಿ ಅವಿತು ಕುಳಿತು, ಯಾವುದಾದರೂ ಪ್ರಾಣಿಗಳು ಬಂದ ಕೂಡಲೇ ಅವುಗಳ ಮೇಲೆ ಜಿಗಿದು ಕೊಲ್ಲುತ್ತದೆ.

ತನ್ನ ದೇಹದ ಗಾತ್ರಕ್ಕಿಂತಲೂ ದೊಡ್ಡದಾದ ಪ್ರಾಣಿಗಳನ್ನು ಬೇಟೆಯಾಡುವುದನ್ನು ಬೊಬ್‌ ಬೆಕ್ಕು ಕರಗತ ಮಾಡಿಕೊಂಡಿದೆ. ಜಾನುವಾರು, ಕೋಳಿ ಮತ್ತು
ಕುರಿಗಳನ್ನೂ ಇದು ಸೇವಿಸುತ್ತದೆ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.