ADVERTISEMENT

ಇಲ್ಲಿ ನೋಟು ಬಳಸುವವರೇ ಇಲ್ಲ!

ಪೃಥ್ವಿರಾಜ್ ಎಂ ಎಚ್
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಇಲ್ಲಿ ನೋಟು ಬಳಸುವವರೇ ಇಲ್ಲ!
ಇಲ್ಲಿ ನೋಟು ಬಳಸುವವರೇ ಇಲ್ಲ!   

ಯುರೋಪ್‌ ಖಂಡದಲ್ಲಿ ನೋಟುಗಳನ್ನು ಚಲಾವಣೆಗೆ ತಂದ ಮೊದಲ ದೇಶ ಸ್ವೀಡನ್. 1661ರಲ್ಲೇ ಅಲ್ಲಿ ನೋಟುಗಳು ಬಳಕೆಯಲ್ಲಿದ್ದವು. ಅದು ಈಗ ವಿಶ್ವದ ಮೊದಲ ನಗದು ರಹಿತ ದೇಶವಾಗುವತ್ತ ಹೆಜ್ಜೆ ಇಡುತ್ತಿದೆ.

ಅಲ್ಲಿಯ ಬಸ್ಸು, ರೈಲುಗಳಲ್ಲಿ ಟಿಕೆಟ್‌ಗಾಗಿ ನಗದು ರೂಪದಲ್ಲಿ ಹಣ ಪಡೆದುಕೊಳ್ಳುವುದನ್ನು ನಿಲ್ಲಿಸಿ ಅನೇಕ ವರ್ಷಗಳಾಗಿವೆ. ಅಂಗಡಿ ಮುಂಗಟ್ಟುಗಳ ಮಾಲೀಕರೂ ನೋಟು, ನಾಣ್ಯಗಳ ವಹಿವಾಟು ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲಿಯ ಸರ್ಕಾರ ನಗದು ರಹಿತ ವ್ಯವಸ್ಥೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ.

ವಸ್ತುಗಳನ್ನು ಕೊಳ್ಳುವುದು, ಉಡುಗೊರೆ ನೀಡುವುದು, ಹಣ ಸಹಾಯ ಮಾಡುವುದು ಮುಂತಾದ  ನಿತ್ಯದ ವಿವಿಧ  ವಹಿವಾಟುಗಳಿಗಾಗಿ ಮೊಬೈಲ್‌ ಅಥವಾ ಕಾರ್ಡ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. 

ಕಳೆದ ವರ್ಷ ಈ ದೇಶದಲ್ಲಿ ಕೇವಲ ಶೇ 2 ರಷ್ಟು ನಗದು ವಹಿವಾಟು ನಡೆದಿತ್ತು. 2020 ರ ಹೊತ್ತಿಗೆ  ಈ ಪ್ರಮಾಣ ಶೇ 0.5ಗೆ ಇಳಿಯಲಿದ್ದು, 2025ರ ಹೊತ್ತಿಗೆ ಸ್ವೀಡನ್‌ ಸಂಪೂರ್ಣ ನಗದು ರಹಿತ ದೇಶ ಆಗಲಿದೆ ಎಂಬುದು ಆರ್ಥಿಕ ತಜ್ಞರ ವಿಶ್ಲೇಷಣೆ.

1990ರಿಂದಲೇ  ಸ್ವೀಡನ್‌ನಲ್ಲಿ, ಡೆಬಿಟ್‌, ಕ್ರೆಡಿಟ್ ಕಾರ್ಡ್‌ ಬಳಕೆ ಆರಂಭವಾಗಿತ್ತು. ಐದು ವರ್ಷಗಳ ಹಿಂದೆ ಶೇ 50 ರಷ್ಟು ನಗದು ವಹಿವಾಟು ನಡೆಯುತ್ತಿತ್ತು. ಆದರೆ, ಕಾರ್ಡ್‌ಗಳ ಜತೆ ಮೊಬೈಲ್‌ ಫೋನ್‌ ಪೈಪೋಟಿಗೆ ಇಳಿದ ನಂತರ ನಗದು ಬಳಕೆ  ಗಣನೀಯವಾಗಿ ಇಳಿಯಿತು.

ಐಜೆಟ್ಲ್‌ ಬಳಕೆ ಹೆಚ್ಚು
ಚಿಕ್ಕಪುಟ್ಟ ವ್ಯಾಪಾರಿಗಳು, ಸಣ್ಣ ವರ್ತಕರು, ಬೀದಿ ಬದಿ ವ್ಯಾಪಾರಿಗಳು ವಹಿವಾಟಿಗಾಗಿ ಐ ಜೆಟ್‌್ಲಗಳನ್ನು ಬಳಸುತ್ತಿದ್ದಾರೆ. ಇವನ್ನು ಸ್ವಿಡನ್‌ ತಂತ್ರಜ್ಞರೇ ಅಭಿವೃದ್ಧಿಪಡಿಸಿದ್ದಾರೆ. ಇವು ಯುರೋಪ್‌ನ ಇತರ ದೇಶಗಳಿಗೂ ರಫ್ತಾಗುತ್ತಿವೆ.

