ADVERTISEMENT

ಅಪ್ಪಾ ಐ ಲವ್‌ ಯೂ ಪಾ...

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಅಪ್ಪಾ ಐ ಲವ್‌ ಯೂ ಪಾ...
ಅಪ್ಪಾ ಐ ಲವ್‌ ಯೂ ಪಾ...   

ಪ್ರೀತಿಯ ಅಪ್ಪಾ...
ನನ್ನನ್ನೇ ನಾನು ಕಳೆದುಕೊಂಡು ಹುಡುಕಾಡುತ್ತಿದ್ದ ಸಂದರ್ಭವದು. ನನ್ನವರು ಯಾರು ಇಲ್ಲ ಅನಾಥಳೆಂದು ರೋದಿಸುತ್ತಿದ್ದಾಗ ನನ್ನ ಕೈ ಹಿಡಿದು, ಜೊತೆಗೆ ನಾನಿದ್ದೇನೆ ನಾನು ಎಂದೆಂದಿಗೂ ನಿನ್ನವನೆಂದು ಸಾಥ್ ನೀಡಿ ನನ್ನ ಬದುಕಿಗೆ ಒಂದು ಹೊಸ ರೂಪವನ್ನೇ ನೀಡಿದೆ.

ನನ್ನ ಜೀವನದ ಪ್ರತಿಯೊಂದು ಕ್ಷಣಕ್ಕೂ ನೀನೇ ಸಾಕ್ಷಿ, ನನ್ನ ನಗುವಿಗೆ ನೀನೇ ಕಾರಣ. ನನ್ನ ಪ್ರಪಂಚದಲ್ಲಿ ಕೇವಲ ನಾನು ನೀನು ಮಾತ್ರ. ಆ ಪ್ರಪಂಚ ಎಷ್ಟೊಂದು ಸುಂದರ......

ನನ್ನ  ಜೀವನದ ಈ ದಾರಿಯಲ್ಲಿ  ಎಲ್ಲಿ ಎಡವಿ ಬೀಳುವೆನೆಂದು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿರುವೆ. ಆದರೆ ಯಮರಾಯ ಬಂದು ನನ್ನ ಬೀಳಿಸಿ ಯಾವಾಗ ತನ್ನ ಬಳಿ ಕರೆದುಕೊಂಡು ಹೋಗ್ತಾನೋ....... ನಾನಿಲ್ಲದೇ ಹೋದರೆ ನೀನು ಏಕಾಂಗಿಯಾಗ್ತೀಯ ಅನ್ನೋ ಭಯ. ಒಂದು ವೇಳೆ ನೀನು ಇಲ್ಲದೇ ಹೋದರೆ ನನ್ನ ಜೀವನ ಗೂಡಿಲ್ಲದ ಪಕ್ಷಿಯ ಹಾಗೆ. ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು ಬದುಕಿರೋದೇ ನೀನಿರುವೆ ಎಂಬ ಧೈರ್ಯದ ಮೇಲೆ.

ಜೀವನದಲ್ಲಿ ಕೇವಲ ಕಪ್ಪು–ಬಿಳುಪು ಮಾತ್ರ ನೋಡುತ್ತಿದ್ದ ನನಗೆ ದುಃಖ, ಅಶಾಂತಿ, ನೋವು ಇವೇ ಜೊತೆಗಾರರಾಗಿದ್ದವು. ಆದರೀಗ ನನ್ನ ಜೀವನಕ್ಕೆ ಕಾಮನಬಿಲ್ಲಿನ ಬಣ್ಣವನ್ನು ಸುರಿಸಿರುವೆ. ನಿನ್ನ ನಿಸ್ವಾರ್ಥ ಪ್ರೀತಿ ನನ್ನನ್ನು ಕಟ್ಟಿ ಹಾಕಿದೆ. ನನ್ನ ಕೈ ಹಿಡಿದು ಅಕ್ಷರ ಕಲಿಸಿದೆ.

ಸಮಾಜದಲ್ಲಿ ಬದುಕುವ ಕಲೆಯನ್ನು ಹೇಳಿಕೊಟ್ಟೆ. ನಾ ಹೊರಟಿರುವ ದಾರಿ ತಪ್ಪು ಎಂದು ಗೊತ್ತಾದಾಗ ತಿಳಿ ಹೇಳಿದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಮುನಿಸಿಕೊಳ್ಳದೆ ಬೈಯದೆ ಪ್ರೀತಿ ಮಾತುಗಳಿಂದ ನನಗೇ ತಿಳಿಯದಂತೆ ಮನ ಪರಿವರ್ತಿಸಿದೆ.

ನಿನ್ನ ಮಡಿಲಲ್ಲಿ ಕಂದಮ್ಮನಂತೆ ಸದಾ ಮಲಗುವ ಬಯಕೆ.  ಊಟ, ಪಾಠ, ಆಟ ಎಲ್ಲವೂ ನಿನ್ನೊಂದಿಗೆ. ನನಗೆ ಯಾವುದು ಒಳ್ಳೆಯದು ಅನ್ಸುತ್ತೋ ಅದನ್ನ ನೀನು ತೆಗೆದುಕೊಡಲ್ಲ ಬದಲಾಗಿ ಯಾವುದರಿಂದ ನನಗೆ ಒಳ್ಳೆದು ಆಗುತ್ತೋ ಅದನ್ನ ಮಾತ್ರ ನೀನು ನಂಗೆ ತೆಗೆದುಕೊಡೋದು. ಅದಕ್ಕೆ ನೀನು ಅಂದ್ರೆ ತುಂಬಾ ಇಷ್ಟ.

ನನಗೆ ಒಂದು ದೊಡ್ಡ ಆಸೆ ನಿನ್ನಂಥ ಹುಡುಗ ನನ್ನ ಕೈ ಹಿಡಿಬೇಕು ಅಂತ. ನನಗೆ ತುಂಬಾ ಹೆಮ್ಮೆ ಇದೆ ನಾನು ನಿನ್ನ ಮಗಳು, ನೀನು ನನ್ನ ಅಪ್ಪ ಅಂತ. ಅಪ್ಪಾ ಐ ಲವ್‌ ಯೂ ಪಾ...
-ಅರ್ಚನಾ ಕೆ., ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT