ADVERTISEMENT

‘ಅಮ್ಮಾ ನಂಗೂ ಹಾಗೇ ಕಾಫಿ ಕೊಡಮ್ಮಾ’

ರೋಹಿಣಿ ಮುಂಡಾಜೆ
Published 11 ಸೆಪ್ಟೆಂಬರ್ 2017, 19:30 IST
Last Updated 11 ಸೆಪ್ಟೆಂಬರ್ 2017, 19:30 IST
‘ಒಂದು ಮಗ್ಗ್‌ನಲ್ಲಿ ಹಾಲು... ಇನ್ನೊಂದರಲ್ಲಿ ಬ್ರೂ...’
‘ಒಂದು ಮಗ್ಗ್‌ನಲ್ಲಿ ಹಾಲು... ಇನ್ನೊಂದರಲ್ಲಿ ಬ್ರೂ...’   

ಹಾಲಿನಂಥ ಬಿಳುಪು ನಿರ್ಮಾದಿಂದ ಬಂತು... ಎಲ್ಲಾರ ಬಟ್ಟೆಗೆ ಫಳಫಳ ಹೊಳಪು ತಂತು, ಎಲ್ಲಾರ ನೆಚ್ಚಿನ ನಿರ್‌ಮಾ... ನಿರ್ಮಾ...’ – ನೀವೂ ಸರಾಗವಾಗಿ ಹಾಡಿಕೊಂಡಿರಿ ತಾನೆ? ಹೌದಲ್ಲ? 80ರ ದಶಕದಿಂದ 90ರ ದಶಕದವರೆಗೂ ಆಕಾಶವಾಣಿ ಮೂಲಕ ಕೇಳುಗರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದ ‘ವಾಶಿಂಗ್‌ ಪೌಡರ್‌ ನಿರ್ಮಾ’ದ ಜಾಹೀರಾತು ಅದು. ಯಾವುದೋ ಮನೆಯಿಂದ ರೇಡಿಯೊದಲ್ಲಿ ಆ ಹಾಡು ಕೇಳಿಬಂದರೆ ಮಕ್ಕಳು ಮನೆಯಿಂದ ಹೊರಗೋಡಿ ಬಂದು ಹಾಡಿ ಕುಣಿದು ಸಂಭ್ರಮಿಸುತ್ತಿದ್ದರು.

ದೊಡ್ಡವರ ಜಾಹೀರಾತುಗಳೂ ಮಕ್ಕಳನ್ನು ಸೆಳೆಯುವುದು ಇದೆ. ಈಗ ಬರುತ್ತಿರುವ ‘ಬ್ರೂ’ ಜಾಹೀರಾತನ್ನೇ ನೋಡಿ. ಅಮ್ಮ ಕರೆದಾಗಲೂ ತಿರುಗಿ ನೋಡದೆ ಆಟದಲ್ಲಿ ತನ್ಮಯನಾಗಿದ್ದ ಬಾಲಕನೂ ‘ಒಂದು ಮಗ್‌ನಲ್ಲಿ ಹಾಲು ಮತ್ತೊಂದರಲ್ಲಿ ಬ್ರೂ ಸ್ವಲ್ಪ ಸಕ್ಕರೆ ಸೇರಿಸಿ ಈಗ ಮಿಕ್ಸಾರಂಭಿಸಿ ಈ ಮಗ್ಗ್‌ನಿಂದ ಆ ಮಗ್ಗ್‌ಗೇ ಸವಿಯಿರಿ ಟೇಸ್ಟಿ ಕಾಫಿ...’ ಎಂದು ಗುನುಗುತ್ತಾನೆ. ಮಗ್‌ನಿಂದ ಮಗ್‌ಗೆ ಕಾಫಿ ಬದಲಾದಂತೆ ಅವನೂ ಆ ಕಡೆ ಈ ಕಡೆ ವಾಲುತ್ತಾನೆ. ‘ಅಮ್ಮಾ ನಂಗೂ ಹಾಗೇ ಕಾಫಿ ಮಾಡಿಕೊಡಮ್ಮಾ’ ಅಂತ ಗೋಗರೆಯುತ್ತಾನೆ.

