ADVERTISEMENT

ಒಬ್ಬೊಬ್ಬರೇ ಮಾತಾಡುವುದು ಒಳ್ಳೆಯದಂತೆ!

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ಒಬ್ಬೊಬ್ಬರೇ ಮಾತಾಡುವುದು ಒಳ್ಳೆಯದಂತೆ!
ಒಬ್ಬೊಬ್ಬರೇ ಮಾತಾಡುವುದು ಒಳ್ಳೆಯದಂತೆ!   

ಒಬ್ಬೊಬ್ಬರೇ ಮಾತನಾಡುವವರನ್ನು, ಒಮ್ಮೊಮ್ಮೆ ತಮ್ಮಷ್ಟಕ್ಕೆ ತಾವೇ ಏನೋ ಗುನುಗಿಕೊಳ್ಳುವವರನ್ನು ನೋಡಿ ಹಾಸ್ಯ ಮಾಡುತ್ತೇವೆ. ರಸ್ತೆಯಲ್ಲಿ ಹೋಗುತ್ತಿರುವಾಗ, ಕಚೇರಿಯಲ್ಲಿ, ಶಾಪಿಂಗ್‌ನಲ್ಲಿ ವಸ್ತುಗಳನ್ನು ಕೊಳ್ಳುವಾಗ, ಹೀಗೆ ಹಲವು ಸಂದರ್ಭಗಳಲ್ಲಿ ತಮಗೆ ತಾವೇ ಏನೋ ಹೇಳಿಕೊಳ್ಳುವವರನ್ನು ವಿಚಿತ್ರ ಎಂಬಂತೆ ನೋಡುತ್ತೇವೆ. ಆದರೆ ಹೀಗೆ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವವರು ಉಳಿದವರಿಗಿಂತ ಚೆನ್ನಾಗಿ ಯೋಚಿಸಬಲ್ಲರು ಎನ್ನುತ್ತಿದೆ ಇತ್ತೀಚಿನ ಸಂಶೋಧನೆ.

ಈ ಕುರಿತು ಅಧ್ಯಯನ ನಡೆಸಿರುವ ಮನಃಶಾಸ್ತ್ರಜ್ಞರಾದ ಡೇನಿಯಲ್ ಸ್ವಿಗ್ಲೆ ಮತ್ತು ಗೇರಿ ಲುಪ್ಯಾನ್, ಅಗತ್ಯವಿದ್ದಾಗ ತಾವೇ ತಮ್ಮೊಂದಿಗೆ ಮಾತನಾಡಿಕೊಳ್ಳುವುದು ಅನುಕೂಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೊಂದು ವಿಚಿತ್ರ ಸಂಗತಿಯೇನಲ್ಲ. ತಮ್ಮ ಮನದೊಳಗಿನ ಮಾತಿನೊಂದಿಗೆ ಸಂವಹನ ನಡೆಸುವ ರೀತಿ ಅಷ್ಟೆ ಎಂದಿದ್ದಾರೆ. ಜೊತೆಗೆ ಇದು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಬುದ್ಧಿವಂತರ ಪರಿಯೂ ಹೌದು ಎಂದಿದ್ದಾರೆ.

‘ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರು ಕೂಡ ಆಗಾಗ್ಗೆ ಹೀಗೆ ಕೆಲವು ವಾಕ್ಯಗಳನ್ನು ತಮಗೆ ತಾವೇ ಮತ್ತೆ ಮತ್ತೆ ಮೆಲ್ಲಗೆ ಹೇಳಿಕೊಳ್ಳುತ್ತಿದ್ದರಂತೆ. ಈಗಿರುವ ಎಷ್ಟೋ ಬುದ್ಧಿವಂತ ಅಥವಾ ಕ್ರಿಯಾಶೀಲ ಜನರ ಹಿಂದೆಯೂ ಇಂಥದ್ದೊಂದು ತಂತ್ರವಿರುತ್ತದೆ. ಇದು ಮೆದುಳು ಚುರುಕಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ’ ಎಂದಿದ್ದಾರೆ ಲುಪ್ಯಾನ್.

ಇದಿಷ್ಟೇ ಅಲ್ಲದೇ, ಮೆದುಳಿನಲ್ಲಿ ಹಂಚಿಹೋಗಿರುವ ಹಲವು ಆಲೋಚನೆಗಳನ್ನು ವ್ಯವಸ್ಥಿತವಾಗಿ ತರಲು ನಮ್ಮೊಳಗಿನೊಂದಿಗೆ ನಾವು ಸಂಭಾಷಿಸುವುದು ಉತ್ತಮ ದಾರಿ ಎಂದು ಸಲಹೆ ನೀಡಿದ್ದಾರೆ. ಮಾತನಾಡಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರಗೊಳ್ಳುತ್ತವೆ. ಈ ಸಾಲಿಗೆ ನಮ್ಮೊಂದಿಗೆ ನಾವು ಮಾತನಾಡುವ ರೀತಿಯೂ ಸೇರಿದೆ ಎನ್ನುತ್ತಾರೆ.

ಕೊನೆಗೆ ಎಚ್ಚರಿಕೆ ನೀಡುವುದನ್ನೂ ಅವರು ಮರೆತಿಲ್ಲ. ಈ ರೀತಿ ಒಬ್ಬೊಬ್ಬರೇ ಮಾತನಾಡುವುದು ಎಲ್ಲಾ ಸಮಯದಲ್ಲೂ ಸಹಾಯಕ್ಕೆ ಬರುತ್ತದೆ ಎನ್ನುವಂತಿಲ್ಲ. ಯಾವಾಗಲೂ ಮಾತನಾಡುವುದು, ಉದ್ದೇಶವೇ ಇಲ್ಲದೇ ಸುಖಾಸುಮ್ಮನೆ ಮಾತನಾಡುವುದು, ಯಾವಾಗಲೂ ಗೊಣಗುತ್ತಿರುವುದು ವ್ಯಕ್ತಿತ್ವದ ಋಣಾತ್ಮಕತೆಯನ್ನೂ ಬಿಂಬಿಸುತ್ತವೆ. ಆದ್ದರಿಂದ ಇವುಗಳ ನಡುವಣ ವ್ಯತ್ಯಾಸ ಕಂಡುಕೊಂಡು ಮಾತನಾಡುವುದೇ ಸೂಕ್ತ ರೀತಿ ಎಂದಿದ್ದಾರೆ. ಹಾಗಿದ್ದರೆ ಒಬ್ಬೊಬ್ಬರೇ ಮಾತನಾಡುವ ಮುನ್ನ ಯೋಚಿಸಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT