ADVERTISEMENT

ಇಂದಿರಾ ಪಾತ್ರಕ್ಕೆ ವಿದ್ಯಾಬಾಲನ್ ರೆಡಿ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ವಿದ್ಯಾಬಾಲನ್
ವಿದ್ಯಾಬಾಲನ್   

ಬಾಲಿವುಡ್‌ನಲ್ಲಿ ಈಗ ಬಯೋಪಿಕ್‌ಗಳ ಪರ್ವ. ಮೇರಿ ಕೋಮ್‌, ಗೀತಾ ಪೋಗಟ್‌, ಎಂ.ಎಸ್‌.ಧೋನಿ, ಸಂಜಯ್ ದತ್ ಹೀಗೆ ಸರಣಿಯೋಪಾದಿಯಲ್ಲಿ ಬಯೋಪಿಕ್‌ಗಳು ಬರುತ್ತಿವೆ.

ಇತ್ತೀಚಿನ ತಾಜಾ ಸುದ್ದಿ ಏನೆಂದರೆ  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಬಯೋಪಿಕ್‌ಗೆ ಸಿದ್ಧತೆ ನಡೆದಿದೆ.

‘ಇಂದಿರಾ ಗಾಂಧಿ ಪಾತ್ರ ಮಾಡಲು ತಾನು ಯಾವತ್ತೂ ಸಿದ್ಧ’ ಎಂದು ಮಲಯಾಳಿ ಸುಂದರಿ ವಿದ್ಯಾಬಾಲನ್‌ ಹೇಳಿದ್ದಾರೆ.

ADVERTISEMENT

‘ಬಯೋಪಿಕ್‌ಗಳಲ್ಲಿ ಅಭಿನಯಿಸುವುದು ನನಗಿಷ್ಟ. ಅದು ಎಂ.ಎಸ್.ಸುಬ್ಬುಲಕ್ಷ್ಮೀ, ಮೀನಾಕುಮಾರಿ ಅಥವಾ ಇಂದಿರಾ ಗಾಂಧಿ ಕುರಿತದ್ದೇ ಆಗಿರಲಿ ನಾನಂತೂ  ಅಭಿನಯಿಸಲು ಸದಾ ಸಿದ್ಧ. ಅದರಲ್ಲೂ ಇಂದಿರಾ ಪಾತ್ರದಲ್ಲಿ ತೆರೆಯಲ್ಲಿ ಕಾಣಿಸಿಕೊಳ್ಳಲು ನನಗಿಷ್ಟ. ಆದರೆ, ಇಂದಿರಾ ಕುರಿತ ಚಿತ್ರಕ್ಕೆ ಅವರ ಕುಟುಂಬದವರ ಒಪ್ಪಿಗೆ ಸಿಗಬೇಕು’ ಎಂದು ವಿದ್ಯಾ ಹೇಳಿದ್ದಾರೆ.

(ಇಂದಿರಾ ಗಾಂಧಿ)

ಇಂದಿರಾ ಬಯೋಪಿಕ್‌ಗೆ ಈಗಾಗಲೇ ಚಿತ್ರಕತೆ ತಯಾರಾಗಿದೆ. ಆದರೆ, ಇಂದಿರಾ ಕುಟುಂಬದ ಒಪ್ಪಿಗೆ ಇಲ್ಲದೇ ತಾನು ಅಭಿನಯಿಸಲಾರೆ ಎಂದು ವಿದ್ಯಾ ಕಡ್ಡಿಮುರಿದಂತೆ ಚಿತ್ರತಂಡಕ್ಕೆ ಹೇಳಿದ್ದಾರಂತೆ. ಈ ಹಿಂದೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಕುರಿತ ಬಯೋಪಿಕ್‌ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಸುಬ್ಬುಲಕ್ಷ್ಮಿ ಅವರ ಕುಟುಂಬದಿಂದ ಒಪ್ಪಿಗೆ ಸಿಗದ ಕಾರಣ, ತೀವ್ರ ನಿರಾಸೆಗೊಳಗಾಗಬೇಕಾಯಿತು.

ಹಾಗಾಗಿ, ಈ ಬಾರಿ ಆ ರೀತಿ ಆಗದಿರಲಿ ಎಂದು ವಿದ್ಯಾ ಸಾಕಷ್ಟು ಮುನ್ನೆಚ್ಚರಿಕೆಯಿಂದ ಇಂದಿರಾ ಕುಟುಂಬದ ಒಪ್ಪಿಗೆ ಅಗತ್ಯ ಎಂದು ಚಿತ್ರತಂಡಕ್ಕೆ ಸೂಚಿಸಿದ್ದಾರೆ. ಅಂದಹಾಗೆ ಇಂದಿರಾ ಕುರಿತು ಬಯೋಪಿಕ್ ಅನ್ನು ನಿರ್ದೇಶಕ ಮನೀಶ್ ಗುಪ್ತಾ ನಿರ್ದೇಶಿಸಲಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾನೂನು ತೊಡಕುಗಳ ನಿವಾರಣೆಯಲ್ಲಿ ತೊಡಗಿಕೊಂಡಿದ್ದಾರಂತೆ. ಎಲ್ಲಾ ತೊಡಕುಗಳು ಬಗೆ ಹರಿದಲ್ಲಿ ವಿದ್ಯಾಬಾಲನ್, ಇಂದಿರಾ ಗಾಂಧಿಯಾಗಿ ಮಿಂಚುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.