ಮಕ್ಕಳಿಗೆ ಮೋಡಿ ಮಾಡಿದ ಮತ್ತೊಂದು ಜಾಹೀರಾತು ‘ಫೆವಿ ಕ್ವಿಕ್‌’ ಗೋಂದಿನದ್ದು. ಪಕ್ಕದ ಮನೆಯ ಮಕ್ಕಳು ಒಂದು ಕೋಲಿಗೆ ಫೆವಿ ಕ್ವಿಕ್‌ ಗಮ್‌ನ ಗುರುತು ಹಾಕಿ ಅಕ್ವೇರಿಯಂನಿಂದಲೇ ಮೀನು ಹಿಡಿದುಬಿಟ್ಟಿದ್ದರು!

ADVERTISEMENT

ಅದಾದ ಬಳಿಕ ಫೆವಿ ಕ್ವಿಕ್‌ ಹೊಸ ಜಾಹೀರಾತು ಬಿಡುಗಡೆ ಮಾಡಿತ್ತು. ಮಕ್ಕಳು ಶಾಲೆಯಲ್ಲಿ ಪ್ರಹಸನ ರೂಪದಲ್ಲಿ ಪ್ರದರ್ಶಿಸಿ ಬಹುಮಾನವನ್ನೂ ಗೆದ್ದ ಜಾಹೀರಾತು ಅದು. ಭಾರತ ಮತ್ತು ಪಾಕಿಸ್ತಾನದ ಇಬ್ಬರು ಯೋಧರು ಗೌರವ ವಿನಿಮಯ ಮಾಡಿಕೊಳ್ಳುವ ದೃಶ್ಯ. ನಮ್ಮ ಯೋಧನಂತೆಯೇ ಎದೆಯ ಮಟ್ಟಕ್ಕೆ ಕಾಲು ಎತ್ತರಿಸಿ ನೆಲಕ್ಕೆ ಕುಕ್ಕಬೇಕು ಎನ್ನುವಷ್ಟರಲ್ಲಿ ಆಚೆಯವನ ಬೂಟಿನ ಸೋಲ್‌ ಉದ್ದುದ್ದಕ್ಕೆ ಕಿತ್ತುಬಂದಿರುವುದನ್ನು ನಮ್ಮ ಯೋಧನೇ ಕಣ್ಸನ್ನೆಯಿಂದ ತೋರಿಸುವುದು, ಪಾಕ್‌ ಯೋಧ ಕಣ್ಸನ್ನೆಯಿಂದಲೇ ಏನು ಅಂತ ಕೇಳುವುದು, ಬೂಟಿನತ್ತ ನೋಟ ಹರಿಯುತ್ತಲೇ ಮ್ಯಾಜಿಕ್‌ನಂತೆ ಫೆವಿಕ್ವಿಕ್‌ ಹಾಕುವುದು, ಅರೆಕ್ಷಣದಲ್ಲಿಯೇ ಬೂಟಿನ ಸೋಲ್‌ ರಿಪೇರಿಯಾಗುವುದು...

‘ಡೋಂಟ್‌ ಅಂಡರ್‌ ಎಸ್ಟಿಮೇಟ್‌ ಗೋಲು’ ಎಂದು, ಸ್ವಾಭಿಮಾನವನ್ನೇ ಧ್ವನಿಯಾಗಿಸಿ ಹೇಳುವ ‘ಆಲ್‌ ಔಟ್‌’ನ ಹುಡುಗ, ನಮ್ಮದೇ ಮನೆಯ ತರ್ಲೆ ಬಾಲಕರ ಪ್ರತಿನಿಧಿಯಂತೆ ಕಾಣುತ್ತಾನೆ. ತನ್ನ ತೋರುಬೆರಳನ್ನು ಅಡ್ಡಡ್ಡ ಅಲ್ಲಾಡಿಸುತ್ತಾ ಅವನು ಹಾಗೆ ಹೇಳುವ ರೀತಿ, ಮಕ್ಕಳ ಸಾಮರ್ಥ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ದೊಡ್ಡವರ ತಲೆಗೆ ಮೊಟಕಿದಂತೆ ಇದೆ!

