ADVERTISEMENT

ಕನ್ನಡ ಪದಕೋಶ

ಕನ್ನಡ ಆ್ಯಪ್ ಲೋಕ

ಮಂಜುನಾಥ ರಾಠೋಡ
Published 13 ಜನವರಿ 2017, 19:30 IST
Last Updated 13 ಜನವರಿ 2017, 19:30 IST
ಕನ್ನಡ ಪದಕೋಶ
ಕನ್ನಡ ಪದಕೋಶ   
ಕನ್ನಡ ಭಾಷೆ ಅಗಾಧ ಪದ ಸಂಪತ್ತನ್ನು ಹೊಂದಿದೆ. ಎಷ್ಟೋ ಪದಗಳು ದಿನನಿತ್ಯದ ಬಳಕೆಯಲ್ಲಿ ಇಲ್ಲದಿದ್ದರೂ ಸಾಹಿತ್ಯ, ಪತ್ರಿಕೆಗಳಲ್ಲಿ ಆಗಾಗ ಕಾಣಸಿಗುತ್ತಿರುತ್ತವೆ ಅಂತಹಾ ಶಬ್ದಗಳಿಗೆ ಅರ್ಥ ಹುಡುಕಲು ನಾವು ನಿಘಂಟಿನ ಮೊರೆ ಹೋಗಲೇಬೇಕು.
 
ಮನೆಯಲ್ಲಿನ ದೊಡ್ಡ ನಿಘಂಟು ತೆರೆದು ಅಕ್ಷರಕ್ರಮದಲ್ಲಿ ಹುಡುಕಿ ಪದದ ಅರ್ಥ ತಿಳಿಯುವುದು ಹಳೆಯ ಪದ್ಧತಿ ಈಗ ಏನಿದ್ದರೂ ಸುಲಭವಾಗಿ ಮೊಬೈಲ್‌ನಲ್ಲಿ ಆ್ಯಪ್‌ ತೆರೆದು ನಮಗೆ ಬೇಕಾದ ಪದವನ್ನು ಟೈಪಿಸಿದರೆ ಸಾಕು ಅದರ ಅರ್ಥ ತೆರೆಯ ಮೇಲೆ ತೆರೆದುಕೊಳ್ಳುತ್ತದೆ.
 
ಕನ್ನಡ ಪದದ ಅರ್ಥವನ್ನು ನೀಡುವ ಆ್ಯಪ್‌ಗಳು ಪ್ಲೆಸ್ಟೋರ್‌ನಲ್ಲಿ ಹಲವು ಇವೆ ಇವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಕಸಾಪ ಸಂಕ್ಷಿಪ್ತ ನಿಘಂಟು’ ಆ್ಯಪ್‌ ಕೂಡ ಒಂದು.
 
ಸರಳವಾಗಿರುವ ಈ ಆ್ಯಪ್‌ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಪ್ಲೇಸ್ಟೋರ್‌ನ ಸರ್ಚ್‌ ಬಾರ್‌ನಲ್ಲಿ (kasapa sankshiptha nigantu) ಎಂದು ಟೈಪ್‌ ಮಾಡಿದರೆ ಸಾಕು. ಕಸಾಪ ಲಾಂಛನವಿರುವ ಆ್ಯಪ್‌ ಮೊಬೈಲ್‌ ತೆರೆಯ ಮೇಲೆ ಕಾಣುತ್ತದೆ.
 
ಆ್ಯಪ್‌ನ ಹೋಮ್ ಸ್ಕ್ರೀನ್‌ನಲ್ಲಿ ನೀಡಲಾಗಿರುವ ಸರ್ಚ್‌ ಬಾರ್‌ನಲ್ಲಿ  ಬೇಕಾದ ಪದವನ್ನು ಟೈಪಿಸಿದರೆ ಪದದ ಅರ್ಥ ದೊರಕುತ್ತದೆ. ಸರ್ಚ್‌ ಬಾರ್‌ನಲ್ಲಿ ಟೈಪ್‌ ಮಾಡಬೇಕಾದರೆಯೇ ಮೂಲ ಪದಕ್ಕೆ ಹತ್ತಿರದ ಪದಗಳು ಸರ್ಚ್‌ ಬಾರ್‌ನ ಕೆಳಗೆ ಕಾಣಿಸಿಕೊಳ್ಳುವ ಸೌಲಭ್ಯ ನೀಡಲಾಗಿದೆ.
 
