ADVERTISEMENT

ಕನಸಿನಲ್ಲಿ ಅಡಗಿದೆ ನಂಬಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2016, 19:51 IST
Last Updated 13 ಏಪ್ರಿಲ್ 2016, 19:51 IST
ಕನಸಿನಲ್ಲಿ  ಅಡಗಿದೆ  ನಂಬಿಕೆ
ಕನಸಿನಲ್ಲಿ ಅಡಗಿದೆ ನಂಬಿಕೆ   

ಕನಸು ಕಾಣುವುದು! ಹೀಗೆ ಹೇಳುವಷ್ಟು ಸುಲಭವಲ್ಲ ಕನಸು ಕಾಣುವುದು. ಏಕೆಂದರೆ, ಕನಸು ಕಾಣಲು ಅಪಾರ ಕಾಲ್ಪನಿಕ ಸಾಮರ್ಥ್ಯ ಬೇಕು. ಕಂಡ ಕನಸನ್ನು ಕನಸಿನಲ್ಲಿಯೇ ಬಿಡುವ ವರ್ಗ ಒಂದೆಡೆಯಾದರೆ, ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಜನರೂ ಸಾಕಷ್ಟಿದ್ದಾರೆ.

ಸಾಮಾನ್ಯವಾಗಿ ನಾವು ನಿದ್ರಾದೇವಿಯ ವಶದಲ್ಲಿದ್ದಾಗ ಈ ಕನಸುಗಳು ಕಾಡುತ್ತವೆ. ಅರೆ ನಿದ್ರಾವಸ್ಥೆಯಲ್ಲಿದ್ದಾಗಲೂ ಅವು ನಮ್ಮ ಹತ್ತಿರ ಬಾರೆವು ಎನ್ನುವುದಿಲ್ಲ. ಎಚ್ಚರವಿದ್ದೂ ಕನಸು ಕಾಣುವುದು ಮತ್ತೊಂದು ಕಥೆ. ನಿದ್ದೆಯಲ್ಲಿದ್ದಾಗ ಬೀಳುವ ಕನಸು ನಮಗೆ ಎಚ್ಚರವಾದಾಗ ಮರೆತೇ ಹೋಗಿರುತ್ತದೆ. ಆಧುನಿಕ ನರವಿಜ್ಞಾನ ಹೇಳುವ ಪ್ರಕಾರ ಕನಸುಗಳು ನಮ್ಮನ್ನು ವಾಸ್ತವವಾಗಿ ಅಧ್ಯಾತ್ಮದತ್ತ ಸಾಗಿಸುತ್ತದೆಯಂತೆ.

ಕೆಲವು ಕನಸುಗಳು ಬೀಳುವ ವೇಳೆಗೆ ನಮ್ಮ ಮೆದುಳು ಅತಿಯಾಗಿ ಕ್ರಿಯಾಶೀಲವಾಗಿರುತ್ತದೆಯಂತೆ. ದೃಶ್ಯ ಕಲ್ಪನೆ, ಭಾವುಕ ನೆನಪುಗಳು ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳು ಕನಸಿನೊಳಗೆ ಸೇರಿರುವಾಗಲಂತೂ ಮೆದುಳು ಚಟುವಟಿಕೆ ನಡೆಸುತ್ತಿರುತ್ತದೆಯಂತೆ.

ಕನಸುಗಳು ನಾವು ನಂಬುವ ಸಂಗತಿಗಳೊಂದಿಗೆ ನಂಟು ಹೊಂದಿರುತ್ತವೆ. ಯಾವುದೋ ಸಂತಸದ ಅಥವಾ ದುಃಖದ ನೆನಪಿನಲ್ಲಿ ಉಳಿಯುವ ಘಟನೆಯೊಂದಿಗೆ ನಮ್ಮನ್ನು ನಾವು ಕಲ್ಪಿಸಿಕೊಳ್ಳುತ್ತೇವೆ. ಅದು ಸತ್ಯವಾಗಬಹುದು ಎಂದು ನಂಬುತ್ತೇವೆ. ಅದೇ ಕನಸಿನಲ್ಲಿಯೂ ದೃಶ್ಯರೂಪ ಪಡೆದುಕೊಳ್ಳುತ್ತದೆ. ನಮ್ಮ ಉತ್ಕಟ ಆಸೆಗಳು, ಸ್ಮರಣೀಯ ಅನುಭವ, ಹಕ್ಕಿಯಂತೆ ಹಾರುವ ಬಯಕೆ, ಸಾವಿನ ಮನೆಯಿಂದ ಮರಳುವುದು, ದೆವ್ವ ಭೂತಗಳ ದರ್ಶನದ ಕೆಟ್ಟ ಕನಸುಗಳು ನಮ್ಮ ಪ್ರಜ್ಞಾವಸ್ಥೆಯಲ್ಲಿಯೇ ಬರುತ್ತವೆಯಂತೆ.

ಅಂದರೆ ನಾವೇನು ಕಾಣುತ್ತಿದ್ದೇವೆ ಎಂಬುದರ ಅರಿವು ಅಸ್ಪಷ್ಟವಾಗಿ ನಮಗಾಗುತ್ತಿರುತ್ತದೆ. ಕೆಲವರಿಗೆ ಈ ಕನಸುಗಳೇ ಸ್ಫೂರ್ತಿ. ಅನೇಕರು ಈ ಅಸ್ಪಷ್ಟ ಕನಸನ್ನು ವಾಸ್ತವಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯೂ ಆಗಿದ್ದಾರೆ. ಹೀಗಾಗಿ ಕನಸುಗಳು ನಮ್ಮ ಬದುಕಿಗೆ ಹೊಸ ಸ್ವರೂಪ ನೀಡುವಷ್ಟು ಶಕ್ತವಾಗಿವೆ. ಕನಸು ಕಾಣುವುದೆಂದರೆ ಸುಮ್ಮನೆಯಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.