ADVERTISEMENT

ಆಲೋಚಿಸಬಲ್ಲ ರೋಬೊ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಸ್ವಂತ ಆಲೋಚನೆಯುಳ್ಳ ರೋಬೊಗಳ ಪರಿಕಲ್ಪನೆ ವಿಜ್ಞಾನ ಸಾಹಿತ್ಯದಲ್ಲಿ ಸಾಕಷ್ಟಿದೆ. ಇವುಗಳು ಸೃಷ್ಟಿಸುವ ಅಪಾಯ ಅಥವಾ ಇವುಗಳು ಮಾಡಬಹುದಾದ ಒಳಿತುಗಳ ಕುರಿತಂತೆ ಕತೆಗಾರರ ಕಲ್ಪನೆಗಳು ಎಲ್ಲಾ ದೇಶ ಮತ್ತು ಭಾಷೆಗಳಲ್ಲಿ ವ್ಯಾಪಿಸಿವೆ. ಈಗ ಕೈಗಾರಿಕಾ ಬಳಕೆಗಾಗಿ ಸ್ವಯಂಚಾಲಿತ ಯಂತ್ರಗಳನ್ನು ತಯಾರಿಸುವ ಜರ್ಮನಿಯ ರೋಬೊಟಿಕ್ ಕಂಪೆನಿ ಫೆಸ್ಟೋ ಚಿಂತಿಸಬಲ್ಲ ರೋಬೊ ಇರುವೆಗಳ ಪರಿಕಲ್ಪನೆಯನ್ನು ನಿಜವಾಗಿಸಿಬಿಟ್ಟಿದೆ.

ಕಂಪೆನಿಯ ಬಯೋನಿಕ್ ಲರ್ನಿಂಗ್ ನೆಟ್‌ವರ್ಕ್‌ನ ಭಾಗವಾಗಿ ವಿನ್ಯಾಸ ಗೊಂಡಿರುವ ರೋಬೊ ಇರುವೆಗಳು ಸುಮಾರು 4.3 ಸೆಂಟಿ ಮೀಟರ್‌ನಷ್ಟು ಎತ್ತರವಿದ್ದು ಸುಮಾರು ನೂರು ಗ್ರಾಂಗಳಷ್ಟು ಭಾರವಿವೆ. ಇವುಗಳಿಗೆ ತ್ರಿ ಆಯಾಮ ಅಥವಾ 3D ಕ್ಯಾಮೆರಾಗಳನ್ನು ಕಣ್ಣುಗಳಾಗಿ ಅಳವಡಿಸಲಾಗಿದೆ. ಇವುಗಳ ಹೊಟ್ಟೆಯ ಭಾಗದಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಆಚೀಚೆ ಓಡಾಡುವಾಗ ಸ್ಥಳವನ್ನು ಪರಿಶೀಲಿಸುವುದಕ್ಕೆ ಅನುಕೂಲ ಕಲ್ಪಿಸುತ್ತದೆ. ಇದರ ದೇಹ ಇರುವೆಯ ದೇಹವನ್ನೇ ಹೋಲುತ್ತದೆ.

ಇದು ಕಾರ್ಯನಿರ್ವಹಿಸುವುದಕ್ಕೆ ರೂಪಿಸಲಾಗಿರುವ ಅತಿ ಸಂಕೀರ್ಣವಾದ ಕಂಪ್ಯೂಟರ್ ಪ್ರೋಗ್ರಾಂಗಳು ಇವುಗಳನ್ನು ನಿಜ ಇರುವೆಗಳಂತೆಯೇ ಕೆಲಸ ಮಾಡಲು ಬೇಕಾದಂತಿವೆ. ಇರುವೆಯೊಂದು ತನ್ನ ದಾರಿಗೆ ಏನಾದರೂ ಅಡ್ಡವಾಗಿದ್ದಾಗ ಹೇಗೆ ವರ್ತಿಸುತ್ತದೆಯೋ ಅದೇ ಬಗೆಯಲ್ಲಿ ಇದು ಸ್ವತಂತ್ರ ನಿರ್ಧಾರ ಕೈಗೊಂಡು ಮುಂದಕ್ಕೆ ಸಾಗುತ್ತದೆಯಂತೆ. ಇವುಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಬಹುದು ಎಂದು ಕಂಪೆನಿ ಹೇಳುತ್ತಿದೆ. ಇವುಗಳ ಸ್ವಂತ ನಿರ್ಧಾರಕ್ಕೊಂದು ಮಿತಿಯಂತೂ ಇದ್ದೇ ಇದೆ. ಇವುಗಳು ನಿಜ ಇರುವೆಗಳಂತೆಯೇ ಮನುಷ್ಯರನ್ನು ಕಚ್ಚುತ್ತವೆಯೇ ಇಲ್ಲವೇ ಎಂಬುದರ ಕುರಿತಂತೆ ಕಂಪೆನಿಯ ಪ್ರಕಟಣೆ ಮೌನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.