ತಿಳಿ ನೀಲಿ ಬಣ್ಣದ ಅಂಗಿಯಲ್ಲಿ ಜಿಡ್ಡುಯುಕ್ತ ಸಾಂಬಾರಿನ ಕಲೆ ಮಾಡಿಕೊಂಡ ಹುಡುಗ ‘ಪೋರಪೋರ್‌’ ಎಂದು ಹೇಳುತ್ತಲೇ ಅಂಗಿ ತೆಗೆದು ಎಸೆಯುವ ದೃಶ್ಯ ‘ಸರ್ಫ್‌ ಎಕ್ಸೆಲ್‌’ನಲ್ಲಿ ಬರುತ್ತದೆ. ‘ಪಪ್ಪಾ ಪೋರಪೋರ್‌’ ಅಂತ ಮತ್ತೆ ಹೇಳುತ್ತಾನೆ. ‘ಪೋರ್‌ ರಬ್‌ ಪೋರ್‌’ ಎಂದು ಮಗನ ಮಾತನ್ನು ಬಿಡಿಸಿ ಹೇಳುವ ಅಮ್ಮ, ‘ಆಡಿ ಬಾ ನ ಕಂದ ಅಂಗಾಲ ತೊಳೆದೇನು...' ಎಂದು ಹಾಡುವ ಜನಪದದ ತಾಯಿಯನ್ನು ನೆನಪಿಸುತ್ತದೆ.

80ರ ದಶಕದಲ್ಲಿ ರೇಡಿಯೊದಲ್ಲಿ ಬರುತ್ತಿದ್ದ ಮುಂಜಾವಿನ ಭಕ್ತಿಸಂಗೀತದಿಂದ ಹಿಡಿದು ‘ಕೃಷಿರಂಗ’, ‘ವಿವಿಧ್‌ ಭಾರತಿ’ಯ ಪ್ರಕಟಣೆ ಮತ್ತು ಹಿನ್ನೆಲೆ ಸಂಗೀತ ಓದು ಬಾರದ ಮಂದಿಗೂ ಬಾಯಿಪಾಠವಾಗಿರುತ್ತಿದ್ದವು. ಎರಡು ಮೂರು ದಶಕ ಕಳೆದರೂ ಮರೆಯದೆ ಆ ಹಾಡುಗಳನ್ನು ಸರಾಗವಾಗಿ ಹಾಡಿ ಇಂದಿನ ಎಫ್‌ಎಂಗಳಿಗೆ ಬೈಯ್ಯವವರೂ ಇದ್ದಾರೆ. ಪ್ರತಿ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ‘ರಿನ್‌ ರಂಗೋಲಿ’ಯ ಪ್ರೋಮೊ ಹಾಡು ಕಿವಿಗೆ ಬಿದ್ದ ಮೇಲೆಯೇ ಎದ್ದು ಹಜಾರಕ್ಕೆ ಬರುತ್ತಿದ್ದವರೆಷ್ಟೋ!

ಕೆಲವು ಜಾಹೀರಾತುಗಳು ಮನಸ್ಸುಗಳನ್ನು ಆವರಿಸಿಕೊಳ್ಳುವ ರೀತಿ ನಿಜಕ್ಕೂ ಅಮೋಘ. ಮಕ್ಕಳಿಗೆ ಮೋಡಿ ಮಾಡುವ ರೀತಿಗೆ ಹ್ಯಾಟ್ಸಾಫ್‌ ಅನ್ನಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.