ಸರ್ಚ್‌ ಬಾರ್‌ನ ಹೊರತಾಗಿ ಬಳಕೆದಾರನು ಅಕ್ಷರವೊಂದನ್ನು ಆಯ್ಕೆ ಮಾಡಿಕೊಂಡು ಆ ಅಕ್ಷರದಲ್ಲಿ ಬರುವ ಎಲ್ಲ ಪದಗಳ ಅರ್ಥವನ್ನು ತಿಳಿಯುವ ಆಯ್ಕೆಯನ್ನೂ ನೀಡಲಾಗಿದೆ. ಉದಾಹರಣೆಗೆ ನೀವು ‘ಕ’ ಅಕ್ಷರ ಆಯ್ಕೆ ಮಾಡಿಕೊಂಡರೆ ಆ ಅಕ್ಷರದಿಂದ ಪ್ರಾರಂಭವಾಗುವ ಪದಗಳ ಅರ್ಥ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
 
ಮೊಬೈಲ್‌ನಲ್ಲಿ ಕನ್ನಡ ಕೀಲಿ ಮಣೆ ಇಲ್ಲದೇ ಇರುವವರಿಗೆ ಆ್ಯಪ್‌ನಿಂದಲೇ ಕನ್ನಡದ ಕೀಲಿಮಣೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ನೀಡಿರುವುದು ಉತ್ತಮವಾಗಿದೆ. ಕರ್ನಾಟಕ ರಾಜ್ಯ ಸಂಸ್ಕೃತಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯವರ ಕನ್ನಡ ಕೀ (kannada key app), ಜಸ್ಟ್‌ ಕನ್ನಡ ಆ್ಯಪ್, ಸ್ವರಚಕ್ರ ಕನ್ನಡ ಕೀ ಬೋರ್ಡ್‌, ಬಹುಭಾಷಾ ಕೀ ಬೋರ್ಡ್‌ ಆದ ಗೂಗಲ್‌  ಇಂಡಿಕಾ ಕೀಬೋರ್ಡ್‌ಗಳನ್ನು ಬಳಕೆದಾರರು ಈ ಆ್ಯಪ್‌ನ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದಾಗಿದೆ.
 
ಈ ಆ್ಯಪ್‌ ಸುಲಭವಾಗಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಇತಿಹಾಸ, ಸದಸ್ಯತ್ವದ ಮಾಹಿತಿ, ಕಸಾಪದ ನಿಯತಕಾಲಿಕೆಗಳು, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು, ಪುಸ್ತಕ ಮಾರಾಟ ಮಳಿಗೆ, ಸಮ್ಮೇಳನಗಳು ಹಾಗೂ ಇತರ ಮಾಹಿತಿಯನ್ನು ನೀಡಲಾಗಿದೆ.
 
ಕಸಾಪದ ದೂರವಾಣಿ ಸಂಖ್ಯೆ, ಇಮೇಲ್‌ ವಿಳಾಸ, ವೆಬ್‌ಸೈಟ್‌ ಲಿಂಕ್‌ ಮತ್ತು ಆ್ಯಪ್‌ ಅಭಿವೃದ್ಧಿಪಡಿಸಿರುವ ಭಾರತೀಯ ಭಾಷಾ ಸಂಸ್ಥೆಯ ವೆಬ್‌ಸೈಟ್‌ ಲಿಂಕ್‌ಗಳು ಆ್ಯಪ್‌ನ ಸಂಪರ್ಕ ವಿಭಾಗದಲ್ಲಿ ದೊರಕುತ್ತವೆ.
 
ಉತ್ತಮ ಆ್ಯಪ್‌ ಇದಾದರೂ ಕಸಾಪ ನಿಘಂಟಿನಲ್ಲಿ ಇರುವಷ್ಟು ಪದ ಭಂಡಾರ ಈ ಆ್ಯಪ್‌ನಲ್ಲಿಲ್ಲ, ಇನ್ನೂ ಸಾಕಷ್ಟು ಪದಗಳು ಮತ್ತು ಅವುಗಳ ಅರ್ಥ ಆ್ಯಪ್‌ಗೆ ತುಂಬಬೇಕಿದೆ. ಇಲ್ಲಿಯರೆಗೆ 1000 ಮಂದಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ, ಹೆಚ್ಚಿನ ಬಳಕೆದಾರರು ಆ್ಯಪ್‌ ಅನ್ನು ಅಪ್‌ಗ್ರೇಡ್‌ ಮಾಡಿ ಇನ್ನೂ ಹೆಚ್ಚಿನ ಪದಗಳನ್ನು ತುಂಬುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.