ಪುಟ್ಟ ಮೊಬೈಲ್‌ಫೋನ್‌ ಗಾತ್ರದಷ್ಟು ಇರುವ ಈ ಐಜೆಟ್ಲ್‌ ಗಳನ್ನು ಸ್ಮಾರ್ಟ್‌ಫೋನ್‌ಗಳೊಂದಿಗೆ ಅನುಸಂಧಾನ ಮಾಡಿ ಫೋನ್‌ನಲ್ಲಿರುವ ಆ್ಯಪ್‌ ಮೂಲಕ ತಕ್ಷಣ ಹಣ ವರ್ಗಾವಣೆ ಮಾಡಬಹುದು. ಸ್ವೀಡನ್‌ನಲ್ಲಿ 5 ವರ್ಷಗಳಿಂದ ಇವುಗಳ ಬಳಕೆ ವಾರ್ಷಿಕ ಶೇ 30ರಷ್ಟು ಹೆಚ್ಚಾಗುತ್ತಿದೆ.

ನಗದು ರಹಿತ ಬ್ಯಾಂಕ್‌ಗಳು!
ಸ್ವೀಡನ್‌ನಲ್ಲಿ ವಿವಿಧ ಬ್ಯಾಂಕ್‌ಗಳ 1600ಕ್ಕೂ ಹೆಚ್ಚು ಶಾಖೆಗಳಲ್ಲಿ ನಗದು ವಹಿವಾಟು ನಡೆಯುವುದಿಲ್ಲ. ಈ ಶಾಖೆಗಳಲ್ಲಿ ನಗದು ರಹಿತವಾಗಿ ನಡೆಯುವಂತಹ ಹಲವು ಬ್ಯಾಂಕಿಂಗ್‌ ಸೌಲಭ್ಯಗಳನ್ನು  ಕಲ್ಪಿಸಲಾಗುತ್ತದೆ.  ಹಣ ಬಳಕೆ ಇಲ್ಲದಿರುವುದರಿಂದ ಬ್ಯಾಂಕ್‌ಗಳಿಗೆ ಹೆಚ್ಚು ಉಳಿತಾಯವಾಗುತ್ತಿದೆ. ಈ ಉಳಿತಾಯ  ಹಣದಿಂದ ಈ ಬ್ಯಾಂಕ್‌ಗಳು ಗ್ರಾಹಕರಿಗೆ ಇತರೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿವೆ. ಇಲ್ಲಿ ಎಟಿಎಂ  ಕಿಯೋಸ್ಕ್‌ಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ADVERTISEMENT

ಎಲ್ಲವೂ ‘ಸ್ವಿಷ್‌’ ಆ್ಯಪ್‌ ಮೂಲಕವೇ
ಸ್ವೀಡನ್‌ನ ನೋರ್ಡಿಯಾ, ಹ್ಯಾಂಡೆಲ್ಸ್‌ ಬ್ಯಾಂಕೆನ್‌, ಡನ್‌ಸ್ಕೇ ಮೊದಲಾದ  ಆರು ಪ್ರಮುಖ ಬ್ಯಾಂಕುಗಳು ಸೇರಿ ‘ಸ್ವಿಷ್‌’ ಆ್ಯಪ್‌ನ್ನು 2012ರಲ್ಲಿ ಬಳಕೆಗೆ ತಂದವು. ಸ್ಮಾರ್ಟ್‌ಫೋನ್‌ ಹೊಂದಿರುವವರು  ಈ ಆ್ಯಪ್‌ ಮೂಲಕ ತಮ್ಮ ಮೊಬೈಲ್‌ ಸಂಖ್ಯೆಯನ್ನು ಬಳಸಿ ಸುಲಭವಾಗಿ ವಹಿವಾಟು ನಡೆಸಬಹುದು. ಬ್ಯಾಂಕ್‌ಗಳ ಎಲ್ಲ ಸೌಲಭ್ಯಗಳು ಈ ಆ್ಯಪ್‌ ಮೂಲಕವೇ ದೊರೆಯುವುದರಿಂದ ಜನರು ನಗದು ಬಳಸಲು ಇಷ್ಟಪಡುತ್ತಿಲ್ಲ.

ಹೇಗೆ ಸಾಧ್ಯವಾಯಿತು...
ಜನಪ್ರಿಯ ಮೊಬೈಲ್‌ ಆಟ ‘ಕ್ಯಾಂಡಿಕ್ರಷ್’ ಮತ್ತು ಪ್ರಸಿದ್ಧ ಸಂಗೀತ ತಂತ್ರಾಂಶ  ‘ಸ್ಪಾಟಿಫೈ’ ಆವಿಷ್ಕಾರವಾದದ್ದು ಸ್ವೀಡನ್‌ನಲ್ಲೇ. ಈ ದೇಶ ಮೊದಲಿನಿಂದಲೂ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಇಲ್ಲಿಯ ಜನ ವಿಶ್ವಕ್ಕೇ ಮಾದರಿ.

ಯುರೋಪಿನ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಸ್ವೀಡನ್‌ನಲ್ಲಿ ಕಾರ್ಡ್‌ಗಳ ಬಳಕೆ   ಮೂರು ಪಟ್ಟು ಅಧಿಕವಾಗಿರುತ್ತದೆ ಎಂದು ‘ವೀಸಾ’
ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.